Meaning and explanation of terms related to economics: ಬಜೆಟ್ ಮಂಡನೆಯಲ್ಲಿ ಬಳಸಲಾಗುವ ಜಿಡಿಪಿ, ವಿತ್ತೀಯ ಕೊರತೆ, ನೇರ ಮತ್ತು ಪರೋಕ್ಷ ತೆರಿಗೆಗಳಂತಹ ಹಲವಾರು ಆರ್ಥಿಕ ಪದಗಳನ್ನು ಈ ಲೇಖನವು ಸರಳವಾಗಿ ವಿವರಿಸುತ್ತದೆ.

ನವದೆಹಲಿ: ಬಜೆಟ್‌ ಮಂಡನೆ ವೇಳೆ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಪದಗಳನ್ನು ಬಳಸಲಾಗುತ್ತದೆ. ಅಂತಹ ಕೆಲ ಪದಗಳ ಸರಳಾರ್ಥ ಇಲ್ಲಿದೆ:

-ಜಿಡಿಪಿ(ಒಟ್ಟು ದೇಶೀಯ ಉತ್ಪನ್ನ): ಒಂದು ದೇಶದಲ್ಲಿ ನಿಗದಿತ ಅವಧಿಯಲ್ಲಿ ಉತ್ಪಾದಿಸಲಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ. ಆರ್ಥಿಕ ಸ್ಥಿತಿಗತಿ ಅಧ್ಯಯನ ಮತ್ತು ಹೋಲಿಕೆಗಿದು ಅವಶ್ಯಕ.

-ಫಿಸ್ಕಲ್‌ ಡೆಫಿಸಿಟ್‌(ವಿತ್ತೀಯ ಕೊರತೆ): ವಿತ್ತೀಯ ವರ್ಷದಲ್ಲಿ ಸರ್ಕಾರದ ಆದಾಯ(ಸಾಲ ಹೊರತುಪಡಿಸಿ) ಮತ್ತು ವೆಚ್ಚದ ಮೊತ್ತಗಳ ನಡುವಿನ ಅಂತರ. ಇದು ದೇಶದ ಆರ್ಥಿಕತೆಯ ಶೇ.4.5ರ ಒಳಗಿದ್ದರೆ ಉತ್ತಮ.

-ನೇರ ತೆರಿಗೆ: ತೆರಿಗೆ ವ್ಯಾಪ್ತಿಗೆ ಒಳಪಡುವ ವ್ಯಕ್ತಿಗಳ ಆದಾಯದ ಮೇಲೆ ವಿಧಿಸಲಾಗುವ ತೆರಿಗೆ. ನೇರವಾಗಿ ಸರ್ಕಾರಿ ಬೊಕ್ಕಸ ಸೇರುವ ಇದು, ಕೇಂದ್ರ ಸರ್ಕಾರದ ಆದಾಯದ ಪ್ರಮುಖ ಮೂಲ.

-ಪರೋಕ್ಷ ತೆರಿಗೆ: ಇದರ ಪಾವತಿಯಿಂದ ಯಾರೂ ಹೊರತಲ್ಲ. ಕಾರಣ, ನಾವು ಕೊಳ್ಳುವ ಪ್ರತಿಯೊಂದು ವಸ್ತುವಿನ ಮೇಲೆಯೂ ಜಿಎಸ್‌ಟಿ ರೂಪದಲ್ಲಿ ಪರೋಕ್ಷ ತೆರಿಗೆಯನ್ನು ವಿಧಿಸಲಾಗಿರುತ್ತದೆ.

-ಕಸ್ಟಮ್‌ ಸುಂಕ: ಅಂತಾರಾಷ್ಟ್ರೀಯ ಗಡಿ ದಾಟುವ(ರಫ್ತು/ಆಮದು) ಎಲ್ಲಾ ಸರಕುಗಳ ಮೇಲೆ ವಿಧಿಸಲಾಗುವ ತೆರಿಗೆ. ಇದನ್ನು ರಫ್ತು ಉತ್ತೇಜನ ಮತ್ತು ದೇಶೀಯ ಕೈಗಾರಿಕೆಗಳನ್ನು ಕಾಪಾಡುವ ಅಸ್ತ್ರವಾಗಿ ಬಳಸಲಾಗುತ್ತದೆ.

-ರೆವೆನ್ಯೂ ರೆಸೀಟ್‌: ತೆರಿಗೆ ಮತ್ತು ತೆರಿಗೆಯೇತರ ಆದಾಯಗಳನ್ನು ಒಳಗೊಂಡಂತೆ ಸರ್ಕಾರಕ್ಕೆ ನಿರಂತರ ಸಂದಾಯವಾಗುವ ಆದಾಯ. ಇದನ್ನು ಸರ್ಕಾರ ಮರುಪಾವತಿ ಮಾಡಬೇಕಿಲ್ಲ.

-ಕ್ಯಾಪಿಟಲ್‌ ರೆಸೀಟ್‌: ಇದು ಸರ್ಕಾರ ಸಾಲವಾಗಿ ಪಡೆಯುವ ಹಣ, ಕೊಟ್ಟ ಸಾಲದ ಹಿಂಪಡೆಯುವಿಕೆ, ಆಸ್ತಿ ಮಾರಿದಾಗ ಪಾವತಿಯಾಗುವ ಹಣವಾಗಿದೆ.

-ಹಣದುಬ್ಬರ: ಸರಕು ಮತ್ತು ಸೇವೆಗಳ ಸಾಮಾನ್ಯ ಬೆಲೆಗಳಲ್ಲಿ ಏರಿಕೆ. ಪರಿಣಾಮವಾಗಿ ಕೊಳ್ಳುವ ಶಕ್ತಿ ಕಡಿಮೆಯಾಗಿ, ಖರೀದಿ ಕ್ರಮೇಣ ಕಡಿಮೆ ಆಗುತ್ತದೆ.

ಇದನ್ನೂ ಓದಿ: Union Budget: ಇಂದು ಕೇಂದ್ರ ಸರ್ಕಾರದಿಂದ ಬಜೆಟ್ ಮಂಡನೆ; ವಾರ್ಷಿಕ ಆಯವ್ಯಯದ ಕುತೂಹಲಕಾರಿ ಮಾಹಿತಿ

-ಫಿಸ್ಕಲ್‌ ನೀತಿ: ಸರ್ಕಾರ ತನ್ನ ವೆಚ್ಚ ಮತ್ತು ತೆರಿಗೆಯಲ್ಲಿ ಬದಲಾವಣೆ ಮಾಡುವ ಮೂಲಕ ಆರ್ಥಿಕತೆಯ ಮೇಲೆ ಪ್ರಭಾವ ಬೀರಿ, ಅದು ಸ್ಥಿರವಾಗಿದ್ದು ಉತ್ತಮ ಬೆಳವಣಿಗೆ ಕಾಣುವಂತೆ ನೋಡಿಕೊಳ್ಳುವ ವ್ಯವಸ್ಥೆ.

-ಮಾನಿಟರಿ ನೀತಿ: ಬೆಲೆ ಸ್ಥಿರತೆ, ಹಣದುಬ್ಬರ ನಿಯಂತ್ರಣ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗಾಗಿ ಕೇಂದ್ರ ಬ್ಯಾಂಕ್ (ಆರ್‌ಬಿಐ) ಹಣ ಪೂರೈಕೆ, ಬಡ್ಡಿದರ ಮತ್ತು ಸಾಲ ಲಭ್ಯತೆಯನ್ನು ನಿಯಂತ್ರಿಸುವ ವ್ಯವಸ್ಥೆ.

-ಆರ್ಥಿಕ ಸಮೀಕ್ಷೆ: ದೇಶದ ಆರ್ಥಿಕತೆಯ ಕಾರ್ಯಕ್ಷಮತೆಯನ್ನು ಪರಿಶೀಲಿಸುವ ಕೇಂದ್ರ ಸರ್ಕಾರದ ವಾರ್ಷಿಕ ವರದಿ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ವಿಭಾಗ ಇದನ್ನು ಬಜೆಟ್‌ಗೂ ಮುನ್ನ ಮಂಡಿಸುತ್ತದೆ.

ಇದನ್ನೂ ಓದಿ: ಬಜೆಟ್‌ಗೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ! LPG ಸಿಲಿಂಡರ್ ದರದಲ್ಲಿ ಹೆಚ್ಚಳ