ಮುಂಬೈ[ಮಾ.12]: ಬೇಸಿಗೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಎರಡನೇ ಬಾರಿ ಅಧಿಕಾರಕ್ಕೆ ಬರಬಹುದು ಎಂದು ಚುನಾವಣಾಪೂರ್ವ ಸಮೀಕ್ಷೆಗಳು ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಬಾಂಬೆ ಷೇರುಪೇಟೆ ‘ಸೆನ್ಸೆಕ್ಸ್‌’ ಸೋಮವಾರ 383 ಅಂಕಗಳಿಗೆ ಏರಿಕೆಯಾಗಿದೆ. ಈ ಮೂಲಕ 6 ತಿಂಗಳ ಗರಿಷ್ಠ ಅಂಕವನ್ನು ಸೆನ್ಸೆಕ್ಸ್‌ ದಾಖಲಿಸಿದೆ.

ಸೋಮವಾರ 382.67 ಅಂಕ ಏರಿ ಸೆನ್ಸೆಕ್ಸ್‌ ದಿನದಂತ್ಯಕ್ಕೆ 37,054.10ಕ್ಕೆ ವಹಿವಾಟು ಮುಗಿಸಿತು. ಇದರೊಂದಿಗೆ ಶೇ.1.04ರಷ್ಟುಪೇಟೆ ಚೇತರಿಸಿತು. 2018ರ ಸೆ.19ರಂದು ಸೆನ್ಸೆಕ್ಸ್‌ 37,121.22 ಅಂಕಗಳಿಗೆ ಏರಿತ್ತು. ಇದಾದ ನಂತರ ಇಷ್ಟೊಂದು ಏರಿಕೆ ದಾಖಲಿಸಿದ್ದು ಇದೇ ಮೊದಲು.

ಇನ್ನು ರಾಷ್ಟ್ರೀಯ ಷೇರುಪೇಟೆ ನಿಫ್ಟಿಕೂಡ 6 ತಿಂಗಳ ದಾಖಲೆ ಬರೆಯಿತು. ಸೋಮವಾರ ನಿಫ್ಟಿ132.61 ಅಂಕ (ಶೇ.1.20) ಏರಿ 11,172.40 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು. ‘ಮತದಾರರು ಪುನಃ ಎನ್‌ಡಿಎ ಪರ ವಾಲಬಹುದು ಎಂಬುದು ಸೆನ್ಸೆಕ್ಸ್‌ ಏರಲು ಕಾರಣ’ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.