Asianet Suvarna News Asianet Suvarna News

ಯಾರೀಕೆ ಮಾಯಾ ಟಾಟಾ? ರತನ್ ಟಾಟಾ ಉತ್ತರಾಧಿಕಾರಿ ಇವರೇನಾ?

ಇತ್ತೀಚೆಗೆ ರತನ್ ಟಾಟಾ ತಮ್ಮ ಕುಟುಂಬದ ಮೂವರನ್ನು ಟಾಟಾ ವೈದ್ಯಕೀಯ ಕೇಂದ್ರದ ಟ್ರಸ್ಟ್ ಗೆ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಟಾಟಾ ಸಮೂಹದ ಉತ್ತರಾಧಿಕಾರಿಗಳು ಯಾರು ಎಂಬ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಈ ಮೂವರಲ್ಲಿ ಒಬ್ಬರಾಗಿರುವ ಮಾಯಾ ಟಾಟಾ ಅವರ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ಆಗುತ್ತಿವೆ. ಹಾಗಾದ್ರೆ ಮಾಯಾ ಟಾಟಾ ಯಾರು? ಅವರು ರತನ್ ಟಾಟಾ ಅವರ ಉತ್ತರಾಧಿಕಾರಿಯಾಗುತ್ತಾರಾ? ಇಲ್ಲಿದೆ ಮಾಹಿತಿ. 
 

Meet Maya Tata Ratan Tatas niece and youngest successor of his multi billion dollar empire anu
Author
First Published Mar 13, 2023, 6:59 PM IST

Business Desk: ಟಾಟಾ ಸಮೂಹ ಸಂಸ್ಥೆಗಳ ಮುಂದಿನ ಉತ್ತರಾಧಿಕಾರಿಗಳು ಯಾರು ಎಂಬ ಕುತೂಹಲ ಬಹುತೇಕರಿಗೆ ಇದ್ದಿರಬಹುದು. ಟಾಟಾ ಸಂಸ್ಥೆಗಳ ಭವಿಷ್ಯದ ಚುಕ್ಕಾಣಿ ಹಿಡಿಯುವವರು ಈ ಸಂಸ್ಥೆಯಲ್ಲಿಯೇ ಕೆಳಗಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೌದು, ಟಾಟಾ ಕುಟುಂಬದ ಕುಡಿಗಳು ಸಂಸ್ಥೆಯಲ್ಲೇ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ, ಇವರ್ಯಾರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲವಷ್ಟೇ. ಇತ್ತೀಚೆಗಷ್ಟೇ ಟಾಟಾ ಕುಟುಂಬದ ಮೂರು ಕುಡಿಗಳನ್ನು ರತನ್ ಟಾಟಾ ಅವರು ಟಾಟಾ ವೈದ್ಯಕೀಯ ಕೇಂದ್ರದ ಟ್ರಸ್ಟ್ ಗೆ ನೇಮಕ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಟಾಟಾ ಸಮೂಹದ ಉತ್ತರಾಧಿಕಾರಿಗಳು ಯಾರು ಎಂಬ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ರತನ್ ಟಾಟಾ ನೇಮಿಸಿರುವ ಈ ಮೂವರು ಕೂಡ ಒಡಹುಟ್ಟಿದವರಾಗಿದ್ದಾರೆ. ಇವರಲ್ಲಿ 34 ವರ್ಷದ ಮಾಯಾ ಟಾಟಾ ಕೂಡ ಒಬ್ಬರಾಗಿದ್ದು, ರತನ್ ಟಾಟಾ ಅವರ ಕಿರಿಯ ವಾರಸುದಾರರಲ್ಲಿ ಒಬ್ಬರು. ಮಾಯಾ, ಅವರ ಸಹೋದರಿ ಲೇಹ್ ಹಾಗೂ ಸಹೋದರ ನೆವಿಲ್ಲೆ ಅವರನ್ನು ಮಂಡಳಿಯ ಹೊಸ ಸದಸ್ಯರನ್ನಾಗಿ ರತನ್ ಟಾಟಾ ನೇಮಕ ಮಾಡಿದ್ದಾರೆ. ಅಲ್ಲದೆ, ಇವರಿಗೆ ಸ್ವತಃ ರತನ್ ಟಾಟಾ ಅವರೇ ತರಬೇತಿ ನೀಡುತ್ತಿದ್ದು, ತಮ್ಮ ಬಿಲಿಯನ್ ಡಾಲರ್ ಉದ್ಯಮವನ್ನು ಮುನ್ನಡೆಸಲು ಸಿದ್ಧಗೊಳಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಗಾದ್ರೆ ಮಾಯಾ  ರತನ್ ಟಾಟಾ ಅವರ ಉತ್ತಾರಧಿಕಾರಿನಾ? ಹೀಗೊಂದು ಚರ್ಚೆ ಪ್ರಾರಂಭವಾಗಿದೆ. 

ಯಾರು ಈ ಮಾಯಾ ಟಾಟಾ?
ಮಾಯಾ ರತನ್ ಟಾಟಾ ಅವರ ಮಲಸಹೋದರ ನೋಯೆಲ್ ಟಾಟಾ ಅವರ ಮೂವರು ಮಕ್ಕಳಲ್ಲಿ ಕೊನೆಯವರು. ಸಹೋದರಿ ಲೇಹ್ ಹಾಗೂ ಸಹೋದರ ನೆವಿಲ್ಲೆ ಅವರಂತೆ ಮಾಯಾ ಕೂಡ ಟಾಟಾ ಸಮೂಹದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಯಾ ಇಂಗ್ಲೆಂಡ್ ನ ಬಯೆಸ್ ಬ್ಯುಸಿನೆಸ್ ಸ್ಕೂಲ್ ಹಾಗೂ ಯೂನಿವರ್ಸಿಟಿ ಆಫ್ ವಾರ್ ವಿಕ್ ನಿಂದ ಶಿಕ್ಷಣ ಪಡೆದಿದ್ದಾರೆ. ಈಕೆ ತಾಯಿ ಹೆಸರು ಅಲೋ ಮಿಸ್ತ್ರಿ. ಇವರು ಟಾಟಾ ಸಮೂಹದ ಮಾಜಿ ಮುಖ್ಯಸ್ಥ ಸೈರಸ್ ಮಿಸ್ತ್ರಿ ಅವರ ಸಹೋದರಿ ಹಾಗೂ ಬಿಲಿಯನೇರ್ ಪಲ್ಲೊನ್ಜಿ ಮಿಸ್ತ್ರಿ ಅವರ ಪುತ್ರಿ. 

ಕೋಕಿಲಾಬೆನ್ ಅಂಬಾನಿ ಬಳಿಯಿದೆ ಶಾರ್ಕ್ ಟ್ಯಾಂಕ್ ಇಂಡಿಯಾದ ಎಲ್ಲ ತೀರ್ಪುಗಾರರನ್ನು ಖರೀದಿಸುವಷ್ಟು ಸಂಪತ್ತು!

ಟಾಟಾ ಸಂಸ್ಥೆಯಲ್ಲಿ ವೃತ್ತಿ ಪ್ರಾರಂಭಿಸಿದ ಮಾಯಾ
ಟಾಟಾ ಕ್ಯಾಪಿಟಲ್ ಅಂಗಸಂಸ್ಥೆ ಟಾಟಾ ಅಪೋರ್ಚಿನಿಟೀಸ್ ಫಂಡ್ ನಲ್ಲಿ ಮಾಯಾ ತಮ್ಮ ವೃತ್ತಿ ಪ್ರಾರಂಭಿಸಿದ್ದರು. ಈ ಸಂಸ್ಥೆಯನ್ನು ಮುಚ್ಚುವ ತನಕ ಇದರಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಈ ಸಂಸ್ಥೆಯಲ್ಲಿ ಮಾಯಾ ಪೋರ್ಟ್ ಫೋಲಿಯೋ ಮ್ಯಾನೇಜ್ಮೆಂಟ್ ಹೂಡಿಕೆದಾರ ಸಂಬಂಧ ನಿರ್ವಹಣೆ ಮಾಡುತ್ತಿದ್ದರು. ಈ ಸಂಸ್ಥೆ ಮುಚ್ಚಿದ ಬಳಿಕ ಮಾಯಾ ಅವರು ತಂಡ ಬದಲಾಯಿಸಿ ಟಾಟಾ ಡಿಜಿಟಲ್ ಗೆ ಸೇರ್ಪಡೆಗೊಂಡರು. ಇವರು ಈ ಸಂಸ್ಥೆಯಲ್ಲಿರುವಾಗಲೇ 'ಟಾಟಾ ನಿಯೊ ಆಪ್' ಬಿಡುಗಡೆ ಮಾಡಲಾಗಿತ್ತು.

ಮಾಯಾ ಅವರು ಹೊಸ ಯುಗದ ವಿಶ್ಲೇಷಣೆ ಹಾಗೂ ತಂತ್ರಜ್ಞಾನದಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಮಾಯಾ ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಕ್ರಿಯಾಶೀಲರಾಗಿರದ ಕಾರಣ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಮಾಯಾ ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಸ್ ಆಡಳಿತ ಮಂಡಳಿಯ ಆರು ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಈ ಟ್ರಸ್ಟ್ ಕೋಲ್ಕತ್ತ ಮೂಲದ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ವಹಣೆ ಮಾಡುತ್ತದೆ. ರತನ್ ಟಾಟಾ 2011ರಲ್ಲಿ ಈ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು.

ನೀತಾ ಅಂಬಾನಿ ಬಗ್ಗೆ ನಿಮಗೆ ತಿಳಿಯದೇ ಇರೋ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್ ಇವು!

ರತನ್ ಟಾಟಾ ಅವರ ಗರಡಿಯಲ್ಲಿ ಬೆಳೆಯುತ್ತಿರುವ ಮಾಯಾ ಮುಂದೆ ಟಾಟಾ ಸಮೂಹವನ್ನು ಮುನ್ನಡೆಸಬಲ್ಲ ವರಾಸುದಾರರಲ್ಲಿ ಒಬ್ಬರಾಗಿ ಬೆಳೆಯುವ ವಿಶ್ವಾಸ ಮೂಡಿಸಿದ್ದಾರೆ ಕೂಡ. 

 

Follow Us:
Download App:
  • android
  • ios