ಕರಾವಳಿಯಲ್ಲಿ ‘ಮದ್ಯ’ದ ಜಾಗ ಆಕ್ರಮಿಸಿದ ತಣ್ಣನೆ ಬಿಯರ್‌!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ   ಕೊರೋನಾ ಬಳಿಕ ದೇಸಿ ಮದ್ಯ ಕುಡಿಯುವವರ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ತಣ್ಣನೆಯ ಬಿಯರ್‌ ಹೀರುವವರು ಕರಾವಳಿಯಲ್ಲಿ ಹೆಚ್ಚಾಗಿದ್ದಾರೆ.

Liquor sales stagnant in Dakshina Kannada  district demand for beer remains strong gow

ಸಂದೀಪ್‌ ವಾಗ್ಲೆ

 ಮಂಗಳೂರು (ಮೇ.19): ಕೊರೋನಾ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇಸಿ ಉತ್ಪಾದಿತ ಮದ್ಯ (ಐಎಂಎಲ್‌- ಇಂಡಿಯನ್‌ ಮೇಡ್‌ ಲಿಕ್ಕರ್‌) ಕುಡಿಯುವ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಆಗಿಲ್ಲ. ಆದರೆ ‘ಮದ್ಯ’ದ ಜಾಗವನ್ನು ಬಿಯರ್‌ ತುಂಬಿದೆ. ಸೆಕೆಗಾಲದಲ್ಲಿ ತಣ್ಣನೆಯ ಬಿಯರ್‌ ಹೀರುವವರು ಕರಾವಳಿಯಲ್ಲಿ ಹೆಚ್ಚಾಗಿದ್ದಾರೆ!

ರಾಜ್ಯದಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕ ಏರಿಕೆ ಮಾಡಿರುವುದು, ಬೇಡಿಕೆಗೆ ತಕ್ಕಂತೆ ಉತ್ಪಾದನೆ ಆಗದೆ ಇರುವುದು ಮದ್ಯ ಮಾರಾಟದ ಮೇಲೆ ಹೊಡೆತ ನೀಡಿದೆ. ಜತೆಗೆ ಭಾರೀ ಸೆಕೆಯ ವಾತಾವರಣ ಇರುವುದರಿಂದ ಮದ್ಯದ ಬದಲು ಬಿಯರ್‌ಗೆ ಮದ್ಯಪ್ರಿಯರು ಮೊರೆ ಹೋಗಿದ್ದು, ಬಿಯರ್‌ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ.

ಹೀಟ್‌ವೇವ್‌ ಎಫೆಕ್ಟ್‌, ನೀರಲ್ಲ.. ಬೆಂಗಳೂರಿನಲ್ಲಿ ಶುರುವಾಯ್ತು ಬಿಯರ್‌ ಬರ!

ಮಾರಾಟ ಪ್ರಮಾಣ ಎಷ್ಟಿದೆ?: ಅಬಕಾರಿ ಇಲಾಖೆ ಅಂಕಿಅಂಶಗಳ ಪ್ರಕಾರ, ದ.ಕ. ಜಿಲ್ಲೆಯಲ್ಲಿ 2023- 24ರಲ್ಲಿ 27,48,957 ಬಾಕ್ಸ್‌ ಮದ್ಯ ಮಾರಾಟವಾಗಿದೆ. 2022-23 ಮತ್ತು 2021-22ನೇ ಸಾಲಿನಲ್ಲಿ ಕ್ರಮವಾಗಿ 27,46,253 ಮತ್ತು 27,07,465 ಮದ್ಯ ಮಾರಾಟವಾಗಿದೆ. ಆದರೆ ಬಿಯರ್ 2021-22ರಲ್ಲಿ 17,20,086 ಬಾಕ್ಸ್‌, 2022-23ರಲ್ಲಿ 22,60,362 ಬಾಕ್ಸ್‌ ಮಾರಾಟವಾಗಿದ್ದರೆ, 2023-24ರಲ್ಲಿ 25,03,153 ಬಾಕ್ಸ್‌ಗೆ ಏರಿಕೆಯಾಗಿದೆ.

ದರ ಏರಿಕೆ ಹೊಡೆತ: “ದೇಸಿ ಉತ್ಪಾದಿತ ಮದ್ಯ ಮಾರಾಟದ ಪ್ರಮಾಣ ಏರಿಕೆ ಕಾಣದಿರಲು ಅಬಕಾರಿ ಸುಂಕ ಏರಿಕೆಯೇ ಪ್ರಮುಖ ಕಾರಣ. ಇದರಿಂದ ಮದ್ಯದ ದರ ಗಮನಾರ್ಹ ಹೆಚ್ಚಾಗಿದೆ. ಇದು ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಕಡಿಮೆ ಮಾಡಿದೆ. ಸುಂಕ ಹೆಚ್ಚಳ ಮಾಡಿದ್ದರಿಂದ ಮದ್ಯ ಮಾರಾಟ ಹೆಚ್ಚಳ ಆಗದಿದ್ದರೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿಲ್ಲ” ಎಂದು ಮಂಗಳೂರಿನ ಹೆಸರಾಂತ ಮದ್ಯ ಮಾರಾಟ ಮಳಿಗೆಯ ಮಾಲೀಕರು ಹೇಳುತ್ತಾರೆ.

ಮದ್ಯ ದರ ಏರಿಕೆ ಆಗಿರುವುದರಿಂದ ಅನೇಕರು ಅಗ್ಗದ ಮದ್ಯದ ಮೊರೆ ಹೋಗಿದ್ದಾರೆ ಅಥವಾ ಮದ್ಯ ಕುಡಿಯುವ ಪ್ರಮಾಣ ಕಡಿಮೆ ಮಾಡಿದ್ದಾರೆ. ಈಗ ಅಗ್ಗದ ಬೆಲೆಯ ಬಿಯರ್‌ಗಳೂ ಬಂದಿರುವುದರಿಂದ ಬಹಳಷ್ಟು ಮಂದಿ ಮದ್ಯದ ಬದಲು ಬಿಯರ್‌ ಕುಡಿಯಲು ಆರಂಭಿಸಿದ್ದಾರೆ ಎಂದವರು ಹೇಳಿದರು.

6 ವರ್ಷದಲ್ಲಿ ಕನಿಷ್ಠ ಮಟ್ಟ ತಲುಪಿದ ಕೆಆರ್‌ಎಸ್, 80 ಅಡಿಗೆ ಕುಸಿತ ಕಂಡ ನೀರಿನ ಮಟ್ಟ!

ಬಿಯರ್‌ ವರ್ಷದಿಂದ ವರ್ಷಕ್ಕೆ ಹೆಚ್ಚಳ: ಕಳೆದ ಐದು ವರ್ಷಗಳಲ್ಲಿ ಕೊರೋನಾ ಇದ್ದರೂ ಬಿಯರ್‌ ಮಾರಾಟ ಪ್ರತಿ ವರ್ಷ ಗಮನಾರ್ಹ ಏರಿಕೆಯಾಗಿದೆ. ವರ್ಷಂಪ್ರತಿ ಸರಾಸರಿ ಬಿಯರ್ ಮಾರಾಟ ಶೇ. 15ರಿಂದ 20ರಷ್ಟು ಬೆಳವಣಿಗೆ ಕಾಣುತ್ತಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ವರ್ಗದ ಗ್ರಾಹಕರ ಮೆಚ್ಚಿನ- ಅಗ್ಗದ ಜನಪ್ರಿಯ ಬ್ರಾಂಡ್‌ಗಳ ಸ್ಟಾಕ್‌ ಕಡಿಮೆಯಾಗಿದೆ. ