ನವದೆಹಲಿ [ಜ.31]: ದೇಶಾದ್ಯಂತ ಉದ್ಭವವಾಗಿದ್ದ ಈರುಳ್ಳಿ ಬಿಕ್ಕಟ್ಟು ನಿವಾರಣೆಗಾಗಿ ಟರ್ಕಿ, ಆಷ್ಘಾನಿಸ್ತಾನದಂತಹ ದೇಶಗಳಿಂದ ಕೇಂದ್ರ ಸರ್ಕಾರ ಆಮದು ಮಾಡಿಕೊಂಡಿದ್ದ ಅಪಾರ ಈರುಳ್ಳಿ ಈಗ ಬಂದರಿನಲ್ಲೇ ಕೊಳೆಯುವ ಭೀತಿ ಎದುರಿಸುತ್ತಿದೆ. ಹೀಗಾಗಿ, ಈರುಳ್ಳಿ ದಾಸ್ತಾನನ್ನು ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿರುವ ಕೇಂದ್ರ ಸರ್ಕಾರ, ಶೀಘ್ರವೇ ಪ್ರತೀ ಕೇಜಿಗೆ 22-23 ರು. ದರದಲ್ಲಿ ಅಂದರೆ ಶೇ.60ರಷ್ಟುರಿಯಾಯಿತಿ ಬೆಲೆಗೆ ವಿದೇಶಿ ಈರುಳ್ಳಿಯನ್ನು ಮಾರಾಟ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಕೇಜಿಗೆ 58 ರು.ನಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸದ್ಯ ಈರುಳ್ಳಿ ಪೂರೈಸುತ್ತಿದೆ. ಆದರೆ ಸ್ಥಳೀಯ ಈರುಳ್ಳಿ ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಪ್ರವೇಶಿಸಿದ್ದರಿಂದಾಗಿ ಯಾವುದೇ ರಾಜ್ಯ ಸರ್ಕಾರಗಳು ವಿದೇಶದ ಈರುಳ್ಳಿ ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಹಾಗೆಂದು, ಮಹಾರಾಷ್ಟ್ರದ ಬಂದರು ಸೇರಿ ಇನ್ನಿತರ ಕಡೆಗಳಲ್ಲಿ ದಾಸ್ತಾನು ಆಗಿರುವ ವಿದೇಶದ ಈರುಳ್ಳಿಯನ್ನು ಇಟ್ಟುಕೊಳ್ಳುವಂತೆಯೂ ಇಲ್ಲ. ಹೀಗಾಗಿ, ಈರುಳ್ಳಿಯನ್ನು 22 ರು.ನಿಂದ 23 ರು. ದರದಲ್ಲಿ ಮಾರಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿವಿಧ ರಾಜ್ಯಗಳ ಕೋರಿಕೆ ಮೇರೆಗೆ ವಿದೇಶದಿಂದ 40 ಸಾವಿರ ಟನ್‌ ಈರುಳ್ಳಿ ಖರೀದಿಸಲು ಭಾರತ ನಿರ್ಧರಿಸಿತ್ತು. ಆ ಪೈಕಿ 14 ಸಾವಿರ ಟನ್‌ ಈರುಳ್ಳಿ ಈಗಾಗಲೇ ಬಂದಿದೆ. ಅದೇ ವಿಲೇವಾರಿಯಾಗುತ್ತಿಲ್ಲ ಎಂದು ಮೂಲಗಳು ಹೇಳಿವೆ.

 

2019ರ ನವೆಂಬರ್‌ ವೇಳೆಗೆ ಈರುಳ್ಳಿಯ ಮುಂಗಾರು ಬೆಳೆ ಮಾರುಕಟ್ಟೆಪ್ರವೇಶಿಸದ ಕಾರಣ, ದೇಶಾದ್ಯಂತ ಈರುಳ್ಳಿ ದರ ಗಗನಕ್ಕೇರಿತ್ತು. ಈ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಈಜಿಪ್ಟ್‌ ಸೇರಿ ಇನ್ನಿತರ ವಿದೇಶಗಳಿಂದ ಈರುಳ್ಳಿಯನ್ನು ಆಮದು ಮಾಡಿಕೊಂಡಿತ್ತು. ಈ ಕಾರಣದಿಂದಾಗಿ ಸುಮಾರು 200 ರು.ವರೆಗೂ ಏರಿಕೆಯಾಗಿದ್ದ ಈರುಳ್ಳಿ 60 ರು.ಗೆ ಇಳಿಕೆಯಾಗಲು ಇದು ಕಾರಣವಾಗಿತ್ತು. ಅಲ್ಲದೆ, ಸಾರ್ವಜನಿಕ ಸಂಸ್ಥೆಯಾದ ಎಂಎಂಟಿಸಿ 40 ಸಾವಿರ ಟನ್‌ ಈರುಳ್ಳಿಗೆ ಬೇಡಿಕೆಯಿಟ್ಟಿತ್ತು. ಆದರೆ, ಇದುವರೆಗೂ ಈ ಸಂಸ್ಥೆ 14 ಸಾವಿರ ಟನ್‌ ಮಾತ್ರವೇ ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ.