Asianet Suvarna News Asianet Suvarna News

ಇಪಿಎಫ್ ಯುಎಎನ್ ಮರೆತು ಹೋಗಿದೆಯಾ? ಮರಳಿ ಪಡೆಯಲು ಹೊಸ ವಿಧಾನ ಪ್ರಕಟಿಸಿದ ಇಪಿಎಫ್ ಒ

ಮರೆತು ಹೋದ ಇಪಿಎಫ್ ಯುಎಎನ್ ಮರಳಿ ಪಡೆಯಲು ಇಪಿಎಫ್ ಒ ಹೊಸ ವಿಧಾನವನ್ನು ಪರಿಚಯಿಸಿದೆ. ಆನ್ ಲೈನ್ ನಲ್ಲಿ ಸುಲಭವಾಗಿ ನಿಮ್ಮ ಯುಎಎನ್ ಪತ್ತೆ ಹಚ್ಚಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ. 
 

Lost Your UAN EPFO Unveils Online Solution For Employees To Retrieve The Number anu
Author
First Published Jan 27, 2024, 7:43 PM IST | Last Updated Jan 27, 2024, 7:43 PM IST

ನವದೆಹಲಿ (ಜ.27): ತಿಂಗಳ ವೇತನ ಪಡೆಯುವ ಬಹುತೇಕರು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆ ಹೊಂದಿರುತ್ತಾರೆ. ನೌಕರರ ಭವಿಷ್ಯ ನಿಧಿ (ಇಪಿಎಫ್) ಭಾರತದ ಅತೀದೊಡ್ಡ ಸಾಮಾಜಿಕ ಭದ್ರತೆ ಯೋಜನೆಯಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಉದ್ಯೋಗಿಗಳ ಭವಿಷ್ಯ ನಿಧಿಯ ನಿರ್ವಹಣೆ ಮಾಡುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಅವಕಾಶಗಳನ್ನು ಹುಡುಕುತ್ತ ಉದ್ಯೋಗ ಬದಲಾಯಿಸುವವರ ಸಂಖ್ಯೆ ಹೆಚ್ಚಿದೆ. ಈ ವೃತ್ತಿ ಬದುಕಿನ ಹಾದಿಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಉದ್ಯೋಗಿಗಳಿಗೆ ಹಣಕಾಸಿನ ಸುರಕ್ಷತೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಪಿಎಫ್ಒ ವ್ಯವಸ್ಥೆಯ ಅತ್ಯಂತ ಪ್ರಮುಖವಾದ ಅಂಶವೆಂದ್ರೆ ಯುನಿವರ್ಸಲ್ ಅಕೌಂಟ್ ನಂಬ್ರ (ಯುಎಎನ್). ಇದು 12 ಅಂಕೆಗಳ ಸಂಖ್ಯೆಯಾಗಿದ್ದು, ಉದ್ಯೋಗ ಬದಲಾಯಿಸಿದರೂ ಕೂಡ ಈ ಸಂಖ್ಯೆ ಬದಲಾಗೋದಿಲ್ಲ. ಆಧಾರ್ ಮಾದರಿಯಲ್ಲೇ ಯುಎಎನ್ ಕೂಡ ವಿವಿಧ ಪಿಎಫ್ ಸಂಬಂಧಿ ಚಟುವಟಿಕೆಗಳಿಗೆ ಅಗತ್ಯ. ಹೀಗಾಗಿ ಉದ್ಯೋಗಿಗಳು ತಮ್ಮ ಯುಎಎನ್ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವುದು ಅಗತ್ಯ. 

ಯುಎಎನ್ ಸಂಖ್ಯೆ ಮರೆತು ಹೋಗುತ್ತಾ?
ಉದ್ಯೋಗ ಬದಲಾಯಿಸುವ ಸಂಕಷ್ಟಗಳ ನಡುವೆ ಉದ್ಯೋಗಿಗಳು ಆಗಾಗ ತಮ್ಮ ಯುಎಎನ್ ಸಂಖ್ಯೆಗಳನ್ನು ಮರೆಯೋದು ಸಾಮಾನ್ಯ. ಇಂಥ ಸಂದರ್ಭದಲ್ಲಿ ಯುಎಎನ್ ಸಂಖ್ಯೆಯನ್ನು ನೆನಪು ಮಾಡಿಕೊಳ್ಳೋದು ಹೇಗೆ? ಆನ್ ಲೈನ್ ನಲ್ಲಿ ಇದನ್ನು ಪತ್ತೆ ಹಚ್ಚಬಹುದಾ ಎಂಬ ಪ್ರಶ್ನೆ ಮೂಡುತ್ತದೆ. ನೀವು ಇಪಿಎಫ್ ಒ ಆನ್ ಲೈನ್ ಸೇವೆಗಳ ಮೂಲಕ ಮನೆಯಲ್ಲೇ ಕುಳಿತು ಯುಎಎನ್ ಸಂಖ್ಯೆ ಪತ್ತೆ ಮಾಡಬಹುದು.

ಇಪಿಎಫ್ ಸದಸ್ಯರೇ ಗಮನಿಸಿ, ಜನ್ಮದಿನಾಂಕ ಅಪ್ಡೇಟ್ ಗೆ ಅರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಹೊರಗಿಟ್ಟ ಇಪಿಎಫ್ಒ

ಯುಎಎನ್ ಸಂಖ್ಯೆ ಆನ್ ಲೈನ್ ನಲ್ಲಿ ಪತ್ತೆ ಹಚ್ಚೋದು ಹೇಗೆ?
ಆನ್ ಲೈನ್ ನಲ್ಲಿ ನಿಮ್ಮ ಯುಎಎನ್ ಸಂಖ್ಯೆಯನ್ನು ಪತ್ತೆ ಹಚ್ಚಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ.
*ಇಪಿಎಫ್ಒ ಅಧಿಕೃತ ವೆಬ್ ಸೈಟ್ https://www.epfindia.gov.in/site_en/index.php ಭೇಟಿ ನೀಡಿ.
*Services ವಿಭಾಗದಡಿ “For Employees” ಸೆಕ್ಷನ್ ಗೆ ಭೇಟಿ ನೀಡಿ ಹಾಗೂ “Member UAN/Online Service (OCS/OTCP)" ಮೇಲೆ ಕ್ಲಿಕ್ ಮಾಡಿ.
*ಹೊಸ ಪುಟದಲ್ಲಿ ಬಲ ಭಾಗದಲ್ಲಿರುವ ಪ್ರಮುಖ ಲಿಂಕ್ ಗಳಲ್ಲಿ “Know your UAN” ಪತ್ತೆ ಹಚ್ಚಿ.
*ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ನಮೂದಿಸಿ. ಆ ಬಳಿಕ OTP ಸ್ವೀಕರಿಸಲು ಅದರ ಮೇಲೆ ಕ್ಲಿಕ್ ಮಾಡಿ.
*ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿಯನ್ನು ದೃಢೀಕರಿಸಿ.
*ನಿಮ್ಮ ಹೆಸರು, ಜನ್ಮದಿನಾಂಕ, ಸದಸ್ಯತ್ವ ಐಡಿ, ಆಧಾರ್ ಅಥವಾ ಪ್ಯಾನ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ಅನ್ನು ಹೊಸ ಪುಟದಲ್ಲಿ ನಮೂದಿಸಿ. ಆ ಬಳಿಕ 'Show My UAN' ಮೇಲೆ ಕ್ಲಿಕ್ ಮಾಡಿ.
*ಯುಎಎನ್ ಸಂಖ್ಯೆಯನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಯುಎಎನ್ ಸಕ್ರಿಯಗೊಳಿಸದವರಿಗೆ ಹೇಗೆ?
ಇನ್ನು ಯಾರು ತಮ್ಮ ಯುಎಎನ್ ಸಕ್ರಿಯಗೊಳಿಸಿಲ್ಲವೋ ಅವರು ಈ ಹಂತಗಳನ್ನು ಅನುಸರಿಸಬೇಕು.
*ಇಪಿಎಫ್ಒ ವೆಬ್ ಸೈಟ್ ಗೆ ಭೇಟಿ ನೀಡಿ ಹಾಗೂ ಸರ್ವೀಸ್ ಮೆನ್ಯುವಿನಲ್ಲಿ  “For Employee” ಮೇಲೆ ಕ್ಲಿಕ್ ಮಾಡಿ.
*ಸರ್ವೀಸ್ ಮೆನುವಿನಲ್ಲಿ  “Member UAN/Online Service” ಆಯ್ಕೆ ಮಾಡಿ.
*ಇನ್ನು ಲಾಗಿನ್ ಪೇಜ್ ನಲ್ಲಿ “Activate Universal Account Number (UAN)” ಆಯ್ಕೆ ಮಾಡಿ.
*ನಿಮ್ಮ ಯುಎಎನ್ ಸಂಖ್ಯೆ, ಜನ್ಮದಿನಾಂಕ, ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ನಮೂದಿಸಿ. ಆ ಬಳಿಕ “Get Authorization Pin” ಮೇಲೆ ಕ್ಲಿಕ್ ಮಾಡಿ.
*ಆ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಗೆ ಬಂದಿರುವ ಒಟಿಪಿ ನಮೂದಿಸಿ. ಮಾಹಿತಿಗಳನ್ನು ಮರುಪರಿಶೀಲಿಸಿ, ಷರತ್ತುಗಳಿಗೆ ಒಪ್ಪಿಗೆ ನೀಡಿ ಹಾಗೂ ಯುಎಎನ್  ಸಕ್ರಿಯಗೊಳಿಸಿ.

ನಿಮ್ಮ ವೇತನದಿಂದ ಕಡಿತಗೊಳಿಸಿದ ಪಿಎಫ್ ಮೊತ್ತವನ್ನು ಕಂಪನಿ ಇಪಿಎಫ್ ಒಗೆ ಜಮೆ ಮಾಡಿಲ್ವಾ? ಹಾಗಾದ್ರೆ ಹೀಗೆ ಮಾಡಿ..

ಯುಎಎನ್ ಸಕ್ರಿಯಗೊಳ್ಳಲು ಸುಮಾರು ಆರು ಗಂಟೆಗಳು ಅಗತ್ಯ. ಆನ್ ಲೈನ್ ಪ್ರಕ್ರಿಯೆಗಳಿಗೆ ನಿಮ್ಮ ಮೊಬೈಲ್ ಸಂಖ್ಯೆ ಪಿಎಫ್ ಖಾತೆಗೆ ಲಿಂಕ್ ಆಗಿರೋದು ಅಗತ್ಯ. ಇನ್ನು ಪರಿಶೀಲನೆ ಹಂತಗಳಲ್ಲಿ ಒಟಿಪಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಹಂತಗಳನ್ನು ಅನುಸರಿಸುವ ಮೂಲಕ ಉದ್ಯೋಗಿಗಳು ಸುಲಭವಾಗಿ ಯುಎಎನ್ ಸಂಖ್ಯೆಗಳನ್ನು ಮರಳಿ ಪಡೆಯಬಹುದು. 

Latest Videos
Follow Us:
Download App:
  • android
  • ios