ಪಾಕ್‌ಗೆ ಟೊಮೆಟೊ ಕೊಡಲ್ಲ: ಅನ್ನದಾತನ ನಿರ್ಧಾರ ಅಚಲ!
ಪಾಕಿಸ್ತಾನಕ್ಕೆ ಟೊಮೆಟೊ ರಫ್ತಿಗೆ ನಿರಾಕರಿಸಿದ ರೈತರು| ಸ್ವಹಿತಕ್ಕಿಂತ ದೇಶದ ಹಿತ ಮುಖ್ಯ ಎಂದ ರೈತ ಸಮುದಾಯ| ಪಾಕ್‌ಗೆ ಟೊಮೆಟೊ ರಫ್ತಿಗೆ ಮಧ್ಯಪ್ರದೇಶ ರೈತರಿಂದ ಬ್ರೇಕ್| ಮಧ್ಯಪ್ರದೇಶದ ಪಶ್ಚಿಮ ಭಾಗದ ಜಬುವಾ ಜಿಲ್ಲೆಯ ರೈತರಿಂದ ಮಹತ್ವದ ನಿರ್ಧಾರ| ರೈತರ ನಿರ್ಧಾರಕ್ಕೆ ಸಿಎಂ ಕಮಲ್ ನಾಥ್ ಸ್ವಾಗತ|
ಭೋಪಾಲ್(ಫೆ.19): ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಪಾಕಿಸ್ತಾನದ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ಅದರಂತೆ ಪಾಕ್ ವಿರುದ್ಧದ ಹೋರಾಟದಲ್ಲಿ ದೇಶದ ರೈತ ಸಮುದಾಯ ಕೂಡ ಕೈಜೋಡಿಸಿದೆ.
ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಮಾಡಲು ನಿರಾಕರಿಸಿರುವ ಮಧ್ಯಪ್ರದೇಶ ರೈತರು, ನಮಗೆ ನಷ್ಟವಾದರೂ ಪರವಾಗಿಲ್ಲ ಸ್ವಹಿತಕ್ಕಿಂತ ದೇಶದ ಹಿತ ಮುಖ್ಯ ಎಂದು ಘೋಷಿಸಿದ್ದಾರೆ.
ರಾಜ್ಯದ ಪಶ್ಚಿಮ ಭಾಗದ ಜಬುವಾ ಜಿಲ್ಲೆಯ ಟೊಮೆಟೊ ಪಾಕಿಸ್ತಾನಕ್ಕೆ ರಫ್ತಾಗುತ್ತಿತ್ತು. ಆದರೆ ತಮ್ಮ ಟೊಮೆಟೊ ರಫ್ತು ಮಾಡಲು ರೈತರು ನಿರಾಕರಿಸಿರುವ ಹಿನ್ನೆಲೆಯಲ್ಲಿ ರಫ್ತು ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ.
ಜಬುವಾ ಜಿಲ್ಲೆಯ ಪೆಟ್ಲವಾಡ್ ಗ್ರಾಮದಲ್ಲಿ ಸುಮಾರು 5 ಸಾವಿರ ರೈತರು ಟೊಮೆಟೊ ಬೆಳೆಯುತ್ತಿದ್ದು, ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಇನ್ನು ಮುಂದೆ ರಫ್ತು ಮಾಡದಿರಲು ನಿರ್ಧರಿಸಿದ್ದಾರೆ. ಮೊದಲು ದೆಹಲಿಯ ಏಜೆಂಟರ ಮೂಲಕ ರೈತರು ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದರು.
ಇನ್ನು ರೈತರ ನಿರ್ಧಾರವನ್ನು ಮಧ್ಯ ಪ್ರದೇಶ ಸಿಎಂ ಕಮಲ್ ನಾಥ್ ಶ್ಲಾಘಿಸಿದ್ದು, ಟೊಮೆಟೊ ಬೆಳೆಗಾರರ ದೇಶಪ್ರೇಮವನ್ನು ವರ್ಣಿಸಲು ಪದಗಳು ಸಿಗುತ್ತಿಲ್ಲ ಎಂದು ಹೇಳಿದ್ದಾರೆ.