ಮುಖೇಶ್ ಅಂಬಾನಿಯಿಂದ ಹಿಡಿದು ನಾರಾಯಣ ಮೂರ್ತಿ ತನಕ ಭಾರತದ ಶ್ರೀಮಂತ ಉದ್ಯಮಿಗಳ ವಿದ್ಯಾರ್ಹತೆ ಬಗ್ಗೆ ಅನೇಕರಿಗೆ ಕುತೂಹಲ ಇದ್ದೇಇರುತ್ತದೆ. ಉದ್ಯಮದಲ್ಲಿ ಯಶಸ್ಸು ಸಾಧಿಸಿದ ಇವರ ಶೈಕ್ಷಣಿಕ ಸಾಧನೆ ಹೇಗಿತ್ತು? ಯಾವೆಲ್ಲ ಪದವಿ ಹೊಂದಿದ್ದಾರೆ? ಮುಂತಾದ ಪ್ರಶ್ನೆಗಳು ಕಾಡುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಭಾರತದ ಟಾಪ್ 10 ಶ್ರೀಮಂತ ಉದ್ಯಮಿಗಳ ವಿದ್ಯಾರ್ಹತೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 

Business Desk: ಭಾರತದಲ್ಲಿ ಅನೇಕ ಶ್ರೀಮಂತ ಉದ್ಯಮಿಗಳಿದ್ದಾರೆ. ಫೋರ್ಬ್ಸ್ 2023ನೇ ಸಾಲಿನ ವರದಿ ಅನ್ವಯ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 169 ಮಂದಿ ಭಾರತೀಯರು ಸ್ಥಾನ ಪಡೆದಿದ್ದಾರೆ. ಈ ಪ್ರಮಾಣ ಕಳೆದ ಸಾಲಿಗೆ ಹೋಲಿಸಿದರೆ ಹೆಚ್ಚು ಎಂದು ಹೇಳಲಾಗಿದೆ. ಭಾರತದಲ್ಲಿ ನವೋದ್ಯಮಿಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡುಬರುತ್ತಿದೆ. ಅನೇಕ ಸ್ಟಾರ್ಟ್ ಅಪ್ ಗಳು ಭಾರತದಲ್ಲಿ ಜನ್ಮ ತಾಳಿವೆ. ಅಷ್ಟೇ ಅಲ್ಲದೆ, ಅನೇಕ ಉದ್ಯಮಿಗಳು ತಮ್ಮ ಉದ್ಯಮವನ್ನು ಜಗತ್ತಿನಾದ್ಯಂತ ವಿಸ್ತರಿಸಿದ್ದಾರೆ ಕೂಡ. ಉದ್ಯಮ ನಡೆಸೋದು ಸುಲಭದ ಮಾತಲ್ಲ. ಅದರಲ್ಲೂ ಉದ್ಯಮ ರಂಗದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಬುದ್ಧಿವಂತಿಕೆ, ಚತುರತೆ, ಕೌಶಲ್ಯ ಎಲ್ಲವೂ ಅಗತ್ಯ. ಹೀಗಿರುವಾಗ ಭಾರತದ ಜನಪ್ರಿಯ ಉದ್ಯಮಿಗಳು ತಮ್ಮ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಅನುಸರಿಸಿದ ಸೂತ್ರಗಳೇನು? ಅವರ ಯಶಸ್ಸಿನ ಮಂತ್ರವೇನು? ಎಂಬ ಪ್ರಶ್ನೆಗಳ ಜೊತೆಗೆ ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಕೂಡ ಕುತೂಹಲ ಮೂಡುತ್ತದೆ. ಹಾಗಾದ್ರೆ ಭಾರತದ ಟಾಪ್ 10 ಶ್ರೀಮಂತ ಉದ್ಯಮಿಗಳ ವಿದ್ಯಾರ್ಹತೆ ಏನು? ಅವರು ಯಾವ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಗಳಿಸಿದ್ದಾರೆ? ಇಲ್ಲಿದೆ ಮಾಹಿತಿ.

1.ಮುಖೇಶ್ ಅಂಬಾನಿ
ಭಾರತದ ಅತ್ಯಂತ ಶ್ರೀಮಂತ ಉದ್ಯಮಿಯಾಗಿರುವ ಮುಖೇಶ್ ಅಂಬಾನಿ ಅವರ ನಿವ್ವಳ ಸಂಪತ್ತು 93.5 ಬಿಲಿಯನ್ ಡಾಲರ್. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಹಾಗೂ ಎಂಡಿ ಆಗಿರುವ ಮುಖೇಶ್ ಅಂಬಾನಿ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಂಬೈನ ಹಿಲ್ ಗ್ಯಾಂಗೆ ಹೈಸ್ಕೂಲ್ ನಲ್ಲಿ ಪೂರ್ಣಗೊಳಿಸಿದರು. ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿದ ಅಂಬಾನಿ, ಇನ್ಸಿಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಿಂದ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ಆ ಬಳಿಕ ಅವರು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ.

2.ಗೌತಮ್ ಅದಾನಿ
ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಭಾರತದ ಎರಡನೇ ಶ್ರೀಮಂತ ಉದ್ಯಮಿ. ಅದಾನಿ ನಿವ್ವಳ ಸಂಪತ್ತು 51.4 ಬಿಲಿಯನ್ ಡಾಲರ್. ಆದರೆ, ಗೌತಮ್ ಅದಾನಿ ಪದವಿ ಶಿಕ್ಷಣವನ್ನು ಕೂಡ ಪೂರ್ಣಗೊಳಿಸಿಲ್ಲ ಅಂದ್ರೆ ನಿಜಕ್ಕೂ ಅನೇಕರಿಗೆ ಅಚ್ಚರಿಯಾಗಬಹುದು. ಗುಜರಾತ್ ಸೇಥ್ ಚಿಮ್ನಲಾಲ್ ನಗಿಂದಾಸ್ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಅದಾನಿ, ವಾಣಿಜ್ಯ ವಿಷಯದಲ್ಲಿ ಪದವಿ ಪಡೆಯಲು ಗುಜರಾತ್ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡಿದ್ದರು. ಆದರೆ, ಪದವಿಯನ್ನು ಅರ್ಧದಲ್ಲೇ ನಿಲ್ಲಿಸಿ ಉದ್ಯಮ ಸ್ಥಾಪಿಸುವತ್ತ ಗಮನ ಕೇಂದ್ರೀಕರಿಸಿದ್ದರು. 

40 ಸಾವಿರ ಕೋಟಿ ಆಸ್ತಿ ಬಿಟ್ಟು ಸನ್ಯಾಸಿಯಾದ ಶ್ರೀಮಂತ!

3.ಸೈರಸ್ ಪೂನವಾಲಾ
ಫೋರ್ಬ್ಸ್ ಮಾಹಿತಿ ಅನ್ವಯ ಸೈರಸ್ ಪೂನವಾಲಾ ಭಾರತದ ಮೂರನೇ ಶ್ರೀಮಂತ ಉದ್ಯಮಿ. ಸೀರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸೇರಿದಂತೆ ಸೈರಸ್ ಪೂನವಾಲಾ ಗ್ರೂಪ್ ಮುಖ್ಯಸ್ಥರಾಗಿರುವ ಪೂನವಾಲಾ ನಿವ್ವಳ ಸಂಪತ್ತು 27.6 ಬಿಲಿಯನ್ ಡಾಲರ್. ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಬ್ರಿಹನ್ ಮಹಾರಾಷ್ಟ್ರ ಕಾಲೇಜ್ ಆಫ್ ಕಾಮರ್ಸ್ ನಿಂದ ಪದವಿ ಪಡೆದಿರುವ ಇವರು, ಆ ಬಳಿಕ ಸೀರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸ್ಥಾಪಿಸಿದರು. 

4.ಶಿವ್ ನಡಾರ್
ಶಿವ ನಡಾರ್ ಎಚ್ ಸಿಎಲ್ ಟೆಕ್ನಾಲಜೀಸ್ ಹಾಗೂ ಶಿವ ನಡಾರ್ ಫೌಂಡೇಷನ್ ಸ್ಥಾಪಕರು. ಇವರು ಭಾರತದ ನಾಲ್ಕನೇ ಶ್ರೀಮಂತ ಉದ್ಯಮಿ. ಇವರ ನಿವ್ವಳ ಸಂಪತ್ತು 26.8 ಬಿಲಿಯನ್ ಡಾಲರ್. ಮಧುರೈ ಎಲಾಂಗೋ ಕಾರ್ಪೋರೇಷನ್ ಹೈಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಪ್ರಾರಮಭಿಕ ಶಿಕ್ಷಣ ಪಡೆದ ನಡಾರ್, ಆ ಬಳಿಕ ಟೌನ್ ಹೈಸ್ಕೂಲ್ ನಲ್ಲಿ ಶಿಕ್ಷಣ ಮುಂದುವರಿಸಿದರು. ನಂತರ ಟ್ರಿಚ ಸೇಂಟ್ ಜೋಷೆಫ್ ಬಾಯ್ಸ್ ಹೈಯರ್ ಸೆಕೆಂಡರಿ ಸ್ಕೂಲ್ ಸೇರಿದರು. ಮಧುರೈ ಅಮೆರಿಕನ್ ಕಾಲೇಜ್ ನಲ್ಲಿ ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿದ ಇವರು ಆ ಬಳಿಕ ಕೊಯಮತ್ತೂರು ಪಿಎಸ್ ಜಿ ಕಾಲೇಜ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದರು. 

5.ಸಾವಿತ್ರಿ ಜಿಂದಾಲ್
ಭಾರತದ ಐದನೇ ಶ್ರೀಮಂತ ಉದ್ಯಮಿ ಸಾವಿತ್ರಿ ಜಿಂದಾಲ್. ಒ.ಪಿ.ಜಿಂದಾಲ್ ಗ್ರೂಪ್ ಮುಖ್ಯಸ್ಥೆಯಾಗಿರುವ ಇವರ ನಿವ್ವಳ ಸಂಪತ್ತು 19.3 ಬಿಲಿಯನ್ ಡಾಲರ್. ಯಶಸ್ವಿ ಉದ್ಯಮಿಯಾಗಿರುವ ಜೊತೆಗೆ ರಾಜಕಾರಣಿಯಾಗಿ ಕೂಡ ಗುರುತಿಸಿಕೊಂಡಿರುವ ಸಾವಿತ್ರಿ ಜಿಂದಾಲ್ ಅವರು ಅಸ್ಸಾಂ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಪಡೆದಿದ್ದಾರೆ.

6.ರಾಧಾಕಿಶಾನ್ ದಮಾನಿ
ಅವೆನ್ಯೂ ಸೂಪರ್ ಮಾರ್ಟ್ ಲಿಮಿಟೆಡ್ ಮುಖ್ಯಸ್ಥ ಹಾಗೂ ಡಿಮಾರ್ಟ್ ಸ್ಥಾಪಕ ರಾಧಾಕಿಶಾನ್ ದಮಾನಿ ಭಾರತದ ಆರನೇ ಶ್ರೀಮಂತ ಉದ್ಯಮಿ. ದಮಾನಿ ನಿವ್ವಳ ಸಂಪತ್ತು 17.4 ಬಿಲಿಯನ್ ಡಾಲರ್. ಇನ್ನು ದಮಾನಿ ಕೂಡ ಪದವಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಷೇರು ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿದ್ದ ಇವರು, ಅದರಲ್ಲೇ ಹೂಡಿಕೆ ಮಾಡುವ ಮೂಲಕ ಉದ್ಯಮವನ್ನು ಕಟ್ಟಿದರು. ಇಂದು ರಾಧಾಕಿಶಾನ್ ದಮಾನಿ ಯಶಸ್ವಿ ಉದ್ಯಮಿಯಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಬದಲಿಗೆ ಭಾರತದ ಜನಪ್ರಿಯ ಷೇರು ಮಾರುಕಟ್ಟೆ ಹೂಡಿಕೆದಾರರಲ್ಲಿ ಕೂಡ ಒಬ್ಬರಾಗಿದ್ದಾರೆ. 

ಐಟಿಸಿ ಎಂಡಿ ಸಂಜೀವ್ ಪುರಿ ವೇತನ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!

7.ದಿಲೀಪ್ ಸಾಂಘ್ವಿ
ದಿಲೀಪ್ ಸಾಂಘ್ವಿ ದೇಶದ ಏಳನೇ ಶ್ರೀಮಂತ ಉದ್ಯಮಿ. ಸನ್ ಫಾರ್ಮಾ ಇಂಡಸ್ಟ್ರೀಸ್ ಲಿಮಿಟೆಡ್ ಸ್ಥಾಪಕರಾಗಿರುವ ಇವರ ನಿವ್ವಳ ಸಂಪತ್ತು 17 ಬಿಲಿಯನ್ ಡಾಲರ್. ಸಾಂಘ್ವಿ ಕೋಲ್ಕತ್ತ ವಿಶ್ವ ವಿದ್ಯಾಲಯದಿಂದ ಕಾಮರ್ಸ್ ನಲ್ಲಿ ಪದವಿ ಪಡೆದಿದ್ದಾರೆ. 

8.ಅಜಯ್ ಪಿರಮಲ್
ಪಿರಮಲ್ ಗ್ರೂಪ್ ಮುಖ್ಯಸ್ಥರಾಗಿರುವ ಅಜಯ್ ಪಿರಮಲ್ ಮುಂಬೈ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಆ ಬಳಿಕ ಎಂಬಿಎ ಪದವಿ ಕೂಡ ಗಳಿಸಿದ್ದಾರೆ. ಇವರ ನಿವ್ವಳ ಸಂಪತ್ತು 3.5 ಬಿಲಿಯನ್ ಡಾಲರ್. 

9.ಲಕ್ಷ್ಮೀ ಮಿತ್ತಲ್
ಅರ್ಸೆಲ್ ಮಿತ್ತಲ್ ಗ್ರೂಪ್ ಮುಖ್ಯಸ್ಥ ಲಕ್ಷ್ಮೀ ಮಿತ್ತಲ್, ಕೋಲ್ಕತ್ತದ ಸೇಂಟ್ ಕ್ಸೇವಿಯರ್ ಕಾಲೇಜಿನಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ.ಇವರ ನಿವ್ವಳ ಸಂಪತ್ತು 16.1ಬಿಲಿಯನ್ ಡಾಲರ್.

10.ನಾರಾಯಣ ಮೂರ್ತಿ
ಇನ್ಫೋಸಿಸ್ ಸಹಸಂಸ್ಥಾಪಕ ಎನ್. ನಾರಾಯಣ ಮೂರ್ತಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಆ ಬಳಿಕ ಐಐಟಿ ಕಾನ್ಪುರದಿಂದ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೊತ್ತರ ಪದವಿ ಪಡೆದಿದ್ದಾರೆ. ಇವರ ನಿವ್ವಳ ಸಂಪತ್ತು 4.2 ಬಿಲಿಯನ್ ಡಾಲರ್.