ಪದವಿ ಪೂರ್ಣಗೊಳಿಸದ ಹುಡುಗ ಇಂದು 8000 ಕೋಟಿ ರೂ. ಒಡೆಯ; ಇದು ಓಯೋ ಸಂಸ್ಥಾಪಕನ ಸಕ್ಸಸ್ ಸ್ಟೋರಿ
ವೈವಾಹಿಕ ಬದುಕಿಗೆ ಕಾಲಿಡುವ ಮೂಲಕ ಸದ್ಯ ಸುದ್ದಿಯಲ್ಲಿರುವ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್, 8000 ಕೋಟಿ ರೂ. ಒಡೆಯ. ಅವರ ವಯಸ್ಸು ಕೇವಲ 29 ವರ್ಷ. ಮಧ್ಯಮ ವರ್ಗದ ಕುಟುಂಬದಿಂದ ಬಂದ ರಿತೇಶ್ ಅಗರ್ವಾಲ್ ಇಷ್ಟು ಎಳೆಯ ಪ್ರಾಯದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದು ಹೇಗೆ? ಇಲ್ಲಿದೆ ಅವರ ಯಶೋಗಾಥೆ .
Business Desk:ದೇಶದ ಜನಪ್ರಿಯ ಹಾಸ್ಪಿಟಾಲಿಟಿ ಹಾಗೂ ಟ್ರಾವೆಲ್ ಸೇವಾ ಕಂಪನಿ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಎರಡು ದಿನಗಳ ಹಿಂದಷ್ಟೇ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ರಿತೇಶ್ ತಮ್ಮ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡುವ ಮೂಲಕ ಕಳೆದ ಕೆಲವು ದಿನಗಳ ಹಿಂದೆ ಸುದ್ದಿಯಾಗಿದ್ದರು. ಗೀತಾಂಶಾ ಸೂದ್ ಅವರನ್ನು ರಿತೇಶ್ ಮದುವೆಯಾಗಿದ್ದು, ದೆಹಲಿಯಲ್ಲಿ ಆಯೋಜಿಸಿದ್ದ ಇವರ ಅರತಕ್ಷತೆಗೆ ಸಾಫ್ಟ್‌ಬ್ಯಾಂಕ್ ಚೇರ್ಮನ್ ಮಸಯೋಶಿ ಸನ್ ಆಗಮಿಸಿದ್ದರು. ಓಯೋದಲ್ಲಿ ಸಾಫ್ಟ್‌ಬ್ಯಾಂಕ್ ದೊಡ್ಡ ಪ್ರಮಾಣದ ಹೂಡಿಕೆ ಮಾಡಿದೆ. ಓಯೋ ರೂಮ್ಸ್ ಅಪ್ಲಿಕೇಷನ್ ಮೂಲಕ ರಿತೇಶ್ ಜನಪ್ರಿಯತೆ ಗಳಿಸಿದ್ದರು. ಇಂದು ರಿತೇಶ್ ಅವರ ಈ ಸಂಸ್ಥೆ ಭಾರತದಲ್ಲಿ ಯೋಗ್ಯ ಬೆಲೆಗೆ ಬಾಡಿಗೆ ರೂಮ್ ಗಳನ್ನು ಹುಡುಕಿ ಕೊಡುವ ಪ್ಲಾಟ್ ಫಾರ್ಮ್ ಗಳಲ್ಲಿ ಮುಂಚೂಣಿಯಲ್ಲಿದೆ. ಪದವಿ ಶಿಕ್ಷಣವನ್ನು ಕೂಡ ಪೂರ್ಣಗೊಳಿಸದ ರಿತೇಶ್ ಸಾಧನೆಯ ಹಾದಿ ಸುಲಭದ್ದಾಗಿರಲಿಲ್ಲ. ಕಾಲೇಜು ದಿನಗಳಲ್ಲಿ ಹಣದ ಮುಗ್ಗಟ್ಟು ಎದುರಾದಾಗ ರಿತೇಶ್ ಸಿಮ್ ಕಾರ್ಡ್ ಗಳನ್ನು ಮಾರುವ ಕೆಲಸ ಕೂಡ ಮಾಡಿದ್ದರು. ಪದವಿ ಹಂತದಲ್ಲೇ ಸ್ವಉದ್ಯಮದ ಕನಸು ಮೂಡಿ 19 ನೇ ವಯಸ್ಸಿನಲ್ಲೇ ಸಂಸ್ಥೆಯೊಂದನ್ನು ಸ್ಥಾಪಿಸಿ ಇಂದು ಸುಮಾರು 8,200 ಕೋಟಿ ರೂ. ಒಡೆಯರಾಗಿರುವ ರಿತೇಶ್ ಯಶಸ್ಸಿನ ಹಾದಿ ಯುವಜನತೆಗೆ ಸ್ಫೂರ್ತಿ.
ಯಾರು ಈ ರಿತೇಶ್ ಅಗರ್ವಾಲ್?
ರಿತೇಶ್ ಅಗರ್ವಾಲ್ ಒಡಿಶಾದ ಬಿಸ್ಸಾಂನ ಮರ್ವಾರಿ ಕುಟುಂಬದಲ್ಲಿ ಜನಿಸಿದ್ದರು. ಇವರ ಕುಟುಂಬ ಒಡಿಶಾದ ರಾಯಗಢ ಜಿಲ್ಲೆಯಲ್ಲಿ ಸಣ್ಣ ಅಂಗಡಿಯೊಂದನ್ನು ಹೊಂದಿತ್ತು. ಬಿಸ್ಸಾಂನಲ್ಲಿ ಹೈಸ್ಕೂಲ್ ತನಕದ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಐಐಟಿ-ಜೆಇಇ ಸಿದ್ಧತೆಗಾಗಿ ರಿತೇಶ್ ರಾಜಸ್ಥಾನದ ಕೋಟಕ್ಕೆ ತೆರಳುತ್ತಾರೆ. ಆ ಬಳಿಕ 2011 ರಲ್ಲಿ ಕಾಲೇಜು ಶಿಕ್ಷಣಕ್ಕಾಗಿ ಅವರು ದೆಹಲಿಗೆ ತೆರಳುತ್ತಾರೆ. ಆದರೆ, ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ರಿತೇಶ್, ಸ್ವಂತ ಉದ್ಯಮ ಕಟ್ಟುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸುತ್ತಾರೆ.
ಹತ್ತೇ ದಿನದಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 13 ಸ್ಥಾನ ಜಿಗಿದ ಗೌತಮ್ ಅದಾನಿ
2012ರಲ್ಲಿ ರಿತೇಶ್, ಒರವೆಲ್ ಸ್ಟೇಸ್ ಎಂಬ ಹೋಟೆಲ್ ಬುಕ್ಕಿಂಗ್ ಕಂಪನಿ ಸ್ಥಾಪಿಸುತ್ತಾರೆ. 2012ರ ಸೆಪ್ಟೆಂಬರ್ ನಲ್ಲಿ ವೆಂಚರ್ ನರ್ಸರಿ ಎಂಬ ಉತ್ತೇಜನ ಕಾರ್ಯಕ್ರಮದಡಿಯಲ್ಲಿ ಅವರು 30ಲಕ್ಷ ರೂ. ಪಡೆಯುವಲ್ಲಿ ಸಫಲರಾಗುತ್ತಾರೆ. ಅದೇ ವರ್ಷ ರಿತೇಶ್ ಥೈಲ್ ಫೆಲೋಶಿಪ್ ಕಾರ್ಯಕ್ರಮದ ವಿಜೇತರಾಗುತ್ತಾರೆ. ಈ ಫೆಲೋಶಿಪ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಕೂಡ ರಿತೇಶ್ ಅವರದ್ದಾಗಿದೆ. ಇದರಿಂದ ದೊರೆತ 100,000 ಡಾಲರ್ ಬಳಸಿ 2013ರ ಮೇನಲ್ಲಿ ರಿತೇಶ್ ಓಯೋ ರೂಮ್ಸ್ ಸ್ಥಾಪಿಸಿದರು.
ರಿತೇಶ್ ಪದವಿ ಶಿಕ್ಷಣ ಪೂರ್ಣಗೊಳಿಸಲೇ ಇಲ್ಲ. ಸಂಕಷ್ಟದ ಸಮಯದಲ್ಲಿ ಸಿಮ್ ಕಾರ್ಡ್ ಕೂಡ ಮಾರುವ ಕೆಲಸ ಮಾಡಿದ್ದರು. ಮನೆಯವರ ಬಳಿ ಹಣ ಕೇಳಿದರೆ ಮರಳಿ ಊರಿಗೆ ಕರೆಸಿಕೊಳ್ಳುತ್ತಾರೆ ಎಂಬ ಭಯದಿಂದ ಎಲ್ಲ ಆರ್ಥಿಕ ಸಂಕಷ್ಟಗಳನ್ನು ಒಂಟಿಯಾಗಿ ಎದುರಿಸಿದರು. ಗೂಗಲ್ ಮೂಲಕವೇ ಸಾಫ್ಟ್ ವೇರ್ ಡೆವಲಪ್ ಮೆಂಟ್ ಕೂಡ ಕಲಿತರು. ತಮ್ಮ ಕನಸಿನ ಯೋಜನೆಗೆ ರೂಪ ಕೊಡಲು ಇಡೀ ದೇಶ ಸುತ್ತಿದರು. ಪ್ರಾರಂಭದಲ್ಲಿ ಕಡಿಮೆ ದರದ ಹೋಟೆಲ್ ಗಳಲ್ಲಿ ಇದ್ದು, ಗ್ರಾಹಕರ ಕರೆಗಳನ್ನು ಸ್ವೀಕರಿಸುತ್ತಿದ್ದರು. ಅವರ ನಿರೀಕ್ಷೆಗಳು ಹಾಗೂ ದೂರುಗಳನ್ನು ಆಲಿಸುತ್ತಿದ್ದರು. ನಿಧಾನವಾಗಿ ಓಯೋ ಯಶಸ್ಸು ಗಳಿಸುತ್ತ ಸಾಗಿತು.
'1 ಬಿಲಿಯನ್ ಡಾಲರ್ ಸಾಲವೆಲ್ಲಾ ನಮಗೆ ಕಡ್ಲೇಬೀಜ ಇದ್ದಂತೆ..' ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್ ಹೇಳಿಕೆ!
2018ರ ಸೆಪ್ಟೆಂಬರ್ ವೇಳೆಗೆ ರಿತೇಶ್ ತನ್ನ ಕಂಪನಿಗಾಗಿ ಒಂದು ಬಿಲಿಯನ್ ಡಾಲರ್ ಸಂಗ್ರಹಿಸುವಲ್ಲಿ ಸಫಲರಾದರು. 2020ರಲ್ಲಿ ರಿತೇಶ್ ಅವರ ನಿವ್ವಳ ಸಂಪತ್ತು 8,200 ಕೋಟಿ ರೂ. ಆಗಿತ್ತು. 2020ರ ಫೆಬ್ರವರಿಯಲ್ಲಿ ರಿತೇಶ್ ಜಗತ್ತಿನ ಅತ್ಯಂತ ಕಿರಿಯ ಸೆಲ್ಫ್ ಮೇಡ್ ಬಿಲಿಯನರ್ ಎಂದು ಗುರುತಿಸಿಕೊಂಡಿದ್ದಾರೆ. ಅಂದಹಾಗೇ ರಿತೇಶ್ ವಯಸ್ಸು ಈಗ ಕೇವಲ 29 ವರ್ಷ. ಮನಸ್ಸಿದ್ದರೆ ಯಾವ ವಯಸ್ಸಿನಲ್ಲಿ ಬೇಕಾದರೂ ಸಾಧನೆಯ ಶಿಖರ ಏರಬಹುದು ಎಂಬುದಕ್ಕೆ ರಿತೇಶ್ ಉತ್ತಮ ನಿದರ್ಶನ.