ಏಷ್ಯಾದ ನಂ.1 ಶ್ರೀಮಂತನ ಪಟ್ಟಕ್ಕೆ ಮುಂದುವರಿದ ಪೈಪೋಟಿ; ಅದಾನಿ ಹಿಂದಿಕ್ಕಿ ಮತ್ತೆ ಮೊದಲ ಸ್ಥಾನಕ್ಕೇರಿದ ಅಂಬಾನಿ
ಏಷ್ಯಾದ ನಂ.1 ಶ್ರೀಮಂತನ ಪಟ್ಟಕ್ಕೆ ಭಾರತೀಯ ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ನಡುವಿನ ಪೈಪೋಟಿ ಮುಂದುವರಿದಿದೆ. ಕಳೆದ ವಾರ ನಂ.1 ಸ್ಥಾನಕ್ಕೇರಿದ್ದ ಗೌತಮ್ ಅದಾನಿ ಅವರನ್ನು ಮುಖೇಶ್ ಅಂಬಾನಿ ಈಗ ಮತ್ತೆ ಹಿಂದಿಕ್ಕಿ ಆ ಸ್ಥಾನವನ್ನು ಮರಳಿ ಪಡೆದಿದ್ದಾರೆ.
ನವದೆಹಲಿ (ಜ.13): ಏಷ್ಯಾ ಹಾಗೂ ದೇಶದ ನಂ.1 ಶ್ರೀಮಂತನ ಪಟ್ಟಕ್ಕೆ ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಗೌತಮಿ ಅದಾನಿ ನಡುವಿನ ಹಾವು-ಏಣಿ ಆಟ ಮುಂದುವರಿದಿದೆ. ಇಬ್ಬರೂ ಒಬ್ಬರಿಗೊಬ್ಬರು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಕಳೆದ ವಾರ ಏಷ್ಯಾ ಹಾಗೂ ಭಾರತದ ನಂ.1 ಶ್ರೀಮಂತ ಉದ್ಯಮಿ ಪಟ್ಟ ಅಂಬಾನಿ ಕೈತಪ್ಪಿ ಅದಾನಿ ಪಾಲಾಗಿತ್ತು. ಆದರೆ, ಶುಕ್ರವಾರ (ಜ.12) ಈ ಸ್ಥಾನ ಮರಳಿ ಮುಖೇಶ್ ಅಂಬಾನಿ ಅವರ ಪಾಲಾಗಿದೆ. ಅದಾನಿ ಅವರನ್ನು ಹಿಂದಿಕ್ಕಿ ಅಂಬಾನಿ ಮತ್ತೊಮ್ಮೆ ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ಶುಕ್ರವಾರ ಅಂಬಾನಿ ಅವರ ನಿವ್ವಳ ಸಂಪತ್ತು 100 ಶತಕೋಟಿ ಡಾಲರ್ ದಾಟುವ ಮೂಲಕ ಅಂಬಾನಿ ಸೆಂಟಿಬಿಲಿಯನೇರ್ ಆಗಿದ್ದಾರೆ. ಕೇವಲ 24 ಗಂಟೆಗಳಲ್ಲಿ ಅಂಬಾನಿ ಅವರ ಸಂಪತ್ತಿಗೆ 3 ಬಿಲಿಯನ್ ಡಾಲರ್ ಸೇರ್ಪಡೆಯಾಗಿದೆ. ಈ ಮೂಲಕ ಅವರ ನಿವ್ವಳ ಸಂಪತ್ತು 102 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಕಳೆದ ವಾರ ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ಮುಖೇಶ್ ಅಂಬಾನಿ 13 ಸ್ಥಾನಕ್ಕೆ ಕುಸಿದಿದ್ದರು. ಆದರೆ, ಗುರುವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಷೇರುಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಒಂದೇ ದಿನದಲ್ಲಿ 2.8 ಬಿಲಿಯನ್ ಗಳಿಸಿದ್ದರು ಎಂದು ಬ್ಲೂಮ್ ಬರ್ಗ್ ಅಂಕಿಅಂಶಗಳು ತಿಳಿಸಿವೆ.
ಭಾರತ,ಏಷ್ಯಾದ ನಂ.1 ಸಿರಿವಂತನ ಪಟ್ಟ ಮರಳಿ ಪಡೆದ ಗೌತಮ್ ಅದಾನಿ; ವಿಶ್ವದ ಶ್ರೀಮಂತರ ಪಟ್ಟಿಯಲ್ಲಿಯೂ ಮೇಲೇರಿದ ಸ್ಥಾನ
2023ನೇ ಸಾಲಿನ ಅಕ್ಟೋಬರ್ ನಲ್ಲಿ ತ್ರೈಮಾಸಿಕ ಲಾಭಾಂಶದ ವರದಿ ಬಿಡುಗಡೆಯಾದ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಷೇರುಗಳಲ್ಲಿ ಶೇ.22ರಷ್ಟು ಇಳಿಕೆ ಕಂಡುಬಂದಿತ್ತು. ಮುಖೇಶ್ ಅಂಬಾನಿ ಕಂಪನಿಯಲ್ಲಿ ಶೇ.42ರಷ್ಟು ಷೇರುಗಳನ್ನು ಹೊಂದಿದ್ದಾರೆ. ಷೇರು ಬೆಲೆಯಲ್ಲಿ ಏರಿಕೆಯಾದ ಬೆನ್ನಲ್ಲೇ ಅಂಬಾನಿ ಅವರ ನಿವ್ವಳ ಸಂಪತ್ತಿನಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಕಳೆದ ವಾರ ಬಿಡುಗಡೆಯಾದ ಬ್ಲೂಮ್ ಬರ್ಗ್ ಸೂಚ್ಯಂಕದ ಅನ್ವಯ ಅಂಬಾನಿ ನಿವ್ವಳ ಸಂಪತ್ತು 96 ಬಿಲಿಯನ್ ಡಾಲರ್ ಇತ್ತು. ಇನ್ನು ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಅವರ ಸಂಪತ್ತು 96.7 ಬಿಲಿಯನ್ ಡಾಲರ್ ಇದ್ದು, ಅವರು ಏಷ್ಯಾದ ಶ್ರೀಮಂತ ವ್ಯಕ್ತಿಯ ಸ್ಥಾನಕ್ಕೇರಿದ್ದರು.
ಅಂಬಾನಿ ಅವರನ್ನೊಳಗೊಂಡಂತೆ ಜಗತ್ತಿನಾದ್ಯಂತ ಕೇವಲ 2 ಜನರು ಮಾತ್ರ 100 ಬಿಲಿಯನ್ ಡಾಲರ್ ಕ್ಲಬ್ ಸೇರಿದ್ದಾರೆ. ಅವರಲ್ಲಿ ಬಿಲ್ ಗೇಟ್ಸ್, ಮಾರ್ಕ್ ಜುಕರ್ ಬರ್ಗ್, ಜೆಫ್ ಬೆಜೋಸ್ ಹಾಗೂ ಎಲಾನ್ ಮಸ್ಕ್ ಮುಂತಾದವರು ಸೇರಿದ್ದಾರೆ. ಇನ್ನು ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ನಿವ್ವಳ ಸಂಪತ್ತು ಮಾತ್ರ 200 ಬಿಲಿಯನ್ ಡಾಲರ್ ಗಿಂತ ಹೆಚ್ಚಿದೆ.
Gautam Adani: ಹೆಚ್ಚುತ್ತಲೇ ಇದೆ ಒಟ್ಟು ಆಸ್ತಿ ಮೌಲ್ಯ..! ಅಂಬಾನಿಯನ್ನೇ ಓವರ್ಟೆಕ್ ಮಾಡಿದ ಅದಾನಿ..!
18 ಲಕ್ಷ ಕೋಟಿ ರೂ. ದಾಟಿದ ರಿಲಯನ್ಸ್ ಮಾರುಕಟ್ಟೆ ಬಂಡವಾಳ
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಳೆದ ಕೆಲವು ಟ್ರೇಡಿಂಗ್ ಸೆಷನ್ಸ್ ಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆಯಲ್ಲಿ ಶೇ.3ಕ್ಕಿಂತ ಹೆಚ್ಚಿನ ಏರಿಕೆಯಾಗಿದೆ. ಈ ಮೂಲಕ ಕಳೆದ ತಿಂಗಳಿಗಿಂತ ಶೇ.12ರಷ್ಟು ಏರಿಕೆ ದಾಖಲಿಸಿದೆ. ಇನ್ನು ಗುರುವಾರ ರಿಲಯನ್ಸ್ ಮಾರುಕಟ್ಟೆ ಬಂಡವಾಳ 18 ಲಕ್ಷ ಕೋಟಿ ರೂ. ದಾಟುವ ಮೂಲಕ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನ ಗಳಿಸುವಂತೆ ಮಾಡಿದೆ.
ಕಳೆದ ವರ್ಷದ ಪ್ರಾರಂಭದಲ್ಲಿ ಹಿಂಡೆನ್ ಬರ್ಗ್ ವರದಿಯಲ್ಲಿ ಅದಾನಿ ವಿರುದ್ಧ ವಂಚನೆ ಆರೋಪ ಮಾಡಿದ ಬೆನ್ನಲ್ಲೇ ಸಂಸ್ಥೆಯ ಷೇರುಗಳ ಬೆಲೆಯಲ್ಲಿ ಇಳಿಕೆಯಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದರು. ಆದರೆ, ಈಗ ಅವರು ಮರಳಿ ಚೇತರಿಕೆ ಕಾಣುತ್ತಿದ್ದಾರೆ. ಕಳೆದ ವಾರ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 12ನೇ ಸ್ಥಾನಕ್ಕೇರಿದ್ದರು.