Asianet Suvarna News Asianet Suvarna News

ಬೆಂಗಳೂರು ಐಐಎಂ ಹಳೇ ವಿದ್ಯಾರ್ಥಿನಿ ಈಗ 54 ಸಾವಿರ ಕೋಟಿ ಬೆಲೆಬಾಳೋ ಕಂಪನಿ ಎಂಡಿ;ಈಕೆ ವೇತನ ಎಷ್ಟು ಕೋಟಿ ಗೊತ್ತಾ?

ಜನಪ್ರಿಯ ಬ್ರ್ಯಾಂಡ್ ಗಳಲ್ಲಿ ಒಂದಾದ ಕೋಲ್ಗೇಟ್ -ಪಾಮೋಲಿವ್ (ಇಂಡಿಯಾ) ಕಂಪನಿಯ ಭಾರತದ ಎಂಡಿ ಹಾಗೂ ಸಿಇಒ ಆಗಿ ಪ್ರಭಾ ನರಸಿಂಹನ್ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬೆಂಗಳೂರು ಐಐಎಂ ಹಳೇ ವಿದ್ಯಾರ್ಥಿಯಾಗಿದ್ದು, ಇವರ ವಾರ್ಷಿಕ ವೇತನ ಎಷ್ಟಿದೆ ಗೊತ್ತಾ?

Meet IIM alumnus who leads Rs 54332 crore company as MD CEO anu
Author
First Published Sep 21, 2023, 11:44 AM IST

Business Desk: ಜಗತ್ತಿನಾದ್ಯಂತ ಅನೇಕ ಬಹುರಾಷ್ಟ್ರೀಯ ಕಂಪನಿಗಳ ಉನ್ನತ ಹುದ್ದೆಯಲ್ಲಿರುವ ಭಾರತೀಯರು ಐಐಟಿ, ಐಐಎಂ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ. ಅಂಥವರಲ್ಲಿ ಪ್ರಭಾ ನರಸಿಂಹನ್ ಕೂಡ ಒಬ್ಬರು. ಐಐಎಂ ಬೆಂಗಳೂರಿನ ಹಳೇ ವಿದ್ಯಾರ್ಥಿನಿಯಾಗಿರುವ ಪ್ರಭಾ ಕೋಲ್ಗೇಟ್ -ಪಾಮೋಲಿವ್ (ಇಂಡಿಯಾ) ಲಿಮಿಟೆಡ್ ಎಂಡಿ ಹಾಗೂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಂಪನಿ ಕೋಲ್ಗೇಟ್ -ಪಾಮೋಲಿವ್ (ಇಂಡಿಯಾ) ಕಂಪನಿಯ ಉಪಸಂಸ್ಥೆಯಾಗಿದೆ. ನರಸಿಂಹನ್ 2022ರ ಸೆಪ್ಟೆಂಬರ್ ನಲ್ಲಿ ಕೋಲ್ಗೇಟ್ -ಪಾಮೋಲಿವ್ (ಇಂಡಿಯಾ)  ಲಿಮಿಟೆಡ್ ಎಂಡಿ ಹಾಗೂ ಸಿಇಒ ಆಗಿ ಸೇರಿದ್ದರು. ಇದಕ್ಕೂ ಮುನ್ನ ಪ್ರಭಾ ಹಿಂದೂಸ್ತಾನ್ ಯುನಿಲಿವರ್ (ಎಚ್ ಯುಎಲ್) ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದು, ಹೋಮ್ ಕೇರ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು. ಹಾಗೆಯೇ ಎಚ್ ಯುಎಲ್ ನಾಯಕತ್ವ ತಂಡದ ಸದಸ್ಯೆ ಕೂಡ ಆಗಿ ಕೂಡ ಕಾರ್ಯನಿರ್ವಹಿಸಿದ ಅನುಭವ ಕೂಡ ಇದೆ. ಕಸ್ಟಮರ್ ಡೆವಲಪ್ ಮೆಂಟ್, ಕನ್ಸೂಮರ್ ಮಾರ್ಕೆಟಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸುಮಾರು 25 ವರ್ಷಗಳ ಅನುಭವ ಹೊಂದಿರುವ  ಪ್ರಭಾ ಅವರ ವಾರ್ಷಿಕ ವೇತನ 4.88 ಕೋಟಿ ರೂ. ಇದೆ. 

ಪ್ರಭಾ ನರಸಿಂಹನ್ ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ (ಐಐಎಂ) ಮಾರ್ಕೆಟಿಂಗ್ ನಲ್ಲಿ ಪಿಜಿಡಿಬಿಎಂ ಪೂರ್ಣಗೊಳಿಸಿದ್ದಾರೆ. ಇನ್ನು ಈಕೆ ತನ್ನ ಐದನೇ ಸೆಮಿಸ್ಟರ್ ಅನ್ನು ಮೆಲ್ಬೋರ್ನ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ಪೂರ್ಣಗೊಳಿಸಿದ್ದಾರೆ. ಬಾಯಿ ಸ್ವಚ್ಛತೆ ಹಾಗೂ ಕಾಳಜಿಗೆ ಸಂಬಂಧಿಸಿದ ಉದ್ಯಮದಲ್ಲಿ ಕೋಲ್ಗೇಟ್ -ಪಾಮೋಲಿವ್ (ಇಂಡಿಯಾ) ದೇಶದಲ್ಲೇ ಮುಂಚೂಣಿಯಲ್ಲಿದೆ. ಟೂಥ್ ಪೇಸ್ಟ್, ಟೂಥ್ ಪೌಡರ್, ಟೂಥ್ ಬ್ರಷ್ , ಆಯಿಲ್ ಪುಲ್ಲಿಂಗ್ ಉತ್ಪನ್ನಗಳನ್ನು ಹಾಗೂ ಮೌಥ್ ವಾಷ್ ಗಳನ್ನು ಕೋಲ್ಗೇಟ್ ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತಿದೆ. ಹಾಗೆಯೇ ಪಾಮೋಲಿವ್ ಬ್ರ್ಯಾಂಡ್ ಅಡಿಯಲ್ಲಿ ಅನೇಕ ವೈಯಕ್ತಿಕ ಕಾಳಜಿ ಉತ್ಪನ್ನಗಳನ್ನು ಕೂಡ ಈ ಸಂಸ್ಥೆ ಹೊಂದಿದೆ.

ದೇಶದ ಶ್ರೀಮಂತ ಮಹಿಳಾ ಫ್ಯಾಷನ್ ಡಿಸೈನರ್‌, ಖಾಲಿ 2 ಟೈಲರಿಂಗ್ ಮೆಷಿನ್‌ನಿಂದ 1000 ಕೋಟಿ ರೂ ಸಾಮ್ರಾಜ್ಯಕ್ಕೆ ಒಡತಿ

