ಸರ್ಕಾರಿ ನೌಕರಿ ಬಿಟ್ಟು ಡಿಟರ್ಜೆಂಟ್ ಪೌಡರ್ ಮಾರುತ್ತಿದ್ದ ವ್ಯಕ್ತಿ ಈಗ 23,000 ಕೋಟಿ ಮೌಲ್ಯದ ಕಂಪನಿ ಒಡೆಯ!
ಉದ್ಯಮ ಜಗತ್ತಿನಲ್ಲಿ ಹಲವು ಯಶಸ್ಸಿನ ಕಥೆಗಳು ಕಾಣಸಿಗುತ್ತವೆ. ಆದರೆ, ಕೆಲವರ ಕಥೆಗಳು ಮಾತ್ರ ಸಾಧಿಸುವ ಮನಸ್ಸುಗಳಿಗೆ ಇನ್ನಷ್ಟು ಸ್ಫೂರ್ತಿ ತುಂಬುತ್ತವೆ. ನಿರ್ಮಾ ವಾಷಿಂಗ್ ಪೌಡರ್ ಸಂಸ್ಥಾಪಕರ ಕಥೆ ಕೂಡ ಅಂಥವುಗಳಲ್ಲಿ ಒಂದು.
Business Desk: ಉದ್ಯಮ ಜಗತ್ತಿನಲ್ಲಿ ಶೂನ್ಯದಿಂದ ಕೋಟ್ಯಂತರ ರೂಪಾಯಿ ಗಳಿಕೆ ಮಾಡಿದ ಹಲವರ ಕಥೆಗಳು ಕಾಣಸಿಗುತ್ತವೆ. ಈ ಕಥೆಗಳು ಸಾಧಿಸುವ ಮನಸ್ಸುಗಳಿಗೆ ಇನ್ನಷ್ಟು ಸ್ಫೂರ್ತಿ ತುಂಬುತ್ತವೆ ಕೂಡ. ಅಂದಹಾಗೇ ನಿರ್ಮಾ ವಾಷಿಂಗ್ ಪೌಡರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಒಂದು ಕಾಲದಲ್ಲಿ ಭಾರತದ ಡಿಟರ್ಜೆಂಟ್ ಮಾರುಕಟ್ಟೆಯನ್ನು ಆಳಿದ ನಿರ್ಮಾವನ್ನು ಬಳಸದ ಮಹಿಳೆಯರಿಲ್ಲ. 1960ರ ದಶಕದಲ್ಲಿ ಭಾರತದಲ್ಲಿ ಡಿಟರ್ಜೆಂಟ್ ಪೌಡರ್ ಉಳ್ಳವರ ಸ್ವತ್ತಾಗಿತ್ತು. ಜನಸಾಮಾನ್ಯರು ಇದನ್ನು ಖರೀದಿಸಲು ಸಾಧ್ಯವಿರಲಿಲ್ಲ. ಏಕೆಂದ್ರೆ ಅದರ ಬೆಲೆ ಅಷ್ಟು ದುಬಾರಿ. ಇದನ್ನು ಅರಿತ ಗುಜರಾತಿನ ರೈತ ಕುಟುಂಬದ ಯುವಕನೊಬ್ಬ ಕಡಿಮೆ ಬೆಲೆಯ ಡಿಟರ್ಜೆಂಟ್ ಪೌಡರ್ ಸಿದ್ಧಪಡಿಸಿ ಮಾರಾಟ ಮಾಡಲು ಪ್ರಾರಂಭಿಸಿದ. ಈ ಉದ್ಯಮ ಪ್ರಾರಂಭಿಸಲು ಆ ಯುವಕ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದ್ದ. ಹೀಗೆ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಸೈಕಲ್ ಮೂಲಕ ಡಿಟರ್ಜೆಂಟ್ ಪೌಡರ್ ಮಾರಾಟ ಮಾಡುತ್ತಿದ್ದ ಆ ವ್ಯಕ್ತಿ ಮತ್ತ್ಯಾರೂ ಅಲ್ಲ, ನಿರ್ಮಾ ಲಿಮಿಟೆಡ್ ಕಂಪನಿ ಮಾಲೀಕ ಕರ್ಸನ್ ಭಾಯ್ ಪಟೇಲ್. ಇಂದು ಅವರು ಭಾರತದ ಶ್ರೀಮಂತ ಉದ್ಯಮಿಗಳಲ್ಲೊಬ್ಬರು. ಅವರ ಕಂಪನಿ ಮೌಲ್ಯವೀಗ 23,000 ಕೋಟಿ ರೂ.
ಪದವಿ ಬಳಿಕ ಸಿಕ್ಕಿತು ಸರ್ಕಾರಿ ನೌಕರಿ
ಗುಜರಾತ್ ರುಪ್ಪುರದ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ 1945ರಲ್ಲಿ ಕರ್ಸನ್ ಭಾಯ್ ಪಟೇಲ್ ಜನಿಸಿದರು. ಓದಿನಲ್ಲಿ ಆಸಕ್ತಿ ಹೊಂದಿದ್ದ ಅವರು ಭೌತಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಿದ್ದರು. ಪದವಿ ಬಳಿಕ ಸರ್ಕಾರದ ಲ್ಯಾಬೋರೇಟರಿಯಲ್ಲಿ ಅವರಿಗೆ ಉದ್ಯೋಗ ದೊರಕಿತ್ತು. ಅಂದಿನ ಕಾಲದಲ್ಲಿ ಸರ್ಕಾರಿ ನೌಕರಿ ಸಿಕ್ಕರೆ ಸಹಜವಾಗಿಯೇ ಯಾರೂ ಅದನ್ನು ಬಿಡುತ್ತಿರಲಿಲ್ಲ. ಏಕೆಂದ್ರೆ ಪ್ರತಿ ತಿಂಗಳು ಉತ್ತಮ ವೇತನ ದೊರೆಯುವ ಜೊತೆಗೆ ಉದ್ಯೋಗ ಭದ್ರತೆ ಕೂಡ ಸಿಗುತ್ತಿತ್ತು. ಆದರೆ, ಕರ್ಸನ್ ಭಾಯ್ ಪಟೇಲ್ ಅವರಿಗೆ ಸರ್ಕಾರಿ ನೌಕರಿ ಬಿಟ್ಟು ಉದ್ಯಮ ಪ್ರಾರಂಭಿಸುವ ಕನಸಿತ್ತು.
ಇಸ್ರೋ ಮಾಜಿ ವಿಜ್ಞಾನಿ ಸ್ಟಾರ್ಟಪ್ ಮಾಲೀಕನಾದ ರೋಚಕ, ಸ್ಪೂರ್ತಿದಾಯಕ ಕಥೆ
ಕಡಿಮೆ ಬೆಲೆ ಡಿಟರ್ಜೆಂಟ್ ಪೌಡರ್ ಉತ್ಪಾದನೆ
ಏನಾದರೂ ಉದ್ಯಮ ಪ್ರಾರಂಭಿಸಬೇಕು ಎಂದು ಯೋಚಿಸುತ್ತಿದ್ದ ಕರ್ಸನ್ ಭಾಯ್ ಪಟೇಲ್ ಅವರಿಗೆ ದೇಶದಲ್ಲಿ ದೊಡ್ಡ ಪ್ರಮಾಣದ ಜನರಿಗೆ ಡಿಟರ್ಜೆಂಟ್ ಪೌಡರ್ ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂಬ ಸಂಗತಿ ತಿಳಿಯಿತು. ಆ ಸಮಯದಲ್ಲಿ ಡಿಟರ್ಜೆಂಟ್ ಪೌಡರ್ ಬೆಲೆ ತುಂಬಾ ದುಬಾರಿಯಾಗಿತ್ತು. ಹೀಗಾಗಿ ಹಣವಂತರು ಮಾತ್ರ ಇದನ್ನು ಖರೀದಿಸುತ್ತಿದ್ದರು. ಹೀಗಾಗಿ ಅವರು ಕಡಿಮೆ ದರದಲ್ಲಿ ಡಿಟರ್ಜೆಂಟ್ ಪೌಡರ್ ಮಾರಾಟ ಮಾಡುವ ನಿರ್ಧಾರ ಕೈಗೊಂಡರು. ಅಲ್ಲದೆ, ಇದರಿಂದ ದೊಡ್ಡ ಮಟ್ಟದಲ್ಲಿ ಗ್ರಾಹಕರನ್ನು ಸೆಳೆಯುವ ಮೂಲಕ ತಮ್ಮ ಉತ್ಪನ್ನಕ್ಕೆ ಮಾರುಕಟ್ಟೆ ಸೃಷ್ಟಿಸಲು ಸಾಧ್ಯ ಎಂಬುದನ್ನು ಕಂಡುಕೊಂಡರು. ತಮ್ಮ ಮನೆಯ ಹಿಂಭಾಗದಲ್ಲಿ ಸರಳ ಸಾಮಗ್ರಿಗಳನ್ನು ಬಳಸಿಕೊಂಡು ಡಿಟರ್ಜೆಂಟ್ ಪೌಡರ್ ಸಿದ್ಧಪಡಿಸಿದ್ದರು. ಇದಕ್ಕೆ 'ನಿರ್ಮಾ' ಎಂದು ಹೆಸರಿಟ್ಟರು. ಈ ರೀತಿ ಡಿಟರ್ಜೆಂಟ್ ಕಂಪನಿ ಪ್ರಾರಂಭಿಸಲು ಅವರು ಕೇವಲ 15 ಸಾವಿರ ಸಾಲ ಪಡೆದುಕೊಂಡಿದ್ದರು.
