Paytm ವಾಲೆಟ್ ಖರೀದಿಸ್ತಾರಾ ಅಂಬಾನಿ? ವರದಿ ಬೆನ್ನಲ್ಲೇ ಜಿಯೋ ಷೇರು ಶೇ.13ರಷ್ಟು ಜಿಗಿತ!
ಆರ್‌ಬಿಐ ನಿರ್ಬಂಧ ಹೇರಿದ ಬಳಿಕ ಪೇಟಿಎಂ ಸಂಕಷ್ಟ ಹೆಚ್ಚಾಗಿದೆ. ಗ್ರಾಹಕರು ಬೇರೆ ಪೇಮೆಂಟ್ ಬ್ಯಾಕಿಂಗ್ ವ್ಯವಸ್ಥೆ ಮೊರೆ ಹೋಗುತ್ತಿದ್ದಾರೆ. ಫೆ.29ರ ಬಳಿಕ ಪೇಟಿಎಂ ಬ್ಯಾನ್ ಆದೇಶ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಪೇಟಿಎಂ ವಾಲೆಟ್ ಖರೀದಿಗೆ ಮುಕೇಶ್ ಅಂಬಾನಿ ತರೆಮರೆ ಕಸರತ್ತು ನಡೆಸಿದ್ದಾರೆ. ಈ ವರದಿಗಳು ಹೊರಬರುತ್ತಿದ್ದಂತೆ ಜಿಯೋ ಫಿನಾನ್ಶಿಯಲ್ ಷೇರು ಜಿಗಿತ ಕಂಡಿದೆ.
ನವದೆಹಲಿ(ಫೆ.05) ಪೇಟಿಎಂ ಪೇಮೆಂಟ್ ಬ್ಯಾಂಕ್ (ಪಿಪಿಬಿಎಲ್) ಮೇಲೆ ರಿಸರ್ವ್ ಬ್ಯಾಂಕ್ ನಿರ್ಬಂಧ ಆದೇಶ ಹೊರಡಿಸಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ. ಫೆ.29ರಿಂದ ಹೊಸ ಗ್ರಾಹಕರ ನೋಂದಣಿ, ಠೇವಣಿ ಸ್ವೀಕಾರ ಹಾಗೂ ಫಾಸ್ಟ್ಯಾಗ್ ಸೇವೆ ನೀಡಕೂಡದು ಎಂದು ಆರ್‌ಬಿಐನಿರ್ಬಂಧ ವಿಧಿಸಿದೆ. ಸಂಕಷ್ಟಕ್ಕೆ ಸಿಲುಕಿರುವ ಪೇಟಿಎಂ ವಾಲೆಟ್‌ನ್ನು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಖರೀದಿಸಲು ತರೆ ಮರೆ ಕಸರತ್ತು ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ವರದಿ ಬಹಿರಂಗವಾದ ಬೆನ್ನಲ್ಲೇ ಜಿಯೋ ಫಿನಾನ್ಶಿಯಲ್ ಷೇರುಗಳು ಶೇಕಡಾ 13ರಷ್ಟು ಜಿಗಿತ ಕಂಡಿದೆ.
ಸಂಕಷ್ಟದಿಂದ ಪಾರಾಗಲು ಪೇಟಿಎಂ ವಾಲೆಟ್ ಇದೀಗ ಮುಕೇಶ್ ಅಂಬಾನಿ ಒಡೆತನದ NBFC, ಖಾಸಗಿ ವಲಯದ ಬ್ಯಾಂಕ್ HDFC ಹಾಗೂ ಒನ್ 91 ಕಮ್ಯಾನಿಕೇಶನ್ ಬ್ಯಾಂಕ್ ಜೊತೆ ಮಾತುಕತೆ ನಡೆಸುತ್ತಿದೆ ಅನ್ನೋ ವರದಿಗಳು ಕೇಳಿಬರುತ್ತಿದೆ. ಈ ವರದಿ ಹೊರಬೀಳುತ್ತಿದ್ದಂತೆ ಜಿಯೋ ಫಿನಾನ್ಶಿಯಲ್ ಷೇರು BSEನಲ್ಲಿ ಒಟ್ಟು 288.75 ರೂಪಾಯಿಗೆ ತಲುಪಿದೆ.
