ಡಿಪ್ಲೋಮಾ ಓದಿ ಆರಂಭಿಸಿದ ಮುಸ್ಲಿಮ್ ಯುವಕರ ಟೀ ಶಾಪಿಗೆ ಜನರು ಫಿದಾ!
ಬಾಗಲಕೋಟೆಯಲ್ಲಿ ಚಾಯ್ ವಾಲಾ ಆದ ಡಿಪ್ಲೋಮಾ ಎಂಜಿನಿಯರ್ ಮುಸ್ಲಿಂ ಯುವಕರಿಗೆ ಪ್ರೇರಣೆಯಾದ ಮೋದಿ. 5 ವರ್ಷದ ಹಿಂದೆ ಆರಂಭಿಸಿದ ಟೀ ಶಾಪ್ಗೆ ಇನ್ನಿಲ್ಲದ ಬೇಡಿಕೆ ಬಂದಿದೆ.
-ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬಾಗಲಕೋಟೆ (ಆಗಸ್ಟ್ 11, 2023): ಅವ್ರು ಎಂಜಿನಿಯರಿಂಗ್ ಡಿಪ್ಲೋಮಾ ಮಾಡಿದ ಹುಡುಗರು. ಇನ್ನೇನು ಕೆಲ್ಸಕ್ಕೆ ಅಂತ ಬೆಂಗಳೂರು, ಪುಣೆ ಓಡೋಡಿ ಹೋದ್ರು. ಸಮರ್ಪಕ ಕೆಲ್ಸ ಸಿಗಲೇ ಇಲ್ಲ. ಸಂಬಳಾನೂ ಸಿಗಲಿಲ್ಲ. ಕೊನೆಗೆ ಬದುಕಿನಲ್ಲಿ ಏನಾದ್ರೂ ಸಾಧಿಸಬೇಕೆಂದು ಡಿಪ್ಲೋಮಾ ಎಂಜಿನಿಯರ್ ಕಲಿತ ಮುಸ್ಲಿಂ ಹುಡುಗರಿಗೆ ಇಲ್ಲಿ ಪ್ರೇರಣೆಯಾಗಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸ್ಟಾರ್ಟ್ ಅಪ್ ಯೋಜನೆಯಿಂದ ಸ್ಪೆಷಲ್ ಟೀ ಅಂಗಡಿ ತೆರೆದು ಏನನ್ನಾದ್ರೂ ಸಾಧಿಸಬಾರದು ಅಂತೇಳಿ ತಮ್ಮ ವಿವೇಚನೆ ಮೂಲಕವೇ ಟೀ ಅಂಗಡಿ ಉದ್ಯಮ ಆರಂಭಿಸಿದರು. ಆ ಮೂಲಕ ಈ ಸಹೋದರರು ಇದೀಗ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಯಾರು? ಎಲ್ಲಿಯವರು? ಅಂತೀರಾ. ಈ ಕುರಿತ ವರದಿ ಇಲ್ಲಿದೆ.
ಇತ್ತ ಮಲಾಯ್ ಟೀ ತಯಾರಿಕೆಯಲ್ಲಿ ತೊಡಗಿರೋ ಡಿಪ್ಲೋಮಾ ಇಂಜಿನಿಯರ್ಸ್, ಅತ್ತ ಘಮಿಘಮಿಸೋ ಟೀ ಕುಡಿಯೋಕೆ ಮುಗಿಬೀಳೋ ಜನರು. ಬೆಳಗಿನಿಂದ ಸಂಜೆವರೆಗೆ ಚಹಾ ಮಾಡಿ ಬದುಕಿನಲ್ಲಿ ಮಾದರಿಯಾಗಿದ್ದಾರೆ.. ಇಂಥದ್ದೊಂದು ಸಹೋದರರ ಜೋಡಿ ನಮ್ಮ ಕಣ್ಣಿಗೆ ಬೀಳೋದು ಮುಳುಗಡೆ ನಗರಿ ಬಾಗಲಕೋಟೆಯ ವಲ್ಲಭಬಾಯಿ ವೃತ್ತದಲ್ಲಿ. ಮೂಲತ: ಕಲಾದಗಿ ಗ್ರಾಮದವರಾದ ಆಮೀರ್ ಸೋಹೆಲ್ ಮತ್ತು ಮೊಹಮದ್ ಯಾಸೀನ್ ಎಂಬ ಇಬ್ಬರು ಯುವಕರು ಡಿಪ್ಲೋಮಾ ಪದವಿ ಮಾಡಿದವರು. ಮನೆಯ ಪರಿಸ್ಥಿತಿಯಿಂದ ಮೊಹಮದ್ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದರೆ, ಇತ್ತ ಆಮೀರ್ ಸೋಹೆಲ್ ಮೆಕಾನಿಕಲ್ ಡಿಪ್ಲೋಮಾ ಇಂಜಿನಿಯರ್ ಪದವಿ ಮುಗಿಸಿ ಕೆಲ್ಸಕ್ಕೆಂದು ಬೆಂಗಳೂರು, ಪುಣೆ ಸೇರಿ ನಾನಾ ಕಡೆಗೆ ಕಂಪನಿಗಳಲ್ಲಿ ಕೆಲ್ಸಕ್ಕಾಗಿ ಅಲೆದಾಡಿದ್ರು. ಬೆಂಗಳೂರಿನಲ್ಲಿ ಟೋಯೋಟಾ ಕಂಪನಿಯಲ್ಲಿ ಕೆಲ್ಸ ಸಿಕ್ಕರೂ, ಅದು ಸೂಕ್ತ ಎನಿಸಲಿಲ್ಲ. ಹೀಗೆ ದಿನಗಳೆದಂತೆ ಏನನ್ನಾದ್ರೂ ಮಾಡಲೇಕೆಂಬ ಹಠಕ್ಕೆ ನಿಂತಿದ್ದಾರೆ.
ಇದನ್ನು ಓದಿ: ದೇಶದ ಆರ್ಥಿಕತೆ ಪ್ರಗತಿಗೆ ಸಾಕ್ಷಿ: ಭಾರತದ ರೇಟಿಂಗ್ ಹೆಚ್ಚಿಸಿ ಚೀನಾ ರೇಟಿಂಗ್ ಇಳಿಸಿದ Morgan Stanley ಸಂಸ್ಥೆ
ಮೋದಿ ತೋರಿದ್ದು ಹೇಗೆ?
ಹೌದು, ಪ್ರತಿಯೊಬ್ಬ ವ್ಯಕ್ತಿಗೂ ಅವರ ಬದುಕಿನಲ್ಲಿ ಒಬ್ಬೊಬ್ಬ ವ್ಯಕ್ತಿಗಳು ಮಾದರಿಯಾಗಿ ಕಾಣ ಸಿಗ್ತಾರೆ. ಆದ್ರೆ ಎಂಜಿನಿಯರ್ ಪದವಿ ಮುಗಿಸಿದ್ದಾರೆ. ಚಹಾ ಮಾರಿದ ವ್ಯಕ್ತಿ ದೇಶದ ಪ್ರಧಾನಿಯಾಗಿರೋವಾಗ ನಾವ್ಯಾಕೆ ಸ್ಪೆಷಲ್ ಟೀ ಅಂಗಡಿ ತೆರೆದು ಮಾರಬಾರದು ಅಂತ ಯೋಚಿಸಿ, ಇಬ್ಬರು ಡಿಪ್ಲೋಮಾ ಎಂಜಿನಿಯರಿಂಗ್ ಕಲಿತ ಸಹೋದರರೇ ಕೂಡಿ ಅಂಗಡಿ ತೆರೆಯುತ್ತಿರೋದ್ರಿಂದ ಅದಕ್ಕೆ 'ಎಂಜಿನಿಯರ್ ಬನ್ಗಯಾ ಚಾಯ್ ವಾಲಾ' ಅಂತ ಹೆಸರಿಟ್ಟಿದ್ದಾರೆ. ಇದೀಗ ಅದ್ರಲ್ಲೇ ಫೇಮಸ್ ಆಗಿದ್ದಾರೆ. 2019ರಿಂದ ಈ ಟೀ ಉದ್ಯಮವನ್ನು ಆರಂಭಿಸಿದ್ದು ಇಂದು ಒಳ್ಳೆಯ ರೀತಿಯಿಂದ ನಡೆಯುತ್ತಿದೆ.
ಘಮಘಮಿಸುವ ಎಂಜಿನಿಯರ್ಸ್ಗಳ ಮಲಾಯ್ ಟೀ..
ಹೌದು, ಇನ್ನು ಇವರು ತಯಾರಿಸೋದು ಪುಣೆ ಮಾದರಿಯ ಮಲಾಯ್ ಟೀ. ಅಂದರೆ ಹಾಲಿನಲ್ಲೇ ಕೆನೆಯ ತೆನೆ ಪದರಿನಲ್ಲೇ ಚಹಾ ತಯಾರಿಸಿ ಬರೋರಿಗೆ ಕೊಡುತ್ತಿದ್ದರೆ, ಅದನ್ನ ಕುಡಿದವರು ಮಾತ್ರ ಫುಲ್ ಖುಷಿಯಾಗಿರ್ತಾರೆ. ಪ್ರತಿ ಕಪ್‌ಗೆ 10 ರೂಪಾಯಿ ದರದಂತೆ ಮಾರಾಟ ಮಾಡೋ ಇವ್ರಿಗೆ ಆರಂಭದಲ್ಲಿ ಪ್ರತಿನಿತ್ಯ 1,500 ರೂಪಾಯಿಂದ 2 ಸಾವಿರ ರೂಪಾಯಿವರೆಗೆ ಲಾಭಾಂಶ ಬರಲು ಶುರುವಾಯಿತು. ದಿನಗಳೆದಂತೆ ಆದಾಯ ಹೆಚ್ಚುತ್ತಾ, ಬರುಬರುತ್ತಾ ಅದು ನಾಲ್ಕೈದು ವರ್ಷಗಳಲ್ಲಿ ಇನ್ನಷ್ಟು ಏರಿಕೆ ಕಾಣುತ್ತಾ ಹೋಯಿತು. ಹೀಗಾಗಿ ಡಿಪ್ಲೋಮಾ ಕಲಿತು ಕಂಪನಿಯಲ್ಲಿ ಬೇರೆಯವರ ಕೈಯಲ್ಲಿ ದುಡಿಯುವುದರ ಬದಲಾಗಿ ಸ್ವಂತ ಬಲದಿಂದ ಸ್ಪೆಷಲ್ ಟೀ ಅಂಗಡಿ ತೆರೆದು ಕಂಪನಿಯಲ್ಲಿರೋದಕ್ಕಿಂತ ಹೆಚ್ಚಿನ ಉತ್ತಮ ಲಾಭಾಂಶ ಗಳಿಸುತ್ತಿದ್ದಾರೆ ಈ ಸಹೋದರರು. ಇನ್ನು ಇಂದು ಬಾಗಲಕೋಟೆಯಲ್ಲಿ ಸ್ಪೆಷಲ್ ಟೀ ಅಂದ್ರೆ ಸಾಕು ಅದು ಎಂಜಿನಿಯರ್ಸ್ ಚಾಯ್ ಅನ್ನೋಮಟ್ಟಿಗೆ ಹವಾ ಮಾಡಿದ್ದಾರೆ.
ಇದನ್ನೂ ಓದಿ: ದಿನಕ್ಕೆ 1000 ರೂ ಆದಾಯ: ಕೇಂದ್ರ ಸರ್ಕಾರದ ನೆರವಿನಿಂದ ಬದುಕು ಬೆಳಗಿಸಿಕೊಂಡ ಕವಿತಾ
ನೋಡುಗರ ಕಣ್ಮನ ಸೆಳೆಯೋ ಟೀ ಶಾಪ್:
ಬಾಗಲಕೋಟೆ ನವನಗರ, ವಿದ್ಯಾಗಿರಿ, ಕಲಾದಗಿ ಸೇರಿ ಬೇರೆ ಬೇರೆ ಕಡೆಗೆ ತಮ್ಮ ಹೊಸ ಟೀ ಶಾಪ್ ತೆರೆಯುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇನ್ನು ಈ ಅಂಗಡಿಗಳಲ್ಲಿ ದುಡಿಯುವ ಕೈಗಳಿಗೂ ಕೆಲ್ಸ ನೀಡಲು ಅತ್ಯಂತ ಅನುಕೂಲವಾಗಿದೆ. ಈ ಮಧ್ಯೆ ತಾವು ಎಂಜಿನಿಯರ್ಸ್ ಆಗಿ ಚಹಾ ಉದ್ಯಮಕ್ಕೆ ಕಾಲಿಟ್ಟಿರೋ ಹಿನ್ನೆಲೆಯಲ್ಲಿ ಟೀ ಶಾಪನ್ನು ಸಹ ಅತ್ಯಂತ ವಿಶೇಷವಾಗಿ ರೂಪಿಸಿದ್ದಾರೆ. ಯಾರಾದ್ರೂ ಆ ಚಹಾದ ಅಂಗಡಿಗೆ ಹೋದ್ರೆ ಸಾಕು ಪಕ್ಕಾ ಇದು ಎಂಜಿನಿಯರ್ಸ್ ಚಹಾ ಎನ್ನಲೇಬೇಕು ಆ ಮಟ್ಟಿಗೆ ಅಂಗಡಿಯನ್ನೇ ರೂಪಾಂತರಿಸಿದ್ದಾರೆ.
ಒಟ್ಟಿನಲ್ಲಿ ಡಿಪ್ಲೋಮಾ ಎಂಜಿನಿಯರ್ ಕಲಿತು ಕಂಪನಿ ಕೆಲ್ಸಕ್ಕಾಗಿ ಕ್ಯೂ ನಿಲ್ಲೋ ಜನರಿರೋ ಇಂದಿನ ಕಾಲದಲ್ಲಿ ಬಾಗಲಕೋಟೆ ಯುವಕರು ಮಾತ್ರ ದೇಶದ ಪ್ರಧಾನಿಯನ್ನೇ ಆದರ್ಶವನ್ನಾಗಿರಿಸಿಕೊಂಡು ಸ್ಪೆಷಲ್ ಚಹಾ ಅಂಗಡಿ ತೆರೆದು ಕಳೆದ 5 ವರ್ಷಗಳಿಂದ ಉಳಿದವರಿಗೂ ಕೆಲಸ ನೀಡಿ ಇತರರಿಗೆ ಮಾದರಿಯಾಗಿರೋದು ಮಾತ್ರ ಅಭಿಮಾನ ತರುವಂತಹ ಸಂಗತಿ.
ಇದನ್ನೂ ಓದಿ: ಗಾಣದೆಣ್ಣೆ ಉದ್ಯಮ ಸ್ಥಾಪಿಸಿ, ಸ್ವಾವಲಂಬಿಯಾದ ಝಾನ್ಸಿ