ಸೈಕಲ್ ಮೇಲೆ ಮಾರಾಟ
ಪ್ರಾರಂಭದಲ್ಲಿ ಮನೆಯಲ್ಲಿಯೇ ಸಿದ್ಧಪಡಿಸಿದ ವಾಷಿಂಗ್ ಪೌಡರ್ ಅನ್ನು ಕರ್ಸನ್ ಭಾಯ್ ಪಟೇಲ್ ಸೈಕಲ್ ಮೇಲೆ ಕೊಂಡುಹೋಗಿ ಮಾರಾಟ ಮಾಡುತ್ತಿದ್ದರು. ಹೀಗೆ ಮನೆ ಮನೆಗೆ ವಾಷಿಂಗ್ ಪೌಡರ್ ಅನ್ನು ಕೆಜಿಗೆ ಕೇವಲ 13ರೂ.ಗೆ ಮಾರಾಟ ಮಾಡುತ್ತಿದ್ದರು. ಕೆಲವೇ ಸಮಯದಲ್ಲಿ ನಿರ್ಮಾ ವಾಷಿಂಗ್ ಪೌಡರ್ ಗೆ ಭಾರೀ ಬೇಡಿಕೆ ಸೃಷ್ಟಿಯಾಯಿತು.
ಹೋದ ಡ್ರೈವರ್ ಕೆಲಸ, ಕೈಹಿಡಿದ ಮುದ್ರಾ ಯೋಜನೆ;ಡೈರಿ ಉದ್ಯಮದಿಂದ ತಿಂಗಳಿಗೆ 80 ಸಾವಿರ ಗಳಿಸುತ್ತಿರುವ ಬಿಹಾರದ ವ್ಯಕ್ತಿ
ದೇಶಾದ್ಯಂತ ಮನೆ ಮಾತಾಯಿತು
ನಿರ್ಮಾ ವಾಷಿಂಗ್ ಪೌಡರ್ ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕರ್ಸನ್ ಭಾಯ್ ಪಟೇಲ್ ಬಾಡಿಗೆ ಕಟ್ಟಡದಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡು ಉತ್ಪಾದನೆ ಪ್ರಾರಂಭಿಸಿದರು. ನಿಧಾನವಾಗಿ ನಿರ್ಮಾದ ಮಾರುಕಟ್ಟೆ ವಿಸ್ತರಿಸಲು ಪ್ರಾರಂಭಿಸಿತು. ಕೆಲವೇ ವರ್ಷದಲ್ಲಿ ನಿರ್ಮಾ ಭಾರತದಾದ್ಯಂತ ಜನಪ್ರಿಯತೆ ಗಳಿಸಿತು. ಇಂದು ಡಿಟರ್ಜೆಂಟ್ ಮಾರುಕಟ್ಟೆಯಲ್ಲಿ ನಿರ್ಮಾ ಜನಪ್ರಿಯ ಬ್ರ್ಯಾಂಡ್ ಆಗಿದೆ. ಈ ಕಂಪನಿಯಲ್ಲಿ ಸುಮಾರು 18,000 ಉದ್ಯೋಗಿಗಳಿದ್ದಾರೆ. ಇನ್ನು ಕಂಪನಿ ಕೂಡ ವಿಭಿನ್ನ ಉತ್ಪನ್ನಗಳನ್ನು ಪ್ರಾರಂಭಿಸಿದೆ. ಸೋಪ್ ಗಳು, ಮೇಕಪ್, ವೈಯಕ್ತಿಕ ಶುಚಿತ್ವದ ಉತ್ಪನ್ನಗಳನ್ನು ಉತ್ಪಾದಿಸಲು ಪ್ರಾರಂಭಿಸಿದೆ. ಈ ಕಂಪನಿಯ ವಾರ್ಷಿಕ ಆದಾಯ 7,000 ಕೋಟಿ ರೂ. ಇನ್ನು ನಿರ್ಮಾ ಗ್ರೂಪ್ ಒಟ್ಟು ಆದಾಯ 23,000 ಕೋಟಿ ರೂಪಾಯಗಿಂತಲೂ ಅಧಿಕವಿದೆ.