ಪೇಟಿಎಂ FASTag ಗ್ರಾಹಕರಿಗೂ ಸಂಕಷ್ಟ, ಫೆ.29ರ ಬಳಿಕ ದಂಡ ತಪ್ಪಿಸಲು ಹೀಗೆ ಮಾಡಿ!
ಜಿಯೋ ಫಿನಾನ್ಶಿಯಲ್ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್ ಪೇಟಿಎಂ ವಾಲೆಟ್ ಖರೀದಿಸಲು ತುದಿಗಾಲಲ್ಲಿ ನಿಂತಿದೆ. 2023ರ ನವೆಂಬರ್ ತಿಂಗಳಲ್ಲಿ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ, ಜಿಯೋ ಫಿನಾನ್ಶಿಯಲ್ ಜೊತೆ ಮಾತುಕತೆ ನಡೆಸಿದ್ದರು. ಈ ಕುರಿತು ಸ್ವತಃ ವಿಜಯ್ ಶೇಖರ್ ಶರ್ಮಾ ಮಾಹಿತಿ ನೀಡಿದ್ದರು. ಆದರೆ ಆರ್‌ಬಿಐ ನಿರ್ಭಂದದ ಬಳಿಕ ಪೇಟಿಎಂ ಹೆಚ್‌ಡಿಎಫ್‌ಸಿ ಜೊತೆ ಮಾತುಕತೆ ನಡೆಸುವ ಪ್ರಯತ್ನದಲ್ಲಿದೆ ಅನ್ನೋ ವರದಿಗಳು ಬಹಿರಂಗವಾಗಿದೆ.
ಇತ್ತ ಭಾರತೀಯ ರಿಸರ್ವ ಬ್ಯಾಂಕ್ ಇದೇ ತಿಂಗಳಾಂತ್ಯದಿಂದ ಪೇಟಿಎಂ ಬ್ಯಾಂಕ್‌ನ ಮೇಲೆ ವಿವಿಧ ರೀತಿಯ ನಿರ್ಬಂಧ ವಹಿಸಿರುವ ಹಿನ್ನೆಲೆಯಲ್ಲಿ ಎಲ್ಲ ವರ್ತಕರು ಇತರ ಹಣಕಾಸು ಸಂಸ್ಥೆಗಳಿಗೆ ತಮ್ಮ ವಹಿವಾಟುಗಳನ್ನು ವರ್ಗಾಯಿಸಿಕೊಳ್ಳುವಂತೆ ಅಖಿಲ ಭಾರತ ವರ್ತಕರ ಒಕ್ಕೂಟವಾದ ಸಿಎಐಟಿ ಮನವಿ ಮಾಡಿದೆ. ಈ ಕುರಿತು ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌ವಾಲ್, ‘ಪೇಟಿಎಂ ಸಂಸ್ಥೆಗೆ ನಿರ್ಬಂಧ ವಿಧಿಸಿರುವುದರಿಂದ ಅದರ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯ ಕುರಿತು ಪ್ರಶ್ನೆಗಳು ಎದ್ದಿವೆ. ಈ ಹಿನ್ನೆಲೆ ವರ್ತಕರು ಹಣದ ಸುರಕ್ಷತೆ ಮತ್ತು ಅನಿಯಮಿತವಾಗಿ ಹಣದ ವಹಿವಾಟು ಕೈಗೊಳ್ಳುವ ದೃಷ್ಟಿಯಿಂದ ಇತರ ನಂಬಿಕಸ್ಥ ಸಂಸ್ಥೆಗಳಿಗೆ ತಮ್ಮ ವ್ಯವಹಾರಗಳನ್ನು ವರ್ಗಾಯಿಸಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ. ಕೆವೈಸಿ ನಿಯಮಗಳ ಪಾಲಿಸದ ಹಿನ್ನೆಲೆಯಲ್ಲಿ ಪೇಟಿಎಂ ಬ್ಯಾಂಕ್‌ನ ಮೇಲೆ ಆರ್‌ಬಿಐ ನಿರ್ಬಂಧ ಹೇರಿದೆ.
ಫೆ.29ರ ನಂತರವೂ ಪೇಟಿಎಂ ಸಕ್ರಿಯ, ಬಳಕೆದಾರರ ಆತಂಕಕ್ಕೆ ಸ್ಪಷ್ಟನೆ ನೀಡಿದ ಸಿಇಒ!