ನವ ಕರ್ನಾಟಕ ನಿರ್ಮಾಣದ ಗುರಿಯೊಂದಿಗೆ 2023ನೇ ಸಾಲಿನ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ನಾಡಿನ ಜನತೆಗೆ ಭವಿಷ್ಯದ ಭರವಸೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಫೆ.18): ನವ ಕರ್ನಾಟಕ ನಿರ್ಮಾಣದ ಗುರಿಯೊಂದಿಗೆ 2023ನೇ ಸಾಲಿನ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ನಾಡಿನ ಜನತೆಗೆ ಭವಿಷ್ಯದ ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಕರ್ತವ್ಯ ಕಾಲದ ಅಭಿವೃದ್ಧಿಯ ಅಮೃತವನ್ನು ಎಲ್ಲಾ ವರ್ಗಗಳ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ಬಜೆಟ್‌ ಯಶಸ್ವಿಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ವಿವಿಧ ಸಮುದಾಯಗಳ ಸಬಲೀಕರಣ ಮೊದಲಾದವುಗಳಲ್ಲಿ ಬಸವರಾಜ ಬೊಮ್ಮಾಯಿ ದೂರದೃಷ್ಟಿತೋರಿದ್ದಾರೆ. ರೈತರಿಗೆ ನೀಡುವ ಶೂನ್ಯ ಬಡ್ಡಿ ದರದ ಸಾಲದ ಮಿತಿ 3ರಿಂದ 5 ಲಕ್ಷ ರು.ಗೆ ಏರಿಕೆ, ಶಾಲಾ ಮಕ್ಕಳ ಸಾರಿಗೆಗಾಗಿ 100 ಕೋಟಿ ರು. ವೆಚ್ಚದಲ್ಲಿ ‘ಮಕ್ಕಳ ಬಸ್ಸು’, ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ 9,698 ಕೋಟಿ ರು. ಅನುದಾನ ಮತ್ತಿತರ ಕ್ರಮಗಳು ಮುಖ್ಯಮಂತ್ರಿಯವರ ‘ಕಾಮನ್‌ ಮ್ಯಾನ್‌’ ದೃಷ್ಟಿಯನ್ನು ತೋರಿವೆ. ಚುನಾವಣಾ ವರ್ಷದಲ್ಲಿ ಜನಪ್ರಿಯತೆಗೆ ಜೋತು ಬೀಳದೆ, ಕೇಂದ್ರದ ಮಾರ್ಗದರ್ಶನ ಹಾಗೂ ಸಹಯೋಗದಲ್ಲಿ ಡಬಲ್‌ ಎಂಜಿನ್‌ ಸರ್ಕಾರದ ಲಾಭವನ್ನು ಸರ್ವ ಜನತೆಯ ಕಲ್ಯಾಣಕ್ಕೆ ದೊರಕಿಸುವ ನಿಟ್ಟಿನಲ್ಲಿ ಇದು ಯಶಸ್ವಿಯಾಗಿದೆ ಎಂದು ಬಣ್ಣಿಸಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾದ ಸಿ.ಟಿ.ರವಿ ಆಪ್ತ ಹೆಚ್.ಡಿ.ತಮ್ಮಯ್ಯ

ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ ಸಂಕಲ್ಪದೊಂದಿಗೆ, ಮನೆ ಮನೆಗೆ ಆರೋಗ್ಯ ಕಾರ್ಯಕ್ರಮದಡಿ ಆರೋಗ್ಯ ಶಿಬಿರ, ಕೋಲಾರ, ಬಾಗಲಕೋಟೆ, ಯಾದಗಿರಿ, ರಾಮನಗರ ಮೊದಲಾದೆಡೆ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ, ಮೆದುಳು ಆರೋಗ್ಯ ಯೋಜನೆಯನ್ನು 25 ಕೋಟಿ ರು. ವೆಚ್ಚದಲ್ಲಿ ರಾಜ್ಯಾದ್ಯಂತ ವಿಸ್ತರಣೆ, ಡಯಾಲಿಸಿಸ್‌ ಸೈಕಲ್‌ ಸಂಖ್ಯೆ 1 ಲಕ್ಷಕ್ಕೆ ಹೆಚ್ಚಳ, 6 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆಗೆ ವಾತ್ಸಲ್ಯ ಯೋಜನೆ, 129 ತಾಲೂಕು ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಲ್ಯಾಬ್‌ ಸ್ಥಾಪನೆ, ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿ 720 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಆರೋಗ್ಯ ವಲಯಕ್ಕೆ ಭರಪೂರ ಕೊಡುಗೆ ನೀಡಲಾಗಿದೆ ಎಂದು ಪ್ರಶಂಸಿಸಿದ್ದಾರೆ.

ರೇಷ್ಮೆ ಬೆಳೆಗಾರರಿಗೆ ಕೊಡುಗೆ: ಏಷ್ಯಾದ 2ನೇ ಅತಿದೊಡ್ಡ ರೇಷ್ಮೆ ಮಾರುಕಟ್ಟೆಯಾದ ಶಿಡ್ಲಘಟ್ಟದಲ್ಲಿ 75 ಕೋಟಿ ವೆಚ್ಚದಲ್ಲಿ ಹೈಟೆಕ್‌ ರೇಷ್ಮೆ ಗೂಡು ಮಾರುಕಟ್ಟೆನಿರ್ಮಿಸಲಾಗುತ್ತದೆ. ಇದು ಕೋಲಾರ, ಚಿಕ್ಕಬಳ್ಳಾಪುರ ಭಾಗದ ರೇಷ್ಮೆ ಬೆಳೆಗಾರರಿಗೆ ಸಂಭ್ರಮ ತಂದಿದೆ. 32 ರೀಲಿಂಗ್‌ ಘಟಕಗಳ ಸ್ಥಾಪನೆಗೆ 10 ಕೋಟಿ ರು., ಶ್ರೆಡ್ಡರ್ಸ್‌ಗಳಿಗೆ 12 ಕೋಟಿ ರು. ನೆರವು ಘೋಷಿಸಲಾಗಿದೆ. ರೇಷ್ಮೆ ಬೆಳೆಗಾರರ ಬದುಕಿಗೆ ಸುಧಾರಣೆಯ ಹೊಸ ನೋಟ ನೀಡಿದ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

ತಾಕತ್ತಿದ್ದರೆ ಮುಸ್ಲಿಂ ಸಿಎಂ ಅಭ್ಯರ್ಥಿಯನ್ನು ಎಚ್‌ಡಿಕೆ ಘೋಷಿಸಲಿ: ಸಚಿವ ಸುಧಾಕರ್‌

ಜನರೇ ಕಿವಿಗೆ ಹೂ ಇಡಲಿದ್ದಾರೆ: ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್‌ ಮಂಡಿಸುತ್ತಾರೆ ಎಂಬ ಅನೇಕರ ನಂಬಿಕೆ ಹುಸಿಯಾಗಿದೆ. ಬಜೆಟ್‌ ಮಂಡನೆ ಆರಂಭಕ್ಕೆ ಮುನ್ನವೇ ಕಿವಿಗೆ ಹೂ ಇಟ್ಟುಕೊಂಡು ಬಂದವರಿಗೆ ನೈತಿಕತೆ ಇಲ್ಲ. ಪೂರ್ವಗ್ರಹಪೀಡಿತರಾದ ಸಿದ್ದರಾಮಯ್ಯನವರು ಸಿಎಂ ಆಗಿ ಬಜೆಟ್‌ ಮಂಡಿಸುವಾಗ ಯಾವುದಾದರೂ ವಿರೋಧ ಪಕ್ಷ ಹೀಗೆ ನಡೆದುಕೊಂಡಿತ್ತೇ? ಹೀಗೆ ವರ್ತಿಸುವುದು ಔಚಿತ್ಯವೇ? ಬಜೆಟ್‌ನ ಪರಂಪರೆಯನ್ನು ಕಾಂಗ್ರೆಸ್‌ನವರು ಹಾಳು ಮಾಡಿದ್ದು, ಜನರೇ ಅವರ ಕಿವಿಗೆ ಹೂ ಇಡಲಿದ್ದಾರೆ ಎಂದು ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದರು.