ವಾರಕ್ಕೆ 90 ಗಂಟೆ ಕೆಲಸ ಮಾಡಿ ಎನ್ನುವ L&T ಚೇರ್ಮನ್ ಸ್ಯಾಲರಿ ಸಾಮಾನ್ಯ ಉದ್ಯೋಗಿಗಿಂತ 530 ಪಟ್ಟು ಹೆಚ್ಚು!
ಎಲ್&ಟಿ ಅಧ್ಯಕ್ಷ ಎಸ್‌ಎನ್ ಸುಬ್ರಮಣ್ಯನ್ ಅವರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕೆಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಉದ್ಯೋಗಿಗಳ ಸಂಬಳದಲ್ಲಿ ಅಲ್ಪ ಏರಿಕೆಯೊಂದಿಗೆ ಅವರ 51.5 ಕೋಟಿ ರೂಪಾಯಿ ವೇತನ ಹೋಲಿಕೆ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು (ಜ.10): ವಾರದಲ್ಲಿ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಬೇಕು ಅನ್ನೋ ಚರ್ಚೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಮೊದಲು ನಾರಾಯಣ ಮೂರ್ತಿ ಅವರ ವಾರಕ್ಕೆ 70 ಗಂಟೆಗಳ ಕೆಲಸದ ಹೇಳಿಕೆ ಚರ್ಚೆಯಾಗಿದ್ದರೆ, ಈಗ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎನ್ನುವ ಎಲ್ & ಟಿ ಚೇರ್ಮನ್ ಎಸ್‌ಎನ್ ಸುಬ್ರಮಣ್ಯನ್ ಅವರ ಹೇಳಿಕೆ ದೇಶಾದ್ಯಂತ ಸದ್ದು ಮಾಡಿದೆ. 'ಭಾನುವಾರ ಕೂಡ ನಿಮ್ಮಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲವಲ್ಲ ಎನ್ನುವ ಬಗ್ಗೆ ನನಗೆ ವಿಷಾದವಿದೆ. ನಾನು ಭಾನುವಾರ ಕೆಲಸ ಮಾಡುತ್ತೇನೆ. ಹಾಗಾಗಿ ನನ್ನ ಉದ್ಯೋಗಿಗಳು ಭಾನುವಾರ ಕೆಲಸ ಮಾಡಿದರೆ ನನಗೆ ಖುಷಿ ಸಿಗುತ್ತದೆ. ಮನೆಯಲ್ಲಿ ಕುಳಿತುಕೊಂಡು ಏನು ಮಾಡುತ್ತೀರಿ. ಎಷ್ಟು ಹೊತ್ತು ಮನೆಯಲ್ಲಿ ಹೆಂಡತಿಯನ್ನು ನೋಡಿಕೊಂಡೇ ಇರಲು ಸಾಧ್ಯ? ನಿಮ್ಮ ಹೆಂಡತಿ ನಿಮ್ಮನ್ನು ಎಷ್ಟು ಹೊತ್ತು ದಿಟ್ಟಿಸಿ ನೋಡುತ್ತಲೇ ಇರಬಹುದು? ಇದರ ಬದಲು ಕಚೇರಿಗೆ ಹೋಗಿ ಕೆಲಸ ಮಾಡಬಹುದಲ್ಲ' ಎಂದು ಲಾರ್ಸೆನ್ & ಟೂಬ್ರೊ (ಎಲ್ & ಟಿ) ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಅವರು ಆಂತರಿಕ ಸಭೆಯಲ್ಲಿ ಉದ್ಯೋಗಿಗಳಿಗೆ ಹೇಳಿದ್ದಾರೆ.
ಇದರ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿರುವ ಎಲ್ & ಟಿ ಉದ್ಯೋಗಿಯೊಬ್ಬರು, ಅವರು ಸಭೆಯಲ್ಲಿ ತಮಾಷೆಯಾಗಿ ಈ ಮಾತನ್ನು ಹೇಳಿದ್ದಾರೆ. ಆದರೆ, ಎಲ್ & ಟಿ ಕಂಪನಿ ನೀಡಿದ ಅಧಿಕೃತ ಹೇಳಿಕೆಯಲ್ಲಿ ಇದನ್ನು ಸಮರ್ಥಿಸಿಕೊಂಡಿದ್ದು, ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಇದು ಅನಿವಾರ್ಯ ಎಂದಿದೆ.
