ರಿಲಯನ್ಸ್‌ ರೀಟೇಲ್‌ ಮುಖ್ಯಸ್ಥೆಯಾಗಿ ಇಶಾ ಅಂಬಾನಿಯನ್ನು ಪರಿಚಯಿಸಿದ ತಂದೆ

ರಿಲಯನ್ಸ್‌ ರೀಟೇಲ್‌ ಮುಖ್ಯಸ್ಥೆಯನ್ನಾಗಿ ಇಶಾ ಅಂಬಾನಿ ಅವರನ್ನು ತಂದೆ ಮುಖೇಶ್‌ ಅಂಬಾನಿ ಘೋಷಿಸಿದ್ದಾರೆ. ರಿಲಯನ್ಸ್‌ ಇಂಡಸ್ಟ್ರೀಸ್‌ನ 45 ನೇ ಎಜಿಎಂನಲ್ಲಿ ಪರಿಚಯಿಸಲಾಗಿದೆ. 

mukesh ambani introduces daughter isha as leader of reliance retail business ash

217 ಬಿಲಿಯನ್ ಡಾಲರ್‌ ಮೌಲ್ಯದ ರಿಲಯನ್ಸ್‌ ಇಂಡಸ್ಟ್ರೀಸ್‌ (Reliance Industries) ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ರಿಲಯನ್ಸ್‌ ರೀಟೇಲ್‌ (Reliance Retail) ಕಂಪನಿಯ ಮುಖ್ಯಸ್ಥೆಯನ್ನಾಗಿ (Chairperson) ಇಶಾ ಅಂಬಾನಿಯನ್ನು ತಂದೆ ಮುಖೇಶ್‌ ಅಂಬಾನಿ ಸೋಮವಾರ ಪರಿಚಯಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ 45 ನೇ ಎಜಿಎಂ (ವಾರ್ಷಿಕ ಸಾಮಾನ್ಯ ಸಭೆ) (Annual General Meeting) ನಲ್ಲಿ ಮಾತನಾಡಿದ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್‌ ಅಂಬಾನಿ ಈ ನೇಮಕವನ್ನು ಖಚಿತಪಡಿಸಿದ್ದಾರೆ. ಜೂನ್‌ನಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಟೆಲಿಕಾಂ ಘಟಕದ ಮುಖ್ಯಸ್ಥರಾಗಿ ಆಕಾಶ್‌ ಅಂಬಾನಿ ಅವರ ನೇಮಕದ ಬಳಿಕ ಈಗ ಪುತ್ರಿ ಇಶಾ ಅಂಬಾನಿಯನ್ನು ರಿಲಯನ್ಸ್ ರೀಟೇಲ್‌ ನಾಯಕಿಯಾಗಿ ಪರಿಚಯಿಸಲಾಗಿದೆ. ಈ ಮೂಲಕ ಉತ್ತರಾಧಿಕಾರಿಯ ನೇಮಕ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದಂತಾಗಿದೆ.

ಇನ್ನು, ರಿಲಯನ್ಸ್‌ ರೀಟೇಲ್‌ ಮುಖ್ಯಸ್ಥೆಯಾಗಿ ಪರಿಚಯಿಸಲ್ಪಟ್ಟ ನಂತರ ರಿಲಯನ್ಸ್ ಇಂಡಸ್ಟ್ರೀಸ್‌ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಇಶಾ ಅಂಬಾನಿ, ರಿಲಯನ್ಸ್ ರಿಟೇಲ್ ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) (Fast Moving Consumer Goods) ವ್ಯವಹಾರವನ್ನು ಪ್ರಾರಂಭಿಸುತ್ತದೆ ಎಂದು ತಿಳಿಸಿದರು. ಹಾಗೂ, ಈ ಸಭೆಯಲ್ಲಿ 30ರ ಹರೆಯದ ಇಶಾ, ವಾಟ್ಸಾಪ್ ಬಳಸಿ ಆನ್‌ಲೈನ್‌ನಲ್ಲಿ ದಿನಸಿ ಆರ್ಡರ್‌ಗಳನ್ನು ನೀಡುವುದು ಮತ್ತು ಪಾವತಿ ಮಾಡುವ ಕುರಿತು ಪ್ರಸ್ತುತಿಯನ್ನು ನೀಡಿದರು. 

ಇದನ್ನು ಓದಿ:  ರಿಲಯನ್ಸ್ ರಿಟೇಲ್ ಕಂಪನಿಗೆ ಇಶಾ ಅಂಬಾನಿ ಚೇರ್ಮನ್?

ಇಶಾ ಅಂಬಾನಿ, ಅಮೆರಿಕದ ಯೇಲ್ ವಿಶ್ವವಿದ್ಯಾಲಯದ (Yale University) ಹಳೆಯ ವಿದ್ಯಾರ್ಥಿನಿ.  ಈಕೆ  ಪಿರಾಮಲ್ ಗ್ರೂಪ್‌ನ ಅಜಯ್ ಮತ್ತು ಸ್ವಾತಿ ಪಿರಾಮಲ್ ಅವರ ಪುತ್ರ ಆನಂದ್ ಪಿರಮಾಲ್ ಅವರನ್ನು ವಿವಾಹವಾಗಿದ್ದಾರೆ. ಇನ್ನು, 65 ವರ್ಷ ಹರೆಯದ ಮುಖೇಶ್‌ ಅಂಬಾನಿ ಅವರಿಗೆ 30 ವರ್ಷದ ಆಕಾಶ್‌ ಅಂಬಾನಿ ಹಾಗೂ ಇಶಾ ಅಂಬಾನಿ ಎಂಬ ಅವಳಿ ಮಕ್ಕಳಿದ್ದು, ಇವರಿಬ್ಬರಿಗೆ 27 ವರ್ಷದ ಅನಂತ್ ಎಂಬ ಕಿರಿಯ ಸಹೋದರನಿದ್ದಾನೆ. ಇತ್ತೀಚೆಗಷ್ಟೇ ಅನಂತ್ ಅಂಬಾನಿ ದುಬೈನಲ್ಲಿ ಅತ್ಯಂತ ಹೆಚ್ಚು ದುಬಾರಿಯ ಬೀಚ್‌ ಸೈಡ್‌ ವಿಲ್ಲಾ ಖರೀದಿಸಿದ್ದಾರೆ ಎಂಬ ವರದಿಯ ಬಳಿಕ ಇಶಾ ಅಂಬಾನಿಗೆ ಉನ್ನತ ಸ್ಥಾನವೊಂದನ್ನು ನೀಡಿರುವುದನ್ನು ಖಚಿತಪಡಿಸಲಾಗಿದೆ. 

ಅನಂತ್ ಅಂಬಾನಿಗೂ ಉನ್ನತ ಸ್ಥಾನಮಾನ..!
ಇನ್ನೊಂದೆಡೆ, ಮುಖೇಶ್ ಅಂಬಾನಿಯವರು ಕಿರಿಯ ಪುತ್ರ ಅನಂತ್ ಅವರನ್ನು ರಿಲಯನ್ಸ್‌ ನ್ಯೂ ಎನರ್ಜಿ ವ್ಯವಹಾರಕ್ಕೆ ನಾಯಕ ಎಂದು ಗುರುತಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ ವರ್ಚುವಲ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಮುಖೇಶ್ ಅಂಬಾನಿ ಸೋಮವಾರ ರಿಲಯನ್ಸ್ ಗ್ರೂಪ್‌ನ ಚಿಲ್ಲರೆ ವ್ಯಾಪಾರದ ನಾಯಕಿಯಾಗಿ ತಮ್ಮ ಮಗಳು ಇಶಾ ಅವರನ್ನು ಪರಿಚಯಿಸಿದ ಬೆನ್ನಲ್ಲೇ ಅನಂತ್ ಅಂಬಾನಿಯನ್ನು ಘೋಷಿಸಲಾಗಿದೆ. 

ಅನಂತ್, ಮುಖೇಶ್‌ ಅಂಬಾನಿಯವರ ಕಿರಿಯ ಪುತ್ರರಾಗಿದ್ದು, ಹೂಡಿಕೆಯ ಪ್ರಮುಖ ಕ್ಷೇತ್ರವಾದ ಸಮೂಹದ ಹೊಸ ಇಂಧನ ವ್ಯವಹಾರದ ಮೇಲೆ ಕೇಂದ್ರೀಕರಿಸುತ್ತಿದ್ದಾರೆ. ಹಸಿರು ಇಂಧನ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮುಂಚೂಣಿಯಲ್ಲಿರಲು ರಿಲಯನ್ಸ್ ಸ್ಪರ್ಧಿಸುತ್ತಿದೆ. ರಿಲಯನ್ಸ್ ಸೌರ ಮತ್ತು ಹಸಿರು ಹೈಡ್ರೋಜನ್ ಸೇರಿದಂತೆ ಶುದ್ಧ ಇಂಧನ ಯೋಜನೆಗಳಲ್ಲಿ ವೈವಿಧ್ಯಗೊಳಿಸಲು ಪ್ರಮುಖ ವಿಸ್ತರಣಾ ಯೋಜನೆಗಳನ್ನು ಹೊಂದಿದೆ.

ಇದನ್ನೂ ಓದಿ: ದುಬೈನಲ್ಲಿ ಅತ್ಯಂತ ದುಬಾರಿ ಮನೆ ಖರೀದಿಸಿದ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ

ರಿಲಯನ್ಸ್ ರಿಟೇಲ್ ಮತ್ತು ರಿಲಯನ್ಸ್ ಜಿಯೋ, ಅಂಬಾನಿ ಕುಟುಂಬದ ತೈಲದಿಂದ ದೂರಸಂಪರ್ಕ ಸಮೂಹದ ಅಂಗಸಂಸ್ಥೆಗಳಾಗಿವೆ. ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರೆದಿದ್ದಾರೆ. 

Latest Videos
Follow Us:
Download App:
  • android
  • ios