ಟೀ ಗ್ಲಾಸ್ ವಾಷಿಂಗ್ ಮಷಿನ್ ಆವಿಷ್ಕಾರಕ್ಕೆ ಮನಸೋತ ಶಾರ್ಕ್ ಟ್ಯಾಂಕ್ ತೀರ್ಪುಗಾರರು; ಉದ್ಯಮಿಗೆ ನೀಡಿದ ಆಫರ್ ಎಷ್ಟು?
ಶಾರ್ಕ್ ಟ್ಯಾಂಕ್ ಇಂಡಿಯಾ ಸಾಕಷ್ಟು ಅಭಿಮಾನಿಗಳು ಗಳಿಸಿರುವ ಕಾರ್ಯಕ್ರಮ. ಇತ್ತೀಚೆಗೆ ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸೋನಿ ಎಲ್ ಟಿವಿ ಪ್ಲ್ಯಾಟ್ ಫಾರ್ಮ್ ನಲ್ಲಿ ಪ್ರಸಾರವಾಗುತ್ತಿರುವ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ -2 ನಲ್ಲಿ ಇತ್ತೀಚೆಗೆ ಉದ್ಯಮಿಯೊಬ್ಬರ ಕಥೆಯಿಂದ ತೀರ್ಪುಗಾರರೇ ಪ್ರೇರಣೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಉದ್ಯಮಿ ಕೇಳಿದ್ದಕ್ಕಿಂತ ಹೆಚ್ಚಿನ ಮೊತ್ತದ ಹೂಡಿಕೆಗೆ ಮುಂದಾಗಿದ್ದಾರೆ.
ಮುಂಬೈ (ಫೆ.10): ಶಾರ್ಕ್ ಟ್ಯಾಂಕ್ ಇಂಡಿಯಾ ಎರಡನೇ ಆವೃತ್ತಿ ಸೋನಿ ಎಲ್ ಟಿವಿ ಪ್ಲ್ಯಾಟ್ ಫಾರ್ಮ್ ನಲ್ಲಿ ಪ್ರಸಾರವಾಗುತ್ತಿದ್ದು, ಲಕ್ಷಾಂತರ ಜನರಿಗೆ ಬರೀ ಮನೋರಂಜನೆಯನ್ನಷ್ಟೇ ನೀಡುತ್ತಿಲ್ಲ. ಬದಲಿಗೆ ದೇಶದ ಅನೇಕ ಉದಯೋನ್ಮುಖ ಉದ್ಯಮಿಗಳಿಗೆ ಉತ್ತಮ ವೇದಿಕೆ ಒದಗಿಸಿ ಕೊಟ್ಟಿದೆ ಕೂಡ. ಹೂಡಿಕೆ ಹಾಗೂ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವುದರ ಹೊರತಾಗಿ ತೀರ್ಪುಗಾರರು ಅನೇಕರಿಗೆ ಹೊಸ ಉದ್ಯಮದ ಬಗ್ಗೆ ಯೋಚಿಸಲು ಪ್ರೇರಣೆ ಒದಗಿಸುತ್ತಿದ್ದಾರೆ ಕೂಡ. ಅಷ್ಟೇ ಅಲ್ಲ, ವಿನೂತನವಾದ ಒಂದು ಉದ್ಯಮದ ಆಲೋಚನೆ ಜೊತೆಗೆ ಅದನ್ನು ಕಾರ್ಯಗತ ಮಾಡುವ ಬಗ್ಗೆ ಯೋಚಿಸುವಂತೆ ದೇಶದ ಅನೇಕ ಜನರಿಗೆ ಈ ಕಾರ್ಯಕ್ರಮ ಉತ್ತೇಜನ ನೀಡಿದೆ ಎಂದರೆ ತಪ್ಪಿಲ್ಲ. ಇನ್ನು ಶಾರ್ಕ್ ಟ್ಯಾಂಕ್ ಇಂಡಿಯಾದ ಇತ್ತೀಚಿನ ಆವೃತ್ತಿಯಲ್ಲಿ ಉದ್ಯಮಿಯೊಬ್ಬರು ತಮ್ಮ ಕಥೆಯ ಮೂಲಕ ತೀರ್ಪುಗಾರರು ಅಥವಾ ಶಾರ್ಕ್ ಗಳಿಗೇ ಪ್ರೇರಣೆಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಧವಲ್ ನೈ ಹಾಗೂ ಜಯೇಶ್ ನೈ ಎಂಬ ಉದ್ಯಮಿಗಳು ತಮ್ಮ ವಿನೂತನ ಆವಿಷ್ಕಾರ 'ಟೀ ಗ್ಲಾಸ್ ವಾಷಿಂಗ್ ಮಷಿನ್' ಅನ್ನು ತೀರ್ಪುಗಾರರ ಮುಂದೆ ಪ್ರಸ್ತುತಪಡಿಸಿದ್ದಾರೆ. ತೀರ್ಪುಗಾರರಿಗೆ ಬಿಸಿ ಬಿಸಿ ಚಹ ವಿತರಿಸಿದ ಬಳಿಕ ತಾವು ಸಂಶೋಧಿಸಿರುವ ಮಷಿನ್ ಕಾರ್ಯನಿರ್ವಹಣೆಯನ್ನು ತೋರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಪರ್ಧೆ ಅಥವಾ ಪಿಚ್ಚರ್ ಟೀ ಗ್ಲಾಸ್ ವಾಷಿಂಗ್ ಮಷಿನ್ ಅನ್ವೇಷಣೆ ಕಥೆಯನ್ನು ಹೇಳುವ ಮೂಲಕ ತೀರ್ಪುಗಾರರ ಮನಗೆದ್ದರು. ಚಹ ನೀಡುತ್ತಿದ್ದ ಲೋಟದಲ್ಲೇ ಮೇಕೆ ನೀರು ಕುಡಿಯೋದನ್ನು ನೋಡಿದ ಬಳಿಕ ಇಂಥದೊಂದು ಮಷಿನ್ ಸಿದ್ಧಪಡಿಸುವ ಆಲೋಚನೆ ಬಂತು ಎಂದು ಸ್ಪರ್ಧೆ ಹೇಳಿದ್ದಾರೆ. ಇನ್ನು ಟೀ ಗ್ಲಾಸ್ ವಾಷಿಂಗ್ ಮಷಿನ್ ವಿನ್ಯಾಸ ಮಾಡಲು ಆರು ತಿಂಗಳು ಬೇಕಾಯಿತು ಹಾಗೂ ನಾಲ್ಕು ಬಾರಿ ಪ್ರಯತ್ನದಲ್ಲಿ ವಿಫಲವಾಗಿರೋದಾಗಿ ಸ್ಪರ್ಧೆ ತಿಳಿಸಿದ್ದಾರೆ. ಈ ಗ್ಲಾಸ್ ವಾಷಿಂಗ್ ಮಷಿನ್ 30 ಸೆಕೆಂಡ್ ಗಳಲ್ಲಿ 15 ಗ್ಲಾಸ್ ಗಳನ್ನು ತೊಳೆಯುತ್ತದೆ.
ಅದಾನಿ ಪವರ್ ಜೊತೆಗೆ 6 ಅಂಗಸಂಸ್ಥೆಗಳ ವಿಲೀನಕ್ಕೆ NCLT ಅನುಮತಿ
ಈ ಸ್ಪರ್ಧೆಗಳ ಕಥೆಯಿಂದ ಉತ್ತೇಜಿತರಾದ ತೀರ್ಪುಗಾರ ಅನುಪಮ್ ಮಿತ್ತಲ್ ಹಳ್ಳಿಯಲ್ಲಿರುವ ಪ್ರತಿ ಮಗು ಕೂಡ ಇವರನ್ನು ಉದಾಹರಣೆಯಾಗಿ ತೆಗೆದುಕೊಂಡು ಏನಾದರೊಂದು ವಿನೂತನ ಆವಿಷ್ಕಾರ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಸ್ಪರ್ಧಿಗಳು 30ಲಕ್ಷ ರೂ. ಮೌಲ್ಯದ ಶೇ.10 ಈಕ್ವಿಟಿ ಕೋರಿದ್ದರು. ಆದರೆ, ಸ್ಪರ್ಧಿಗಳಿಗೆ 30ಲಕ್ಷ ರೂಪಾಯಿಯ ಶೇ.20 ಈಕ್ವಿಟಿ ದೊರಕಿದೆ. ಇದು ಆಲ್ ಶಾರ್ಕ್ ಡೀಲ್ನ ಎರಡನೇ ಅತೀ ದೊಡ್ಡ ಒಪ್ಪಂದ. ಈ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ ಧವಲ್ ನೈ ಹೀಗೆ ಬರೆದಿದ್ದಾರೆ:' ಮೌಲ್ಯಯುತವಾದ ಹೂಡಿಕೆಗಾಗಿ ನಾವು ಶಾರ್ಕ್ ಗಳಿಗೆ ಋಣಿಯಾಗಿದ್ದೇವೆ. ಈ ಸಹಭಾಗಿತ್ವದಿಂದಾಗಿ ನಮ್ಮ ಆವಿಷ್ಕಾರವನ್ನು ವಿಶ್ವ ಮಟ್ಟಕ್ಕೆ ಕೊಂಡು ಹೋಗಲು ನಾವು ಈಗ ಇನ್ನಷ್ಟು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದೇವೆ.'
ಇದು ದೇಶದ ದುಬಾರಿ ಅಪಾರ್ಟ್ ಮೆಂಟ್ ಡೀಲ್; ಮುಂಬೈಯಲ್ಲಿ 240 ಕೋಟಿ ರೂ.ಗೆ ಪೆಂಟ್ ಹೌಸ್ ಖರೀದಿಸಿದ ಉದ್ಯಮಿ
ಎರಡೇ ದಿನದಲ್ಲಿ ಸ್ಟಾಕ್ ಖಾಲಿ
ಈ ಆವೃತ್ತಿಯಲ್ಲಿ ವಿವಿಧ ವಲಯಗಳಿಗೆ ಸಂಬಂಧಿಸಿದ ಸ್ಟಾರ್ಟ್ ಅಪ್ ಗಳ ಅನೇಕ ಪಿಚ್ ಗಳು (ಉದ್ಯಮ ಪ್ರಸ್ತುತಿ) ಪ್ರಸಾರವಾಗುತ್ತಿವೆ. ಆದರೆ, ಈ ಕಾರ್ಯಕ್ರಮದಲ್ಲಿ ಈ ಬಾರಿ ಪ್ರತಿಯೊಬ್ಬರ ಗಮನ ಸೆಳೆದಿರುವುದು ಫ್ಲ್ಯಾಟ್ ಹೆಡ್ಸ್ ಸಂಸ್ಥಾಪಕ ಗಣೇಶ್ ಬಾಲಕೃಷ್ಣನ್. ಐಐಟಿ ಹಾಗೂ ಐಐಎಂ ಹಳೇ ವಿದ್ಯಾರ್ಥಿಯಾಗಿರುವ ಗಣೇಶ್ ಬಾಲಕೃಷ್ಣನ್, ಫೈಬರ್ ಗಳಿಂದ ಸಿದ್ಧಪಡಿಸುವ ಶೂ ಸಂಸ್ಥೆ ಫ್ಲ್ಯಾಟ್ ಹೆಡ್ಸ್ ಸಂಸ್ಥಾಪಕರು. ನಷ್ಟ ಉಂಟು ಮಾಡುತ್ತಿರುವ ತಮ್ಮ ಉದ್ಯಮವನ್ನು ಬಾಲಕೃಷ್ಣನ್ ಪ್ರಸ್ತುತಪಡಿಸಿರೋದು ಅನೇಕ ಉದ್ಯಮಿಗಳಿಗೆ ನಿರಾಸೆಯುಂಟು ಮಾಡಿರಬಹುದು. ಆದರೆ, ನಷ್ಟ ಉಂಟು ಮಾಡುವ ಉದ್ಯಮವನ್ನು ಲಾಭದಾಯಕವಾಗಿ ಪರಿವರ್ತಿಸುವ ಬಗ್ಗೆ ಅವರಿಗಿರುವ ಉತ್ಸಾಹ ಹಾಗೂ ಶ್ರದ್ಧೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ,ಬಾಲಕೃಷ್ಣನ್ ಅವರ ಉದ್ಯಮಗಾಥೆ ಪ್ರಸಾರಗೊಂಡ ಕೇವಲ ಎರಡು ದಿನಗಳಲ್ಲಿ ಫ್ಲ್ಯಾಟ್ ಹೆಡ್ಸ್ ಸಂಸ್ಥೆಯ ಸಂಪೂರ್ಣ ಉತ್ಪನ್ನಗಳು ಮಾರಾಟವಾಗಿವೆ.