ಹಣ ಬಿತ್ತಿ, ಹಣ ಬೆಳೆದ ಷೇರು ಮಾರ್ಕೆಟ್ ರೈತರು.. 2023ರಲ್ಲಿ 82 ಲಕ್ಷ ಕೋಟಿ ಶ್ರೀಮಂತರಾದ ಹೂಡಿಕೆದಾರರು!
ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳವು ವರ್ಷದ ಆರಂಭದಲ್ಲಿ 282 ಲಕ್ಷ ಕೋಟಿ ಆಗಿದ್ದರೆ, ವರ್ಷದ ಕೊನೆಯ ಮಾರುಕಟ್ಟೆ ದಿನವಾದ ಡಿಸೆಂಬರ್ 29 ರಂದು ಇದು 364 ಲಕ್ಷ ಕೋಟಿ ರೂಪಾಯಿಗೆ ಏರಿದೆ.
ಮುಂಬೈ (ಡಿ.29): ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಅಂದರೆ ಎನ್‌ಎಸ್‌ಇಯ ಪ್ರಧಾನ ಸೂಚ್ಯಂಕ ನಿಫ್ಟಿ ಫಿಫ್ಟಿ 2023ರ ವರ್ಷವನ್ನು ಶೇ. 20ರಷ್ಟು ಲಾಭದೊಂದಿಗೆ ಮುಕ್ತಾಯ ಮಾಡಿದೆ. ಅದರೊಂದಿಗೆ ಸತತ 8ನೇ ವರ್ಷ ನಿಫ್ಟಿ ಪಾಸಿಟಿವ್ ರಿಟರ್ನ್ಸ್ ನೀಡಿದಂತಾಗಿದೆ. 2015ರಿಂದ ನಿಫ್ಟಿ 50 ಸೂಚ್ಯಂಕವು ವಾರ್ಷಿಕವಾಗಿ ಧನಾತ್ಮಕ ಫಲಿತಾಂಶವನ್ನು ನೀಡುತ್ತಿದೆ. ವಿಶೇಷವರೆಂದರೆ 2015 ಮಾತ್ರವೇ 2012ರಿಂದ ಮೊದಲ ಬಾರಿಗೆ ನಿಫ್ಟಿ ವಾರ್ಷಿಕವಾಗಿ ನೆಗೆಟಿವ್ ರಿಟರ್ನ್ಸ್ ನೀಡಿತ್ತು. ಈ ವರ್ಷದ ನಿಫ್ಟಿ ಹಾಗೂ ಸೆನ್ಸೆಕ್ಸ್ ಭರ್ಜರಿ ಪ್ರದರ್ಶನದಿಂದ 2023ರ ವರ್ಷವೊಂದರಲ್ಲೇ ಹೂಡಿಕೆದಾರರು 82 ಲಕ್ಷ ಕೋಟಿ ರೂಪಾಯಿ ಶ್ರೀಮಂತರಾಗಿದ್ದಾರೆ. ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳವು ವರ್ಷದ ಕೊನೆಯಲ್ಲಿ ₹364 ಲಕ್ಷ ಕೋಟಿಗಳಿಗೆ ಏರಿದೆ. ಈ ವರ್ಷದ ಆರಂಭದಲ್ಲಿ ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳವು 282 ಲಕ್ಷ ಕೋಟಿ ರೂಪಾಯಿ ಆಗಿತ್ತು. ಇದನ್ನೇ ಲೆಕ್ಕಾಚಾರ ಹಾಕುವುದಾದರೆ, ಹೂಡಿಕೆದಾರರು 82 ಲಕ್ಷ ಕೋಟಿ ಶ್ರೀಮಂತರಾಗಿದ್ದಾರೆ. ಇನ್ನು ಡಿಸೆಂಬರ್ ತಿಂಗಳೊಂದರಲ್ಲಿಯೇ ಮಾರುಕಟ್ಟೆ ಬಂಡವಾಳೀಕರಣವು ಸರಿಸುಮಾರು 30 ಲಕ್ಷ ಕೋಟಿಯಷ್ಟು ಏರಿಕೆಯಾಗಿದೆ.
ಇನ್ನು ಸೂಚ್ಯಂಕದಲ್ಲಿ ಗರಿಷ್ಠ ಲಾಭ ಪಡೆದ ಕಂಪನಿಗಳನ್ನು ಲೆಕ್ಕ ಹಾಕುವುದಾದರೆ, ಟಾಟಾ ಮೋಟಾರ್ಸ್ ಟಾಪ್ ಸ್ಥಾನ ಪಡೆದುಕೊಂಡಿದೆ. ಈ ವರ್ಷದ ವಹಿವಾಟಿನ ಅಂತಿಮ ದಿನ, ಈ ವರ್ಷ ದುಪ್ಪಟ್ಟು ರಿಟರ್ನ್ಸ್ ನೀಡಿದ ನಿಫ್ಟಿ 50ಯ ಏಕೈಕ ಕಂಪನಿ ಎನಿಸಿದೆ ಅದರೊಂದಿಗೆ ಬಜಾಜ್ ಆಟೋ, ಎನ್‌ಟಿಪಿಸಿ, ಎಲ್ & ಟಿ ಮತ್ತು ಕೋಲ್ ಇಂಡಿಯಾ ಕಂಪನಿಗಳು ಕೂಡ ಭರ್ಜರಿ ವಹಿವಾಟು ನಡೆಸಿದೆ. ಎನ್‌ಟಿಪಿಸಿ ಹಾಗೂ ಕೋಲ್ ಇಂಡಿಯಾ ಎರಡೂ ಕೂಡ ಪಿಎಸ್‌ಯು (ಪಬ್ಲಿಕ್ ಸೆಕ್ಟರ್ ಯುನಿಟ್) ಆಧಾರಿತ ಸೂಚ್ಯಂಕದಲ್ಲೂ ಸ್ಥಾನ ಪಡೆದಿದ್ದು, ಈವರೆಗಿನ ದಾಖಲೆಯ ತಮ್ಮ ಶ್ರೇಷ್ಠ ವರ್ಷಗಳನ್ನು ಕಂಡಿವೆ.
2023ರ ನಿಫ್ಟಿಯ ಗರಿಷ್ಠ ಲಾಭದಾಯಕ ಕಂಪನಿಗಳು
ಷೇರು | ರಿಟರ್ನ್ಸ್ | ಇದಕ್ಕಿಂತ ಉತ್ತಮ ವರ್ಷ |
ಟಾಟಾ ಮೋಟಾರ್ಸ್ | ಶೇ.101 | 2021 |
ಬಜಾಜ್ ಆಟೋ | ಶೇ. 89 | 2009 |
ಎನ್‌ಟಿಪಿಸಿ | ಶೇ.87 | ಇದೇ ದಾಖಲೆ |
ಎಲ್ & ಟಿ | ಶೇ. 69 | 2009 |
ಕೋಲ್ ಇಂಡಿಯಾ | ಶೇ. 67 | ಇದೇ ದಾಖಲೆ |
ಇನ್ನು ನಿಫ್ಟಿ 50ಯಲ್ಲಿ ಇರುವ 50 ಕಂಪನಿಗಳ ಪೈಕಿ 48 ಕಂಪನಿಗಳು ಲಾಭದಲ್ಲಿ ಮುಕ್ತಾಯ ಕಂಡಿದ್ದರೆ, ಕೇವಲ ಎರಡು ಷೇರುಗಳಾದ ಯುಪಿಎಲ್ (ಶೇ. 18ರಷ್ಟು ಕುಸಿತ) ಹಾಗೂ ಅದಾನಿ ಎಂಟರ್‌ಪ್ರೈಸಸ್ (ಶೇ. 26ರಷ್ಟು ಕುಸಿತ) ಮಾತ್ರ ನೆಗೆಟಿವ್ ರಿಟರ್ನ್ಸ್ ಕಂಡಿದೆ. ಹಿಂಡನ್‌ಬರ್ಗ್ ವರದಿಯ ಪರಿಣಾಮ ಅದಾನಿ ಎಂಟರ್‌ಪ್ರೈಸಸ್‌ನ ಪ್ರಮುಖ ಷೇರಿನ ಮೇಲೆ ಪರಿಣಾಮ ಬೀರಿದ್ದನ್ನು ಇದು ತೋರಿಸಿದೆ.
ನಿಫ್ಟಿ 50 ಸೂಚ್ಯಂಕ ಶೇ. 20ರಷ್ಟು ಲಾಭ ಕಂಡದ್ದರೆ, ಉಳಿದ ಸೂಚ್ಯಂಕಗಳು ಇದಕ್ಕಿಂತ ದೊಡ್ಡ ಮಟ್ಟದಲ್ಲಿ ಲಾಭ ಕಂಡಿದೆ. ನಿಫ್ಟಿ ಮಿಡ್‌ಕ್ಯಾಪ್ 2023ರಲ್ಲಿ ಶೇ. 46.5ರಷ್ಟು ಏರಿಕೆ ಕಂಡಿದ್ದು, 2017ರ ನಂತರ ಇದರ ಶ್ರೇಷ್ಠ ವರ್ಷ ಎನಿಸಿದೆ. ಇನ್ನು ನಿಫ್ಟಿ ಸ್ಮಾಲ್‌ಕ್ಯಾಪ್ ಶೇ. 55ರಷ್ಟು ಏರಿಕೆ ಕಾಣುವ ಮೂಲಕ 2017ರ ಬಳಿಕ ತನ್ನ ಉತ್ತಮ ವರ್ಷವನ್ನು ಕಂಡಿದೆ. ಮಿಡ್‌ಕ್ಯಾಪ್‌ನಲ್ಲಿ ಶೇ. 93 ಕಂಪನಿಗಳು ಹಾಗೂ ಸ್ಮಾಲ್‌ಕ್ಯಾಪ್‌ನಲ್ಲಿ 86 ಕಂಪನಿಗಳು ಈ ವರ್ಷ ಲಾಭದೊಂದಿಗೆ ಮುಕ್ತಾಯ ಮಾಡಿವೆ.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಳ ಘೋಷಣೆ ಸಾಧ್ಯತೆ!
ಎಫ್‌ಐಐ ಅಂದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು 14 653 ಕೋಟಿ ಹಣವನ್ನು ವಾಪಾಸ್ ತೆಗೆದುಕೊಂಡರಾದರೂ, ದೇಶೀಯ ಹೂಡಿಕೆದಾರರು ಇದರ ಪರಿಣಾಮ ಬೀರದಂತೆ ನೋಡಿಕೊಂಡರು. ಈ ವರ್ಷ ದೇಶೀಯ ಹೂಡಿಕೆದಾರರು ಸ್ಟಾಕ್ ಮಾರ್ಕೆಟ್‌ಗೆ 1.7 ಲಕ್ಷ ಕೋಟಿ ಹಣವನ್ನು ಹೂಡಿಕೆ ಮಾಡಿದ್ದಾರೆ.
ಬರೀ 9 ತಿಂಗಳಲ್ಲೇ 5 ಕೋಟಿಯ ಹೂಡಿಕೆಗೆ 27 ಕೋಟಿ ರಿಟರ್ನ್ಸ್ ಪಡೆದ ಸಚಿನ್ ತೆಂಡುಲ್ಕರ್!
