ತಾಕತ್ತಿದ್ದರೆ ಮುಸ್ಲಿಂ ಸಿಎಂ ಅಭ್ಯರ್ಥಿಯನ್ನು ಎಚ್‌ಡಿಕೆ ಘೋಷಿಸಲಿ: ಸಚಿವ ಸುಧಾಕರ್
ಜೆಡಿಎಸ್ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಾಕತ್ತಿದ್ದರೆ ಮುಸಲ್ಮಾನರನ್ನು ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಘೋಷಣೆ ಮಾಡಲಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸವಾಲು ಎಸೆದಿದ್ದಾರೆ.
ಬೆಂಗಳೂರು (ಫೆ.11): ಜೆಡಿಎಸ್ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಾಕತ್ತಿದ್ದರೆ ಮುಸಲ್ಮಾನರನ್ನು ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಘೋಷಣೆ ಮಾಡಲಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸವಾಲು ಎಸೆದಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಹೇಳಿಕೆಗಳ ಅಗತ್ಯವೇ ಇರಲಿಲ್ಲ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಉತ್ತಮ ಆಡಳಿತಗಾರರು. ಬಿಜೆಪಿಯು ಕುಮಾರಸ್ವಾಮಿಯವರ ಸಲಹೆ ಕೇಳುವುದಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೆಡಿಎಸ್‌ನಿಂದ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ. ಅವರು ಬಿಜೆಪಿಗೆ ಸವಾಲು ಹಾಕುವ ಮುನ್ನ, ಅವರಿಗೆ ಅವರೇ ಸವಾಲು ಹಾಕಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಮನಮೋಹನ್ ಸಿಂಗ್‌ರನ್ನು ಡಮ್ಮಿ ಪ್ರಧಾನಿ ಮಾಡಿದ್ರು: ಸಚಿವ ಸುಧಾಕರ್
ಜನರಿಂದ ಜನರಿಗಾಗಿ ಬಿಜೆಪಿ ಪ್ರಣಾಳಿಕೆ: ಜನರಿಂದ, ಜನರಿಗೋಸ್ಕರ, ಜನರ ಆಶೋತ್ತರಗಳಿಗೆ ತಕ್ಕಂತೆ ಪ್ರಣಾಳಿಕೆ ರೂಪಿಸಲಾಗುವುದು ಎಂದು ಆಡಳಿತಾರೂಢ ಬಿಜೆಪಿಯ ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನದ ಸಂಚಾಲಕ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಶುಕ್ರವಾರ ಪಕ್ಷದ ಕಚೇರಿಯಲ್ಲಿ ಅಭಿಯಾನ ಸಮಿತಿಯ ಮೊದಲ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಆಶೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸಿ, ಜನರ ನಾಡಿಮಿಡಿತ ಅರಿಯಬೇಕು.
ವಿರೋಧ ಪಕ್ಷಗಳಂತೆ ಜನರ ದಿಕ್ಕು ತಪ್ಪಿಸುವ ಪ್ರಣಾಳಿಕೆ ಮಾಡುವುದಿಲ್ಲ. ಜನರ ಬದುಕು ಕಟ್ಟಿಕೊಡುವ ಯೋಜನೆಗಳಿರುವ ಪ್ರಣಾಳಿಕೆ ರೂಪಿಸಲಾಗುವುದು ಎಂದು ಹೇಳಿದರು. ಬಿಜೆಪಿ ಪ್ರಣಾಳಿಕೆ ತಂಡದಲ್ಲಿ ಜಿಲ್ಲೆ ಹಾಗೂ ತಾಲೂಕುವಾರು ಪ್ರತಿನಿಧಿಗಳ ಆಯ್ಕೆ ಬಗ್ಗೆ ಚರ್ಚಿಸಲಾಗಿದೆ. ಸೋಮವಾರ ಸಭೆ ನಡೆಸಿ ಎಲ್ಲ ಜಿಲ್ಲೆಗಳ 200ಕ್ಕೂ ಹೆಚ್ಚು ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಲಿದ್ದಾರೆ. ಪ್ರಣಾಳಿಕೆಯ ಶೀರ್ಷಿಕೆಯನ್ನು ಕೂಡ ಇನ್ನೆರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ಚುನಾವಣೆಯಲ್ಲಿ ಪ್ರತಿಪಕ್ಷಗಳಿಗೆ ಪಾಠ ಕಲಿಸಿ: ಸಚಿವ ಸುಧಾಕರ್
ಮಹಿಳೆಯರು, ಯುವಜನರು, ವೃದ್ಧರು ಹಾಗೂ ಅಂಗವಿಕಲರು ಸೇರಿದಂತೆ ಜನ ವರ್ಗಗಳಿಗೆ ನೀಡಲಿರುವ ಕಾರ್ಯಕ್ರಮಗಳ ಕುರಿತು ನಿರ್ಧಾರವಾಗಲಿದೆ. ಕೋವಿಡ್ ಸಾಂಕ್ರಾಮಿಕ ಹಾಗೂ ಎರಡು ಬಾರಿಯ ಅತಿವೃಷ್ಟಿಯನ್ನು ಬಿಜೆಪಿ ಸರ್ಕಾರ ಸಮರ್ಥವಾಗಿ ಎದುರಿಸಿದೆ. ಕೋವಿಡ್ ನಂತರದ ಐದು ವರ್ಷಗಳು ಬಿಜೆಪಿ ಅಧಿಕಾರದಲ್ಲಿರುವಾಗ ಯಾವೆಲ್ಲ ಭರವಸೆ ಈಡೇರಿಸಬಹುದು ಎಂಬುದು ಪ್ರಣಾಳಿಕೆಯಲ್ಲಿ ಬರಲಿದೆ. ಬಿಜೆಪಿ ಕೊಡುವ ಭರವಸೆ ನೈಜತೆಯಿಂದ ಕೂಡಿರಲಿದೆ ಎಂದು ಹೇಳಿದರು.