ಹೋಟೆಲ್ ನಲ್ಲಿ ಪಾತ್ರೆ ತೊಳೆದು ತಿಂಗಳಿಗೆ 18ರೂ. ಸಂಪಾದಿಸುತ್ತಿದ್ದ ಕನ್ನಡಿಗ, ಈಗ 300 ಕೋಟಿಯ ಸಂಸ್ಥೆ ಮಾಲೀಕ!
13ನೇ ವಯಸ್ಸಿಗೆ ತಂದೆಗೆ ಹೆದರಿ ಮನೆ ಬಿಟ್ಟು ಮುಂಬೈ ಬಸ್ ಹತ್ತಿದ ಹುಡುಗ ಇಂದು 300 ಕೋಟಿ ಮೌಲ್ಯದ ಹೋಟೆಲ್ ಚೈನ್ ಮಾಲೀಕ. ಹೋಟೆಲ್ ನಲ್ಲಿ ತಿಂಗಳಿಗೆ 18ರೂ.ಗೆ ದುಡಿಯುತ್ತಿದ್ದ ಈ ಬಾಲಕ ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮ ಕಟ್ಟಿದ್ದು ನಿಜಕ್ಕೂ ರೋಚಕ ಕಥೆಯೇ ಸರಿ.
Business Desk: ಕಠಿಣ ಸವಾಲುಗಳನ್ನು ಎದುರಿಸಿ ಬದುಕಿನಲ್ಲಿ ಯಶಸ್ಸು ಕಂಡ ಹಲವರ ಕಥೆ ಕೇಳಿದ್ದೇವೆ. ಆದರೆ, ಇವರ ಕಥೆ ಮಾತ್ರ ಅವೆಲ್ಲಕ್ಕಿಂತಲೂ ವಿಭಿನ್ನ, ಪ್ರೇರಣಾದಾಯಿ. ಜೀವನದಲ್ಲಿ ಕಠಿಣ ಪರಿಶ್ರಮ, ಬದ್ಧತೆ ಹಾಗೂ ದೃಢ ಸಂಕಲ್ಪವಿದ್ದರೆ ಯಾವುದು ಕೂಡ ಅಸಾಧ್ಯವಲ್ಲ ಎಂಬುದಕ್ಕೆ ಈ ವ್ಯಕ್ತಿ ಅತ್ಯುತ್ತಮ ನಿದರ್ಶನ. ಉತ್ತರ ಭಾರತ ಮಾತ್ರವಲ್ಲದೆ ಅನೇಕ ರಾಷ್ಟ್ರಗಳಲ್ಲಿ ದಕ್ಷಿಣ ಭಾರತದ ತಿನಿಸುಗಳಿಗೆ ಹೆಸರುವಾಸಿಯಾಗಿರುವ 'ಸಾಗರ್ ರತ್ನ' ರೆಸ್ಟೋರೆಂಟ್ ಗಳ ಮಾಲೀಕ, ಕನ್ನಡಿಗ ಜಯರಾಮ್ ಬನಾನ್ ಅವರ ಕಥೆ ಹಲವರ ಬದುಕು ಬಲಿಸಬಲ್ಲದು. ಅದೆಷ್ಟೇ ಕಷ್ಟಗಳು ಎದುರಾದರೂ ಸೋಲೊಪ್ಪಿಕೊಳ್ಳದೆ ಸ್ವ ಸಾಮರ್ಥ್ಯದಿಂದ ಜಯರಾಮ್ ಇಂದು ಯಶಸ್ವಿ ಹೋಟೆಲ್ ಉದ್ಯಮಿಯಾಗಿದ್ದಾರೆ. ತಿಂಗಳಿಗೆ ಬರೀ 18ರೂ. ದುಡಿಯುತ್ತಿದ್ದ ಇವರು ಇಂದು ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ದೇಶ, ವಿದೇಶಗಳಲ್ಲಿ 100ಕ್ಕೂ ಅಧಿಕ ರೆಸ್ಟೋರೆಂಟ್ ಗಳನ್ನು ಹೊಂದಿದ್ದಾರೆ.
ಉಡುಪಿಯಿಂದ ಮುಂಬೈಗೆ ಪಯಣ
ಜಯರಾಮ್ ಬನಾನ್ ಮೂಲತಃ ಉಡುಪಿಯವರು. ಇವರ ತಂದೆ ವೃತ್ತಿಯಲ್ಲಿ ಚಾಲಕರಾಗಿದ್ದರು. ತಂದೆ ತುಂಬಾ ಶಿಸ್ತಿನ ವ್ಯಕ್ತಿಯಾಗಿದ್ದರು. ಮಗ ತಪ್ಪು ಮಾಡಿದ್ರೆ ಕಠಿಣ ಶಿಕ್ಷೆ ಕೂಡ ವಿಧಿಸುತ್ತಿದ್ದರು. ಹೀಗಿರುವಾಗ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಜಯರಾಮ್, ತಂದೆಗೆ ಹೊಡೆಯುತ್ತಾರೆಂಬ ಭಯದಲ್ಲಿ ಮನೆ ಬಿಟ್ಟು ತೆರಳುವ ನಿರ್ಧಾರ ಮಾಡಿದರು. ತಂದೆಯ ಜೇಬಿನಿಂದ ದುಡ್ಡು ಕದ್ದು ಮುಂಬೈ ಬಸ್ ಹತ್ತಿದರು. ಆಗ ಅವರ ವಯಸ್ಸು 13 ವರ್ಷ.
ಐಟಿ ಕೆಲಸ ಬಿಟ್ಟು ಉದ್ಯಮ ಶುರು ಮಾಡಿ, ಯಶಸ್ವಿಯಾದ ಮಹಿಳೆ
ತಿಂಗಳಿಗೆ 18ರೂ. ವೇತನ
ಮುಂಬೈಗೆ ತೆರಳಿದ ಜಯರಾಮ್ ಅವರು ಕೆಲವು ದಿನಗಳ ಕಾಲ ಕೆಲಸವಿಲ್ಲದೆ ಅಲೆದಾಡಿದರು. ಆ ಬಳಿಕ ರೆಸ್ಟೋರೆಂಟ್ ನಲ್ಲಿ 18ರೂ. ವೇತನಕ್ಕೆ ಪಾತ್ರೆ ತೊಳೆಯುವ ಕೆಲಸ ಸಿಕ್ಕಿತು. ಸುಮಾರು ಆರು ವರ್ಷಗಳ ಕಾಲ ಈ ಹೋಟೆಲ್ ನಲ್ಲಿ ಜಯರಾಮ್ ಪಾತ್ರೆ ತೊಳೆಯುವ ಹಾಗೂ ಟೇಬಲ್ ಒರೆಸುವ ಕೆಲಸ ಮಾಡಿದರು. ಪಾತ್ರೆ ತೊಳೆದು ತೊಳೆದು ಅವರ ಕೈಗಳು ಹಾಳಾಗಿದ್ದವು, ಆದರೂ ಜಯರಾಮ್ ಕೆಲಸ ಮುಂದುವರಿಸಿದ್ದರು. ಕೆಲವು ವರ್ಷಗಳ ಬಳಿಕ ಅವರ ಕೆಲಸವನ್ನು ನೋಡಿ ಅವರಿಗೆ ಮ್ಯಾನೇಜರ್ ಹುದ್ದೆಗೆ ಬಡ್ತಿ ನೀಡಲಾಯಿತು. ಆಗ ಅವರ ವೇತನ ತಿಂಗಳಿಗೆ 200ರೂ.
ಮುಂಬೈಯಿಂದ ದೆಹಲಿಗೆ ಪಯಣ
ಉಡುಪಿಯವರು ಮುಂಬೈನಲ್ಲಿ ಮಸಾಲ ದೋಸೆ ಪರಿಚಯಿಸಿ, ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಮುಂಬೈನಲ್ಲಿ ಉಡುಪಿ ಮಸಾಲೆ ದೋಸೆ ಜನಪ್ರಿಯತೆ ಗಳಿಸಿತ್ತು. ಆದರೆ. ಸಾಕಷ್ಟು ಜನರು ಮಸಾಲೆ ದೋಸೆ ಮಾರಾಟ ಮಾಡುತ್ತಿದ್ದ ಕಾರಣ ಕಠಿಣ ಸ್ಪರ್ಧೆ ಕೂಡ ಇತ್ತು. ಹೀಗಾಗಿ ಜಯರಾಮ್ ದೆಹಲಿಗೆ ತೆರಳುವ ನಿರ್ಧಾರ ಮಾಡಿದರು. ದೆಹಲಿಯಲ್ಲಿ ಅವರ ಸಹೋದರರೊಬ್ಬರು ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ 1974ರಲ್ಲಿ ಜಯರಾಮ್ ಮುಂಬೈನಿಂದ ದೆಹಲಿಗೆ ತೆರಳಿದರು. 974 ರಲ್ಲಿ ಸೆಂಟ್ರಲ್ ಎಲೆಕ್ಟ್ರಾನಿಕ್ಟ್ ಕ್ಯಾಂಟೀನ್ನ ಟೆಂಡರ್ ಪಡೆದುಕೊಂಡರು.
ಲಕ್ಷಾಂತರ ರೂಪಾಯಿ ಸಂಬಳದ ಕೆಲಸ ಬಿಟ್ಟು, ತನ್ನ ಫೋಟೋ ಮಾರಿ ಕೊಟ್ಯಾಧಿಪತಿಯಾದ ಮಹಿಳೆ
ಮೊದಲ ರೆಸ್ಟೋರೆಂಟ್
ಜಯರಾಮ್ 5 ಸಾವಿರ ರೂಪಾಯಿಗಳ ಉಳಿತಾಯದ ಹಣದೊಂದಿಗೆ 1986 ರಲ್ಲಿ ಡಿಫೆನ್ಸ್ ಕಾಲೋನಿಯಲ್ಲಿ 'ಸಾಗರ್' ಎಂಬ ಮೊದಲ ರೆಸ್ಟೋರೆಂಟ್ ತೆರೆದರು. ಮೊದಲ ದಿನ ಈ ಹೋಟೆಲ್ ನಲ್ಲಿ 408ರೂ. ವ್ಯಾಪಾರವಾಗಿತ್ತು. ಹೋಟೆಲ್ ಕಟ್ಟಡಕ್ಕೆ ವಾರಕ್ಕೆ 3500 ರೂ. ಬಾಡಿಗೆ ನೀಡಬೇಕಿತ್ತು. ಅಲ್ಲದೆ, ದೆಹಲಿಯ ಜನರು ದಕ್ಷಿಣ ಭಾರತದ ತಿಂಡಿಗಳಿಗೆ ಅಷ್ಟು ಪರಿಚಿತರಾಗಿರದ ಕಾರಣ ಪ್ರಾರಂಭದಲ್ಲಿ ಸಾಕಷ್ಟು ಕಷ್ಟಪಡಬೇಕಾಯಿತು. ಆದರೆ, ಜಯರಾಮ್ ಛಲ ಬಿಡದೆ ಪ್ರಯತ್ನ ಮುಂದುವರಿಸಿದರು. ನಿಧಾನವಾಗಿ ಅವರ ಹೋಟೆಲ್ ಜನಪ್ರಿಯತೆ ಗಳಿಸಲಾರಂಭಿಸಿತು. ಹೀಗಾಗಿ ದೆಹಲಿ ಲೋಧಿ ಮಾರ್ಕೆಟ್ ನಲ್ಲಿ ಇನ್ನೊಂದು ಶಾಖೆ ತೆರೆದರು. ಇಲ್ಲಿಂದ ಮುಂದೆ ಅವರು ಹಿಂತಿರುಗಿ ನೋಡಲಿಲ್ಲ.
100 ಶಾಖೆಗಳು
ಉತ್ತರ ಭಾರತದಲ್ಲಿ ಸಾಗರ್ ರತ್ನ60ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ದೆಹಲಿಯಲ್ಲೇ 30 ಶಾಖೆಗಳಿವೆ. ಹೀಗೆ ಒಟ್ಟು 100ಕ್ಕೂ ಹೆಚ್ಚು ಶಾಖೆಗಳನ್ನು ಈ ಹೋಟೆಲ್ ಹೊಂದಿದೆ. ಕೆನಡಾ, ಸಿಂಗಾಪುರ ಹಾಗೂ ಬ್ಯಾಂಕಾಂಕ್ ನಲ್ಲಿ ಕೂಡ ಇವರ ಶಾಖೆಗಳಿವೆ. ಈ ರೆಸ್ಟೋರೆಂಟ್ ಚೈನ್ ವಾರ್ಷಿಕ ವಹಿವಾಟು 300 ಕೋಟಿ ರೂ.ಗಿಂತಲೂ ಹೆಚ್ಚಿದೆ.