ಆರ್ಥಿಕ ಹಿಂಜರಿತದ ಭೀತಿ, ಉದ್ಯೋಗ ಕಡಿತಕ್ಕೆ ಮುಂದಾದ ಅಮೆರಿಕದ ಕಾರ್ಪೋರೇಟ್ ಕಂಪನಿಗಳು
ಏರಿಕೆಯಾಗುತ್ತಿರುವ ಹಣದುಬ್ಬರ, ಬಲಗೊಳ್ಳುತ್ತಿರುವ ಡಾಲರ್ ಜಾಗತಿಕ ಮಟ್ಟದಲ್ಲಿ ಆರ್ಥಿಕ ತಲ್ಲಣವನ್ನು ಸೃಷ್ಟಿಸುತ್ತಿದೆ. ಆರ್ಥಿಕ ಹಿಂಜರಿತದ ಭೀತಿ ಜಗತ್ತಿನ ದೊಡ್ಡಣ್ಣನನ್ನು ತಟ್ಟಲು ಪ್ರಾರಂಭಿಸಿದೆ.ಅದರ ಪ್ರತಿಫಲ ಎಂಬಂತೆ ಅಮೆರಿಕದ ದೈತ್ಯ ಕಾರ್ಪೋರೇಟ್ ಕಂಪನಿಗಳು ವೆಚ್ಚಕ್ಕೆ ಕಡಿವಾಣ ಹಾಕಲು ಉದ್ಯೋಗ ಕಡಿತಕ್ಕೆ ಮುಂದಾಗಿವೆ.
ನ್ಯೂಯಾರ್ಕ್ (ನ.10): ಬಿಗಿಯಾದ ವಿತ್ತೀಯ ನೀತಿಗಳು ಹಾಗೂ ಆರ್ಥಿಕ ಹಿಂಜರಿತದ ಭೀತಿಯಿಂದ ವೆಚ್ಚ ನಿಯಂತ್ರಣಕ್ಕೆ ಮುಂದಾಗಿರುವ ಅಮೆರಿಕದ ಕಾರ್ಫೋರೇಟ್ ವಲಯ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ. ಅಮೆರಿಕ ಮೂಲದ ಉದ್ಯೋಗದಾತ ಸಂಸ್ಥೆಗಳು ಘೋಷಿಸಿರುವ ಉದ್ಯೋಗ ಕಡಿತದ ಪ್ರಮಾಣ ಅಕ್ಟೋಬರ್ ನಲ್ಲಿ ಶೇ. 13ರಷ್ಟು ಏರಿಕೆಯಾಗಿ 33,843ಕ್ಕೆ ತಲುಪಿದೆ. 2021ರ ಫೆಬ್ರವರಿ ಬಳಿಕ ಇದು ಅತೀದೊಡ್ಡ ಪ್ರಮಾಣದ ಉದ್ಯೋಗ ಕಡಿತವಾಗಿದೆ ಎಂದು ವರದಿಯೊಂದು ಹೇಳಿದೆ. ಸಿಟಿ ಗ್ರೂಪ್, ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್, ಮೋರ್ಗನ್ ಸ್ಟಾನ್ಲಿ, ಇಂಟೆಲ್, ಮೈಕ್ರೋಸಾಫ್ಟ್ ಮುಂತಾದ ಕಾರ್ಪೋರೇಟ್ ದಿಗ್ಗಜರು ಆರ್ಥಿಕ ಹಿಂಜರಿತದ ಭೀತಿಯಿಂದ ಉದ್ಯೋಗ ಕಡಿತಕ್ಕೆ ಒಲವು ತೋರುತ್ತಿದ್ದಾರೆ. ಈಗಾಗಲೇ ಟ್ವಿಟ್ಟರ್ ಸುಮಾರು ಅರ್ಧದಷ್ಟು ಸಿಬ್ಬಂದಿಯನ್ನು ವಜಾ ಮಾಡಿದೆ. ಇನ್ನೊಂದೆಡೆ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ನ ಮಾತೃ ಸಂಸ್ಥೆ ಮೆಟಾ ಕೂಡ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಮುಂದಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಹೀಗಾಗಿ ಕಾರ್ಫೋರೇಟ್ ವಲಯದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದ ಉದ್ಯೋಗ ಕಡಿತವಾಗುವ ನಿರೀಕ್ಷೆಯಿದೆ. ಹಾಗಾದ್ರೆ ಯಾವೆಲ್ಲ ಕಂಪನಿಗಳು ಉದ್ಯೋಗ ಕಡಿತಗೆ ಯೋಜನೆ ರೂಪಿಸಿವೆ? ಇಲ್ಲಿದೆ ಮಾಹಿತಿ.
ಸಿಟಿಗ್ರೂಪ್: ವಾಲ್ ಸ್ಟ್ರೀಟ್ ಅತೀದೊಡ್ಡ ಬ್ಯಾಂಕ್ ಗಳ ಮೇಲೆ ಡೀಲ್ ಮೇಕಿಂಗ್ ಕುಸಿತದ ತೂಗುಗತ್ತಿ ತೂಗುತ್ತಿದೆ. ಇದೇ ಕಾರಣಕ್ಕೆ ಸಿಟಿ ಗ್ರೂಪ್ ಇಂಕ್ ತನ್ನ ಹೂಡಿಕೆ ಬ್ಯಾಂಕಿಂಗ್ ವಿಭಾಗದಿಂದ ಡಜನ್ ಗಟ್ಟಲೆ ಉದ್ಯೋಗಗಳನ್ನು ತೆಗೆದು ಹಾಕಿದೆ ಎಂದು ಬ್ಲೂಮ್ ಬರ್ಗ್ ನ್ಯೂಸ್ ವರದಿ ಮಾಡಿದೆ.
ಚೀನಾದ ಪ್ರಮುಖ ಉತ್ಪಾದನಾ ಕೇಂದ್ರದಲ್ಲಿ ಲಾಕ್ ಡೌನ್; ಜಾಗತಿಕ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ
ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್: ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಈ ವಾರ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳ ವಜಾಕ್ಕೆ ಚಾಲನೆ ನೀಡಲು ಯೋಜನೆ ರೂಪಿಸಿದ್ದು, ಇದ್ರಿಂದ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಮೋರ್ಗನ್ ಸ್ಟಾನ್ಲಿ: ಮೋರ್ಗಾನ್ ಸ್ಟಾನ್ಲಿ ಮುಂಬರುವ ವಾರಗಳಲ್ಲಿ ಜಾಗತಿಕವಾಗಿ ಹೊಸದಾಗಿ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ರಾಯ್ಟಿರ್ಸ್ ಇತ್ತೀಚೆಗೆ ವರದಿ ಮಾಡಿದೆ.
ಇಂಟೆಲ್: 'ಜನರ ಕ್ರಮಗಳು' ವೆಚ್ಚ ಕಡಿತ ಯೋಜನೆಯ ಭಾಗವಾಗಿದೆ ಎಂದು ಇಂಟೆಲ್ ಕಾರ್ಪ್ಸ್ ಸಿಇಒ ಪ್ಯಾಟ್ ಗೆಲ್ಸಿಂಗರ್ ತಿಳಿಸಿದ್ದಾರೆ. ಚಿಪ್ ಮೇಕರ್ ಕಂಪನಿಯಾಗಿರುವ ಇಂಟೆಲ್, 2023ರಲ್ಲಿ ವೆಚ್ಚವನ್ನು 3 ಬಿಲಿಯನ್ ಡಾಲರ್ ಗೆ ಇಳಿಕೆ ಮಾಡೋದಾಗಿ ತಿಳಿಸಿತ್ತು. ಈ ಹೊಂದಾಣಿಕೆಗಳು ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಾರಂಭವಾಗಲಿದ್ದು, ಎಷ್ಟು ಜನ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಮೈಕ್ರೋಸಾಫ್ಟ್: ಮೈಕ್ರೋಸಾಫ್ಟ್ ಕಾರ್ಪ್ ಈ ವಾರ ಹಲವಾರು ವಿಭಾಗಗಳಲ್ಲಿ 1,000 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಮೂಲವನ್ನು ಉಲ್ಲೇಖಿಸಿ ಎಕ್ಸಿಯೋಸ್ ವರದಿ ಮಾಡಿದೆ.
2027ಕ್ಕೆ ಭಾರತ ವಿಶ್ವದ 3ನೇ ದೊಡ್ಡ ಆರ್ಥಿಕತೆ: ಹಣಕಾಸು ಸೇವಾ ಸಂಸ್ಥೆ ಮಾರ್ಗನ್ ಸ್ಟ್ಯಾನ್ಲಿ ಭವಿಷ್ಯ
ಜಾನ್ಸನ್ ಮತ್ತು ಜಾನ್ಸನ್ : ಹಣದುಬ್ಬರದ ಒತ್ತಡ ಮತ್ತು ಬಲಗೊಳ್ಳುತ್ತಿರುವ ಡಾಲರ್ ಪರಿಣಾಮ ಕೆಲವು ಉದ್ಯೋಗಗಳನ್ನು ಕಡಿತಗೊಳಿಸಬೇಕಾದ ಅನಿವಾರ್ಯತೆಯಿದೆ ಎಂದು ಜಾನ್ಸನ್ ಮತ್ತು ಜಾನ್ಸನ್ ಹೇಳಿದೆ.
ಟ್ವಿಟ್ಟರ್: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಶೇ.50ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಆದರೆ, ಬ್ಲೂಮ್ ಬರ್ಗ್ ವರದಿ ಪ್ರಕಾರ ಟ್ವಿಟ್ಟರ್ ವಜಾಗೊಳಿಸಿರುವ ಉದ್ಯೋಗಿಗಳನ್ನು ಮತ್ತೆ ಸಂಪರ್ಕಿಸಿ ಹಿಂತಿರುಗುವಂತೆ ಕೋರುತ್ತಿದೆ ಎಂದು ಹೇಳಿದೆ.
ಲಿಫ್ಟ್: ರೈಡ್-ಹೇಲಿಂಗ್ ಸಂಸ್ಥೆ Lyft Inc ಶೇ. 13 ಅಥವಾ ಸುಮಾರು 683 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದ್ದು, ಈ ವರ್ಷದ ಆರಂಭದಲ್ಲಿ 60 ಉದ್ಯೋಗ ಕಡಿತಗೊಳಿಸಿದೆ. ಅಲ್ಲದೆ, ಸೆಪ್ಟೆಂಬರ್‌ನಲ್ಲಿ ನೇಮಕಾತಿಯನ್ನು ಕೂಡ ಸ್ಥಗಿತಗೊಳಿಸಿತ್ತು.
ವಾರ್ನರ್ ಬ್ರದರ್ಸ್ ಡಿಸ್ಕವರಿ: ವಾರ್ನರ್ ಬ್ರದರ್ಸ್ ಡಿಸ್ಕವರಿ ಫಿಲ್ಮ್ ಅಂಗಸಂಸ್ಥೆಯಾದ ವಾರ್ನರ್ ಬ್ರದರ್ಸ್ ಪಿಕ್ಚರ್ಸ್, ವಿತರಣೆ ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿ ಹಲವಾರು ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ. ಶೇ. 5 ರಿಂದ ಶೇ.10ರಷ್ಟು ಉದ್ಯೋಗಗಳನ್ನು ಕಡಿತಗೊಳಿಸಲಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.