ಆದಿತ್ಯ ಬಿರ್ಲಾ ಗ್ರೂಪ್ ಜನರಲ್ ಮ್ಯಾನೇಜರ್ ಹುದ್ದೆ ಮೂಲಕ ಕಾರ್ಪೋರೇಟ್ ಜಗತ್ತಿಗೆ ಕಾಲಿಟ್ಟ ಪ್ರಭಾ ನರಸಿಂಹನ್, ಹಂತ ಹಂತವಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತ ಸಾಗಿದ್ದಾರೆ. 2006ರಲ್ಲಿ ಅವರು ಯುನಿಲಿವರ್ ಸಂಸ್ಥೆ ರೀಜನಲ್ ಮಾರ್ಕೆಟಿಂಗ್ ಮ್ಯಾನೇಜರ್ ಹುದ್ದೆ ಅಲಂಕರಿಸಿದರು. ಸುಮಾರು 14  ವರ್ಷಗಳ ಕಾಲ ಪ್ರಭಾ ಎಚ್ ಯುಎಲ್ ನಲ್ಲಿ ಕಾರ್ಯನಿರ್ವಹಿಸಿದ್ದರು. 2022ರಲ್ಲಿ ಕೋಲ್ಗೇಟ್ ಸಂಸ್ಥೆಗೆ ಸೇರ್ಪಡೆಗೊಳ್ಳಲು ಎಚ್ ಯುಎಲ್ ಸಂಸ್ಥೆ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕೋಲ್ಗೇಟ್ -ಪಾಮೋಲಿವ್ (ಇಂಡಿಯಾ) ಲಿಮಿಟೆಡ್ ಮಾರುಕಟ್ಟೆ ಬಂಡವಾಳ ಸೆಪ್ಟೆಂಬರ್ 20ಕ್ಕೆ 54,332 ಕೋಟಿ ರೂ. ಇದೆ. ಇನ್ನು ಈ ಕಂಪನಿಯ ಷೇರು ಬೆಲೆ ಎನ್ ಎಸ್ ಇಯಲ್ಲಿ 2,003.30 ಆಸುಪಾಸಿನಲ್ಲಿದೆ.

ಈಕೆ ಐಎಎಸ್ ಅಧಿಕಾರಿಯ ಪುತ್ರಿ, ಮೈಕ್ರೋಸಾಫ್ಟ್ ಇಂಜಿನಿಯರ್ ವಿವಾಹವಾಗಿರುವ ಇವರು ಇಂದು 6200 ಕೋಟಿ ರೂ. ಒಡತಿ!

ಕೋಲ್ಗೆಟ್ ಹಾಗೂ ಪಾಮೋಲಿವ್ ಸಂಸ್ಥೆ 200 ವರ್ಷಗಳ ಹಿಂದೆ ನ್ಯೂಯಾರ್ಕ್ ನಲ್ಲಿ ಪ್ರಾರಂಭಗೊಂಡಿತ್ತು. 1937ರಲ್ಲಿ ಈ ಬ್ರ್ಯಾಂಡ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿತ್ತು. ಭಾರತದಲ್ಲಿ ಕೋಲ್ಗೇಟ್ ಜನಪ್ರಿಯ ಬ್ರ್ಯಾಂಡ್ ಆಗಿದ್ದು, ಗ್ರಾಹಕರ ವಿಶ್ವಾಸ ಗಳಿಸಿದೆ. ಟೂಥ್ ಪೇಸ್ಟ್ ಎಂದರೆ ಕೋಲ್ಗೇಟ್ ಎಂಬ ಮಟ್ಟಿಗೆ ಈ ಬ್ರ್ಯಾಂಡ್ ಭಾರತದಲ್ಲಿ ತಲೆಯೂರಿದೆ. ಲಾಭದ ಹಾದಿಯಲ್ಲೇ ಮುನ್ನಡೆಯುತ್ತಿರುವ ಕೋಲ್ಗೇಟ್ ಈಗ ಪ್ರಭಾ ನರಸಿಂಹನ್ ಸಾರಥ್ಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ. ಈ ಸಂಸ್ಥೆಯ ಬಹುತೇಕ ಆದಾಯ ಕೋಲ್ಗೇಟ್ ಉತ್ಪನ್ನಗಳಾದ ಟೂಥ್ ಪೇಸ್ಟ್, ಟೂಥ್ ಬ್ರಶ್ ಸೇರಿದಂತೆ ವಿವಿಧ ಉತ್ಪನ್ನಗಳಿಂದ ಬರುತ್ತಿದೆ. ಪಾಮೋಲಿವ್ ಬ್ರ್ಯಾಂಡ್ ಗಳಿಕೆ ಕಡಿಮೆಯಿದ್ದು, ಇದನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೂಡ ಪ್ರಭಾ ಕಾರ್ಯನಿರತರಾಗಿದ್ದಾರೆ. 
 

Follow Us:
Download App:
  • android
  • ios