ಯಾವ ಅನುಮಾನವೂ ಇಲ್ಲದೆ, ಈ ವರ್ಷದ ಪಿಎಸ್‌ಯು ಸ್ಟಾಕ್‌ಗಳ ವರ್ಷ ಎನ್ನಬಹುದು. ಸರ್ಕಾರಿ ಒಡೆತನದ ಕಂಪನಿಗಳು ಈ ಬಾರಿ ಶೇ. 81ರಷ್ಟು ಏರಿಕೆ ಕಂಡಿದ್ದು, 2007ರ ನಂತರ ಪಿಎಸ್‌ಯು ಸೆಕ್ಟರ್ ಷೇರುಗಳ ಶ್ರೇಷ್ಠ ವರ್ಷ ಎನ್ನಬಹುದಾಗಿದೆ. ಪಿಎಸ್‌ಯು ಕಂಪನಿಗಳ ಸೂಚ್ಯಂಕದಲ್ಲಿರುವ ಎಲ್ಲಾ 20 ಷೇರುಗಳು ಪಾಸಿಟಿವ್ ರಿಟರ್ನ್ಸ್ ನೀಡಿದ್ದರೆ, ನಾಲ್ಕು ಷೇರುಗಳು ಶೇ. 100ಕ್ಕಿಂತ ಅಧಿಕ ಲಾಭ ಕಂಡಿದೆ. 2009ರಲ್ಲಿ ಆರು ಪಿಎಸ್‌ಯು ಷೇರುಗಳು ಒಂದೇ ವರ್ಷದಲ್ಲಿ ಡಬಲ್ ಆಗಿದ್ದವು. ಆ ಲೆಕ್ಕಾಚಾರದಲ್ಲಿ ಇದು 2ನೇ ಅತ್ಯುತ್ತಮ ವರ್ಷ. ಹಿಂದೂಸ್ತಾನ್ ಏರೋನಾಟಿಕ್ಸ್‌ಗೆ, ಕ್ಯಾಲೆಂಡರ್ ವರ್ಷದಲ್ಲಿ ಷೇರುಗಳು 100% ಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿದ ಸತತ ಎರಡನೇ ವರ್ಷವಾಗಿದೆ.
2023ರ ಅತ್ಯುತ್ತಮ ಪಿಎಸ್‌ಯು ಷೇರುಗಳು
ಷೇರು | ರಿಟರ್ನ್ಸ್ | ಇದಕ್ಕಿಂತ ಉತ್ತಮ ವರ್ಷ |
ಆರ್‌ಇಸಿ | ಶೇ.254 | ಇದೇ ದಾಖಲೆ |
ಪಿಎಫ್‌ಸಿ | ಶೇ.238 | ಇದೇ ದಾಖಲೆ |
ಬಿಎಚ್‌ಇಎಲ್ | ಶೇ.144 | 2003 |
ಎಚ್‌ಎಎಲ್ | ಶೇ.121 | ಇದೇ ದಾಖಲೆ |
ಎನ್‌ಟಿಪಿಸಿ | ಶೇ. 87 | ಇದೇ ದಾಖಲೆ |
2024ರ ಮೊದಲ ತಿಂಗಳು ಹೇಗಿರಲಿದೆ: ಹಾಗಂತ ಷೇರು ಮಾರುಕಟ್ಟೆ ವಿಚಾರವಾಗಿ ಖುಷಿ ಪಡಬೇಕಾ? ಹಾಗೇನಿಲ್ಲ ಎನ್ನುತ್ತಾರೆ ವಿಶ್ಲೇಷಕರು. ಕಳೆದ 10 ವರ್ಷಗಳ ಜನವರಿ ತಿಂಗಳ ಪೈಕಿ, 7 ಜನವರಿ ತಿಂಗಳಲ್ಲಿ ನಿಫ್ಟಿ ನೆಗೆಟಿವ್ ರಿಟರ್ನ್ಸ್ ನೀಡಿದೆ. ಇನ್ನು ಕಳೆದ 10 ವರ್ಷಗಳ ಫೆಬ್ರವರಿ ತಿಂಗಳ ಪೈಕಿ 6 ಫೆಬ್ರವರಿ ತಿಂಗಳುಗಳು ನೆಗೆಟಿವ್ ರಿಟರ್ನ್ಸ್ ನೀಡಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.