ತಳ್ಳುಗಾಡಿಯಲ್ಲಿಐಸ್ ಕ್ರೀಮ್ ಮಾರುತ್ತಿದ್ದ ವ್ಯಕ್ತಿ ಈಗ ಭಾರತದ ಶ್ರೀಮಂತ ಉದ್ಯಮಿ;ಈತನ ಸಂಪತ್ತು19,140 ಕೋಟಿ
ಬಡ ಕುಟುಂಬದ ಒಬ್ಬ ವ್ಯಕ್ತಿ ಜೀವನ ನಿರ್ವಹಣೆಗಾಗಿ ತಳ್ಳು ಗಾಡಿಯಲ್ಲಿ ಐಸ್ ಕ್ರೀಮ್ ಮಾರಾಟ ಮಾಡಿ, ಆ ಬಳಿಕ ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಮಾಲೀಕನಾಗುತ್ತಾನೆ.ಈ ಉದ್ಯಮಿಯ ಜೀವನ ಕಥೆ ಯಾವುದೇ ಸಿನಿಮಾ ಕಥೆಗಿಂತಲೂ ಕಡಿಮೆಯೇನಿಲ್ಲ..
Business Desk: ಯಶಸ್ವಿ ಉದ್ಯಮಿಯಾಗಲು ಐಐಟಿ, ಐಐಎಂನಲ್ಲೇ ಓದಿರಬೇಕೆಂದೇನೂ ಇಲ್ಲ. ಹಾಗೆಯೇ ಹಿರಿಯರು ಮಾಡಿದ ಕೋಟ್ಯಂತರ ರೂಪಾಯಿ ಆಸ್ತಿಯ ಅಗತ್ಯವೂ ಇಲ್ಲ. ಸಾಧಿಸುವ ಛಲ, ಆತ್ಮವಿಶ್ವಾಸ, ಕಠಿಣ ಪರಿಶ್ರಮವಿದ್ದರೆ ಸಾಕು ಯಶಸ್ಸು ಖಂಡಿತಾ ಒಲಿಯುತ್ತದೆ ಎಂಬುದಕ್ಕೆ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇರುತ್ತವೆ. ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ ವ್ಯಕ್ತಗಳು ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯ ಒಡೆಯರಾದ ಕಥೆಗಳು ಉದ್ಯಮ ಜಗತ್ತಿನಲ್ಲಿ ಬೇಕಾದಷ್ಟಿವೆ. ಹಾಗೆಯೇ ಯಾವುದೇ ವೃತ್ತಿಪರ ಡಿಗ್ರಿಯೂ ಇಲ್ಲದ ವ್ಯಕ್ತಿಗಳು ಬಹುಕೋಟಿ ಮೌಲ್ಯದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅನೇಕ ಕಥೆಗಳು ಭಾರತ ಹಾಗೂ ಜಗತ್ತಿನಾದ್ಯಂತ ಉದ್ಯಮ ರಂಗದಲ್ಲಿ ಕಾಣಸಿಗುತ್ತವೆ. ಈ ರೀತಿ ದೊಡ್ಡ ಡಿಗ್ರಿ ಇಲ್ಲದೆ, ಶ್ರೀಮಂತ ಉದ್ಯಮ ಕುಟುಂಬದ ಹಿನ್ನಲೆಯೂ ಇಲ್ಲದ ವ್ಯಕ್ತಿಯೊಬ್ಬ 25,527 ಕೋಟಿ ರೂ. ಮೌಲ್ಯದ ಕಂಪನಿಯನ್ನು ಕಟ್ಟಿ ಬೆಳೆಸಿದ ಕಥೆ ಇಲ್ಲಿದೆ. ಅಂದಹಾಗೇ ಈ ಯಶಸ್ವಿ ಉದ್ಯಮಿ ಹೆಸರು ಆರ್ .ಜಿ. ಚಂದ್ರಮೋಗಾನ್. ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್ ಮುಖ್ಯಸ್ಥ.
ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ಜನಿಸಿದ ಚಂದ್ರ ಮೋಗಾನ್ 21ನೇ ವಯಸ್ಸಿನಲ್ಲಿ ಐಸ್ ಕ್ರೀಮ್ ಉದ್ಯಮ ಪ್ರಾರಭಿಸಿದರು. ಕೇವಲ 13 ಸಾವಿರ ಹೂಡಿಕೆಯೊಂದಿಗೆ ಐಸ್ ಕ್ರೀಮ್ ಉತ್ಪಾದಿಸಿ ಅದನ್ನು ಆರಂಭಿಕ ದಿನಗಳಲ್ಲಿ ತಳ್ಳುಗಾಡಿಯಲ್ಲಿ ಮಾರಾಟ ಮಾಡುತ್ತಿದ್ದರು. ಕುಟುಂಬದಲ್ಲಿನ ಹಣಕಾಸಿನ ಸಮಸ್ಯೆಯಿಂದ ಕಾಲೇಜು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಅವರಿಗೆ ಆ ಸಮಯದಲ್ಲಿ ಉದ್ಯಮ ಮಾಡಬೇಕಿತ್ತು, ಮಾಡಿದರು. ಆದರೆ, ಅವರ ಬಳಿ ದೊಡ್ಡ ಯೋಜನೆಗಳೇನೂ ಇರಲಿಲ್ಲ.
ಪ್ರವಾಸಿಗರ ಫೋಟೋ ಕ್ಲಿಕ್ಕಿಸಿ ಜೀವನ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿ ಈಗ 6500 ಕೋಟಿ ಮೌಲ್ಯದ ಕಂಪನಿ ಒಡೆಯ
ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್ ಭಾರತದ ಜನಪ್ರಿಯ ಖಾಸಗಿ ಡೈರಿ ಕಂಪನಿಗಳಲ್ಲಿ ಒಂದಾಗಿದೆ. ಇನ್ನು ಜನಪ್ರಿಯ ಐಸ್ ಕ್ರೀಮ್ ಬ್ರ್ಯಾಂಡ್ ಗಳಲ್ಲಿ ಒಂದಾದ ಅರುಣ್ ಐಸ್ ಕ್ರೀಮ್ ಕೂಡ ಇದೇ ಸಮೂಹದ ಸಹಸಂಸ್ಥೆಯಾಗಿದೆ. ಚಂದ್ರಮೋಗಾನ್ ಅವರಿಗೆ ಈಗ 74 ವರ್ಷ. 50 ವರ್ಷಗಳಿಂದ ಅವರು ಡೈರಿ ಉದ್ಯಮದಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಕ್ಷೇತ್ರದ ಬಗ್ಗೆ ಅವರಿಗೆ ಅಪಾರವಾದ ಜ್ಞಾನವಿದೆ. ಪ್ರಸ್ತುತ ಅವರ ಪುತ್ರ ಸಿ. ಸತ್ಯನ್ ಕಂಪನಿಯನ್ನು ಮುನ್ನಡೆಸಲು ಅವರಿಗೆ ನೆರವು ನೀಡುತ್ತಿದ್ದಾರೆ. ಸತ್ಯನ್ ಪ್ರಸ್ತುತ ಹ್ಯಾಟ್ಸನ್ ಅಗ್ರೋ ಪ್ರಾಡಕ್ಟ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 2024ರ ಜನವರಿ 1ಕ್ಕೆ ಅನ್ವಯಿಸುವಂತೆ ಹಾಟ್ಸನ್ ಅಗ್ರೋ ಪ್ರಾಡಕ್ಟ್ ಮಾರುಕಟ್ಟೆ ಬಂಡವಾಳ 25,527 ಕೋಟಿ ರೂ. ಇದೆ.
ಇನ್ನು ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿ ಅನ್ವಯ ಚಂದ್ರಮೋಗಾನ್ ಅವರ ಒಟ್ಟು ಸಂಪತ್ತು 19,140 ಕೋಟಿ ರೂ. ಇವರಕಂಪನಿಯ ಜನಪ್ರಿಯ ಬ್ರ್ಯಾಂಡ್ ಗಳೆಂದರೆ ಅರುಣ್ ಐಸ್ ಕ್ರೀಮ್, ಆರೋಗ್ಯ ಹಾಲು ಹಾಗೂ ಹಾಟ್ಸನ್ ಮೊಸರು. ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್ 42 ದೇಶಗಳಿಗೆ ಡೈರಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ ಕೂಡ.
ವಿದೇಶದಲ್ಲಿನ ಉನ್ನತ ಹುದ್ದೆ ತೊರೆದ ಐಐಟಿ ಪದವೀಧರ ಈಗ 3000 ಕೋಟಿ ಮೌಲ್ಯದ ಕಂಪನಿ ಒಡೆಯ
1970ರಲ್ಲಿ ರೊಯಪುರಂನಲ್ಲಿ 250 ಚದರ ಅಡಿ ವಿಸ್ತೀರ್ಣದ ಕೋಣೆಯನ್ನು ಬಾಡಿಗೆ ಪಡೆದು ಚಂದ್ರಮೋಗಾನ್ ಐಸ್ ಕ್ರೀಮ್ ಉತ್ಪಾದನೆ ಪ್ರಾರಂಭಿಸಿದರು. ಪ್ರಾರಂಭದ 10 ವರ್ಷಗಳ ಕಾಲ ಉದ್ಯಮದಲ್ಲಿ ಸಾಕಷ್ಟು ಸವಾಲುಗಳನ್ನು ಅವರು ಎದುರಿಸಿದ್ದರು. ಯಾವಾಗ ಕಂಪನಿ 1.50ಲಕ್ಷ ವಹಿವಾಟು ನಡೆಸಲು ಪ್ರಾರಂಭಿಸಿತೋ ಆಗ ಚಂದ್ರಮೋಗಾನ್ ಸಂಸ್ಥೆಯನ್ನು ಇನ್ನಷ್ಟು ವಿಸ್ತರಿಸಿದರು. 1986ರಲ್ಲಿ ಸಂಸ್ಥೆಗೆ ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್ ಎಂಬ ಹೆಸರಿಟ್ಟರು. ಹಾಟ್ಸನ್ ಅಗ್ರೋ ಪ್ರಾಡಕ್ಟ್ ನಲ್ಲಿ ಪ್ರಸ್ತುತ 8 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ತಮಿಳುನಾಡು, ಗೋವಾ, ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. 10 ಸಾವಿರ ಹಳ್ಳಿಗಳಲ್ಲಿನ 4 ಲಕ್ಷ ರೈತರಿಂದ ಹಾಲು ಸಂಗ್ರಹಿಸಿ ಅದರಿಂದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ.