ಆರು ವರ್ಷ ನಯಾಪೈಸೆ ಸಂಪಾದನೆಯಿಲ್ಲದೆ ಒದ್ದಾಡಿದ್ದ ನೌಕರಿ ಡಾಟ್ ಕಾಮ್ ಸ್ಥಾಪಕ ಇಂದು 19 ಸಾವಿರ ಕೋಟಿ ಒಡೆಯ!
ನೌಕರಿ ಡಾಟ್ ಕಾಮ್ ಸ್ಥಾಪಕ ಸಂಜೀವ್ ಬಿಖ್ ಚಂದಾನಿ ಇಂದು ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಅವರ ಒಡೆತನದ ಇನ್ಫೋ ಎಡ್ಜ್ ಇಂಡಿಯಾ ಪ್ರಸ್ತುತ ಸುಮಾರು 57,500 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ. ಫೋರ್ಬ್ಸ್ ಮಾಹಿತಿ ಪ್ರಕಾರ ಇವರ ನಿವ್ವಳ ಸಂಪತ್ತು 19 ಸಾವಿರ ಕೋಟಿ ರೂ. ಇವರ ಯಶಸ್ಸಿನ ಕಥೆ ಇಲ್ಲಿದೆ.

Business Desk: ನೌಕರಿ ಡಾಟ್ ಕಾಮ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಉದ್ಯೋಗ ಹುಡುಕಾಟದಲ್ಲಿರೋರು ಈ ವೆಬ್ ಸೈಟ್ ನೋಡದೆ ಇರೋ ಸಾಧ್ಯತೇನೆ ಇಲ್ಲ. ಹೊಸ ಉದ್ಯೋಗ ಹುಡುಕಬೇಕು ಇಲ್ಲವೆ ಕಂಪನಿ ಬದಲಾಯಿಸಬೇಕು ಎಂಬ ಆಲೋಚನೆ ತಲೆಯಲ್ಲಿ ಬಂದ ತಕ್ಷಣ ಎಲ್ಲರೂ ಮೊದಲು ತೆರೆಯೋದು ಈ ವೆಬ್ ಸೈಟ್ ಅನ್ನೇ. ಇದು ಭಾರತದ ಮೊದಲ ಲಿಸ್ಟೆಡ್ ಡಾಟ್ ಕಾಮ್ ಕೂಡ ಹೌದು. ಇಂಥದೊಂದು ವಿನೂತನ ವೆಬ್ ಸೈಟ್ ಹುಟ್ಟಿಕೊಂಡಿದಾದರೂ ಹೇಗೆ? ಇದರ ರೂವಾರಿ ಯಾರು ಎಂಬ ಪ್ರಶ್ನೆ ಅನೇಕರನ್ನು ಕಾಡಿರಬಹುದು. ಈ ವೆಬ್ ಸೈಟ್ ಸೃಷ್ಟಿಕರ್ತ ಸಂಜೀವ್ ಬಿಖ್ ಚಂದಾನಿ. ಇಂದು ಭಾರತದ ಇಂಟರ್ನೆಟ್ ಬಿಲಿಯೇನರ್ ಎಂಬ ಹೆಗ್ಗಳಿಕೆ ಗಳಿಸಿರುವ ಸಂಜೀವ್ ಬಿಖ್ ಚಂದಾನಿ ನೌಕರಿ ಡಾಟ್ ಕಾಮ್ ಪೋರ್ಟಲ್ ಪ್ರಾರಂಭಿಸಲು ಹಣದ ಅಡಚಣೆ ಅನುಭವಿಸಿದ್ದರು. ಅಮೆರಿಕದ ಸರ್ವರ್ ಆಧಾರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಈ ವೆಬ್ ಸೈಟ್ ಗೆ ಅವರ ಸಹೋದರ ಹಣಕಾಸಿನ ನೆರವು ನೀಡಿದರಂತೆ. ಆದರೆ, ಸಂಜೀವ್ ಬಿಖ್ ಚಂದಾನಿ ಇಂದು ಜೀವನ್ ಸಾಥಿ ಡಾಟ್ ಕಾಮ್, 99 ಎಕರ್ಸ್ ಡಾಟ್ ಕಾಮ್, ಶಿಕ್ಷ ಡಾಟ್ ಕಾಮ್ ಸೇರಿದಂತೆ ಭಾರತದ ಪ್ರಮುಖ ಜನಪ್ರಿಯ ವೆಬ್ ಸೈಟ್ ಗಳ ಮಾಲೀಕರು ಕೂಡ ಹೌದು. ಹಾಗಾದ್ರೆ ಈ ಸಂಜೀವ್ ಬಿಖ್ ಚಂದಾನಿ ಯಾರು? ಅವರ ವಿದ್ಯಾರ್ಹತೆ ಏನು? ಉದ್ಯಮ ಜಗತ್ತಿಗೆ ಅವರು ಹೇಗೆ ಪ್ರವೇಶಿಸಿದರು? ಈ ಎಲ್ಲ ಮಾಹಿತಿ ಇಲ್ಲಿದೆ.
ಉದ್ಯಮ ಪ್ರಾರಂಭಿಸಲು ಉನ್ನತ ಹುದ್ದೆ ತೊರೆದ ಸಂಜೀವ್
ಅಹಮದಾಬಾದ್ ಐಐಎಂ ಹಳೆಯ ವಿದ್ಯಾರ್ಥಿಯಾಗಿರುವ ಸಂಜೀವ್ ಬಿಖ್ ಚಂದಾನಿ 1990ರಲ್ಲಿ ಜನಪ್ರಿಯ ಬಹುರಾಷ್ಟ್ರೀಯ ಕಂಪನಿ ಗ್ಲ್ಯಾಕ್ಸೋಸ್ಇತ್ ಕ್ಲೈನೆ ಉದ್ಯೋಗ ತೊರೆದಿದ್ದರು. ಈ ಸಮಯದಲ್ಲಿ ಅವರ ಪತ್ನಿ ಸುರಭಿ ಕೂಡ ಉದ್ಯೋಗದಲ್ಲಿದ್ದು, ಉತ್ತಮ ವೇತನ ಹೊಂದಿದ್ದ ಕಾರಣ ಅಷ್ಟೇನೂ ಸಮಸ್ಯೆಯಾಗಲಿಲ್ಲ. ಸಂಜೀವ್ ಹಾಗೂ ಅವರ ಪತ್ನಿ ಸುರಭಿ ಐಐಎಂ ಅಹಮದಾಬಾದ್ ನಲ್ಲಿ ಸಹಪಾಠಿಗಳಾಗಿದ್ದರು. ಇಬ್ಬರ ನಡುವೆ ಪ್ರೀತಿ ಬೆಳೆದು ಮುಂದೆ ವಿವಾಹವಾಗಿದ್ದರು. ಉದ್ಯೋಗ ತೊರೆದ ಬಳಿಕ ಸಂಜೀವ್ ಇನ್ಫೋ ಎಡ್ಜ (ಇಂಡಿಯಾ) ಎಂಬ ಸಂಸ್ಥೆಯನ್ನು ತಂದೆಯ ಗ್ಯಾರೇಜ್ ನಲ್ಲಿ ಪ್ರಾರಂಭಿಸಿದರು. ಸೆಕೆಂಡ್ ಹ್ಯಾಂಡ್ ಕಂಪ್ಯೂಟರ್ ಗಳು ಹಾಗೂ ಪೀಠೋಪಕರಣಗಳನ್ನು ಬಳಸಿಕೊಂಡು ಉದ್ಯಮ ಪ್ರಾರಂಭಿಸಿದರು.
ವಾಟ್ಸಾಪ್ ಗ್ರೂಪ್‌ನಿಂದ ಆರಂಭಿಸಿ 6400 ಕೋಟಿ ರೂ. ಉದ್ಯಮ ಕಟ್ಟಿದ ವ್ಯಕ್ತಿ, ಅಂಬಾನಿಯಿಂದಲೇ ಹೂಡಿಕೆ!
6 ವರ್ಷ ನಯಾಪೈಸೆ ವೇತನವಿಲ್ಲ
ಸ್ವಂತ ಉದ್ಯಮ ಪ್ರಾರಂಭಿಸಿದ ಮೊದಲ ಆರು ವರ್ಷ ಸಂಜೀವ್ ಬಿಖ್ ಚಂದಾನಿ ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು. ಸುಮಾರು ಆರು ವರ್ಷಗಳ ಕಾಲ ವರ್ಚುವಲಿ ಅವರಿಗೆ ಯಾವುದೇ ವೇತನ ಸಿಗಲಿಲ್ಲ. ಈ ಸಮಯದಲ್ಲಿ ಅವರ ಪತ್ನಿ ಸುರಭಿ ಅವರಿಗೆ ಉತ್ತಮ ವೇತನವಿದ್ದ ಕಾರಣ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗಲಿಲ್ಲ. ಈ ಸಮಯದಲ್ಲಿ ಹೆಚ್ಚುವರಿ ಹಣಕ್ಕಾಗಿ ಸಂಜೀವ್ ಸ್ವಲ್ಪ ಸಮಯ ಅಧ್ಯಾಪನ ವೃತ್ತಿ ಕೂಡ ಮಾಡಿದ್ದರು.
ಅದೃಷ್ಟ ಬದಲಾಯಿಸಿದ ನೌಕರಿ ಡಾಟ್ ಕಾಮ್
1997ರಲ್ಲಿ ಸಂಜೀವ್ ಬಿಖ್ ಚಂದಾನಿ ಪ್ರಮುಖ ಉದ್ಯೋಗ ಪೋರ್ಟಲ್ ನೌಕರಿ ಡಾಟ್ ಕಾಮ್ (Naukri.com.) ಪ್ರಾರಂಭಿಸಿದರು. ಇದು ಅವರ ಅದೃಷ್ಟ ಬದಲಾಯಿಸಿತು. ಈ ಪೋರ್ಟಲ್ ಅನ್ನು ಅಮೆರಿಕದ ಸರ್ವರ್ ಗೆ ಪಾವತಿಸಿ ಅದರ ನೆರವಿನಿಂದ ಪ್ರಾರಂಭಿಸಲಾಯಿತು. ಇದಕ್ಕೂ ಕೂಡ ಸಂಜೀವ್ ಬಳ ಹಣವಿರಲಿಲ್ಲ. ಅಣ್ಣನಿಂದ ಆರ್ಥಿಕ ನೆರವು ಪಡೆದು ಅಂತೂ ಈ ವೆಬ್ ಸೈಟ್ ಪ್ರಾರಂಭಿಸಿದ್ದರು. ಈ ವೆಬ್ ಸೈಟ್ ಯಶಸ್ವಿಯಾಗುವ ಜೊತೆಗೆ 10 ವರ್ಷಗಳ ಳಿಕ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗುವ ಮೂಲಕ ಭಾರತದ ಮೊದಲ ಲಿಸ್ಟೆಡ್ ಡಾಟ್ ಕಾಮ್ ಎಂಬ ಹೆಗ್ಗಳಿಕೆ ಕೂಡ ಗಳಿಸಿತು.
ಭಾರತದ ಪ್ರಮುಖ ವೆಬ್ ಸೈಟ್ ಗಳ ಒಡೆಯ
ಇಂದು ಬಿಖ್ ಚಂದಾನಿ ಕಂಪನಿ ಜೀವನ್ ಸಾಥಿ ಡಾಟ್ ಕಾಮ್, 99 ಎಕರ್ಸ್ ಡಾಟ್ ಕಾಮ್, ಶಿಕ್ಷ ಡಾಟ್ ಕಾಮ್ ಸೇರಿದಂತೆ ಭಾರತದ ಪ್ರಮುಖ ಜನಪ್ರಿಯ ವೆಬ್ ಸೈಟ್ ಗಳ ಒಡೆತನ ಹೊಂದಿದೆ. ಇನ್ನು ಈ ಸಂಸ್ಥೆ ಝೊಮ್ಯಾಟೋ ಹಾಗೂ ಪಾಲಿಸಿ ಬಜಾರ್ ಸೇರಿದಂತೆ ಪ್ರಮುಖ ಸಂಸ್ಥೆಗಳಲ್ಲಿ ಷೇರುಗಳನ್ನು ಕೂಡ ಹೊಂದಿದೆ. ಇನ್ನು ಸಂಜೀವ್ ಬಿಖ್ ಚಂದಾನಿ ಮುಕ್ತ ಕಲೆಗಳ ಸಂಸ್ಥೆ ಅಶೋಕ ವಿಶ್ವವಿದ್ಯಾಲಯದ ಸ್ಥಾಪಕರು ಕೂಡ ಹೌದು.
ಅಮೆರಿಕದಲ್ಲಿ 75,000 ಕೋಟಿ ಸಾಮ್ರಾಜ್ಯ ನಿರ್ಮಿಸಿದ ಭಾರತೀಯ ಮಹಿಳೆ: ಕನಸಿನ ಉದ್ಯೋಗ ತೊರೆದು ಸ್ವಂತ ಕಂಪನಿ ಸ್ಥಾಪನೆ!
ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದ ಬಿಖ್ ಚಂದಾನಿ
ಸಂಜೀವ್ ಬಿಖ್ ಚಂದಾನಿ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಅವರ ತಂದೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ತಾಯಿ ಗೃಹಿಣಿ. ಐಐಎಂ ಅಹಮದಾಬಾದ್ ನಿಂದ ಎಂಬಿಎ ಪದವಿ ಪಡೆಯುವ ಮುನ್ನ ಅವರು ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟಿಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು.
ನಿವ್ವಳ ಸಂಪತ್ತು 19 ಸಾವಿರ ಕೋಟಿ
ಫೋರ್ಬ್ಸ್ ಪ್ರಕಾರ ಇಂದು ಸಂಜೀವ್ ಬಿಖ್ ಚಂದಾನಿ ನಿವ್ವಳ ಸಂಪತ್ತು 19 ಸಾವಿರ ಕೋಟಿ ರೂ. ಇವರ ಒಡೆತನದ ಇನ್ಫೋ ಎಡ್ಜ್ ಇಂಡಿಯಾ ಪ್ರಸ್ತುತ ಸುಮಾರು 57,500 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ. ಇನ್ನು ಇವರ ಪತ್ನಿ ಸುರಭಿ ಬಿಖ್ ಚಂದಾನಿ ನಿವ್ವಳ ಸಂಪತ್ತು 920 ಕೋಟಿ ರೂ. ಎಂದು ಅಂದಾಜಿಸಲಾಗಿದೆ.