ಬೆಂಗಳೂರು[ಮಾ.26]: ರಾಷ್ಟ್ರದಲ್ಲಿಯೇ ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಲಯವು ಮೂರನೇ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಿದ್ದು, ಕಳೆದ ಹಣಕಾಸು ವರ್ಷಕ್ಕಿಂತ ಈ ಬಾರಿ 7,407 ಕೋಟಿಗಳಷ್ಟುಹೆಚ್ಚು ಆದಾಯ ಸಂಗ್ರಹಿಸಿದೆ.

2017-18ನೇ ಆರ್ಥಿಕ ಸಾಲಿನಲ್ಲಿ .1,03,745 ಕೋಟಿ ಸಂಗ್ರಹಿಸಿದರೆ, 2018-19ನೇ ಸಾಲಿನಲ್ಲಿ 1,11,152 ಕೋಟಿ ಆದಾಯ ಕ್ರೋಢೀಕರಿಸಲಾಗಿದೆ. ಅಲ್ಲದೇ, ಮರುಪಾವತಿಯಲ್ಲಿಯೂ ಹೆಚ್ಚಳವಾಗಿದ್ದು, 15,340 ಕೋಟಿ ತೆರಿಗೆದಾರರಿಗೆ ಮರುಪಾವತಿ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 12,415 ಕೋಟಿ ಹಿಂದಿರುಗಿಸಲಾಗಿತ್ತು ಎಂದು ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್‌.ಬಾಲಕೃಷ್ಣನ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆರಿಗೆ ಸಂಗ್ರಹದಲ್ಲಿ ಉತ್ತಮ ಕಾರ್ಯ ಮಾಡಲಾಗುತ್ತಿದೆ. ಆದರೂ ಇನ್ನೂ ಹಲವು ಮಂದಿ ತೆರಿಗೆ ಪಾವತಿಸಿಲ್ಲ. ಅಲ್ಲದೇ, ಟಿಡಿಎಸ್‌ ಪಾವತಿಯಲ್ಲಿಯೂ ಕಾನೂನು ಪಾಲನೆ ಸರಿಯಾಗಿ ನಡೆಯುತ್ತಿಲ್ಲ. ಮಾ.31ರೊಳಗೆ ಕಳೆದ ಸಾಲಿನ ತೆರಿಗೆಯನ್ನು ಸಾರ್ವಜನಿಕರು ಪಾವತಿಸಬೇಕು. ಟಿಡಿಎಸ್‌ ಮೊತ್ತ ಪಾವತಿಯಲ್ಲಿ ಕಾನೂನು ಪಾಲನೆ ಮಾಡಬೇಕು. ಇಲ್ಲದಿದ್ದರೆ ಆದಾಯ ತೆರಿಗೆ ಇಲಾಖೆಯು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಅಘೋಷಿತ ಆದಾಯ ಪ್ರಕರಣಗಳ ಮೇಲೆ ಆದಾಯ ತೆರಿಗೆ ಇಲಾಖೆ ತೀವ್ರವಾಗಿ ನಿಗಾವಹಿಸುತ್ತಿದೆ. 300ಕ್ಕೂ ಹೆಚ್ಚು ಸಮೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ .911 ಕೋಟಿನಷ್ಟುಅಘೋಷಿತ ಆದಾಯವನ್ನು ಪತ್ತೆ ಹಚ್ಚಲಾಗಿದೆ. ಟಿಡಿಎಸ್‌ ಕಡಿತ ಪ್ರಕರಣಗಳಿಗೆ ಸಂಬಂಧಿಸಿದಂತೆ 500ಕ್ಕೂ ಹೆಚ್ಚು ಕಡೆ ತಪಾಸಣೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ತೆರಿಗೆ ವಂಚನೆ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದಿವೆ. ಆದಾಯ ತೆರಿಗೆ ಇಲಾಖೆಯು ಮೊದಲ ಬಾರಿಗೆ ತೆರಿಗೆ ವಂಚನೆ ಮಾಡುವವರನ್ನು ಬಂಧಿಸಿದೆ. ಮುಂಬೈ ನಿಲ್ದಾಣದಲ್ಲಿ ಬೆಂಗಳೂರು ಮೂಲದ ಉದ್ಯಮಿ ಮತ್ತು ತುಮಕೂರು ಮೂಲದ ಉದ್ಯಮಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ಅಕ್ರಮಗಳ ಮೇಲೆ ಹದ್ದಿನಕಣ್ಣು

ಲೋಕಸಭೆ ಚುನಾವಣೆಯಲ್ಲಿ ಅಕ್ರಮಗಳು ಯಥೇಚ್ಛವಾಗಿ ನಡೆಯುವುದರಿಂದ ಆದಾಯ ತೆರಿಗೆ ಇಲಾಖೆಯು ಹದ್ದಿನಕಣ್ಣು ಇಡಲಾಗಿದ್ದು, ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತ ಬಿ.ಆರ್‌.ಬಾಲಕೃಷ್ಣನ್‌ ಹೇಳಿದ್ದಾರೆ.

ರಾಜ್ಯದ 30 ಜಿಲ್ಲೆಯಲ್ಲಿ ಇಲಾಖೆಯಿಂದ ನೋಡೆಲ್‌ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ಜಿಲ್ಲೆಗೆ ಒಬ್ಬರು ಉಪ ಆಯುಕ್ತರು ಕಾರ್ಯನಿರ್ವಹಿಸಲಿದ್ದಾರೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಾಗುತ್ತದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಕೇಂದ್ರದಲ್ಲಿ ಹೆಚ್ಚುವರಿ ನಿರ್ದೇಶಕರು ಉಸ್ತುವಾರಿಯಾಗಿ ಕೆಲಸ ಮಾಡಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಐಟಿ ಅಧಿಕಾರಿಗಳು .36.95 ಕೋಟಿ ನಗದು, .6 ಕೋಟಿ ರು. ಮೌಲ್ಯದ ಚಿನ್ನಾಭರಣ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದರು.