ನವದೆಹಲಿ(ಸೆ.02): ಮುಂದೂಡಿಕೆ ಮಾಡಿದ ಸಾಲದ ಕಂತಿನ (ಇಎಂಐ) ಮೇಲೆ ಬಡ್ಡಿ ವಿಧಿಸದೆ ಇರುವುದು ಹಣಕಾಸಿನ ಮೂಲ ತತ್ವಕ್ಕೇ ವಿರುದ್ಧ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿರುವ ಕೇಂದ್ರ ಸರ್ಕಾರ, ಹೀಗೆ ಮಾಡುವುದರಿಂದ ನಿಗದಿಯಂತೆ ಕಷ್ಟಪಟ್ಟು ಸಾಲ ಮರುಪಾವತಿ ಮಾಡಿದವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದೆ. ಇಷ್ಟಾಗಿಯೂ ಸಾಲಗಾರರಿಗೆ ಆರ್ಥಿಕ ತೊಂದರೆಯಿದ್ದರೆ ಎರಡು ವರ್ಷದವರೆಗೆ ಇಂಎಐ ಪಾವತಿಯಿಂದ ವಿನಾಯ್ತಿ ಪಡೆಯಲು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಅವಕಾಶ ಮಾಡಿಕೊಟ್ಟಿದೆ ಎಂದೂ ಮಾಹಿತಿ ನೀಡಿದೆ.

ವಿನಾಯ್ತಿ ಮುಕ್ತಾಯ, ಮಂಗಳವಾರದದಿಂದ ಮತ್ತೆ ಇಎಂಐ ಆರಂಭ!

ಕೊರೋನಾ ಲಾಕ್‌ಡೌನ್‌ನಿಂದಾಗಿ ಸಾಲದ ಕಂತು ಪಾವತಿಸಲು ಸಾಧ್ಯವಿಲ್ಲದವರಿಗೆ ಆ.31ರವರೆಗೆ ಇಎಂಐ ವಿನಾಯ್ತಿ ನೀಡಿದ್ದ ಕೇಂದ್ರ ಸರ್ಕಾರ, ಆ ವೇಳೆ ಮುಂದೂಡಿಕೆ ಮಾಡಿದ ಇಎಂಐಗೆ ಬಡ್ಡಿ ವಿಧಿಸುತ್ತಿದೆ ಮತ್ತು ಬಡ್ಡಿಯ ಮೇಲೆ ಬಡ್ಡಿ ವಿಧಿಸುತ್ತಿದೆ ಎಂದು ಆಕ್ಷೇಪಿಸಿ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಅದಕ್ಕೆ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐನಿಂದ ಸುಪ್ರೀಂಕೋರ್ಟ್‌ ಸ್ಪಷ್ಟನೆ ಕೇಳಿತ್ತು.

ಇಎಂಐ, ಪಾವತಿ ಮುಂದೂಡಿದ ಸಾಲದ ಕಂತಿನ ಮೇಲೆ ಬಡ್ಡಿ?

ಈ ಕುರಿತು ಮಂಗಳವಾರ ಅಫಿಡವಿಟ್‌ ಸಲ್ಲಿಸಿರುವ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ, ಬ್ಯಾಂಕಿಂಗ್‌ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗೆ ‘ಒಂದೇ ಅಳತೆ ಎಲ್ಲರಿಗೂ ಹೊಂದುತ್ತದೆ’ ಎಂಬಂತಹ ಪರಿಹಾರ ಇಲ್ಲ. ಇಎಂಐ ಪಾವತಿಯಿಂದ ವಿನಾಯ್ತಿ ಪಡೆದವರಿಗೆ ಆ ಅವಧಿಯಲ್ಲಿ ಬಡ್ಡಿಯನ್ನೂ ವಿಧಿಸುವುದಿಲ್ಲ ಎಂಬ ನಿರ್ಧಾರಕ್ಕೆ ಆರ್‌ಬಿಐ ಬಂದರೆ ಅದರಿಂದ ಕಷ್ಟಪಟ್ಟು ಇಎಂಐ ಕಟ್ಟುತ್ತಿರುವವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಮುಂದೂಡಿಕೆ ಮಾಡಿದ ಇಎಂಐ ಮೇಲಿನ ಬಡ್ಡಿಗೆ ಬಡ್ಡಿ ವಿಧಿಸದೆ ಇರುವುದು ಹಣಕಾಸಿನ ಮೂಲ ತತ್ವಕ್ಕೇ ವಿರುದ್ಧವಾದುದು. ಇದಲ್ಲದೆ ಸಾಲಗಾರರಿಗೆ ಬೇರೆ ಬೇರೆ ರೀತಿಯ ಅನುಕೂಲಗಳನ್ನು ಮಾಡಿಕೊಡಲು ಬ್ಯಾಂಕುಗಳಿಗೆ ಅವಕಾಶ ನೀಡಲಾಗಿದೆ. ಒಟ್ಟಾರೆ ಸಾಲದ ಅವಧಿಯನ್ನೇ ಎರಡು ವರ್ಷ ವಿಸ್ತರಿಸುವುದಕ್ಕೂ ಅವಕಾಶ ಮಾಡಿಕೊಡಲಾಗಿದೆ ಎಂದು ಸ್ಪಷ್ಟನೆ ನೀಡಿವೆ. ಈ ಕುರಿತ ಮುಂದಿನ ವಿಚಾರಣೆಯನ್ನು ಕೋರ್ಟ್‌ ಬುಧವಾರಕ್ಕೆ ನಿಗದಿಪಡಿಸಿದೆ.