ಎಲ್‌ಪಿಜಿ ಸಿಲಿಂಡರ್‌ ಬೆಲೆ 25 ರು. ಏರಿಕೆ, ಪೆಟ್ರೋಲ್‌ ಗಗನಕ್ಕೆ!

ಎಲ್‌ಪಿಜಿ ಸಿಲಿಂಡರ್‌ ಬೆಲೆ 25 ರು. ಏರಿಕೆ, ಪೆಟ್ರೋಲ್‌ ಗಗನಕ್ಕೆ| ಗ್ರಾಹಕರಿಗೆ ಕೇಂದ್ರದಿಂದ ಮತ್ತೊಂದು ದರ ಏರಿಕೆಯ ಶಾಕ್‌| ಸಬ್ಸಿಡಿ ಇಲ್ಲದ ಹಿನ್ನೆಲೆ ಪೂರ್ಣ ಮೊತ್ತ ಪಾವತಿ ಅನಿವಾರ್ಯ| ಕಳೆದ ಮೇ ತಿಂಗಳಿನಿಂದಲೇ ಎಲ್‌ಪಿಜಿ ಸಬ್ಸಿಡಿ ವ್ಯವಸ್ಥೆ ಸ್ಥಗಿತ

LPG price up by Rs 25 fuel prices rise again pod

ನವದೆಹಲಿ(ಫೆ.05): ಕೊರೋನಾ ಸಂಕಷ್ಟ, ಪೆಟ್ರೋಲ್‌, ಡೀಸೆಲ್‌ ದರ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸಮಸ್ಯೆಯಲ್ಲಿ ಸಿಕ್ಕಿಬಿದ್ದಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಗುರುವಾರ ಮತ್ತೊಂದು ಶಾಕ್‌ ನೀಡಿದೆ. ಗುರುವಾರದಿಂದಲೇ ಜಾರಿಯಾಗುವಂತೆ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು 25 ರು.ನಂತೆ ಹೆಚ್ಚಿಸಲಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ 14.5 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಬೆಲೆ 722 ರು.ಗೆ ತಲುಪಿದೆ.

ಕೇಂದ್ರ ಸರ್ಕಾರ ಕಳೆದ ಮೇ ತಿಂಗಳನಿಂದಲೇ ಅಡುಗೆ ಅನಿಲ ಬಳಕೆದಾರರಿಗೆ ಸಬ್ಸಿಡಿ ವಿತರಣೆಯನ್ನು ಸದ್ದಿಲ್ಲದೇ ಸ್ಥಗಿತಗೊಳಿಸಿದೆ. ಹೀಗಾಗಿ ಗ್ರಾಹಕರು ಇದೀಗ ಪೂರ್ಣ 722 ರು. ದರ ತೆತ್ತು ಸಿಲಿಂಡರ್‌ ಖರೀದಿಸಬೇಕಿದೆ. ಕೇಂದ್ರ ಸರ್ಕಾರ ಪ್ರತಿ ಗ್ರಾಹಕರಿಗೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ಪೂರೈಕೆ ಮಾಡುತ್ತಿತ್ತು. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಯಾದರೂ, ಅದರ ಪರಿಣಾಮ ಗ್ರಾಹಕರ ಮೇಲೆ ಬೀಳುತ್ತಿರಲಿಲ್ಲ.

ಆದರೆ ಕೋವಿಡ್‌ ಸೋಂಕು ತೀವ್ರಗೊಂಡು ದೇಶಾದ್ಯಂತ ಲಾಕ್ಡೌನ್‌ ಹೇರಿದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಮತ್ತು ಎಲ್‌ಪಿಜಿ ದರಗಳು ಪಾತಾಳ ಕಂಡಿದ್ದವು. ಹೀಗಾಗಿ ಸರ್ಕಾರಕ್ಕೆ ಎಲ್‌ಪಿಜಿ ಮೇಲೆ ಸಬ್ಸಿಡಿ ನೀಡುವ ಪ್ರಮೇಯ ತಪ್ಪಿತ್ತು. ಆದರೆ ಬಳಿಕ ಹಂತಹಂತವಾಗಿ ಕಚ್ಚಾತೈಲ ಬೆಲೆ ಏರಿಕೆಯಾಗುತ್ತಾ ಹೋದರೂ, ಸರ್ಕಾರ ಸಬ್ಸಿಡಿ ನೀಡುವ ವ್ಯವಸ್ಥೆಯನ್ನು ಕೈಬಿಟ್ಟಿತು.

ಎಲ್‌ಪಿಜಿ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ಇದುವರೆಗೆ ಎಲ್ಲೂ ಅಧಿಕೃತವಾಗಿ ಹೇಳಿಲ್ಲ. ಆದರೆ ಗ್ರಾಹಕರಿಗೆ ಸಬ್ಸಿಡಿಯನ್ನು ವಿತರಣೆಯನ್ನೂ ಮಾಡುತ್ತಿಲ್ಲ. ಇತ್ತೀಚಿನ ಬಜೆಟ್‌ನಲ್ಲಿ ಸೀಮೆಎಣ್ಣೆಗೆ ನೀಡುವ ಸಬ್ಸಿಡಿಯನ್ನೂ ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು.

Latest Videos
Follow Us:
Download App:
  • android
  • ios