ಮುಂಬೈ(ಫೆ.05): ಗಗನ ತಲುಪಿದ್ದ ಈರುಳ್ಳಿ ಬೆಲೆ ಇದೀಗ ಇಳಿಕೆಯತ್ತ ಮುಖ ಮಾಡಿದ್ದು, ಮಹಾರಾಷ್ಟ್ರದಲ್ಲಿ ಒಂದು ಕೆಜಿಗೆ 150 ರೂ. ಇದ್ದ ಈರುಳ್ಳಿ ಬೆಲೆ ಇದೀಗ ಕೇವಲ 15 ರೂ.ಗೆ ಬಂದು ತಲುಪಿದೆ.

ಈ ಹಿನ್ನೆಲೆಯಲ್ಲಿ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿರುವ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಬೆಲೆ ನಿಯಂತ್ರಣ ಹಾಗೂ ದೇಶೀಯ ಬೇಡಿಕೆ ಪೂರೈಕೆಗಾಗಿ ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿತ್ತು. ಇದೀಗ ಬೆಲೆಗಳು ಇಳಿಕೆ ಕಂಡಿದ್ದು, ರೈತರ ಅನುಕೂಲಕ್ಕಾಗಿ ರಫ್ತಿನ ಮೇಲಿನ ನಿಷೇಧವನ್ನು ಹಿಂಪಡೆಯಬೇಕೆಂದು ಮಹಾರಾಷ್ಟ್ರ ಸರ್ಕಾರ ಆಗ್ರಹಿಸಿದೆ.

ಈಗ ಈರುಳ್ಳಿ ಕೇಳೋರಿಲ್ಲ : KGಗೆ ಬರೇ 22 ರುಪಾಯಿ

ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಕೃಷಿ ಮಾರುಕಟ್ಟೆ ಮಂಡಳಿ ಡೈರೆಕ್ಟರ್ ಸುನೀಲ್ ಪವಾರ್, ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಈರುಳ್ಳಿಯ ಹೊಸ ಫಸಲಿನ ಶೇಖರಣೆಯಾಗಿದ್ದು, ಇದರಿಂದ ಈರುಳ್ಳಿ ಬೆಲೆ ಕುಸಿಯಲಾರಂಭಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಕೆಜಿಗೆ 150 ರೂ. ಇದ್ದ ಈರುಳ್ಳಿ ಬೆಲೆ ಈಗ 15 ರೂ.ಗೆ ಬಂದು ತಲುಪಿದ್ದು, ರೈತರ ನೆರವಿಗೆ ಧಾವಿಸಲು ಕೂಡಲೇ ಈರುಳ್ಳಿ ರಫ್ತಿನ ಮೇಲಿರುವ ನಿಷೇಧವನ್ನು ಹಿಂಪಡೆಯಬೇಕೆಂದು ಸುನೀಲ್ ಪವಾರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬೆಲೆ ಏರಿಕೆಗೆ ಬ್ರೇಕ್‌; ಈರುಳ್ಳಿ ರಫ್ತಿಗೆ ಕೇಂದ್ರದ ನಿಷೇಧ

ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಮಹಾರಾಷ್ಟ್ರ ಕೃಷಿ ಮಾರುಕಟ್ಟೆ ಮಂಡಳಿ, ಉತ್ತರಕ್ಕಾಗಿ ಎದುರು ನೋಡುತ್ತಿರುವುದಾಗಿ ಸ್ಪಷ್ಟಪಡಿಸಿದೆ.