Asianet Suvarna News Asianet Suvarna News

ಮುಂದೂಡಿದ ಇಎಂಐಗೆ ಬಡ್ಡಿ ವಿನಾಯ್ತಿ? ಸಾಲಗಾರರಿಗೆ ಸಿಗುತ್ತಾ ಗುಡ್‌ ನ್ಯೂಸ್?

ಮುಂದೂಡಿದ ಇಎಂಐಗೆ ಬಡ್ಡಿ ವಿನಾಯ್ತಿ? 2-3 ದಿನಕ್ಕೆ ನಿರ್ಧಾರ| ಅ.5ಕ್ಕೆ ವಿಚಾರಣೆ ನಿಗದಿ, ಮತ್ತೆ ಮುಂದೂಡಿಕೆ ಇಲ್ಲ| ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ತಾಕೀತು

moratorium interest waiver central govt to decide by three days pod
Author
Bangalore, First Published Sep 29, 2020, 1:47 PM IST

ನವದೆಹಲಿ(ಸೆ.29): ಕೊರೋನಾ ವೈರಸ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾಲದ ಮಾಸಿಕ ಕಂತು (ಇಎಂಐ) ಪಾವತಿಯಿಂದ ಸಾಲಗಾರರಿಗೆ ವಿನಾಯ್ತಿ ನೀಡಿದ್ದ ಆರು ತಿಂಗಳ ಅವಧಿಗೆ ಬಡ್ಡಿ ಮತ್ತು ಚಕ್ರಬಡ್ಡಿ ವಿಧಿಸುವ ಅಥವಾ ವಿಧಿಸದಿರುವ ನೀಡುವ ಕುರಿತು 2-3 ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ವಿಷಯವನ್ನು ಕೇಂದ್ರ ಸರ್ಕಾರವೇ ಸುಪ್ರೀಂಕೋರ್ಟ್‌ಗೆ ಸೋಮವಾರ ತಿಳಿಸಿದೆ.

ಇಎಂಐ ಪಾವತಿ ಮುಂದೂಡಲು ಅವಕಾಶ ನೀಡಿದ್ದ ಅವಧಿಯಲ್ಲಿ ಸಾಲಗಾರರಿಗೆ ಬ್ಯಾಂಕುಗಳು ಬಡ್ಡಿ ಮತ್ತು ಚಕ್ರಬಡ್ಡಿ ವಿಧಿಸುವುದನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯ ವೇಳೆ ನ್ಯಾಯಪೀಠ, ಅ.1ರೊಳಗೆ ನಿಮ್ಮ ಅಂತಿಮ ನಿರ್ಧಾರ ಏನೆಂದು ಸಂಬಂಧಪಟ್ಟಪಕ್ಷಗಾರರಿಗೆ ಅಫಿಡವಿಟ್‌ನಲ್ಲಿ ತಿಳಿಸಬೇಕು. ಅ.5ರಂದು ಮುಂದಿನ ವಿಚಾರಣೆ ನಡೆಸಲಾಗುವುದು. ಈ ವಿಚಾರವನ್ನು ಇನ್ನಷ್ಟುಮುಂದೂಡಲು ನಾವು ಸಿದ್ಧರಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿತು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಕೊಂಡಿತು.

ಈ ಹಿಂದಿನ ವಿಚಾರಣೆಗಳಲ್ಲಿ ಕೇಂದ್ರ ಸರ್ಕಾರ ಇಎಂಐ ಮುಂದೂಡಿಕೆ ಸೌಲಭ್ಯ ಪಡೆದ ಸಾಲಗಾರರಿಗೆ ಬಡ್ಡಿ ವಿಧಿಸದಿದ್ದರೆ ಕಷ್ಟಪಟ್ಟು ಇಎಂಐ ಪಾವತಿಸಿದ ಸಾಲಗಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿತ್ತು. ನಂತರ ಸುಪ್ರೀಂಕೋರ್ಟ್‌ನ ಸೂಚನೆ ಮೇರೆಗೆ ಈ ವಿಚಾರದಲ್ಲಿ ಸಲಹೆ ಪಡೆಯಲು ಉನ್ನತ ಮಟ್ಟದ ಆರ್ಥಿಕ ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ನಂತರದ ವಿಚಾರಣೆಯಲ್ಲಿ, ಇಎಂಐ ಮುಂದೂಡಿದ ಅವಧಿಗೆ ಬಡ್ಡಿ ವಿಧಿಸಿ, ಚಕ್ರಬಡ್ಡಿ ವಿಧಿಸದಿರುವ ಸುಳಿವು ನೀಡಿತ್ತು. ಈ ವೇಳೆ, ತನ್ನ ಮುಂದಿನ ಆದೇಶದವರೆಗೆ ಇಎಂಐ ಪಾವತಿಸದ ಯಾರನ್ನೂ ಸುಸ್ತಿ ಸಾಲಗಾರರು ಎಂದು ಘೋಷಿಸದಿರುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಆ ಆದೇಶ ಈಗಲೂ ಜಾರಿಯಲ್ಲಿದೆ. ಆದರೂ ಈ ವಿಚಾರದಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳುವುದು ಸಾಕಷ್ಟುವಿಳಂಬವಾಗುತ್ತಿರುವ ಕಾರಣ ಅ.1ರೊಳಗೆ ನಿಮ್ಮ ನಿರ್ಧಾರ ಏನೇ ಇದ್ದರೂ ಅದನ್ನು ಪಕ್ಷಗಾರರಿಗೆ ತಿಳಿಸಬೇಕು ಎಂದು ಸುಪ್ರೀಂಕೋರ್ಟ್‌ ತಾಕೀತು ಮಾಡಿದೆ.

Follow Us:
Download App:
  • android
  • ios