ದೇಶದಲ್ಲಿನ್ನು ಆರ್‌ಬಿಐ ಡಿಜಿಟಲ್ ಕರೆನ್ಸಿಗೆ ಶೀಘ್ರ ಮಾನ್ಯತೆ ಸಾಧ್ಯತೆ!
ಆರ್‌ಬಿಐ ಡಿಜಿಟಲ್ ಕರೆನ್ಸಿಗೆ ಶೀಘ್ರ ಮಾನ್ಯತೆ ಸಾಧ್ಯತೆ| ಬಾಕಿ ಎಲ್ಲ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿ ನಿಷೇಧ| ಶೀಘ್ರ ಸಂಸತ್ತಿನಲ್ಲಿ ಮಸೂದೆ ಮಂಡನೆ ಸಾಧ್ಯತೆ
ನವದೆಹಲಿ(ಜ.31): ಆರ್‌ಬಿಐನ ಪ್ರಸ್ತಾವಿತ ಅಧಿಕೃತ ಡಿಜಿಟಲ್ ಕರೆನ್ಸಿಯೊಂದನ್ನು ಹೊರತುಪಡಿಸಿ ಬಿಟ್‌ಕಾಯಿನ್ ರೀತಿಯ ಉಳಿದೆಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಮಸೂದೆಯೊಂದನ್ನು ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ- 2021, ಭಾರತದಲ್ಲಿ ಆರ್‌ಬಿಐ ಹೊರತರಲು ಉದ್ದೇಶಿಸಿರುವ ಡಿಜಿಟಲ್ ಕರೆನ್ಸಿಗೆ ಕಾನೂನು ಚೌಕಟ್ಟು ರೂಪಿಸಲಿದೆ. ಅಲ್ಲದೇ ಬಿಟ್‌ಕಾಯಿನ್, ರಿಪ್ಪಲ್, ಈಥರ್ ರೀತಿಯ ಖಾಸಗಿ ಕರೆನ್ಸಿಗಳಿಗೆ ನಿಷೇಧ ಹೇರಲಿದೆ.
ಇತ್ತೀಚಿನ ದಿನಗಳಲ್ಲಿ ಖಾಸಗಿ ಡಿಜಿಟಲ್ ಕರೆನ್ಸಿಗಳು ಭಾರೀ ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡ ರುಪಾಯಿಯ ಡಿಜಿಟಲ್ ಆವೃತ್ತಿಯನ್ನು ಹೊರತರಲು ಮುಂದಾಗಿದೆ.
2018ರಲ್ಲಿ ಆರ್‌ಬಿಐ ಆದೇಶವೊಂದನ್ನು ಹೊರಡಿಸಿ ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಖರೀದಿ ಮತ್ತು ಮಾರಾಟಕ್ಕೆ ನಿಷೇಧ ಹೇರಿತ್ತು. ಬಳಿಕ 2019ರಲ್ಲಿ ಕೇಂದ್ರ ಸರ್ಕಾರದ ಸಮಿಯೊಂದು ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವಂತೆ ಹಾಗೂ ಕ್ರಿಪ್ಟೋಕರೆನ್ಸಿ ಮೂಲಕ ವ್ಯವಹಾರ ನಡೆಸಿದರೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಶಿಫಾರಸು ಮಾಡಿತ್ತು. ಆದರೆ, 2020ರ ಮಾಚ್‌ರ್‍ನಲ್ಲಿ ಸುಪ್ರೀಂಕೋರ್ಟ್ ಆರ್‌ಬಿಐ ಆದೇಶವನ್ನು ರದ್ದುಗೊಳಿಸಿ ಬ್ಯಾಂಕುಗಳು ಕ್ರಿಪ್ಟೋಕರೆನ್ಸಿಗಳ ವಿನಿಮಯ ಮತ್ತು ವ್ಯವಹಾರವನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ.