ಟಾಟಾ ಕುಟುಂಬದ ಈ ಸೊಸೆ ಬಹುಕೋಟಿ ಕಿರ್ಲೋಸ್ಕರ್ ಸಮೂಹ ಸಂಸ್ಥೆ ಉತ್ತರಾಧಿಕಾರಿ
ಟಾಟಾ ಕುಟುಂಬದ ಸೊಸೆ ಮಾನಸಿ ಟಾಟಾ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಕಿರ್ಲೋಸ್ಕರ್ ಸಂಸ್ಥೆಯ ಉತ್ತರಾಧಿಕಾರಿಯಾಗಿರುವ ಈಕೆ ದಿವಂಗತ ವಿಕ್ರಂ ಕಿರ್ಲೋಸ್ಕರ್ ಅವರ ಪುತ್ರಿ. ಪ್ರಸ್ತುತ ಕಿರ್ಲೋಸ್ಕರ್ ವೆಂಚರ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಕೆ ನೋಯೆಲ್ ಟಾಟಾ ಅವರ ಮಗ ನೆವಿಲ್ಲೆ ಟಾಟಾರ ಪತ್ನಿ.
Business Desk:ಭಾರತದ ಜನಪ್ರಿಯ ಉದ್ಯಮ ಕುಟುಂಬಗಳಲ್ಲಿ ಕಿರ್ಲೋಸ್ಕರ್ ಕುಟುಂಬ ಕೂಡ ಒಂದು. ಈ ಪ್ರತಿಷ್ಠಿತ ಕುಟುಂಬದ ಹೆಣ್ಣುಮಗಳು ಟಾಟಾ ಮನೆತನದ ಸೊಸೆ ಕೂಡ ಹೌದು. ಈಕೆ ಈಗ ಕಿರ್ಲೋಸ್ಕರ್ ವೆಂಚರ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥೆ. ಅವರೇ ಮಾನಸಿ ಟಾಟಾ. ದಿವಂಗತ ವಿಕ್ರಂ ಕಿರ್ಲೋಸ್ಕರ್ ಅವರ ಪುತ್ರಿ ಮಾನಸಿ ಟಾಟಾ, ಕಳೆದ ಡಿಸೆಂಬರ್ ನಲ್ಲಿ ಕಂಪನಿಯ ನಿರ್ದೆಶಕಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಿರ್ಲೋಸ್ಕರ್ ಸಮೂಹದ ನಾಲ್ಕನೇ ತಲೆಮಾರಿನ ಉದ್ಯಮಿ ವಿಕ್ರಂ ಕಿರ್ಲೋಸ್ಕರ್ ಅವರು ಕಳೆದ ನವೆಂಬರ್ ನಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಮಾನಸಿ ಕಂಪನಿಯ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಅಂದಹಾಗೇ ಮಾನಸಿ ವಿಕ್ರಂ ಕಿರ್ಲೋಸ್ಕರ್ ಅವರ ಏಕೈಕ ಪುತ್ರಿ. ಹೀಗಾಗಿ ಬಹುಕೋಟಿ ಮೌಲ್ಯದ ಕಿರ್ಲೋಸ್ಕರ ಸಮೂಹದ ಉತ್ತರಾಧಿಕಾರಿ ಈಕೆ ಎಂದೇ ಹೇಳಬಹುದು. ಟೊಯೋಟಾ ಎಂಜಿನ್ ಇಂಡಿಯಾ ಲಿ., ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್ ಟೈಲ್ಸ್ ಪ್ರೈವೇಟ್ ಲಿ., ಟೊಯೋಟಾ ಮೆಟೀರಿಯಲ್ ಹ್ಯಾಂಡಲಿಂಗ್ ಇಂಡಿಯಾ ಪ್ರೈವೇಟ್ ಲಿ. ಮುಂತಾದ ಕಿರ್ಲೋಸ್ಕರ ಸಮೂಹದ ಸಂಸ್ಥೆಗಳನ್ನು ಕೂಡ ಈಕೆ ಮುನ್ನಡೆಸುತ್ತಿದ್ದಾರೆ. ಮಾನಸಿ ಅವರ ತಾಯಿ ಗೀತಾಂಜಲಿ ಕಿರ್ಲೋಸ್ಕರ್ ಕಿರ್ಲೋಸ್ಕರ್ ಸಿಸ್ಟ್ಂ ಪ್ರೈವೇಟ್ ಲಿಮಿಟೆಡ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಮಾನಸಿ ಟಾಟಾ ನೋಯೆಲ್ ಟಾಟಾ ಅವರ ಮಗ ನೆವಿಲ್ಲೆ ಟಾಟಾರ ಪತ್ನಿ. 2019ರಲ್ಲಿ ಮಾನಸಿ ವಿವಾಹ ನೆವಿಲ್ಲೆ ಟಾಟಾ ಅವರೊಂದಿಗೆ ನಡೆದಿತ್ತು. ಟಾಟಾ ಹಾಗೂ ಕಿರ್ಲೋಸ್ಕರ್ ಕುಟುಂಬಗಳ ನಡುವೆ ದಶಕಗಳ ಸ್ನೇಹ ಸಂಬಂಧವಿದೆ. ನೋಯೆಲ್ ಟಾಟಾ ಅವರು ಟಾಟಾ ಸಮೂಹ ಸಂಸ್ಥೆ ಮುಖ್ಯಸ್ಥ ರತನ್ ಟಾಟಾ ಅವರ ಮಲಸಹೋದರ. ಟಾಟಾ ಸಮೂಹದ ರಿಟೇಲ್ ಬ್ರ್ಯಾಂಚ್ ಟ್ರೆಂಟ್ ಲಿಮಿಟೆಡ್ ಅನ್ನು ನೋಯೆಲ್ ಟಾಟಾ ಮುನ್ನಡೆಸುತ್ತಿದ್ದಾರೆ. ನೆವಿಲ್ಲೆ ಟ್ರೆಂಟ್ ಬ್ರ್ಯಾಂಡ್ ಗಳ ಫುಡ್ ವರ್ಟಿಕಲ್ ಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಮಾಯಾ ಹಾಗೂ ಲೇಹ್ ಎಂಬ ಇಬ್ಬರು ಸಹೋದರಿಯರು ಕೂಡ ಇದ್ದಾರೆ. ಇತ್ತೀಚೆಗೆ ರತನ್ ಟಾಟಾ ಅವರು ಟಾಟಾ ವೈದ್ಯಕೀಯ ಕೇಂದ್ರದ ಟ್ರಸ್ಟ್ ಗೆ ನೆವಿಲ್ಲೆ ಹಾಗೂ ಅವರ ಇಬ್ಬರು ಸಹೋದರಿಯರನ್ನು ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ.
ಬಿಸ್ಲೆರಿ ಖರೀದಿಸಲ್ಲ ಟಾಟಾ: ಬಾಟಲಿ ನೀರು ಉದ್ಯಮಕ್ಕೆ ಜಯಂತಿ ಚೌಹಾಣ್ ಮುಖ್ಯಸ್ಥೆ..!
ಮಾನಸಿ ಟಾಟಾ ಅಮೆರಿಕದ ರೋಡೆ ಐಸ್ ಲ್ಯಾಂಡ್ ಸ್ಕೂಲ್ ಆಫ್ ಡಿಸೈನ್ ನಿಂದ ಪದವಿ ಪಡೆದಿದ್ದಾರೆ. ಕರ್ನಾಟಕದ ಮೂರು ಜಿಲ್ಲೆಗಳ ಸರ್ಕಾರಿ ಶಾಲೆಗಳ ಏಳ್ಗೆಗಾಗಿ ಕೂಡ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಮಾನಸಿ ಅವರು 'ಕೇರಿಂಗ್ ವಿಥ್ ಕಲರ್' ಎಂಬ ಎನ್ ಜಿಒ ಸಂಸ್ಥೆಯನ್ನು ಕೂಡ ಹೊಂದಿದ್ದಾರೆ. ಮಾನಸಿ ಅವರು ಉತ್ತಮ ಪೇಂಟರ್ ಕೂಡ ಆಗಿದ್ದು, ತಮ್ಮ 13ನೇ ವಯಸ್ಸಿನಲ್ಲೇ ತನ್ನ ಪೇಟಿಂಗ್ ಗಳ ಪ್ರದರ್ಶನ ಏರ್ಪಡಿಸಿದ್ದರು. ಬೆಂಗಳೂರಿನಲ್ಲಿ ಆಯೋಜಿಸಿದ್ದ ಮಾನಸಿ ಟಾಟಾ ಅವರ ಮೊದಲ ಚಿತ್ರಕಲೆ ಪ್ರದರ್ಶನದಲ್ಲಿ ಖ್ಯಾತ ಚಿತ್ರ ಕಲಾವಿದ ಎಂ.ಎಫ್. ಹುಸೇನ್ ಕೂಡ ಭಾಗವಹಿಸಿದ್ದರು. ಮಾನಸಿ ಅವರಿಗೆ ಈಜು ಅಂದ್ರೆ ಇಷ್ಟ. ಮಾನಸಿ ಟಾಟಾ ತಮ್ಮ ಕುಟುಂಬದ ಉದ್ಯಮದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಆದರೆ, ಮಾಧ್ಯಮದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದು, ಪ್ರಚಾರ ಬಯಸಿದೆ ಸರಳ ಜೀವನ ನಡೆಸುತ್ತಿದ್ದಾರೆ. ಮಾನಸಿ ಅವರ ಪತಿ ನೆವಿಲ್ಲೆ ಕೂಡ ಟಾಟಾ ಸಮೂಹ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ರತನ್ ಟಾಟಾ ಅವರ ಉತ್ತರಾಧಿಕಾರಿಗಳಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ ಎಂದು ಹೇಳಲಾಗಿದೆ.
ಯಾರೀಕೆ ಮಾಯಾ ಟಾಟಾ? ರತನ್ ಟಾಟಾ ಉತ್ತರಾಧಿಕಾರಿ ಇವರೇನಾ?
ಕಿರ್ಲೋಸ್ಕರ್ ಭಾರತದ ಇಂಜಿನಿಯರಿಂಗ್ ಉದ್ಯಮದ ಮೊದಲ ಸಂಸ್ಥೆಯಾಗಿದೆ. 1992ರಲ್ಲಿ ಕಿರ್ಲೋಸ್ಕರ್ ಬ್ರದರ್ಸ್ ಲಿ. 'ಬೆಸ್ಟ್ ಆಫ್ ಆಲ್' ರಾಜೀವ್ ಗಾಂಧಿ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿ ಜಯಿಸಿತ್ತು. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ಭಾರತದ ಟೊಯೋಟಾ ಕಾರುಗಳ ಉತ್ಪಾದನಾ ಸಂಸ್ಥೆಯಾಗಿದೆ.