ಕಾಫಿ ಮಾರುಕಟ್ಟೆಗೆ ರಿಲಯನ್ಸ್ ಎಂಟ್ರಿ; ಟಾಟಾ ಸ್ಟಾರ್ ಬಕ್ಸ್ ಗೆ ಹೊಸ ಪ್ರತಿಸ್ಪರ್ಧಿ
ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇತ್ತೀಚೆಗೆ ಇಂಗ್ಲೆಂಡ್ ಮೂಲದ ಜನಪ್ರಿಯ ಕಾಫಿ ಚೈನ್ ಪ್ರೆಟ್ ಎ ಮ್ಯಾಂಗರ್ ಶಾಪ್ ಅನ್ನು ಮುಂಬೈನಲ್ಲಿ ಪ್ರಾರಂಭಿಸಿದೆ. ಈ ಮೂಲಕ ಕಾಫಿ ಮಾರುಕಟ್ಟೆಗೂ ರಿಲಯನ್ಸ್ ಪ್ರವೇಶಿಸಿದ್ದು, ಟಾಟಾ ಗ್ರೂಪ್ ನ ಸ್ಟಾರ್ ಬಕ್ಸ್ ಗೆ ಟಕ್ಕರ್ ನೀಡಲು ಸಜ್ಜಾಗಿದೆ.
ನವದೆಹಲಿ (ಏ.24): ಮುಖೇಶ್ ಅಂಬಾನಿ ಅವರ ರಿಲಯನ್ಸ್ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಅನೇಕ ಕ್ಷೇತ್ರಗಳಿಗೆ ಪ್ರವೇಶಿಸಿದೆ. ಆ ಮೂಲಕ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಲಿದೆ ಕೂಡ.ಈಗ ಕಾಫಿ ಮಾರುಕಟ್ಟೆಗೂ ರಿಲಯನ್ಸ್ ಪ್ರವೇಶಿಸಿದ್ದು, ಟಾಟಾ ಗ್ರೂಪ್ ನ ಸ್ಟಾರ್ ಬಕ್ಸ್ ಗೆ ನೇರವಾಗಿ ಸವಾಲೆಸೆದಿದೆ. ಇತ್ತೀಚೆಗೆ ರಿಲಯನ್ಸ್ ಸಹಭಾಗಿತ್ವದಲ್ಲಿ ಇಂಗ್ಲೆಂಡ್ ಮೂಲದ ಜನಪ್ರಿಯ ಸ್ಯಾಂಡ್ ವಿಚ್ ಹಾಗೂ ಕಾಫಿ ಚೈನ್ ಪ್ರೆಟ್ ಎ ಮ್ಯಾಂಗರ್ ಭಾರತದಲ್ಲಿ ಕಾರ್ಯಾರಂಭ ಮಾಡಿದೆ. ಮುಂಬೈ ಬಾಂದ್ರಾ ಮಾರುಕಟ್ಟೆಯಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಈ ಮೂಲಕ ರಿಲಯನ್ಸ್ ಬ್ರ್ಯಾಂಡ್ ತನ್ನ ಮೊದಲ ಪ್ರೆಟ್ ಎ ಮ್ಯಾಂಗರ್ ಶಾಪ್ ಪ್ರಾರಂಭಿಸಿದ್ದು, ಟಾಟಾ ಗ್ರೂಪ್ ನ ಸ್ಟಾರ್ ಬಕ್ಸ್ ಗೆ ಟಕ್ಕರ್ ನೀಡಲು ಸಜ್ಜಾಗಿದೆ. ಅಮೆರಿಕದ ಜನಪ್ರಿಯ ತಂತ್ರಜ್ಞಾನ ಕಂಪನಿ ಆಪಲ್ ಭಾರತದಲ್ಲಿ ತನ್ನ ಮೊದಲ ಎರಡು ಸ್ಟೋರ್ ಗಳನ್ನು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಪ್ರೆಟ್ ಎ ಮ್ಯಾಂಗರ್ ಸ್ಟೋರ್ ಅನ್ನು ಭಾರತದಲ್ಲಿ ಪ್ರಾರಂಭಿಸಲಾಗಿದೆ. ಮುಂಬೈನಲ್ಲಿರುವ ಈ ಕಾಫಿ ಸ್ಟೋರ್ 2567 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.
ಲಂಡನ್ ನಲ್ಲಿ 1986ರಲ್ಲಿ ಪ್ರಾರಂಭವಾದ ಪ್ರೆಟ್ ಎ ಮ್ಯಾಂಗರ್ ಇಂಗ್ಲೆಂಡ್, ಅಮೆರಿಕ, ಹಾಂಗ್ ಕಾಂಗ್, ಫ್ರಾನ್ಸ್, ದುಬೈ, ಸ್ವಿರ್ಜಲೆಂಡ್, ಬ್ರೂಸೆಲ್ಸ್ , ಸಿಂಗಾಪುರ ಹಾಗೂ ಜರ್ಮನಿ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಸುಮಾರು 550 ಶಾಪ್ ಗಳನ್ನು ಹೊಂದಿದೆ. ಈ ಕಾಫಿ ಚೈನ್ ಸ್ಟೋರ್ ಗಳಲ್ಲಿ ವಿವಿಧ ಸ್ವಾದದ ಕಾಫಿ ಜೊತೆಗೆ ಸ್ಯಾಂಡ್ ವಿಚ್ , ಸಲಾಡ್ಸ್ ಹಾಗೂ ವಾರ್ಪಸ್ ಗಳನ್ನು ಸಿದ್ಧಪಡಿಸಿ ನೀಡಲಾಗುತ್ತದೆ.
ಇಂದು ಮುಖೇಶ್ ಅಂಬಾನಿ ಜನ್ಮದಿನ; ರಿಲಯನ್ಸ್ ಮುಖ್ಯಸ್ಥರ ಕುರಿತ 10 ಆಸಕ್ತಿಕರ ಸಂಗತಿಗಳು ಇಲ್ಲಿವೆ
ಪ್ರೆಟ್ ಎ ಮ್ಯಾಂಗರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಪಾಲ್ಗೊಂಡಿದ್ದರು. ಆ ಬಳಿಕ ಈ ಸ್ಟೋರ್ ಕುರಿತು ಮಾತನಾಡಿದ ಸಾರಾ 'ಕಾಫಿ ಸದಾ ನನ್ನ ಅಚ್ಚುಮೆಚ್ಚಿನ ಪಾನೀಯ. ಐ ಲವ್ ಕಾಫಿ. ಲಂಡನ್ ನಲ್ಲಿರುವ ಪ್ರೆಟ್ ಎ ಮ್ಯಾಂಗರ್ ಸ್ಟೋರ್ ಗೆ ನಾನು ತಂದೆಯೊಡನೆ ಅನೇಕ ಬಾರಿ ಭೇಟಿ ನೀಡಿದ್ದೇನೆ. ಈಗ ಈ ಕಾಫಿ ಚೈನ್ ಭಾರತಕ್ಕೆ ಬಂದಿರೋದು ನನಗೆ ತುಂಬಾ ಖುಷಿ ನೀಡಿದೆ' ಎಂದರು.
ರಿಲಯನ್ಸ್ ಬ್ರ್ಯಾಂಡ್ಸ್ ಎಂಡಿ ದರ್ಶನ್ ಮೆಹ್ತಾ ಇಂಗ್ಲೆಂಡ್ ಮೂಲದ ಕಾಫಿ ಸ್ಟೋರ್ ಚೈನ್ಸ್ ಜೊತೆಗಿನ ತಮ್ಮ ಸಹಭಾಗಿತ್ವದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 'ಸಾಮಗ್ರಿಗಳ ತಾಜಾತನ, ವಿಶ್ವಾಸಾರ್ಹ ರೆಸಿಪಿಗಳು ಹಾಗೂ ಭಾರತದ ಹೊಸ ಗ್ರಾಹಕರಿಗೆ ಕುತೂಹಲವನ್ನು ಈ ಬ್ರ್ಯಾಂಡ್ ಸೃಷ್ಟಿಸಲಿದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
39 ವರ್ಷ ಹಳೆಯದಾದ ಬ್ರಿಟಿಷ್ ಸ್ಯಾಂಡ್‌ವಿಚ್ ಶಾಪ್ ಪ್ರೆಟ್ ಎ ಮ್ಯಾಂಗರ್ ಹೆಸರು ಫ್ರೆಂಚ್ ಮೂಲದ್ದಾಗಿದೆ. ಇದರ ಅರ್ಥ 'ತಿನ್ನಲು ಸಿದ್ಧ' ಎಂದು. ಭಾರತದಲ್ಲಿ ಇದರ ಎರಡನೇ ಸ್ಟೋರ್ ಮುಂಬೈನ ಲೋವರ್ ಪರೆಲ್ಸ್ ಪಲಾಡಿಯಂ ಮಾಲ್ ನಲ್ಲಿ ಮುಂದಿನ ವಾರಗಳಲ್ಲಿ ಪ್ರಾರಂಭವಾಗಲಿದೆ. ಹಾಗೆಯೇ ಮೂರನೇ ಸ್ಟೋರ್ ಅನ್ನು ಎನ್ ಸಿಆರ್ ಡಿಎಲ್ ಎಫ್ ಸೈಬರ್ ಹಬ್ ನಲ್ಲಿ ಮೇನಲ್ಲಿ ಆರಂಭಿಸಲಿದೆ.
ಅಮೆರಿಕ ಫೇಸ್‌ಬುಕ್ ಗ್ರಾಹಕರಿಗೆ 6000 ಕೋಟಿ ಭರ್ಜರಿ ಪರಿಹಾರ
ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ಒಂದು ವರ್ಷದಿಂದ ತನ್ನ ಉದ್ಯಮ (Business) ವಿಸ್ತರಿಸುತ್ತಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಹೂಡಿಕೆ (Invest) ಮಾಡಿದೆ ಕೂಡ. ಕಳೆದ ಡಿಸೆಂಬರ್ ನಲ್ಲಿ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ಅಂಗಸಂಸ್ಥೆ ರಿಲಯನ್ಸ್ ಕನ್ಸೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ 'ಇಂಡಿಪೆಂಡೆನ್ಸ್ ' ಎಂಬ ಬ್ರ್ಯಾಂಡ್ ಅಡಿಯಲ್ಲಿ ವಿವಿಧ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಚೆನ್ನೈ ಮೂಲದ 'ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ' ಸಲೂನ್ ಕಂಪನಿಯ ಶೇ.49ರಷ್ಟು ಷೇರುಗಳನ್ನು ಖರೀದಿಸಲು ಕೂಡ ಸಿದ್ಧತೆ ನಡೆಸಿದೆ. ಜರ್ಮನಿ ಮೂಲದ ಮೆಟ್ರೋ ಎಜೆ ಸಮೂಹದ ಕ್ಯಾಶ್ & ಕ್ಯಾರಿ ಸಂಸ್ಥೆಯ ಭಾರತದ ವಹಿವಾಟನ್ನು 2,850 ಕೋಟಿ ರೂ.ಗೆ ವಶಪಡಿಸಿಕೊಂಡಿದೆ.