ಶೀಘ್ರದಲ್ಲೇ ಬರಲಿದೆ ಸ್ವದೇಶಿ ಲಿಥಿಯಂ ಅಯಾನ್ ಬ್ಯಾಟರಿ..!

Lithium-ion batteries soon to be manufactured in India
Highlights

ಶೀಘ್ರದಲ್ಲೇ ಬರಲಿದೆ ಸ್ವದೇಶಿ ಲಿಥಿಯಂ ಅಯಾನ್ ಬ್ಯಾಟರಿ

ಸೆಂಟ್ರಲ್ ಎಲೆಕ್ಟ್ರೋ ಕೆಮಿಕಲ್ ರಿಸರ್ಚ್, ರಾಸಿ ಸೋಲಾರ್ ಪವರ್ ಪ್ರೈ.ಲಿ ಜೊತೆ ಒಪ್ಪಂದ

ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮಾಹಿತಿ

ನವದೆಹಲಿ(ಜೂ.14): ಇದೇ ಮೊದಲ ಬಾರಿಗೆ ಲಿಥಿಯಂ ಅಯಾನ್ ಬ್ಯಾಟರಿಯನ್ನು ಭಾರತದಲ್ಲಿ ಉತ್ಪಾದಿಸಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಈ ಕುರಿತು ಕೇಂದ್ರ ಸರ್ಕಾರದ ಸೆಂಟ್ರಲ್ ಎಲೆಕ್ಟ್ರೋ ಕೆಮಿಕಲ್ ರಿಸರ್ಚ್ ಇನ್ಸಿಟ್ಯೂಟ್ ಮತ್ತು ರಾಸಿ ಸೋಲಾರ್ ಪವರ್ ಪ್ರೈ.ಲಿ ಜೊತೆ ಒಪ್ಪಂದವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತದಲ್ಲಿ ಇದೇ ಮೊದಲ ಬಾರಿಗೆ ಲಿಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಗೆ ಮುಂದಾಗಿರುವುದಾಗಿ ತಿಳಿಸಿದೆ. ಕೌನ್ಸಿಲ್ ಫಾರ್ ಸೈಂಟಿಫಿಕ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆ ಸ್ಥಳೀಯವಾಗಿ ಲಿಥಿಯಂ ಅಯಾನ್ ಬ್ಯಾಟರಿ ತಂತ್ರಜ್ಞಾನವನ್ನು ಸಂಶೋಧಿಸಿದೆ. ಚೆನ್ನೈನ ಲ್ಯಾಬೊರೇಟರಿಯಲ್ಲಿ ಇದರ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಉತ್ಪಾದನಾ ಕಾರ್ಯ ಪ್ರಾರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದುವರೆಗೂ ಭಾರತ ಲಿಥಿಯಂ ಅಯಾನ್ ಬ್ಯಾಟರಿಯನ್ನು ಚೀನಾ, ಜಪಾನ್, ದ.ಕೊರಿಯಾ ಮತ್ತು ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಜಗತ್ತಿನಲ್ಲೇ ಭಾರತ ಅತ್ಯಧಿಕ ಲಿಥಿಯಂ ಅಯಾನ್ ಬ್ಯಾಟರಿ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. 2017 ರಲ್ಲಿ ಸುಮಾರು 150 ಯುಎಸ್ ಡಾಲರ್ ನಷ್ಟು ಆಮದು ವಹಿವಾಟು ಕೂಡ ನಡೆಸಲಾಗಿದೆ.

ಆದರೆ ಇನ್ನು ಮುಂದೆ ಲಿಥಿಯಂ ಅಯಾನ್ ಬ್ಯಾಟರಿ ಆಮದು ತಪ್ಪಲಿದ್ದು, ಸ್ವದೇಶಿ ಬ್ಯಾಟರಿಗಳನ್ನು ಶೀಘ್ರದಲ್ಲೇ ಉತ್ಪಾದನೆ ಮಾಡಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಅಲ್ಲದೇ 2022ರಲ್ಲಿ ಸುಮಾರು 175 ಗಿಗಾವ್ಯಾಟ್ ಸಾಮರ್ಥ್ಯದ ಲಿಥಿಯಂ ಅಯಾನ್ ಬ್ಯಾಟರಿಗಳನ್ನು ಉತ್ಪಾದಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

loader