ಮಕ್ಕಳ ಪಾಲನೆಯಲ್ಲಿ ಅಮ್ಮನ ಪಾತ್ರ ಬಹುದೊಡ್ಡದು.ಮಕ್ಕಳ ಪಾಲನೆಗೆ ಆಕೆ ಎಷ್ಟು ವ್ಯಯಿಸುತ್ತಾಳೆ ಎಂಬುದು ಕೂಡ ಕುಟುಂಬದ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಬಲ್ಲದು. ಹಾಗಾದ್ರೆ ಅಮ್ಮ ಕುಟುಂಬದ ನೆಮ್ಮದಿ ಹಾಗೂ ಆರ್ಥಿಕ ಸುರಕ್ಷತೆಗೆ ಏನ್ ಮಾಡ್ಬೇಕು? ಹೇಗೆ ವ್ಯಯಿಸಬೇಕು, ಉಳಿತಾಯ ಮಾಡಬೇಕು? ಇಲ್ಲಿದೆ ಮಾಹಿತಿ.
Business Desk: ಇತ್ತೀಚಿನ ದಿನಗಳಲ್ಲಿ ಮಕ್ಕಳ ಪಾಲನೆ -ಪೋಷಣೆ (Parenting) ವಿಧಾನ ಬದಲಾಗುತ್ತಿದೆ. ಮಕ್ಕಳಿಗೆ ಕೇಳಿದ್ದು, ಕಂಡಿದ್ದನ್ನೆಲ್ಲ ಕೊಡಿಸುವ ಜೊತೆಗೆ ಬರ್ತ್ ಡೇ (Birthday), ಪಿಕ್ ನಿಕ್ (Picnic) ಎಂದು ಒಂದಿಷ್ಟು ದೊಡ್ಡು ಸುರಿಯುವುದು ಕಾಮನ್. ಇಂದು ಬಹುತೇಕ ಕುಟುಂಬಗಳಲ್ಲಿ ಅಪ್ಪ-ಅಮ್ಮ ಇಬ್ಬರೂ ದುಡಿಯುತ್ತಿರುವ ಕಾರಣ ಮಕ್ಕಳ ಜೊತೆ ಸಮಯ ಕಳೆಯಲು ಸಾಧ್ಯವಾಗಿಲ್ಲ ಎಂಬ ಕೊರಗನ್ನು ಅವರಿಗೆ ಕೇಳಿದ್ದನ್ನೆಲ್ಲ ಕೊಡಿಸುವ ಮೂಲಕ ನೀಗಿಸಿಕೊಳ್ಳುವ ಗೀಳುಹೆಚ್ಚಿದೆ. ಅದ್ರಲ್ಲೂ ಅಮ್ಮ ಮಕ್ಕಳಿಗಾಗಿ ಅನವಶ್ಯಕವಾಗಿ ಖರ್ಚು ಮಾಡೋದ್ರಿಂದ ಮುಂದೊಂದು ದಿನ ಆರ್ಥಿಕ ಸಂಕಷ್ಟ ಎದುರಾಗಬಹುದು. ಹಾಗಾದ್ರೆ ತಾಯಿ ಕುಟುಂಬದ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ, ಭವಿಷ್ಯಕ್ಕೆ ಉಳಿತಾಯ ಮಾಡಲು ಏನ್ ಮಾಡ್ಬೇಕು? ಇಲ್ಲಿದೆ ಟಿಪ್ಸ್.
1.ಸಾಮಾಜಿಕ ಜಾಲತಾಣದಿಂದ ಪ್ರಭಾವಿತರಾಗಿ ವೆಚ್ಚ ಮಾಡ್ಬೇಡಿ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ (Social Media)ಪ್ರಭಾವಿ ಮಾಧ್ಯಮವಾಗಿ ರೂಪುಗೊಂಡಿದೆ. ಎಷ್ಟೋ ಜನರು ಸಾಮಾಜಿಕ ಜಾಲತಾಣದಲ್ಲಿ ಪರಿಚಿತರು, ಸ್ನೇಹಿತರು ಶೇರ್ ಮಾಡುವ ಫೋಟೋಗಳು, ವಿಷಯಗಳನ್ನು ನೋಡಿ ಅವರೊಂದಿಗೆ ತಮ್ಮನ್ನು ಹೋಲಿಸಿಕೊಂಡು ಕೊರಗುತ್ತಾರೆ. ಇಂಥ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟುಬಿಡಿ. ಅದ್ದೂರಿ ಬರ್ತ್ ಡೇ ಪಾರ್ಟಿ, ಕುಟುಬ ಪ್ರವಾಸದ ಫೋಟೋಗಳನ್ನು ನೋಡಿ ಕೊರಗಬೇಡಿ. ಸ್ನೇಹಿತೆ ಮಗುವಿನ ಬರ್ತ್ ಡೇಯನ್ನು ಗ್ರ್ಯಾಂಡ್ ಆಗಿ ಹೋಟೆಲ್ ನಲ್ಲಿ ಆಚರಿಸಿದಳು ಎಂಬ ಕಾರಣಕ್ಕೆ ನೀವು ಕೂಡ ನಿಮ್ಮ ಮಗುವಿನ ಬರ್ತ್ ಡೇ ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಲು ಹೋಗುವುದು ಎಷ್ಟು ಸರಿ? ನಿಮ್ಮ ಸ್ನೇಹಿತೆ ಫೇಸ್ ಬುಕ್ ಅಥವಾ ಇನ್ ಸ್ಟ್ರಾದಲ್ಲಿ ದುಬಾರಿ ಬೆಲೆಯ ಡ್ರೆಸ್ ತೊಟ್ಟ ಮಗುವಿನ ಫೋಟೋ, ದೊಡ್ಡ ಗಾತ್ರದ ಕೇಕ್, ಆಕರ್ಷಕ ಡೆಕೋರೇಷನ್ ಫೋಟೋಗಳನ್ನು ಷೇರ್ ಮಾಡಿರಬಹುದು. ಇದನ್ನು ನೋಡಿ ನಿಮಗೆ ನಿಮ್ಮ ಮಗುವಿಗೆ ನೀವೇನೂ ಮಾಡುತ್ತಿಲ್ಲ ಎಂಬ ಭಾವನೆ ಮೂಡಬಹುದು. ಅದೇ ಕಾರಣಕ್ಕೆ ನೀವು ಮಗುವಿಗಾಗಿ ಹೆಚ್ಚು ವೆಚ್ಚ ಮಾಡಲು ಪ್ರಾರಂಭಿಸಬಹುದು. ಆದ್ರೆ ನಿಮ್ಮ ಸ್ನೇಹಿತೆಯ ಆರ್ಥಿಕ ಸ್ಥಿತಿಯನ್ನು ಕೇವಲ ಫೋಟೋಗಳನ್ನು ನೋಡಿ ಅಂದಾಜಿಸಲು ಸಾಧ್ಯವಿಲ್ಲ. ಯಾರಿಗೆ ಗೊತ್ತು ಅವರ ಆರ್ಥಿಕ ಸ್ಥಿತಿ ನಿಮಷ್ಟು ಚೆನ್ನಾಗಿರದೆ ಇರಬಹುದು. ಕೆಲವರು ಮೋಜು-ಮಸ್ತಿಗೆ ಹೆಚ್ಚು ವ್ಯಯಿಸುತ್ತಾರೆ ಎಂದ ಮಾತ್ರಕ್ಕೆ ಅವರು ಆರ್ಥಿಕವಾಗಿ ಸದೃಢರು ಎಂದು ಹೇಳಲಾಗುವುದಿಲ್ಲ. ಹೀಗಾಗಿ ನಿಮ್ಮ ಆದಾಯವನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮಗುವಿಗಾಗಿ ಖರ್ಚು ಮಾಡಿ. ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ಖರ್ಚು ಮಾಡುವಂತೆ ಪ್ರೇರೇಪಿಸುವ ಫ್ರೆಂಡ್ಸ್ ಗಳನ್ನು ಫಾಲೋ ಮಾಡುವ ಬದಲು ಸ್ಫೂರ್ತಿ ನೀಡುವಂಥವರನ್ನು ಅನುಸರಿಸಲು ಪ್ರಯತ್ನಿಸಿ. ಇದ್ರಿಂದ ನೆಮ್ಮದಿ ಹೆಚ್ಚುತ್ತದೆ.
Business Idea : ಈ ಬ್ಯುಸಿನೆಸ್ ಮಾಡಿದ್ರೇ ಲಾಭ ಖಚಿತ, ಹೂಡಿಕೆ ಕೂಡ ಸ್ವಲ್ಪವೇ ಸಾಕು
2.ಉಳಿತಾಯದ ಅಭ್ಯಾಸ ಬಿಡಬೇಡಿ
ಮಕ್ಕಳ ಶೈಕ್ಷಣಿಕ ವೆಚ್ಚ ಅಥವಾ ನೃತ್ಯ, ಸಂಗೀತ ಸೇರಿದಂತೆ ಇತರ ಚಟುವಟಿಕೆಗಳ ತರಗತಿಗೆ ಹಣ ಬೇಕು ಎಂಬ ಕಾರಣಕ್ಕೆ ಭವಿಷ್ಯಕ್ಕಾಗಿ ಉಳಿತಾಯ ಮಾಡುವುದನ್ನು ನಿಲ್ಲಿಸಬೇಡಿ. ಪ್ರತಿ ತಿಂಗಳು ಒಂದಿಷ್ಟು ಹಣ ಉಳಿತಾಯ ಮಾಡಲು ಯಾವುದಾದ್ರೂ ಯೋಜನೆಯಲ್ಲಿ ಹೂಡಿಕೆ ಮಾಡಿ. ಅದು ದೊಡ್ಡ ಮೊತ್ತದೇ ಆಗಬೇಕೆಂದೇನಿಲ್ಲ. ಚಿಕ್ಕ ಮೊತ್ತದಾದರೂ ಸರಿ. ಅಂಚೆ ಕಚೇರಿಯ ಆರ್ ಡಿ, ಬ್ಯಾಂಕುಗಳಲ್ಲಿನ ಉಳಿತಾಯ ಖಾತೆಗಳಂಥ ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಈ ಉಳಿತಾಯ ಯೋಜನೆಗಳಿಗೆ ನಿಮ್ಮ ಖಾತೆಯಿಂದ ಪ್ರತಿ ತಿಂಗಳು ಅಟೋಮ್ಯಾಟಿಕ್ ಆಗಿ ಹಣ ಕಡಿತವಾಗುವ ವ್ಯವಸ್ಥೆ ಮಾಡಿ. ಇದ್ರಿಂದ ನೀವು ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ನಿಮ್ಮ ವೃದ್ಧಾಪ್ಯಕ್ಕೆ ನೆರವಾಗುವಂಥ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ.
3.ಮಕ್ಕಳ ಶೈಕ್ಷಣಿಕ ವೆಚ್ಚ ಮಿತಿಯಲಿದ್ರೆ ನೆಮ್ಮದಿ
ಶುಲ್ಕ ಹೆಚ್ಚಿರುವ ಶಾಲೆ ಉತ್ತಮ ಎಂಬ ಅಭಿಪ್ರಾಯ ಬಹುತೇಕ ಪಾಲಕರಲ್ಲಿದೆ. ಅದರಲ್ಲೂ ಮಕ್ಕಳನ್ನು ಶಾಲೆಗೆ ಸೇರಿಸುವ ವಿಚಾರದಲ್ಲಿ ತಾಯಂದಿರು ಮಹತ್ವದ ಪಾತ್ರ ವಹಿಸುತ್ತಾರೆ. ಹಾಗಾಗಿ ಸ್ನೇಹಿತರು ಅಥವಾ ಬಂಧುಗಳ ಮಕ್ಕಳು ದುಬಾರಿ ಶುಲ್ಕ ಹೊಂದಿರುವ ಶಾಲೆಯಲ್ಲಿ ಓದುತ್ತಿದ್ದಾರೆ ಎಂಬ ಕಾರಣಕ್ಕೆ ನಿಮ್ಮ ಮಕ್ಕಳನ್ನು ಅಂಥ ಶಾಲೆಗೆ ಸೇರಿಸಬೇಡಿ. ಪ್ರಾಥಮಿಕ ಶಿಕ್ಷಣಕ್ಕೆ ಲಕ್ಷಗಟ್ಟಲೆ ವ್ಯಯಿಸುವ ಮುನ್ನ ಸಾಕಷ್ಟು ಯೋಚಿಸುವುದು ಅಗತ್ಯ. ಏಕೆಂದ್ರೆ ಮುಂದೆ ಕಾಲೇಜು ಶಿಕ್ಷಣಕ್ಕೆ ಹೆಚ್ಚಿನ ಹಣದ ಅಗತ್ಯವಿರುವ ಕಾರಣ ಶುಲ್ಕ ನೋಡಿಯಲ್ಲ, ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣವಿರುವ ಶಾಲೆಗೆ ಸೇರಿಸಿ. ಅಲ್ಲದೆ, ಮಿತಿಮೀರಿದ ಶೈಕ್ಷಣಿಕ ವೆಚ್ಚ ಕುಟುಂಬದ ಆರ್ಥಿಕ ಸ್ಥಿತಿಗೆ ದೊಡ್ಡ ಹೊರೆಯಾಗಿ ಪರಿಣಮಿಸಬಹುದು. ಹೀಗಾಗಿ ಈ ಬಗ್ಗೆ ಎಚ್ಚರ ಅಗತ್ಯ.
Investment Plans : ಕೋಟ್ಯಧಿಪತಿಯಾಗಲು ಇಲ್ಲಿದೆ ಫಾರ್ಮುಲಾ
4.ಮಗು ಕೇಳಿದ್ದನ್ನೆಲ್ಲ ಕೊಡಿಸುವ ಮುನ್ನ ಯೋಚಿಸಿ
ಮಗು ದುಬಾರಿ ಬೆಲೆಯ ವಸ್ತುವನ್ನು ಕೇಳಬಹುದು. ಹಾಗಂತ ಅದನ್ನು ಖರೀದಿಸಿ ಕೊಡುವ ಮುನ್ನ ಒಮ್ಮೆ ಯೋಚಿಸಿ. ಆಟಿಕೆಗಳಿಗೆ ಅಥವಾ ಅನಗತ್ಯ ವಸ್ತುಗಳಿಗೆ ಹಣ ಪೋಲು ಮಾಡುವುದು ಒಳ್ಳೆಯದ್ದಲ್ಲ. ಹೀಗಾಗಿ ಮಕ್ಕಳಿಗಾಗಿ ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ಅದರ ಅಗತ್ಯ ಎಷ್ಟಿದೆ ಎಂಬುದನ್ನು ಯೋಚಿಸಿ. ಪ್ರತಿ ಖರ್ಚಿಗೂ ಒಂದು ಆರ್ಥಿಕ ಶಿಸ್ತನ್ನು ಅಳವಡಿಸಿಕೊಳ್ಳಿ.
5.ಮಕ್ಕಳ ಭವಿಷ್ಯದ ಭದ್ರತೆಗೆ ಯೋಜನೆ ರೂಪಿಸಿ
ಮಕ್ಕಳು ದೊಡ್ಡವರಾಗುತ್ತಿದ್ದಂತೆ ಖರ್ಚು ಹೆಚ್ಚುತ್ತದೆ. ಹೀಗಾಗಿ ಮಕ್ಕಳ ಭವಿಷ್ಯದ ಬಗ್ಗೆ ಅವರ ಎಳವೆಯಲ್ಲೇ ಯೋಚಿಸಬೇಕು. ಅವರ ಉನ್ನತ ಶಿಕ್ಷಣ, ಮದುವೆ ಮತ್ತಿತರ ವೆಚ್ಚಗಳಿಗೆ ಮೊದಲಿನಿಂದಲೇ ಹೂಡಿಕೆ ಮಾಡಲು ಪ್ರಾರಂಭಿಸಿದ್ರೆ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲ.
