ಹಣಕಾಸು ತಜ್ಞರು ಶೇ.15ರ ನಿಯಮ ಪಾಲಿಸುವಂತೆ ಸಲಹೆ ನೀಡುತ್ತಾರೆ. ದುಡಿಯುವಾಗ ಖರ್ಚುಗಳಿಗೆ ಆದ್ಯತೆ ನೀಡಿ, ನಿವೃತ್ತಿ ಯೋಜನೆಯನ್ನು ಮರೆತುಬಿಡುವುದರಿಂದ ಈ ಸಮಸ್ಯೆ ಉದ್ಭವಿಸುತ್ತದೆ.
ನವದೆಹಲಿ: ಭಾರತದ ಶೇ.80ಕ್ಕಿಂತ ಅಧಿಕ ಜನರು ನಿವೃತ್ತಿ ನಂತರ ಆರ್ಥಿಕ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆಗಳಿವೆ. ಮಧ್ಯಮ ವರ್ಗದ ಜನತೆ ಕೆಲಸ ಮಾಡಲು ಅಶಕ್ತರಾಗುತ್ತಿದ್ದಂತೆ ಆರ್ಥಿಕವಾಗಿ ಕುಸಿಯುತ್ತಾರೆ. ದುಡಿಯುವ ಸಮಯದಲ್ಲಿ ಇಎಂಐ, ಬಿಲ್ ಪಾವತಿ, ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಹಣವನ್ನು ಕಳೆದುಕೊಂಡು, ನಿವೃತ್ತಿ ಸಮಯದಲ್ಲಿ ಬೇರೆಯವರ ಮುಂದೆ ಕೈಚಾಚುವ ಪರಿಸ್ಥಿತಿಗೆ ತಲುಪಲಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ, ಭಾರತದ ಐವರಲ್ಲಿ ನಾಲ್ವರು ನಿವೃತ್ತಿ ಬಳಿಕ ಅಕ್ಷರಶಃ ಕಂಗಾಲು ಆಗುತ್ತಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಈ ನಾಲ್ವರು ಮಧ್ಯಮ ವರ್ಗಕ್ಕೆ ಸೇರಿದವರಾಗಿರುತ್ತಾರೆ.
ಹಣಕಾಸಿನ ತಜ್ಞ ಮೋಹಿತ್ ಬೇರಿವಾಲಾ ಎಂಬವರು ಲಿಂಕ್ಡ್ ಇನ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ನಾವು ಭವಿಷ್ಯದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಈ ಸಮಸ್ಯೆಗಳು ಮೊದಲಿನಿಂದಲೂ ನಮ್ಮೊಂದಿಗಿವೆ ಎಂದಿದ್ದಾರೆ. ಸದ್ಯ ನೀವು ಎಷ್ಟು ಸಂಪಾದನೆ ಮಾಡುತ್ತೀರಿ ಎಂಬುವುದು ಪ್ರಶ್ನೆಯೇ ಅಲ್ಲ. ನಿವೃತ್ತಿ ನಂತರ ನಿಮ್ಮ ಉಳಿತಾಯ ಎಷ್ಟು ದಿನ ನಿಮ್ಮನ್ನು ಕಾಪಾಡುತ್ತೆ ಎಂಬುವುದು ಪ್ರಶ್ನೆಯಾಗಿದೆ. ಇಂದು ನಾವೆಲ್ಲರೂ ಈ ಪ್ರಶ್ನೆಗೆ ಉತ್ತರ ಕಂಡುಕೊಂಡ್ರೆ ಮಾತ್ರ ಭವಿಷ್ಯ ಆರಾಮದಾಯಕವಾಗಿರುತ್ತದೆ ಎಂದು ಮೋಹಿತ್ ಹೇಳುತ್ತಾರೆ.
ಅಂತ್ಯಕಾಲದಲ್ಲಿ ಭಿಕ್ಷುಕರಾಗುವ ಸನ್ನಿವೇಶ
ದಶಕಗಳ ಕಾಲ ಬಿಡುವಿಲ್ಲದೇ ದುಡಿಯುವ ಮಧ್ಯಮ ವರ್ಗ ತಮ್ಮ ಗಳಿಕೆಯನ್ನು ಕುಟುಂಬಕ್ಕಾಗಿ ತ್ಯಾಗ ಮಾಡುತ್ತಾರೆ. ಹೋಮ್ ಲೋನ್, ಮಕ್ಕಳ ಶಿಕ್ಷಣ, ಮದುವೆ ಮತ್ತು ಆರೋಗ್ಯಕ್ಕಾಗಿ ಆದಾಯದ ಬಹುತೇಕ ಭಾಗವನ್ನು ಖರ್ಚು ಮಾಡುತ್ತಾರೆ. ಆದ್ರೆ ತಮ್ಮ ನಿವೃತ್ತಿ ಜೀವನಕ್ಕೆ ಆದಾಯದ ಒಂದು ಭಾಗವನ್ನು ಮೀಸಲಿಡಬೇಕು ಅನ್ನೋದನ್ನು ಮರೆಯುತ್ತಾರೆ. ಇದರಿಂದ ಜೀವನದ ಅಂತ್ಯಕಾಲದಲ್ಲಿ ಭಿಕ್ಷುಕರಾಗುವ ಸನ್ನಿವೇಶ ಉಂಟಾಗಬಹುದು.
ಶಿಸ್ತುಬದ್ಧ ಕಠಿಣ ಹಣಕಾಸಿನ ನಿಯಮ
ಸಾಮಾನ್ಯವಾಗಿ ಮಧ್ಯಮ ವರ್ಗದ ಕುಟುಂಬ ತನ್ನದೇ ಬಜೆಟ್ ಹೊಂದಿರುತ್ತದೆ. ಮನೆ ಬಾಡಿಗೆ, ದಿನಸಿ, ವಿದ್ಯುತ್ ಬಿಲ್, ಮೊಬೈಲ್ ರೀಚಾರ್ಜ್ ಸೇರಿದಂತೆ ಹೀಗೆ ಸಾಲು ಸಾಲು ಖರ್ಚುಗಳಿರೋದರಿಂದ ಉಳಿತಾಯದ ಪ್ರಮಾಣ ಕಡಿಮೆಯಾಗುತ್ತದೆ. ಈ ಕಡಿಮೆ ಉಳಿತಾಯ ಸಹ ಸಾಲ, ವೈದ್ಯಕೀಯಂತಹ ತುರ್ತು ಸಂದರ್ಭಗಳಲ್ಲಿ ಖರ್ಚಾಗುತ್ತದೆ. ಹಾಗಾಗಿ ಇದಕ್ಕೆ ಶಿಸ್ತುಬದ್ಧ ಕಠಿಣ ಹಣಕಾಸಿನ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮೋಹಿತ್ ಸಲಹೆ ನೀಡುತ್ತಾರೆ.
ಹಣದುಬ್ಬರ ಏರಿಕೆ, ಉಳಿತಾಯ ಖಾಲಿ
ಕೆಲಸ ಮಾಡೋದನ್ನು ನಿಲ್ಲಿಸಿದ ನಂತರದ ದಿನಗಳಲ್ಲಿ ಉಳಿತಾಯದ ಹಣ ಕಡಿಮೆಯಾಗಲು ಆರಂಭವಾಗುತ್ತದೆ. ಆದ್ರೆ ವೆಚ್ಚಗಳು ಏರಿಕೆಯಾಗುತ್ತಲಿರುತ್ತವೆ. ಭಾರತದಲ್ಲಿ ಶೇ.6 ರಿಂದ ಶೇ.7ರಷ್ಟು ಹಣದುಬ್ಬರವಿದೆ. ಇದರರ್ಥ ಮಾಸಿಕ 1 ಲಕ್ಷ ರೂ. ಖರ್ಚು 10 ವರ್ಷಗಳ ನಂತರ 2 ಲಕ್ಷ ರೂ.ಗೆ ಏರಿಕೆಯಾಗಬಹುದು. ಖರ್ಚಿನ ಮೊತ್ತ ಡಬಲ್ ಆಗುತ್ತದೆ. ಇದರಲ್ಲಿ ವೈದ್ಯಕೀಯ ವೆಚ್ಚಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುತ್ತವೆ. ಆರೋಗ್ಯ ಸೇವೆಯಲ್ಲಿ ಶೇ.12ರಷ್ಟು ಹಣದುಬ್ಬರವಿದೆ. ಇದು ಭವಿಷ್ಯದಲ್ಲಿ ಮತ್ತಷ್ಟು ಏರಿಕೆಯಾಗಬಹುದು.
ನಿಮ್ಮನ್ನು ರಕ್ಷಿಸಲಿದೆ ಶೇ.15ರ ನಿಯಮ
ಹಣಕಾಸಿನ ತಜ್ಞ ಮೋಹಿತ್ ಬೇರಿವಾಲಾ ಅವರ ಪ್ರಕಾರ, ಶೇ.15ರ ನಿಯಮ ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ರಕ್ಷಿಸುತ್ತದೆ. ನಿಮ್ಮ ಮಾಸಿಕ ಆದಾಯದ ಶೇ.15ರಷ್ಟು ಮೊತ್ತವನ್ನು ನಿವೃತ್ತಿಗಾಗಿಯೇ ಮೀಸಲಿಡಬೇಕು. ಈ ಹಣವನ್ನು ನಿವೃತ್ತಿ ನಂತರವೇ ಬಳಕೆ ಮಾಡಲು ಆರಂಭಿಸಬೇಕು. ಈ ಹಣವನ್ನು ಮಕ್ಕಳ ಮದುವೆ ಸೇರಿದಂತೆ ಯಾವುದೇ ಕಾರಣದಲ್ಲಿಯೂ ಖರ್ಚು ಮಾಡಬಾರದು. ಹೀಗಾದ್ರೆ ಮಾತ್ರ ನಿವೃತ್ತಿಯ ನಂತರದ ಜೀವನ ಸುರಕ್ಷಿತವಾಗಿರುತ್ತದೆ. ಹಾಗೆ ಅನಿರೀಕ್ಷಿತ ಆದಾಯಗಳನ್ನು ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಇದರಿಂದ ನಿಮ್ಮ ಹಣಕ್ಕೆ ಒಳ್ಳೆಯ ರಿಟರ್ನ್ ಸಿಗುತ್ತದೆ.