ಹಿರೇಕೆರೂರು(ಮಾ.06): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಾಲೂಕಿನ ಅಭಿವೃದ್ಧಿಗೆ ಕೋಂಟ್ಯತರ ರುಪಾಯಿ ನೀಡುವ ಮೂಲಕ ನುಡಿದಂತೆ ನಡೆದುಕೊಂಡಿದ್ದಾರೆಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಪಕ್ಷ ಅಧಿಕಾರಕ್ಕೆ ಬಂದರೆ ಕ್ಷೇತ್ರದಲ್ಲಿ ಬೇರೆ ಪಕ್ಷದ ಶಾಸಕರು ಇರುತ್ತಿದ್ದರು. ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿತ್ತು. ಇದೀಗ ಚಿತ್ರಣ ಬದಲಾಗಿದ್ದು ಬಿಜೆಪಿ ಸರ್ಕಾರದಲ್ಲಿ ನಾನು ಸಚಿವನಾಗಿದ್ದು ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಹರಿದು ಬಂದಿದೆ. ತಾಲೂಕಿನ ಹಲವಾರು ನೀರಾವರಿ ಯೋಜನೆಗಳು, ರಸ್ತೆಗಳು, ಕಟ್ಟಡಗಳು, ವಸತಿ ಶಾಲೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರಕಾರ ಕೋಟಿ ಕೋಟಿ ಅನುದಾನ ನೀಡಿದೆ. 2ನೇ ಹಂತದಲ್ಲಿ ಒಟ್ಟು 286.28 ಕೋಟಿ ವೆಚ್ಚದಲ್ಲಿ 14 ಇಲಾಖೆಗಳ 21 ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ವಿವಿಧ ಖಾತೆಯ ಸಚಿವರು ನಾಳೆ ದೂದೀಹಳ್ಳಿಯಲ್ಲಿ ಚಾಲನೆ ನೀಡಲಿದ್ದಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೀರಾವರಿ ಯೋಜನೆಗಳು ಜಾರಿಯಾದರೆ ಈ ಭಾಗದ ರೈತರ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಲಿದೆ. ನೀರಾವರಿ ಕ್ಷೇತ್ರ ಹೆಚ್ಚಳವಾಗಿ ಸಮೃದ್ಧವಾಗಿ ಬೆಳೆ ಬೆಳೆಯಬಹುದಾಗಿದೆ. ದುರ್ಗಾದೇವಿ ಕೆರೆ ಅಭಿವೃದ್ಧಿಯಿಂದ ಹಿರೇಕೆರೂರು ತಾಲೂಕಿನ ಬಹುತೇಕ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಳವಾಗಿವೆ. ತಾಲೂಕಿನ 13 ಗ್ರಾಮಗಳ ರೈತರಿಗೆ ಅನಾವೃಷ್ಟಿಯಿಂದಾಗುವ ಬರಗಾಲ ತಡೆಗಟ್ಟುವ ಸಲುವಾಗಿ ಹಾಗೂ ರೈತರು ಜಮೀನುಗಳಿಗೆ ನೀರಿನ ಸೌಲಭ್ಯ ಒದಗಿಸಿ ಕೃಷಿ ಚಟುವಟಿಕೆ ಆಧಾರಿತ ಜೀವನೋಪಾಯಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

ತಿಪ್ಪಣಶೆಟ್ಟಿ ಪಾರ್ಕ್ ನಿರ್ಮಾಣದಿಂದ ಹಿರೇಕೆರೂರು ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯೊಂದಿಗೆ ರಜಾ ಅವಧಿಯಲ್ಲಿ ಮಕ್ಕಳ ಮನೋರಂಜನೆಗೆ ಅನುಕೂಲವಾಗಲಿದೆ. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಸತಿ ಶಾಲೆಗಳು ವರವಾಗಲಿದೆ ಎಂದು ಹೇಳಿರುವ ಸಚಿವರು, ಶಾಸಕನಾಗಿ ಈಗ ಮಂತ್ರಿ ಆಗಿ ರಾಜ್ಯದಲ್ಲಿ ಹಿರೇಕೆರೂರನ್ನು ಮಾದರಿ ತಾಲೂಕನ್ನಾಗಿ ಮಾಡುವ ದೂರದೃಷ್ಟಿ ಹೊಂದಲಾಗಿದೆ. ಇದಕ್ಕೆ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಹಾಗೂ ಎಲ್ಲ ಜನಪ್ರತಿನಿಧಿಗಳು ಬೆಂಬಲ ನೀಡಲಿದ್ದಾರೆ ಎಂಬ ಆತ್ಮವಿಶ್ವಾಸವಿದೆ ಎಂದು ಹೇಳಿದ್ದಾರೆ.