ದೆಹಲಿ(ಜೂನ್ 14): ಮುದ್ರಾ ಯೋಜನೆಯಲ್ಲಿ ಮಹತ್ತರ ಬದಲಾವಣೆಯಾಗಿದ್ದು ಸಣ್ಣ ಉದ್ಯಮಿಗಳಿಗೆ ಸಂತಸ ಇಮ್ಮಡಿಯಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಪ್ರಕಾರ ಇದೀಗ ಸಣ್ಣ ಉದ್ಯಮಿಗಳು ಅತಿ ಕಡಿಮೆ ದಾಖಲೆ ನೀಡಿ ೧೦ ಲಕ್ಷ ರೂಪಾಯಿ ಸಾಲ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ.

ಪ್ರಮುಖವಾಗಿ ಮುದ್ರಾ ಯೋಜನೆಯಲ್ಲಿ ಮೂರು ವಿಭಾಗ ಮಾಡಿಕೊಳ್ಳಲಾಗಿದೆ. 'ಶಿಶು', 'ಕಿಶೋರ' ಮತ್ತು 'ತರುಣ' ಎಂಬ ಹೆಸರಿನಲ್ಲಿ 5 ಸಾವಿರದಿಂದ 10 ಲಕ್ಷ ರೂ, ವರೆಗೆ ಸಾಲ ನೀಡುವ ಚಿಂತನೆ ಮೊದಲಿನಿಂದಲೂ ಜಾರಿಯಲ್ಲಿದೆ. ಶಿಶು ಯೋಜನೆಯಡಿ ಗರಿಷ್ಠ 50 ಸಾವಿರ ರೂ., ಕಿಶೋರ ಯೋಜನೆಯಡಿ 50 ಸಾವಿರದಿಂದ 5 ಲಕ್ಷದವರೆಗೆ ಸಾಲ ಮತ್ತು ತರುಣ 5 ಲಕ್ಷದಿಂದ 10 ಲಕ್ಷದವರೆಗೆ ಸಾಲ ಒದಗಿಸಲಾಗುತ್ತಿದೆ.

ಬ್ಯಾಂಕ್ ಗ್ರಾಹಕರೇ ಕಟ್ಟೆಚ್ಚರ ..!

ಯಾರು ಸಾಲ ಪಡೆದುಕೊಳ್ಳಬಹುದು? ಯಾವುದೇ ವ್ಯಕ್ತಿಯಾದರೂ ಹೊಸ ಉದ್ದಿಮೆಯನ್ನು ಆರಂಭಮಾಡಲು ಮುಂದಾಗಿದ್ದು 10 ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತ ಬೇಕು ಎಂದಾದಲ್ಲಿ ನೇರವಾಗಿ ಮುದ್ರಾ ಯೋಜನೆಯನ್ನು ಸಂಪರ್ಕಿಸಬಹುದು. ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸಕಲ ಮಾಹಿತಿ ಪಡೆದುಕೊಳ್ಳಬಹುದು.

ಮುದ್ರಾ ಕ್ರೆಡಿಟ್ ಕಾರ್ಡ್: ರುಪೆ ಕಾರ್ಡ್ ಮಾದರಿಯಲ್ಲಿ ಮುದ್ರಾ ಕ್ರೆಡಿಟ್ ಕಾರ್ಡ್ ಸಹ ಲಭ್ಯವಾಗುತ್ತಿದೆ. ಹಣ ಡ್ರಾ ಮಾಡುವ ಅವಕಾಶವನ್ನು ಒದಗಿಸುವ ಕ್ರೆಡಿಟ್ ಕಾರ್ಡ್ ನ್ನು ಉಳಿದ ಕ್ರೆಡಿಟ್ ಕಾರ್ಡ್ ನಂತೆ ಶಾಪಿಂಗ್ ಗೂ ಬಳಕೆ ಮಾಡಿಕೊಳ್ಳಬಹುದು.

ಬಡ್ಡಿ ದರ ಎಷ್ಟಿದೆ?: ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಬದಲಾವಣೆ ಮಾಡುವ ಆಧಾರದಲ್ಲಿಯೇ ಮುದ್ರಾ ಬ್ಯಾಂಕ್ ನಿಂದ ಪಡೆದುಕೊಳ್ಳುವ ಸಾಲದ ಮೇಲಿನ ಬಡ್ಡಿಯೂ ಬದಲಾವಣೆಯಾಗಲಿದೆ. ಶೇ. ೩.೫ ಕ್ಕಿಂತ ಕಡಿಮೆ ಇಲ್ಲದಂತೆ ಬಡ್ಡಿ ಆಕರಣೆ ಮಾಡಲಾಗುತ್ತದೆ.