ಇನ್ಫೋಸಿಸ್ ನಾರಾಯಣ ಮೂರ್ತಿ ಅವರಂತೆ ಸುಬ್ರಮಣ್ಯನ್ ಕೂಡ ಈಗ ಚರ್ಚೆಯ ವಿಚಾರವಾಗಿದ್ದಾರೆ. ಇದರ ನಡುವೆ ಅವರು ಕಂಪನಿಯಲ್ಲಿ ಪಡೆದುಕೊಳ್ಳುತ್ತಿರುವ ಸ್ಯಾಲರಿ ಬಗ್ಗೆಯೂ ಬಹಿರಂಗವಾಗಿದೆ. 10 ವರ್ಷದ ಹಿಂದೆ ಅವರು ಪಡೆದುಕೊಂಡಿದ್ದ ಸ್ಯಾಲರಿಗೂ ಈಗ ಪಡೆದುಕೊಳ್ಳುತ್ತಿರುವ ಸ್ಯಾಲರಿಗೂ ದೊಡ್ಡ ವ್ಯತ್ಯಾಸವಿದೆ. ಆದರೆ, 10 ವರ್ಷದ ಹಿಂದೆ ಕಂಪನಿ ಸಾಮಾನ್ಯ ಉದ್ಯೋಗಿ ಪಡೆದುಕೊಳ್ಳುತ್ತಿದ್ದ ಸ್ಯಾಲರಿಗೂ, ಈಗ ಪಡೆದುಕೊಳ್ಳುತ್ತಿರುವ ಸ್ಯಾಲರಿಗೂ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಇದೇ ವಿಚಾರ ಹಿಡಿದು ಸುಬ್ರಮಣ್ಯನ್ ಅವರನ್ನು ಟೀಕೆ ಮಾಡುತ್ತಿದ್ದಾರೆ.
2024ರ ಹಣಕಾಸು ವರ್ಷದಲ್ಲಿ ಎಲ್ & ಟಿ ಚೇರ್ಮನ್ ಬರೋಬ್ಬರಿ 51.5 ಕೋಟಿ ರೂಪಾಯಿ ತೆಗದುಕೊಂಡಿದ್ದಾರೆ. ಇದರಲ್ಲಿ 3.60 ಕೋಟಿ ರೂಪಾಯಿ ಅವರ ವೇತನವಾಗಿದ್ದರೆ, ₹1.6 ಕೋಟಿ ಭತ್ಯೆ, ₹10.50 ಕೋಟಿ ನಿವೃತ್ತಿ ಸೌಲಭ್ಯಗಳು ಮತ್ತು ₹32.28 ಕಮಿಷನ್ ಸೇರಿವೆ.ಅವರನ್ನು 2023ರ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದೆ.
ಹೆಂಡ್ತಿ ಮುಖ ಎಷ್ಟು ಹೊತ್ತು ನೋಡ್ತಿರಾ, 90 ಗಂಟೆ ಕೆಲಸ ಮಾಡಲು ಸೂಚಿಸಿದ L&T ಮುಖ್ಯಸ್ಥ
ಆದರೆ, ಕಂಪನಿಯ ಸಾಮಾನ್ಯ ಉದ್ಯೋಗಿಗಳು ಅಥವಾ ಫ್ರೆಶರ್‌ಗಳಿಗೆ ಹಣಕಾಸು ವರ್ಷದಲ್ಲಿ ಸ್ಯಾಲರಿ 9.55 ಲಕ್ಷ ರೂಪಾಯಿ ಆಗಿದೆ. ಸಾಮಾನ್ಯ ಉದ್ಯೋಗಿಗಳ ಸ್ಯಾಲರಿಯಲ್ಲಿ ಹಣಕಾಸು ವರ್ಷದಲ್ಲಿ ಶೇ. 1.32ರಷ್ಟು ಹೆಚ್ಚಳವಾಗಿದೆ. 2024ರ ಮಾರ್ಚ್ 31ರ ಅನುಸಾರ ಕಂಪನಿಯಲ್ಲಿ 59,018 ಪರ್ಮನೆಂಟ್ ಉದ್ಯೋಗಿಗಳಿದ್ದಾರೆ.
8 ಗಂಟೆ ಕಳೆದರೆ ಪತ್ನಿ ಓಡಿ ಹೋಗುತ್ತಾರೆ, ನಾರಾಯಣಮೂರ್ತಿಗೆ ಟಾಂಗ್ ಕೊಟ್ರಾ ಗೌತಮ್ ಅದಾನಿ?
2024ರ ಹಣಕಾಸು ವರ್ಷದಲ್ಲಿ ಎಲ್ & ಟಿ ಚೇರ್ಮನ್ ಸ್ಯಾಲರಿಯಲ್ಲಿ ಹಿಂದಿನ ವರ್ಷಕ್ಕಿಂತ ಶೇ. 43ರಷ್ಟು ಏರಿಕೆಯಾಗಿದೆ. ಅದರೊಂದಿಗೆ ಸಾಮಾನ್ಯ ಉದ್ಯೋಗಿಗಳಿಂದ ಅವರ ವೇತನ 534 ಪಟ್ಟು ಏರಿಕೆಯಾಗಿದೆ.