ನವದೆಹಲಿ(ಜೂ.03): ಜಾಗತಿಕ ಮೊಬೈಲ್‌ ಫೋನ್‌ ತಯಾರಿಕಾ ಕಂಪನಿಗಳನ್ನು ಭಾರತಕ್ಕೆ ಆಕರ್ಷಿಸಲು ಮತ್ತು ಸ್ಥಳೀಯ ಇಲೆಕ್ಟ್ರಾನಿಕ್‌ ಸಾಧನಗಳ ಉತ್ಪಾದಕ ಕಂಪನಿಗಳನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ 50 ಸಾವಿರ ಕೋಟಿ ರು. ಮೊತ್ತದ ಪ್ರೋತ್ಸಾಹಧನ ನೀಡುವ ಯೋಜನೆಯೊಂದನ್ನು ರೂಪಿಸಿದ್ದು, ಈ ಯೋಜನೆಗೆ ಸರ್ಕಾರ ಮಂಗಳವಾರ ಅರ್ಜಿಗಳನ್ನು ಆಹ್ವಾನಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ಜಾಗತಿಕವಾಗಿ ಅಗ್ರಸ್ಥಾನದಲ್ಲಿರುವ 5-6 ಕಂಪನಿಗಳು ಜಾಗತಿಕ ಮಾರುಕಟ್ಟೆಯ ಶೇ.80ರಷ್ಟುಪಾಲನ್ನು ಹೊಂದಿವೆ. ನಾವು ಆರಂಭದಲ್ಲಿ 5 ಜಾಗತಿಕ ಮೊಬೈಲ್‌ ಫೋನ್‌ ತಯಾರಿಕಾ ಕಂಪನಿಗಳನ್ನು ಭಾರತಕ್ಕೆ ಕರೆ ತರಲು ಮತ್ತು ಸ್ಥಳೀಯ 5 ಸ್ಥಳೀಯ ಕಂಪನಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಇವುಗಳಿಗೆ 50 ಸಾವಿರ ಕೋಟಿ ಪ್ರೋತ್ಸಾಹ ಧನ ನೀಡಲಾಗುವುದು ಎಂದಿದ್ದಾರೆ.

ಅಲ್ಲದೇ ಪ್ರಸ್ತುತ ಭಾರತ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್‌ ತಯಾರಿಕಾ ದೇಶ ಎನಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ಭಾರತವನ್ನು ಅಗ್ರಸ್ಥಾನಕ್ಕೆ ಏರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ.