Asianet Suvarna News Asianet Suvarna News

ಸ್ತ್ರೀ ಸಂಘಗಳ ಉತ್ಪನ್ನಗಳಿಗೆ ಮೀಶೋ ಬ್ರಾಂಡಿಂಗ್‌: ಸಿಎಂ ಬೊಮ್ಮಾಯಿ

ಸ್ತ್ರೀ ಸಾಮರ್ಥ್ಯ ಕರ್ನಾಟಕದಿಂದ ಜಗತ್ತಿಗೆ ತಿಳಿಯಲಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದ್ದು, ಈ ಯೋಜನೆಯನ್ನು ಎಂಡ್‌-ಟು-ಎಂಡ್‌ ಮಾರ್ಗದಲ್ಲಿ ಕೈಗೊಳ್ಳಲಾಗುವುದು: ಸಿಎಂ ಬೊಮ್ಮಾಯಿ

Meesho Branding for Women's Association Products Says CM Basavaraj Bommai grg
Author
Bengaluru, First Published Jul 30, 2022, 1:45 PM IST

ಬೆಂಗಳೂರು(ಜು.30): ರಾಜ್ಯದ 2500 ಸ್ವಸಹಾಯ ಗುಂಪುಗಳ ಸಬಲೀಕರಣಕ್ಕಾಗಿ ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆ ಜೀವನೋಪಾಯ (ಕೆಎಸ್‌ಆರ್‌ಎಲ್‌ಪಿಎಸ್‌) ಮತ್ತು ಇ-ಕಾಮರ್ಸ್‌ ಸಂಸ್ಥೆ ಮೀಶೋ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಶುಕ್ರವಾರ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ತ್ರೀ ಸಾಮರ್ಥ್ಯ ಕರ್ನಾಟಕದಿಂದ ಜಗತ್ತಿಗೆ ತಿಳಿಯಲಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದ್ದು, ಈ ಯೋಜನೆಯನ್ನು ಎಂಡ್‌-ಟು-ಎಂಡ್‌ ಮಾರ್ಗದಲ್ಲಿ ಕೈಗೊಳ್ಳಲಾಗುವುದು. ಗ್ರಾಮೀಣ ಮಹಿಳೆಯರ ಸಬಲೀಕರಣ ನಿಟ್ಟಿನಲ್ಲಿ ಸರ್ಕಾರದ ಈ ಪ್ರಯತ್ನದಲ್ಲಿ ಕೆನರಾ ಬ್ಯಾಂಕ್‌ ಮತ್ತು ಮೀಶೋ ಸಂಸ್ಥೆಗಳು ಕೈ ಜೋಡಿಸಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಕೇಂದ್ರ ಸರ್ಕಾರದ ಜೀವನೋಪಾಯ ಕಾರ್ಯಕ್ರಮಗಳ ನೆರವಿನೊಂದಿಗೆ ಮತ್ತು ಎಲಿವೇಟ್‌ ಯೋಜನೆಯಡಿಯಲ್ಲಿಯೂ ಸ್ವಸಹಾಯ ಸಂಘಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು ಒದಗಿಸುತ್ತಿದೆ. ಈ ಕಾರ್ಯಕ್ರಮಗಳನ್ನು ವೃದ್ಧಿಸಿ ಸೂಕ್ಷ್ಮಮಟ್ಟದಲ್ಲಿ ನಿರ್ವಹಣೆ ಮಾಡುವ ಅಗತ್ಯವಿದೆ. ರಾಜ್ಯದ ಸ್ವಸಹಾಯ ಗುಂಪುಗಳನ್ನು ಕೆನರಾ ಬ್ಯಾಂಕ್‌ ಯೋಜನೆಗೆ ಆಯ್ದುಕೊಂಡಿರುವುದು ಶ್ಲಾಘನೀಯ. ಮಹಿಳೆಯರ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಆರ್ಥಿಕತೆ ಎಂದರೆ ಹಣವಲ್ಲ, ಬದಲಿಗೆ ಅದು ಜನರ ಆರ್ಥಿಕ ಚಟುವಟಿಕೆಗಳು ಎಂದು ಹೇಳಿದರು.

ರಾಮ​ನ​ಗರ: ಪ್ರವಾ​ಸೋ​ದ್ಯಮ ಹೂಡಿ​ಕೆ​ದಾ​ರರ ಸಮಾ​ವೇಶ ಯಶಸ್ವಿ

ಮಹಿಳೆಯರಲ್ಲಿ ಅಪಾರ ಶಕ್ತಿ ಇದ್ದು, ಸದಾ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಮಹಿಳಾ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ. ಅದಕ್ಕಾಗಿಯೇ ಸಾಮರ್ಥ್ಯ ಎಂಬ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ. ಸಮಾಜದ ಅರ್ಧದಷ್ಟಿರುವ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇದಕ್ಕಾಗಿ ಅವರು ಉತ್ಪಾದಿಸುವ ಉತ್ಪನ್ನಗಳಿಗೆ ಮೀಶೋದಂತಹ ಆನ್‌ಲೈನ್‌ ವಾಣಿಜ್ಯ ಸಂಸ್ಥೆಗಳ ಸಹಯೋಗದಲ್ಲಿ ಬ್ರಾಂಡಿಂಗ್‌, ಮಾರುಕಟ್ಟೆಸೌಲಭ್ಯಗಳನ್ನು ಒದಗಿಸಿ ಜಾಗತಿಕ ಮಾರುಕಟ್ಟೆಗೆ ಅವರನ್ನು ಪರಿಚಯಿಸಬೇಕಿದೆ ಎಂದರು.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರ ಸ್ವಯಂ ಉದ್ಯೋಗಕ್ಕಾಗಿ ನಿರ್ದಿಷ್ಟಯೋಜನೆಗಳನ್ನು ಗುರುತಿಸಿ, ಡಿಪಿಆರ್‌ ಸಿದ್ಧಪಡಿಸಿಕೊಳ್ಳಬೇಕು. ಇದರಿಂದ ಸಾವಿರಾರು ಮಹಿಳೆಯರ ಬದುಕಿನಲ್ಲಿ ಬಹುದೊಡ್ಡ ಬದಲಾವಣೆಯನ್ನು ತರಲು ಸಾಧ್ಯವಿದೆ. ಸ್ವಾಭಿಮಾನಿ ಬದುಕನ್ನು ಬದುಕಲು ಸ್ವಾವಲಂಬನೆ ಅಗತ್ಯ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯವಿರುವ ನೆರವು ಮತ್ತು ಸಹಕಾರವನ್ನು ನೀಡಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಸಾರಿಗೆ ಸಚಿವ ಶ್ರೀರಾಮುಲು, ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಮತ್ತು ಮೀಶೋ ಸಂಸ್ಥಾಪಕ ವಿದಿತ್‌ ಆತ್ರೇಯ ಇತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios