ನವದೆಹಲಿ(ಜ.10): ಲೋಕಸಭೆ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿ ಇರುವಾಗಲೇ, ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಮಧ್ಯಂತರ ಬಜೆಟ್ ಮೇಲೆಯೇ ಎಲ್ಲರ ದೃಷ್ಟಿ ನೆಟ್ಟಿದೆ.

ಮಧ್ಯಮ ವರ್ಗದ ವೇತನದಾರ ಮತದಾರರನ್ನು ಸೆಳೆಯಲು ಮೋದಿ ನೇತೃತ್ವದ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ವಿನಾಯ್ತಿ ನೀಡುವ ಸಾಧ್ಯತೆಯಿದೆ.

ಸಾಮಾನ್ಯವಾಗಿ ಚುನಾವಣೆ ಹೊಸ್ತಿಲಿನಲ್ಲಿರುವಾಗ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುತ್ತದೆಂದು ಸರ್ಕಾರಗಳು ಮಧ್ಯಂತರ ಬಜೆಟ್ ನಲ್ಲಿ ತೆರಿಗೆ ವಿನಾಯ್ತಿ ಘೋಷಿಸುವುದಿಲ್ಲ. ಆದರೆ ಅರುಣ್ ಜೇಟ್ಲಿಯವರು ಮಂಡಿಸುತ್ತಿರುವ ಫೆಬ್ರವರಿ 1ರ ಮಧ್ಯಂತರ ಬಜೆಟ್ ನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದಿಲ್ಲ.

ಹೀಗಾಗಿ ಮತದಾರರನ್ನು ಗಮನದಲ್ಲಿಟ್ಟುಕೊಂಡು, ವೇತನ ವರ್ಗದವರಿಗೆ ಹೆಚ್ಚಿನ ಆದಾಯ ತೆರಿಗೆ ವಿನಾಯ್ತಿಯನ್ನು ಘೋಷಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ವೋಟ್ ಆನ್ ಅಕೌಂಟ್ ಗೆ ಅನುಮತಿ ಕೇಳುವ ಸಾಧ್ಯತೆಯಿದೆ. ಪೂರ್ಣ ಪ್ರಮಾಣದ ಬಜೆಟ್ ಗೆ ಬದಲಾಗಿ ಸರ್ಕಾರದ ನೀತಿಗಳು, ಯೋಜನೆಗಳು ಮತ್ತು ತೆರಿಗೆಗಳಿಗೆ ಹಣ ಖರ್ಚು ಮಾಡಲು ಪಡೆಯುವ ಮಧ್ಯಂತರ ಅನುಮತಿ ಇದಾಗಿದೆ. ಇದು ಕೇವಲ 2 ತಿಂಗಳ ಮೌಲ್ಯವನ್ನು ಹೊಂದಿರುತ್ತದೆ.

ಬಜೆಟ್ ಗೆ ಮುನ್ನ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿರುವ ಕೈಗಾರಿಕಾ ಮಂಡಳಿ, 5 ಲಕ್ಷದವರೆಗೆ, 80ಸಿಯಡಿ ಕಡಿತ ಮಿತಿಯನ್ನು ಹೆಚ್ಚಿಸಿ 2.5 ಲಕ್ಷದವರೆಗೆ ಆದಾಯ ತೆರಿಗೆ ವಿನಾಯ್ತಿಯನ್ನು ನೀಡಿ ಉಳಿತಾಯವನ್ನು ಹೆಚ್ಚಿಸಬೇಕೆಂದು ಕೋರಿದೆ.

ಮಧ್ಯಂತರ ಬಜೆಟ್ ನ ಅವಧಿ ಕೇವಲ 4 ತಿಂಗಳು ಇರುವುದರಿಂದ ನೂತನ ಸರ್ಕಾರ ಜುಲೈಯಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ. ಸರ್ಕಾರದ ಆರ್ಥಿಕ ಸಮೀಕ್ಷೆ ಕೂಡ ಅಂದೇ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.