*   ವಿಮಾನ, ರೈಲಿಗೆ ಸುವಾಸಿತ ಹಾಲು, ಲಸ್ಸಿ ಪೂರೈಕೆ*  ಸಾಗಣೆ ವಾಹನಗಳಿಗೆ ಕೆಎಂಎಫ್‌ ಚಾಲನೆ*  ಪ್ರಯಾಣಿಕರು ಇನ್ಮುಂದೆ ಹಾಲು, ಲಸ್ಸಿಯ ರುಚಿ ಸವಿಯಬಹುದು  

ಬೆಂಗಳೂರು(ಜು.01): ನಂದಿನಿ ಹಾಲು ಉತ್ಪನ್ನಗಳ ಪ್ರಿಯರಿಗೆ ಕೆಎಂಎಫ್‌ ಸಿಹಿ ಸುದ್ದಿ ನೀಡಿದೆ. ರೈಲು ಮತ್ತು ವಿಮಾನಗಳ ಕೇಟರಿಂಗ್‌ನಲ್ಲಿ ನಂದಿನಿ ಗುಡ್‌ಲೈಫ್‌ ಹಾಲು ಮತ್ತು ಲಸ್ಸಿ ದೊರಕಲಿದ್ದು, ಪ್ರಯಾಣಿಕರು ಇನ್ನು ಮುಂದೆ ಹಾಲು, ಲಸ್ಸಿಯ ರುಚಿ ಸವಿಯಬಹುದು. 

ಶುಕ್ರವಾರ ಕೆಎಂಎಫ್‌ ಕೇಂದ್ರ ಕಚೇರಿ ಆವರಣದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಅವರು, ವಿಸ್ತಾರ ಮತ್ತು ಏರ್‌ ಇಂಡಿಯಾ ಸಂಸ್ಥೆಗಳ ವಿಮಾನಗಳ ಫ್ಲೈಟ್‌ ಕೇಟರಿಂಗ್‌ಗೆ ನಂದಿನಿ ಸುವಾಸಿತ ಹಾಲು ಮತ್ತು ಲಸ್ಸಿ ಉತ್ಪನ್ನಗಳನ್ನುಸರಬರಾಜು ಮಾಡುವ ವಾಹನಕ್ಕೆ ಹಸಿರು ನಿಶಾನೆ ತೋರಿಸಿದರು. ಇನ್ನು ಹಾಸನ ಹಾಲು ಒಕ್ಕೂಟದಿಂದ ರೈಲ್ವೆ ಸರಬರಾಜಿಗಾಗಿ 5 ಸುವಾಸಿತ ಹಾಲಿನ ವಾಹನಗಳಿಗೆ (3.75 ಲಕ್ಷ ಬಾಟಲ್‌) ಒಕ್ಕೂಟ ಅಧ್ಯಕ್ಷ ಎಚ್‌.ಡಿ.ರೇವಣ್ಣ ಚಾಲನೆ ನೀಡಿದರು.

Nandini Milk Price: ಬೆಲೆ ಏರಿಕೆಯ ಮಧ್ಯೆ ಮತ್ತೊಂದು ಶಾಕಿಂಗ್‌ ಸುದ್ದಿ..!

ಸೇವೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಸತೀಶ್‌, ‘ಕೆಎಂಎಫ್‌ ನಂದಿನಿ ಗುಡ್‌ಲೈಫ್‌ ಉಪ ಬ್ರ್ಯಾಂಡ್‌ನಲ್ಲಿ ಬಾದಾಮಿ, ಪಿಸ್ತಾ, ಸ್ಟ್ರಾಬೆರಿ ಸುವಾಸಿತ ಹಾಲು, ಮಾವಿನ ಹಣ್ಣು ಹಾಗೂ ಸಾದಾ ಲಸ್ಸಿ, ಚಾಕೋಲೆಟ್‌, ವೆನಿಲ್ಲಾ, ಬನಾನಾ ಮಿಲ್ಕ್‌ಶೇಕ್‌, ಮಸಾಲ ಮಜ್ಜಿಗೆ ಸಿದ್ಧಪಡಿಸಿ ಕರ್ನಾಟಕವೂ ಸೇರಿದಂತೆ ಹೊರರಾಜ್ಯಗಳಲ್ಲಿ ಮಾರಾಟ ಮಾಡುತ್ತಿದೆ. ಇದೀಗ ನಂದಿನಿ ಸುವಾಸಿತ ಹಾಲಿನ ಮಾರುಕಟ್ಟೆಯನ್ನು ದೇಶಾದ್ಯಂತ ವೇಗವಾಗಿ ವಿಸ್ತರಿಸಲಾಗುತ್ತಿದ್ದು, ದೇಶದ ಗಡಿ ಭಾಗದ ಪ್ರದೇಶಗಳಾದ ಲೇಹ್‌ ಮತ್ತು ಲಡಾಖ್‌ನವರೆಗೂ ಮಾರಾಟ ಜಾಲವನ್ನು ವಿಸ್ತರಿಸಲಾಗಿದೆ. ಇದಕ್ಕೆ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದರು.

ಇದೀಗ ಕೆಎಂಎಫ್‌ ನೂತನ ಉತ್ಪನ್ನಗಳ ಮಾರಾಟ ಅಭಿವೃದ್ಧಿಗೆ ಹೊಸ ಆಯಾಮಗಳನ್ನು ಅಳವಡಿಸಿಕೊಂಡು ಪ್ರಪ್ರಥಮವಾಗಿ ಭಾರತೀಯ ರೈಲ್ವೆ ಮತ್ತು ವಿಮಾನಯಾನದ ಸಂಸ್ಥೆಯ ಅಧಿಕೃತ ಕೇಟರ​ರ್ಸ್‌ ಅವರನ್ನು ಸಂಪರ್ಕಿಸಿ ನಂದಿನಿ ಗುಡ್‌ಲೈಫ್‌ ಸುವಾಸಿತ ಹಾಲು ಮತ್ತು ಮಿಲ್ಕ್‌ ಶೇಕ್‌ಗಳಿಗೆ ಬೇಡಿಕೆಯನ್ನು ಯಶಸ್ವಿಯಾಗಿ ಪಡೆಯಲಾಗಿದೆ. ಪ್ರಾರಂಭಿಕವಾಗಿ ತಿಂಗಳಿಗೆ 3 ಲಕ್ಷ ಲೀಟರ್‌ ಬೇಡಿಕೆ ಇದ್ದು ಬೇಸಿಗೆ ಕಾಲದಲ್ಲಿ 5ರಿಂದ 6 ಲೀಟರ್‌ಗಳಿಗೆ (30 ಲಕ್ಷ ಬಾಟಲ್‌) ಬೇಡಿಕೆ ಇರುತ್ತದೆ ಎಂದು ಹೇಳಿದರು.