ರಾಮನಗರ: ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ಯಶಸ್ವಿ
ಜಿಲ್ಲಾಡಳಿತ ನಾಲ್ಕು ಹಂತಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಿದ್ದು, ಇದರಲ್ಲಿ ಮಂಚನಬೆಲೆ, ಕಣ್ವ, ಇಗ್ಗಲೂರು, ಸಂಗಮ ಪ್ರದೇಶಗಳನ್ನು ಕ್ರಮವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದ ಡಿಸಿ ಅವಿನಾಶ್
ರಾಮನಗರ(ಜು.30): ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಇಲ್ಲಿ ಆತಿಥ್ಯೋದ್ಯಮ ಮತ್ತು ಸಾಹಸ ಕ್ರೀಡೆಗಳ ಪ್ರವಾಸೋದ್ಯಮದಲ್ಲಿ ಬಂಡವಾಳ ಹೂಡಲು ಅನುಕೂಲವಾಗುವಂತೆ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ನಡೆದ ರಾಮನಗರ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿ ನಡೆಯಿತು. ಕಾವೇರಿ ವನ್ಯಜೀವಿ ಧಾಮದ ತಪ್ಪಲಿನಲ್ಲಿರುವ ಕನಕಪುರ ಗಾಳಿಬೋರೆಯಲ್ಲಿರುವ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಚ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ .ಅಶ್ವತ್ಥ ನಾರಾಯಣ ಆಶಯದಂತೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಜಿಲ್ಲಾಧಿಕಾರಿ ಅವಿನಾಶ್ ಮನನ್ ರಾಜೇಂದ್ರನ್ ಹಾಗೂ ಪ್ರವಾಸೋದ್ಯಮ ಇಲಾಖೆ ಹಿರಿಯ ಅಧಿಕಾರಿಗಳು ರಾಮನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಿರುವ ಅನುಕೂಲಕರ ವಾತಾವರಣವನ್ನು ಹೂಡಿಕೆದಾರರಿಗೆ ಮನದಟ್ಟು ಮಾಡಿಕೊಡುವ ಮೂಲಕ ಇಲ್ಲಿಯ ಪ್ರವಾಸೋದ್ಯಮಕ್ಕೆ ಬಂಡವಾಳ ಹೂಡಿಕೆಗೆ ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಹೂಡಿಕೆದಾರರ ಸಮಾವೇಶ: ಸಚಿವ ಅಶ್ವತ್ಥ ನಾರಾಯಣ
ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಪ್ರಸೆಂಟೇಷನ್ ಮೂಲಕ ಹೂಡಿಕೆದಾರರಿಗೆ ವಿವರಣೆ ನೀಡಿದ ಜಿಲ್ಲಾಧಿಕಾರಿ ಅವಿನಾಶ್, ರಾಮನಗರ ಜಿಲ್ಲೆಯು ಮುತ್ತತ್ತಿ , ಸಂಗಮ, ಮೇಕೆದಾಟುಗಳಂತಹ ನದಿತೀರ ಪ್ರದೇಶಗಳು, ಸಾವನದುರ್ಗ, ರಾಮದೇವರ ಬೆಟ್ಟಹಾಗೂ ಅರಣ್ಯ ಪ್ರದೇಶಗಳಿಂದ ಕೂಡಿದೆ. ಅಲ್ಲದೆ ಜಿಲ್ಲೆಯಲ್ಲಿ ಕಾವೇರಿ , ಶಿಂಷಾ, ಅರ್ಕಾವತಿ ಸೇರಿದಂತೆ ಸಣ್ಣಪುಟ್ಟನದಿಗಳು ಹರಿಯುತ್ತಿವೆ. ಸಂಪತ್ಭರಿತವಾದ ವನ್ಯ ಸಂಪತ್ತಿನಿಂದ ಕಂಗೊಳಿಸುತ್ತಿದೆ. ಜಲಸಾಹಸ ಕ್ರೀಡೆಗಳಿಗೆ ಕಣ್ವ, ಇಗ್ಗಲೂರು, ಮಂಚನಬೆಲೆ, ತಿಪ್ಪಗೊಂಡನಹಳ್ಳಿಗಳಂತಹ ಜಲಾಶಯಗಳು ಇವೆ. ಹೀಗೆ ಹತ್ತು ಹಲವು ಬಗೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ ಎಂದರು.
ಪ್ರವಾಸಿಗರನ್ನು ಸೆಳೆಯಲು ಗುಡ್ಡಗಾಡು ಪ್ರದೇಶದಲ್ಲಿ ಪರ್ವತಾರೋಹಣ, ಸೈಕ್ಲಿಂಗ್ ಹಾಗೂ ಟ್ರೆಕ್ಕಿಂಗ್ ಗಳಿಗೆ ವ್ಯವಸ್ಥೆ ಮಾಡಬಹುದಾಗಿದೆ. ಮೈಕ್ರೋಲೈಟ್ ಏರ್ ಕ್ರಾಫ್ಟ್ , ಮ್ಯಾರಥಾನ್, ವಾಕ್ ಥಾನ್, ಚನ್ನಪಟ್ಟಣದ ಬೊಂಬೆ, ಸಿಲ್ಕ್ ಟೂರಿಸಂ, ವೈನ್ ಟೂರಿಸಂ ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ ಅಲ್ಲಿಗೂ ಪ್ರವಾಸ ಕೈಗೊಳ್ಳಲು ಅಭಿವೃದ್ಧಿ ಪಡಿಸಬಹುದಾಗಿದೆ .
