ರಿಲಯನ್ಸ್ ರಿಟೇಲ್ ಕಂಪನಿಗೆ ಇಶಾ ಅಂಬಾನಿ ಚೇರ್ಮನ್?
ರಿಲಯನ್ಸ್ ಜಿಯೋ ಇನ್ಫೋಕಾಮ್‌ಗೆ ಆಕಾಶ್ ಅಂಬಾನಿಯನ್ನು ಚೇರ್ಮನ್ ಆಗಿ ಘೋಷಣೆ ಮಾಡಿದ ಬೆನ್ನಲ್ಲಿಯೇಸ ಪುತ್ರಿ ಇಶಾ ಅಂಬಾನಿಯನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ರಿಟೇಲ್ ವಿಭಾಗಕ್ಕೆ ಚೇರ್ಮನ್ ಆಗಿ ನೇಮಿಸುವ ಸಾಧ್ಯತೆ ದಟ್ಟವಾಗಿದೆ.
ಮುಂಬೈ (ಜೂನ್ 29): ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಅಂಗಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ರಿಟೇಲ್ (Reliance Retail ) ವಿಭಾಗದ ಚೇರ್ಮನ್ (chairperson) ಆಗಿ ಇಶಾ ಅಂಬಾನಿಯನ್ನು (Isha Ambani) ನೇಮಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ರಿಲಯನ್ಸ್ ಜಿಯೋ ಇನ್ಫೋಕಾಮ್‌ನ (Jio Infocom) ಚೇರ್ಮನ್ ಸ್ಥಾನವನ್ನು ಮುಖೇಶ್ ಅಂಬಾನಿ, ಪುತ್ರ ಆಕಾಶ್ ಅಂಬಾನಿಗೆ (Akash Ambani) ಬಿಟ್ಟುಕೊಟ್ಟ ಬೆನ್ನಲ್ಲಿಯೇ ರಿಟೇಲ್ ವಿಭಾಗದಲ್ಲೂ ಬದಲಾವಣೆ ಘೋಷಣೆ ಆಗುವ ಸುಳಿವು ಸಿಕ್ಕಿದೆ.
ಏಷ್ಯಾದ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿರುವ ಅಂಬಾನಿ ಕುಟುಂಬದ ಉತ್ತರಾಧಿಕಾರವನ್ನು ಮುಖೇಶ್ ಅಂಬಾನಿ ಹಂಚಿಕೆ ಮಾಡುವ ಲಕ್ಷಣಗಳು ಇದರಲ್ಲಿ ಕಂಡಿವೆ. ಎರಡು ದಿನಗಳ ಹಿಂದೆ ಜಿಯೋ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಆಕಾಶ್ ಅಂಬಾನಿಯನ್ನು ಮುಂದಿನ ಚೇರ್ಮನ್ ಅಗಿ ಘೋಷಣೆ ಮಾಡಲಾಗಿತ್ತು. ಮುಖೇಶ್ ಅಂಬಾನಿ ಅವರು ತಮ್ಮ ಉದ್ಯಮ ಸಾಮ್ರಾಜ್ಯವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಯೋಜನೆಯಲ್ಲಿ ವೇಗವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಈ ನೇಮಕಾತಿಗಳಿಂದ ಸ್ಪಷ್ಟವಾಗಿದೆ.
ಬ್ಲೂಮ್‌ಬರ್ಗ್ ಈ ಕುರಿತಾಗಿ ವರದಿ ಮಾಡಿದ್ದು, ಆಪ್ತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಮಾಡಿದೆ. 'ಇಶಾ ಅಂಬಾನಿ ಅಧ್ಯಕ್ಷರಾಗುವ ಘೋಷಣೆಯನ್ನು ಬುಧವಾರ ಮಾಡಬಹುದಾಗಿದೆ. ಇಶಾ ಪ್ರಸ್ತುತ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ. ಇಶಾ ಯೇಲ್ ಹಾಗೂ ಸ್ಟ್ಯಾನ್ ಫೋರ್ಡ್ ವಿವಿಯಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ. 2015ರಲ್ಲಿ ರಿಲಯನ್ಸ್ ವ್ಯವಹಾರಕ್ಕೆ ಸೇರಿದ್ದ ಅವರು ಜಿಯೋ ಪ್ಲಾಟ್‌ಫಾರ್ಮ್‌ಗಳು, ಜಿಯೋ ಲಿಮಿಟೆಡ್‌ನ ಮಂಡಳಿಯಲ್ಲಿದ್ದಾರೆ. ಅವರು ಡಿಸೆಂಬರ್ 2018 ರಲ್ಲಿ ಉದ್ಯಮಿ ಅಜಯ್ ಪಿರಾಮಲ್ ಅವರ ಮಗ ಆನಂದ್ ಪಿರಮಾಲ್ ಅವರನ್ನು ವಿವಾಹವಾಗಿದ್ದರು.