40 ದಾಟಿದ್ರೆ ಮೋದಿ ಬಜೆಟ್‌ನಲ್ಲಿ ಘೋಷಿಸಿದ ಪಿಂಚಣಿ ಇಲ್ಲ: ಇಲ್ಲಿವೆ 8 ಷರತ್ತುಗಳು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Feb 2019, 7:50 AM IST
Modi govt s pension scheme for unorganised sector Check who will get it
Highlights

40 ವರ್ಷ ದಾಟಿದವರು ಹೊಸ ಪಿಂಚಣಿ ಸ್ಕೀಮ್‌ಗೆ ಅರ್ಹರಲ್ಲ| ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ 3000 ರು. ಕಾರ್ಮಿಕರ ಪಿಂಚಣಿಗೆ ಷರತ್ತುಗಳು ಪ್ರಕಟ| ಕಾರ್ಮಿಕ ಸಾವನ್ನಪ್ಪಿದ ನಂತರ ಸಂಗಾತಿಗೆ ಮಾತ್ರ ಪಿಂಚಣಿ; ಮಕ್ಕಳಿಗೆ ಪಿಂಚಣಿ ಸಿಗದು

ನವದೆಹಲಿ[ಫೆ.10]: ಇತ್ತೀಚೆಗೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ ಕಾರ್ಮಿಕರಿಗೆ ಪ್ರತಿ ತಿಂಗಳು 3000 ರು. ಪಿಂಚಣಿ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸಿದ್ದು, ಅದರ ಪ್ರಕಾರ 40 ವರ್ಷ ದಾಟಿದವರು ಈ ಯೋಜನೆಗೆ ಸೇರುವಂತಿಲ್ಲ. ಹಾಗೆಯೇ ಪಿಂಚಣಿದಾರ ತನ್ನ ಮಕ್ಕಳನ್ನು ಈ ಪಿಂಚಣಿಗೆ ಹಕ್ಕುದಾರನನ್ನಾಗಿ ಮಾಡುವಂತಿಲ್ಲ ಮತ್ತು ಅವಧಿಗೆ ಮುನ್ನವೇ ಯೋಜನೆಯಿಂದ ಹೊರಬರುವುದಾದರೆ ಅದಕ್ಕೆ ಕಠಿಣ ಷರತ್ತುಗಳು ಅನ್ವಯಿಸುತ್ತವೆ.

ಬಜೆಟ್‌ನಲ್ಲಿ ವಿತ್ತ ಮಂತ್ರಿ ಪಿಯೂಷ್‌ ಗೋಯಲ್‌ ‘ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌-ಧನ್‌, 2019’ ಪಿಂಚಣಿ ಯೋಜನೆ ಪ್ರಕಟಿಸಿ, ಇದರಿಂದ ದೇಶದಲ್ಲಿರುವ ಸುಮಾರು 40 ಕೋಟಿ ಅಸಂಘಟಿತ ಕಾರ್ಮಿಕರು ನಿವೃತ್ತಿಯ 60ನೇ ವಯಸ್ಸಿನ ನಂತರ ಪ್ರತಿ ತಿಂಗಳು 3000 ರು. ಪಿಂಚಣಿ ಪಡೆದು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಹೇಳಿದ್ದರು. ಆದರೆ, ಈಗ ಕಾರ್ಮಿಕ ಇಲಾಖೆಯ ಅಧಿಸೂಚನೆಯಲ್ಲಿ ಪ್ರಕಟವಾಗಿರುವ ನಿಯಮಗಳು ಕಠಿಣವಾಗಿದ್ದು, ಎಲ್ಲ ಕಾರ್ಮಿಕರೂ ಇದಕ್ಕೆ ಅರ್ಹರಾಗುವುದಿಲ್ಲ ಎಂಬ ಸಂಗತಿ ಟೀಕೆಗೆ ಗುರಿಯಾಗಿದೆ.

3000 ರು. ಪಿಂಚಣಿಗೆ ಷರತ್ತುಗಳು

  • * 40 ವರ್ಷ ಮೀರಿದವರು ಯೋಜನೆಗಿಲ್ಲ, ಮಕ್ಕಳನ್ನು ನಾಮಿನಿ ಮಾಡುವಂತಿಲ್ಲ
  • * ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು 18ನೇ ವರ್ಷಕ್ಕೆ ಯೋಜನೆಗೆ ಸೇರಿದರೆ ತಿಂಗಳಿಗೆ 55 ರು. ಪ್ರೀಮಿಯಂ ಪಾವತಿಸಬೇಕು
  • * ಯೋಜನೆಗೆ ಸೇರಲು ಗರಿಷ್ಠ ವಯೋಮಿತಿ 40 ವರ್ಷ. 40ನೇ ವರ್ಷಕ್ಕೆ ಸೇರ್ಪಡೆಯಾದರೆ ತಿಂಗಳಿಗೆ 200 ರು. ಪ್ರೀಮಿಯಂ ಪಾವತಿಸಬೇಕು
  • * ತಿಂಗಳಿಗೆ 15000 ರು.ಗಿಂತ ಹೆಚ್ಚು ಗಳಿಸುವವರು ಹಾಗೂ ಆದಾಯ ತೆರಿಗೆ ಪಾವತಿಸುವವರು ಯೋಜನೆಗೆ ಅರ್ಹರಲ್ಲ
  • * ಕಾರ್ಮಿಕರು ಪಾವತಿಸುವ ಪ್ರೀಮಿಯಂನಷ್ಟೇ ಹಣವನ್ನು ಪ್ರತಿ ತಿಂಗಳು ಕೇಂದ್ರ ಸರ್ಕಾರ ಅವರ ಪಿಂಚಣಿ ಖಾತೆಗೆ ಜಮೆ ಮಾಡುತ್ತದೆ
  • * ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ಕಾರ್ಮಿಕರಿಬ್ಬರೂ ಯೋಜನೆಗೆ ಅರ್ಹರು
  • * ಯೋಜನೆಗೆ ಸೇರುವವರು ಕಡ್ಡಾಯವಾಗಿ ಆಧಾರ್‌ ಸಂಪರ್ಕವಿರುವ ಉಳಿತಾಯ ಖಾತೆ ಹೊಂದಿರಬೇಕು
  • * ಅವಧಿಗೆ ಮುನ್ನವೇ ಯೋಜನೆಯಿಂದ ಹೊರಬಂದರೆ ಕಾರ್ಮಿಕರು ಈ ಯೋಜನೆಯ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ

1. 10 ವರ್ಷಕ್ಕಿಂತ ಮೊದಲು ಹೊರಬಂದರೆ ಕಾರ್ಮಿಕರು ಪಾವತಿಸಿದ ಹಣ ಮಾತ್ರ ವಾಪಸ್‌ ಸಿಗುತ್ತದೆ

2. 10 ವರ್ಷದ ನಂತರ 60ನೇ ವರ್ಷದೊಳಗೆ ಹೊರಬಂದರೆ ಕಾರ್ಮಿಕರು ಪಾವತಿಸಿದ ಹಣ ಉಳಿತಾಯ ಖಾತೆಗೆ ಸಿಗುವಷ್ಟುಬಡ್ಡಿಯೊಂದಿಗೆ ವಾಪಸ್‌ ಸಿಗುತ್ತದೆ. ಈ ಎರಡೂ ಸಂದರ್ಭದಲ್ಲಿ ಸರ್ಕಾರ ಪಾವತಿಸಿದ ಹಣ ಇವರಿಗೆ ಸಿಗುವುದಿಲ್ಲ.

- 60 ವರ್ಷ ತುಂಬುವುದಕ್ಕಿಂತ ಮೊದಲು ಕಾರ್ಮಿಕ ಮೃತಪಟ್ಟರೆ ಅವರ ಸಂಗಾತಿಯು ಯೋಜನೆಯ ಪೂರ್ಣ ಅವಧಿಯವರೆಗೆ ಪ್ರೀಮಿಯಂ ಪಾವತಿಸಿ, ನಂತರ ಪ್ರತಿ ತಿಂಗಳು 3000 ರು. ಪಿಂಚಣಿ ಪಡೆಯಬಹುದು

- 60 ವರ್ಷ ತುಂಬುವುದಕ್ಕಿಂತ ಮೊದಲು ಕಾರ್ಮಿಕ ಮೃತಪಟ್ಟು, ಸಂಗಾತಿಯು ಯೋಜನೆಯಿಂದ ಹೊರಬರಲು ನಿರ್ಧರಿಸಿದರೆ ಅಲ್ಲಿಯವರೆಗೆ ಕಾರ್ಮಿಕ ಪಾವತಿಸಿದ ಹಣ ಉಳಿತಾಯ ಖಾತೆಗೆ ಸಿಗುವಷ್ಟುಬಡ್ಡಿ ಹಣದೊಂದಿಗೆ ವಾಪಸ್‌ ಸಿಗುತ್ತದೆ. ಸರ್ಕಾರ ಪಾವತಿಸಿದ ಮೊತ್ತ ಸಿಗುವುದಿಲ್ಲ.

- ಯಾವುದೇ ಸಂದರ್ಭದಲ್ಲೂ (ಕಾರ್ಮಿಕ ಮೃತಪಟ್ಟರೂ) ಕಾರ್ಮಿಕರ ಮಕ್ಕಳಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ

- ಎನ್‌ಪಿಎಸ್‌, ಇಎಸ್‌ಐ, ಇಪಿಎಫ್‌ ಮುಂತಾದ ಸರ್ಕಾರದ ಬೇರಾವುದೇ ವಿಮಾ ಯೋಜನೆಗೆ ಒಳಪಟ್ಟವರು ಇದಕ್ಕೆ ಅರ್ಹರಲ್ಲ

- ಮನೆಗೆಲಸದವರು, ಅಡುಗೆಯವರು, ಸಣ್ಣಪುಟ್ಟಉದ್ದಿಮೆಗಳಲ್ಲಿ ಕೆಲಸ ಮಾಡುವವರು, ಬೀದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ಕಾರ್ಮಿಕರು, ಚಿಂದಿ ಆಯುವವರು, ಕೃಷಿ ಕಾರ್ಮಿಕರು, ಬೀಡಿ ಕಟ್ಟುವವರು, ಕೈಮಗ್ಗ ನೌಕರರು, ಚರ್ಮ ಕಾರ್ಮಿಕರೂ ಯೋಜನೆಗೆ ಸೇರಬಹುದು

loader