ಐಟಿ ಉದ್ಯೋಗ ಬಿಟ್ಟು ಬರೀ 20,000 ಹೂಡಿಕೆಯೊಂದಿಗೆ ಬರ್ಗರ್ ಶಾಪ್ ಆರಂಭಿಸಿದ ಈತ, ಈಗ 100 ಕೋಟಿ ರೂ. ಕಂಪನಿ ಒಡೆಯ
ವಿದೇಶಿ ಕಂಪನಿಗಳ ಪೈಪೋಟಿಯ ನಡುವೆ ಬರೀ 20,000ರೂ. ಹೂಡಿಕೆಯೊಂದಿಗೆ ಭಾರತೀಯ ಸ್ವಾದದ ಬರ್ಗರ್ ಬ್ರ್ಯಾಂಡ್ ಕಟ್ಟಿ ಯಶಸ್ಸು ಗಳಿಸಿದ್ದಾರೆ ಬಿರಾಜ್ ರೌತ್. ಇಂದು ಇವರ ಸಂಸ್ಥೆ ಆದಾಯ 100 ಕೋಟಿ ರೂ.
Business Desk:ಬರ್ಗರ್ ಭಾರತೀಯ ತಿನಿಸು ಅಲ್ಲದಿದ್ದರೂ ಇಂದು ಸಾಕಷ್ಟು ಜನಪ್ರಿಯತೆ ಗಳಿಸಿದೆ. ಬರ್ಗರ್ ಅನ್ನು ಭಾರತದಲ್ಲಿ ಪರಿಚಯಿಸಿದ್ದು ವಿದೇಶಿ ಮೂಲದ ಕಂಪನಿಗಳೇ. ಮೆಕ್ ಡೊನಾಲ್ಡ್ಸ್ ಹಾಗೂ ಬರ್ಗರ್ ಕಿಂಗ್ ಮುಂತಾದ ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳು ಭಾರತೀಯರಿಗೆ ಬರ್ಗರ್ ರುಚಿ ತೋರಿಸಿದ್ದವು. ಹೀಗಿರುವಾಗ ಈ ಜನಪ್ರಿಯ ಬರ್ಗರ್ ಬ್ರ್ಯಾಂಡ್ ಗಳಿಗೆ ಭಾರತದಲ್ಲಿ ಹುಟ್ಟಿದ ಬರ್ಗರ್ ಬ್ರ್ಯಾಂಡ್ ಪೈಪೋಟಿ ನೀಡುತ್ತಿದೆ. ಪಕ್ಕಾ ದೇಸಿಯ ಸ್ವಾದ ಹೊಂದಿರುವ ಗ್ರಿಲ್ಡ್ ಬರ್ಗರ್ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸುತ್ತಿರುವ ಭಾರತೀಯ ಬ್ರ್ಯಾಂಡ್ 'ಬಿಗ್ಗೀಸ್ ಬರ್ಗರ್'. ಈ ಬ್ರ್ಯಾಂಡ್ ಸ್ಥಾಪಕ ಭುವನೇಶ್ವರ ಮೂಲದ ಬಿರಾಜ್ ರೌತ್. ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳ ಜೊತೆಗೆ ಪೈಪೋಟಿ ನೀಡಬಲ್ಲ ದೇಸಿ ಬರ್ಗರ್ ಬ್ರ್ಯಾಂಡ್ ಪ್ರಾರಂಭಿಸಿದ ಬಿರಾಜ್ ಅವರ ಸಾಹಸ ನಿಜಕ್ಕೂ ಮೆಚ್ಚುವಂಥದ್ದೆ. ಅಷ್ಟೇ ಅಲ್ಲದೆ, ಅವರು ಉದ್ಯಮ ಸ್ಥಾಪಿಸಿದ್ದು, ಅದನ್ನು ಮುನ್ನಡೆಸಲು ಪಟ್ಟ ಶ್ರಮ ಎಲ್ಲವೂ ಉದ್ಯಮಿಯಾಗಲು ಬಯಸೋರಿಗೆ ಸ್ಫೂರ್ತಿದಾಯಕ ಕೂಡ.
20 ಸಾವಿರ ಹೂಡಿಕೆಯೊಂದಿಗೆ ಉದ್ಯಮ
ಕೇವಲ 20 ಸಾವಿರ ರೂ. ಹೂಡಿಕೆಯೊಂದಿಗೆ ಬಿರಾಜ್ ಬರ್ಗರ್ ಉದ್ಯಮ ಪ್ರಾರಂಭಿಸಿದ್ದರು. ಇಂದು ಅವರ ಈ ಕಂಪನಿ ಮೌಲ್ಯ 100 ಕೋಟಿ ರೂ. ಬೆಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಬಿರಾಜ್ ಬರ್ಗರ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಯೂಟ್ಯೂಬ್ ಮೂಲಕ ಬರ್ಗರ್ ಗಳನ್ನು ಸಿದ್ಧಪಡಿಸುವ ವಿಧಾನಗಳ ಬಗ್ಗೆ ತಿಳಿದುಕೊಂಡರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತಾನು ಕಾರ್ಯನಿರ್ವಹಿಸುತ್ತಿದ್ದ ಇನ್ಫೋಸಿಸ್ ಕಚೇರಿ ಪಕ್ಕದಲ್ಲಿ ಬಾಡಿಗೆ ಕೋಣೆಯೊಂದರಲ್ಲಿ ಬರ್ಗರ್ ಶಾಪ್ ತೆರೆದರು.
ದಿನಕ್ಕೆ 10ರೂ. ಕೂಲಿ ಪಡೆಯುತ್ತಿದ್ದ ಕಾರ್ಮಿಕನ ಮಗ ಈಗ 3 ಸಾವಿರ ಕೋಟಿ ರೂ. ಕಂಪನಿ ಒಡೆಯ
21ನೇ ವಯಸ್ಸಿನ ತನಕ ಬರ್ಗರ್ ನೋಡಿಯೇ ಇರಲಿಲ್ಲ
ಬಿರಾಜ್ ಭುವನೇಶ್ವರ್ ಸಮೀಪದ ಪುಟ್ಟ ಹಳ್ಳಿಯೊಂದರಿಂದ ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದ ಬಳಿಕವೇ ಮೊದಲ ಬಾರಿಗೆ ಬರ್ಗರ್ ನೋಡಿದ್ದು. ಆಗ ಅವರಿಗೆ 21 ವರ್ಷ. ಅಲ್ಲಿಯ ತನಕ ಅವರಿಗೆ ಬರ್ಗರ್ ಸ್ವರೂಪ ಹಾಗೂ ರುಚಿಯ ಬಗ್ಗೆ ತಿಳಿದೇ ಇರಲಿಲ್ಲ. ಬರ್ಗರ್ ರುಚಿಯನ್ನು ಇಷ್ಟಪಟ್ಟ ಬಿರಾಜ್ ಮೆಕ್ ಡೊನಾಲ್ಡ್ ಹಾಗೂ ಕೆಎಫ್ ಸಿಗೆ ಆಗಾಗ ಭೇಟಿ ನೀಡಿ ಅದರ ರುಚಿ ನೋಡುತ್ತಿದ್ದರು. ಈ ಸಮಯದಲ್ಲಿ ಬಿರಾಜ್ ಒಂದು ಸಂಗತಿ ಗಮನಿಸಿದರು. ಅದೇನೆಂದರೆ ಭಾರತೀಯ ಮೂಲದ ಒಂದೇಒಂದು ಬರ್ಗರ್ ಬ್ರ್ಯಾಂಡ್ ಕೂಡ ಇಲ್ಲ. ಎಲ್ಲವೂ ವಿದೇಶಿ ಮೂಲದ್ದೇ ಆಗಿವೆ ಎಂಬುದನ್ನು. ಹೀಗಾಗಿ ಬಿರಾಜ್ ತಲೆಯಲ್ಲಿ ಭಾರತೀಯ ಸ್ವಾದದ ಬರ್ಗರ್ ಸಂಸ್ಥೆ ಸ್ಥಾಪಿಸುವ ಯೋಚನೆ ಮೂಡುತ್ತದೆ.
ಬರ್ಗರ್ ರುಚಿ ಮೆಚ್ಚಿದ ಜನ
ಬಿರಾಜ್ ಬರ್ಗರ್ ಶಾಪ್ ತೆರೆದ ಬಳಿಕ ನಿಧಾನವಾಗಿ ಉದ್ಯಮ ಬೆಳೆಯಲು ಪ್ರಾರಂಭಿಸಿತು. ಈ ಉದ್ಯಮಕ್ಕಾಗಿ ಬಿರಾಜ್ ಇನ್ಫೋಸಿಸ್ ಉದ್ಯೋಗಕ್ಕೆ ರಾಜೀನಾಮೆ ಕೂಡ ನೀಡಿದ್ದರು. ಕಡಿಮೆ ಬೆಲೆ, ವಿಭಿನ್ನ ರುಚಿ ಹಾಗೂ ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸಿ ಬಿರಾಜ್ ಬರ್ಗರ್ ಗಳನ್ನು ಸಿದ್ಧಪಡಿಸಲು ಪ್ರಾರಂಭಿಸಿದರು. ಕ್ರಮೇಣ ಜನರ ಬಾಯಿಯಿಂದ ಬಾಯಿಗೆ ಇವರ ಬರ್ಗರ್ ಶಾಪ್ ಮಾಹಿತಿ ವರ್ಗಾವಣೆಗೊಂಡು ದೊಡ್ಡ ಪ್ರಮಾಣದಲ್ಲಿ ಗ್ರಾಹಕರು ಬರಲು ಪ್ರಾರಂಭಿಸಿದರು.
50 ಪೈಸೆಗೆ ಟೀ ಮಾರಾಟ ಮಾಡುತ್ತಿದ್ದ ಮಹಿಳೆ ಈಗ ಕೋಟ್ಯಾಧಿಪತಿ; ಈಕೆ ದಿನದ ಆದಾಯವೇ 2ಲಕ್ಷ ರೂ.
14 ರಾಜ್ಯಗಳ 28 ನಗರಗಳಲ್ಲಿ 130 ಶಾಖೆಗಳು
ಬಿರಾಜ್ ಅವರ 'ಬಿಗ್ಗೀಸ್ ಬರ್ಗರ್' ಬೆಂಗಳೂರಿನ ಇತರ ಭಾಗಗಳು ಶಾಖೆ ಪ್ರಾರಂಭಿಸಿತು. ಆ ಬಳಿಕ ಇತರ ರಾಜ್ಯಗಳ ವಿವಿಧ ನಗರಗಳಲ್ಲಿ ಕೂಡ ಇದರ ಶಾಖೆಗಳು ಪ್ರಾರಂಭವಾದವು. ಇಂದು ಬಿಗ್ಗೀಸ್ ಬರ್ಗರ್' ದೇಶದ 14 ರಾಜ್ಯಗಳ 28 ನಗರಗಳಲ್ಲಿ 130 ಶಾಖೆಗಳನ್ನು ಹೊಂದಿದೆ. ಈ ತನಕ 50ಲಕ್ಷಕ್ಕೂ ಅಧಿಕ ಬರ್ಗರ್ ಗಳನ್ನು ಈ ಸಂಸ್ಥೆ ಮಾರಾಟ ಮಾಡಿದೆ. 2023ನೇ ಸಾಲಿನಲ್ಲಿ ಈ ಸಂಸ್ಥೆ ಆದಾಯ 100 ಕೋಟಿ ರೂ. 2024ರಲ್ಲಿ 'ಬಿಗ್ಗೀಸ್ ಬರ್ಗರ್' ಶಾಪ್ ಗಳನ್ನು 350ಕ್ಕೆ ಹೆಚ್ಚಿಸುವ ಗುರಿಯನ್ನು ಬಿರಾಜ್ ಹೊಂದಿದ್ದಾರೆ.