ಚೀನಾ ವಸ್ತು ನಿಷೇಧಕ್ಕೆ ಬಜಾಜ್ ಸೇರಿ ಕೆಲ ಕಂಪನಿಗಳ ಆಕ್ಷೇಪ!
ಚೀನಾ ವಸ್ತು ನಿಷೇಧಕ್ಕೆ ಬಜಾಜ್ ಸೇರಿ ಕೆಲ ಕಂಪನಿಗಳ ಆಕ್ಷೇಪ!| ಬಹುತೇಕ ಕಚ್ಚಾವಸ್ತುಗಳಿಗೆ ಚೀನಾ ಮೇಲೇ ಅವಲಂಬನೆ| ಆಮದಿಗೆ ನಿಷೇಧದಿಂದ ಉತ್ಪಾದಿತ ವಸ್ತುಗಳ ದರ ಹೆಚ್ಚಳ
ನವದೆಹಲಿ(ಜೂ.16): ಗಡಿಯಲ್ಲಿ ಕ್ಯಾತೆ ಹಿನ್ನೆಲೆಯಲ್ಲಿ ಚೀನಾ ವಸ್ತುಗಳ ಆಮದು ನಿಷೇಧಕ್ಕೆ ದೇಶಾದ್ಯಂತ ಭಾರೀ ಕೂಗು ವ್ಯಕ್ತವಾಗಿರುವಾಗಲೇ, ಇಂಥದ್ದೊಂದು ಆಂದೋಲನಕ್ಕೆ ದೇಶದ ಪ್ರಮುಖ ವಾಹನ ಉತ್ಪಾದನಾ ಕಂಪನಿ ಬಜಾಜ್ ಸೇರಿದಂತೆ ಕೆಲ ಆಟೋಮೊಬೈಲ್ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ನಮ್ಮ ಉತ್ಪನ್ನಗಳಿಗೆ ಅಗತ್ಯವಾದ ಹಲವು ವಸ್ತುಗಳಿಗೆ ಚೀನಾವನ್ನೇ ಅವಲಂಬಿಸಿರುವಾಗ, ಇಂಥ ನಿಷೇಧ ಕಾರ್ಯಸಾಧುವಾಗದು ಎಂದು ಉಭಯ ಕಂಪನಿಗಳು ಹೇಳಿವೆ.
ನಮ್ಮ ಉತ್ಪನ್ನ ಬಹಿಷ್ಕಾರ ಭಾರತೀಯರಿಗೆ ಅಸಾಧ್ಯ: ಚೀನಾ ಕುಹಕ!
ಈ ಬಗ್ಗೆ ಪ್ರತಿಕ್ರಿಯಿಸಿರುವ ದೇಶೀಯ ದ್ವಿಚಕ್ರ ಉತ್ಪಾದಕ ಸಂಸ್ಥೆ ಬಜಾಜ್, ‘ಕೈಗೆಟುಕುವ ದರದಲ್ಲಿ ಬೈಕ್ ಪೂರೈಸುವ ನಿಟ್ಟಿನಲ್ಲಿ ವೀಲ್‌್ಹ ಸೇರಿದಂತೆ ಇನ್ನಿತರ ಬೈಕ್ ಉತ್ಪಾದನೆ ಕಚ್ಚಾ ವಸ್ತುಗಳಿಗಾಗಿ ಚೀನಾ ಮೇಲೆಯೇ ಅವಲಂಬಿತರಾಗಿದ್ದೇವೆ. ಚೀನಾದ ವಸ್ತುಗಳ ಮೇಲಿನ ಬಹಿಷ್ಕಾರದಿಂದ ಪೂರೈಕೆ ಸರಪಳಿ ಮೇಲೆ ಪರಿಣಾಮವಾಗಬಹುದು’ ಎಂದು ಹೇಳಿದೆ.
ಚೀನಾ ಟೀಕಿಸಿದ್ದಕ್ಕೆ ಅಮೂಲ್ ಟ್ವೀಟರ್ ಖಾತೆಯೇ ಬ್ಲಾಕ್!
ಇನ್ನೊಂದು ಪ್ರಮುಖ ಕಾರು ಉತ್ಪಾದನಾ ಕಂಪನಿ ಕೂಡಾ ವಾಹನಗಳ ಉತ್ಪಾದನೆಗೆ ಚೀನಾದ ವಸ್ತುಗಳು ಬೇಕೇ ಬೇಕು. ಇಂಥ ಸಂದರ್ಭದಲ್ಲಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಿದರೆ, ಭಾರತದ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿಕೊಂಡಿದೆ. ದೇಶದಲ್ಲೇ ವಾಣಿಜ್ಯ ವ್ಯಾಪಾರ ನಡೆಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವು ಉತ್ತಮವಾಗಿದೆ, ಆದರೆ ಇದಕ್ಕೆ ಅಗತ್ಯವಾದ ಬಂಡವಾಳ ಇನ್ನೂ ದೇಶಕ್ಕೆ ಹರಿದುಬಂದಿಲ್ಲ. ಜೊತೆಗೆ ಕಳೆದ 70 ವರ್ಷಗಳಲ್ಲಿ ಉತ್ಪಾದನಾ ವಲಯದಲ್ಲಿ ಹೆಚ್ಚಿನ ಎಫ್‌ಡಿಐ ಹೂಡಿಕೆಯನ್ನು ಆಕರ್ಷಿಸುವಲ್ಲಿ ಭಾರತ ಸಫಲವಾಗಿಲ್ಲ ಎಂದು ಹೇಳಿದೆ.