ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡೋರು ಈ ಸಂಗತಿಗಳನ್ನು ತಿಳಿದಿರೋದು ಅಗತ್ಯ!
ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡೋದು ಷೇರು ಮಾರುಕಟ್ಟೆಗಿಂತ ಸುರಕ್ಷಿತ.ಆದರೆ,ಇಲ್ಲಿ ಕೂಡ ಕೆಲವು ರಿಸ್ಕ್ ಗಳಿವೆ.ನೀವು ಕೂಡ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದೀರಾ? ಹಾಗಾದ್ರೆ ಅದಕ್ಕೂ ಮುನ್ನ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳುವುದು ಅಗತ್ಯ.
Business Desk:ಇತ್ತೀಚಿನ ದಿನಗಳಲ್ಲಿ ಹೂಡಿಕೆದಾರರ ಆಸಕ್ತಿ ವಲಯಗಳಲ್ಲಿ ಮ್ಯೂಚುವಲ್ ಫಂಡ್ ಕೂಡ ಸೇರಿದೆ. ಷೇರು ಮಾರುಕಟ್ಟೆಗೆ ಹೋಲಿಸಿದ್ರೆ ಮ್ಯೂಚುವಲ್ ಫಂಡ್ ತುಂಬಾ ಸುರಕ್ಷಿತ. ಸರಳವಾಗಿ ಹೇಳೋದಾದ್ರೆ ಮ್ಯೂಚುವಲ್ ಫಂಡ್ ಅನೇಕ ವ್ಯಕ್ತಿಗಳ ಹಣದಿಂದ ನಿರ್ಮಾಣವಾಗಿರೋ ಫಂಡ್. ಈ ಫಂಡ್ ಅನ್ನು ಆಸ್ತಿ ನಿರ್ವಹಣಾ ಸಂಸ್ಥೆ (ಎಎಂಸಿ) ಅಥವಾ ಫಂಡ್ ಹೌಸ್ ನಿರ್ವಹಿಸುತ್ತದೆ. ಈ ಸಂಸ್ಥೆ ಭಾರತ ಸರ್ಕಾರದ ಸೆಬಿಯಲ್ಲಿ ನೋಂದಾಯಿಸಲ್ಪಟ್ಟಿರುತ್ತದೆ. ವಿವಿಧ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಸಂಗ್ರಹಿಸಿದ ಬಂಡವಾಳವನ್ನು ಫಂಡ್ ಮ್ಯಾನೇಜರ್ ವಿವಿಧ ಕಂಪನಿಗಳ ಷೇರುಗಳಲ್ಲಿ ತೊಡಗಿಸುತ್ತಾನೆ. ಈತ ಷೇರು, ಮಾರುಕಟ್ಟೆ ವಿಷಯಗಳಲ್ಲಿ ಪರಿಣಿತನಾಗಿದ್ದು, ಹೂಡಿಕೆದಾರರಿಗೆ ಗರಿಷ್ಠ ರಿಟರ್ನ್ಸ್ ಬರೋ ರೀತಿಯಲ್ಲಿ ಬಂಡವಾಳವನ್ನು ಜಾಣತನದಿಂದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸುತ್ತಾನೆ. ಹೀಗಾಗಿ ಮ್ಯೂಚುವಲ್ ಫಂಡ್ ಹೂಡಿಕೆ ಹಂಚಿ ಹೋಗಿರುವ ಕಾರಣ ರಿಸ್ಕ್ ಕಡಿಮೆ. ಆದರೆ, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮುನ್ನ ಕೆಲವೊಂದು ವಿಷಯಗಳನ್ನು ತಿಳಿದಿರೋದು ಅಗತ್ಯ.
ಹೂಡಿಕೆಗೂ ಮುನ್ನ ಹೀಗೆ ಮಾಡಿ
*ಹೂಡಿಕೆ ಗುರಿ ಹಾಗೂ ರಿಸ್ಕ್ ಮಟ್ಟ ನಿರ್ಧರಿಸಿ
ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮುನ್ನ ನೀವು ಯಾವ ಉದ್ದೇಶಕ್ಕೆ ಹೂಡಿಕೆ ಮಾಡುತ್ತಿದ್ದೀರಿ? ಎಷ್ಟು ವರ್ಷಗಳ ಅವಧಿಗೆ ಹೂಡಿಕೆ ಮಾಡುತ್ತೀರಿ? ಎಂಬುದನ್ನು ತಿಳಿಯೋದು ಅಗತ್ಯ. ಹಾಗೆಯೇ ನೀವು ಎಷ್ಟು ಪ್ರಮಾಣದ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದೀರಿ ಎಂಬುದನ್ನು ಕೂಡ ಅರಿಯುವುದು ಅಗತ್ಯ.
ಎಷ್ಟು ವಿಧದ ಬ್ಯಾಂಕ್ ಖಾತೆಗಳನ್ನು ತೆರೆಯಬಹುದು? ಅವುಗಳ ವಿಶೇಷತೆ ಏನು? ಇಲ್ಲಿದೆ ಮಾಹಿತಿ
*ಅಧ್ಯಯನ ನಡೆಸಿ
ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮುನ್ನ ಒಂದಿಷ್ಟು ಅಧ್ಯಯನ ನಡೆಸಿ. ಮ್ಯೂಚುವಲ್ ಫಂಡ್ಸ್ ಗಳಲ್ಲಿ ಈಕ್ವಿಟಿ ಫಂಡ್, ಡೆಟ್ ಫಂಡ್, ಹೈಬ್ರೀಡ್ ಫಂಡ್ ಹೀಗೆ ಅನೇಕ ವಿಧಗಳಿವೆ. ಅವುಗಳ ಬಗ್ಗೆ ತಿಳಿಯಿರಿ. ಆ ಬಳಿಕ ಅದ್ರಲ್ಲಿ ನಿಮಗೆ ಸರಿ ಹೊಂದೋ ಒಂದು ಮ್ಯೂಚುವಲ್ ಫಂಡ್ ಆಯ್ಕೆ ಮಾಡಿ.
*ಶುಲ್ಕ ಹಾಗೂ ವೆಚ್ಚ ಅರಿತುಕೊಳ್ಳಿ
ಮ್ಯೂಚುವಲ್ ಫಂಡ್ ಅನೇಕ ಶುಲ್ಕಗಳು ಹಾಗೂ ವೆಚ್ಚಗಳನ್ನು ಒಳಗೊಂಡಿದೆ. ಹೀಗಾಗಿ ಹೂಡಿಕೆಗೂ ಮುನ್ನ ಈ ಎಲ್ಲ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಿ.
*ವಿವಿಧ ಪ್ಲ್ಯಾನ್‌ಗಳಲ್ಲಿ ಹೂಡಿಕೆ
ಒಂದೇ ಮ್ಯೂಚುವಲ್ ಫಂಡ್ ಸ್ಕೀಮ್‌ನಲ್ಲಿ ಹೂಡಿಕೆ ಮಾಡೋ ಬದಲು ವಿವಿಧ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡೋದ್ರಿಂದ ಉತ್ತಮ ರಿಟರ್ನ್ಸ್ ಪಡೆಯಬಹುದು. ಅಲ್ಲದೆ, ರಿಸ್ಕ್ ಕೂಡ ಕಡಿಮೆ.
*ಸರಿಯಾದ ಫಂಡ್ ಆರಿಸಿ
ಮ್ಯೂಚುವಲ್ ಫಂಡ್‌ನಲ್ಲಿ ಅನೇಕ ವರ್ಗಗಳಿವೆ. ಇವುಗಳಲ್ಲಿ ನೀವು ಯಾವ ವರ್ಗ ಆರಿಸಿಕೊಳ್ಳುತ್ತೀರಿ ಅನ್ನೋದು ಮುಖ್ಯ. ಸರಿಯಾದ ವರ್ಗವನ್ನು ಆಯ್ಕೆ ಮಾಡೋದು ಅಷ್ಟು ಸುಲದ ಕೆಲಸವಂತೂ ಅಲ್ಲ. ಇದೇ ಕಾರಣಕ್ಕೆ ತಜ್ಞರು ಮ್ಯೂಚುವಲ್ ಫಂಡ್‌ನ ಪ್ರಾರಂಭಿಕ ಹೂಡಿಕೆದಾರರಿಗೆ ಕಡಿಮೆ ಅಪಾಯ ಹೊಂದಿರೋ ಹಾಗೂ ನಿಧಾನಗತಿಯ ರಿಟರ್ನ್ಸ್ ತರೋ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಸಲಹೆ ನೀಡುತ್ತಾರೆ. ಕೆಲವು ಸಮೀಕ್ಷೆಗಳ ಪ್ರಕಾರ ಮೊದಲ ಬಾರಿಗೆ ಹೂಡಿಕೆ ಮಾಡೋರಿಗೆ ಲಾರ್ಜ್ ಕ್ಯಾಪ್ ಫಂಡ್ ಹಾಗೂ ಇಂಡೆಕ್ಸ್ ಫಂಡ್‌ಗಳು ಉತ್ತಮ ಆಯ್ಕೆಗಳಾಗಿವೆ.
EPF calculation:25 ಸಾವಿರ ಮೂಲವೇತನ ಹೊಂದಿರುವ ಉದ್ಯೋಗಿಗೆ ನಿವೃತ್ತಿ ವೇಳೆ ಎಷ್ಟು ಇಪಿಎಫ್ ಸಿಗುತ್ತೆ?
*ಸುದೀರ್ಘ ಅವಧಿ ಹೂಡಿಕೆ ಆಯ್ಕೆ ಮಾಡಿ
ಮ್ಯೂಚುವಲ್ ಫಂಡ್ ನಲ್ಲಿ ದೀರ್ಘ ಅವಧಿ ಹೂಡಿಕೆ ಉತ್ತಮ ರಿಟರ್ನ್ ನೀಡುತ್ತದೆ. ಹೀಗಾಗಿ ದೀರ್ಘಾವಧಿ ಪ್ಲ್ಯಾನ್ ಗಳನ್ನು ಆಯ್ಕೆ ಮಾಡಿ.
*ತಜ್ಞರ ಸಲಹೆ ಪಡೆಯಿರಿ
ಮ್ಯೂಚುವಲ್ ಫಂಡ್ಸ್‌ನಲ್ಲಿ ಹೂಡಿಕೆ ಮಾಡೋದು ಅಷ್ಟು ಸರಳ ವಿಷಯವಲ್ಲ. ಹೀಗಾಗಿ ಹೂಡಿಕೆಗೂ ಮುನ್ನ ಅಗತ್ಯವೆನಿಸಿದ್ರೆ ತಜ್ಞರ ಸಲಹೆ ಪಡೆಯಿರಿ.