ಜಿಲ್ಲಾಡಳಿತ ನಾಲ್ಕು ಹಂತಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಿದ್ದು, ಇದರಲ್ಲಿ ಮಂಚನಬೆಲೆ, ಕಣ್ವ, ಇಗ್ಗಲೂರು, ಸಂಗಮ ಪ್ರದೇಶಗಳನ್ನು ಕ್ರಮವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅವಿನಾಶ್ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ರಾಜ್ಯದಲ್ಲಿ ಜಾರಿಗೆ ಬಂದಿರುವ ಕರ್ನಾಟಕ ಪ್ರವಾಸೋದ್ಯಮ ನೀತಿ 2020-25 ಮೂಲಕ ಬಂಡವಾಳ ಹೂಡಿಕೆ ಮತ್ತು ಸ್ಥಳೀಯವಾಗಿಯೇ ಉದ್ಯೋಗಾವಕಾಶ ಸೃಷ್ಟಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿಯೇ 26 ಬಗೆಯ ಪ್ರವಾಸಿ ಯೋಜನೆಗಳಿವೆ ಎಂದು ವಿವರಿಸಿದರು.
ರಾಮನಗರ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ತಾಣ. ಇಲ್ಲಿ ಕೆಲ ಪ್ರವಾಸಿ ಯೋಜನೆಗಳಿಗೆ ಹಣಕಾಸಿನ ನೆರವಿನ ಜೊತೆಗೆ ಸಬ್ಸಿಡಿಯೂ ಸಿಗಲಿದೆ. ಇಲಾಖೆ ಯಿಂದ ಸಿಗುವ ಸವಲತ್ತು, ನೋಂದಣಿ ಹಾಗೂ ಸಹಕಾರದ ಬಗ್ಗೆ ಹೂಡಿಕೆದಾರರಿಗೆ ಮನದಟ್ಟು ಮಾಡಿಕೊಟ್ಟರು.
ಈ ಬಗ್ಗೆ ಆಸಕ್ತಿವಹಿಸಿದ ಹೂಡಿಕೆದಾರರು, ನಮಗೆ ಸರ್ಕಾರದಿಂದ ಸೌಕರ್ಯಗಳನ್ನು ಕಲ್ಪಿಸುವುದರ ಜತೆಗೆ ಹೋಟೆಲ್ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ ಉದ್ಯೋಗದೊಂದಿಗೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುತ್ತೇವೆ. ಸರ್ಕಾರ ಮತ್ತು ಅಧಿಕಾರಿಗಳ ಸಹಕಾರ ಇದ್ದರೆ ಮಾತ್ರ ಪ್ರವಾಸೋದ್ಯಮದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಗಳನ್ನು ಹಂಚಿಕೊಂಡರು. ಆರ್ಥಿಕ ಇಲಾಖೆ ಉಪ ಕಾರ್ಯದರ್ಶಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಹಾಜರಿದ್ದರು.
ತರಬೇತಿ ವಿಮಾನಕ್ಕೆ ಎಂಜಿನ್ ಪೂರೈಕೆಗಾಗಿ ಹನಿವೆಲ್‌ನೊಂದಿಗೆ HAL 800 ಕೋಟಿ ಒಪ್ಪಂದ
ಕಾಳಿಬೋರೆ ಪಿಶಿಂಗ್ ಕ್ಯಾಂಪ್ ನಲ್ಲಿ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ಮುಗಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಅವರು ತೆಪ್ಪದಲ್ಲಿ ಸುಮಾರು 8ರಿಂದ 9 ಕಿ.ಮೀ ಕಾವೇರಿ ನದಿಯಲ್ಲಿ ಸಾಗಿ ಸಂಗಮದವರೆಗೂ ಪ್ರಕೃತಿ ಸೌಂದರ್ಯ ಸವಿದರು.
ರಾಮನಗರ ಜಿಲ್ಲೆ ಅಡ್ವೆಂಚರ್ ಆಕ್ಟಿವಿಟಿಗೆ ಹೇಳಿ ಮಾಡಿಸಿದ ಜಾಗ. ಪ್ರವಾಸಿಗರಿಗಾಗಿ ಸ್ಟಾರ್ ಹೋಟೆಲ್ ಗಳು ತಲೆ ಎತ್ತಿದರೆ ರಾಮನಗರವನ್ನು ಅಂತರ ರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ಕಾಣಬಹುದಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಿಂಗಲ್ ವಿಂಡೋ ಸಿಸ್ಟಂ ಅನ್ನು ಯಾವುದೇ ಸಮಸ್ಯೆ ಇದ್ದರು ಬಗೆಹರಿಸುವಂತೆ ಬಲ ಪಡಿಸಬೇಕು. ವಿವಿಧ ಇಲಾಖೆಗಳಲ್ಲಿನ ಪಾಲಿಸಿಗಳಲ್ಲಿ ಬದಲಾವಣೆ ತಂದುಕೊಳ್ಳಬೇಕು. ಇಲಾಖೆಗಳ ನಡುವಿನ ವ್ಯತ್ಯಸದಲ್ಲಿ ಹೂಡಿಕೆದಾರನನ್ನು ಬಲಹೀನಗೊಳಿಸುವ ಕೆಲಸ ಆಗಬಾರದು. ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಹೂಡಿಕೆದಾರರಿಗೆ ಅವಕಾಶ ಕಲ್ಪಿಸಬೇಕು ಅಂತ ಶಿಲ್ಹಾಂಧರ ಎಕೋ ಟೂರಿಸಂ ವ್ಯವಸ್ಥಾಪಕ ನಿರ್ದೇಶಕ ಸಾ.ನಾ.ರಮೇಶ್ ತಿಳಿಸಿದ್ದಾರೆ.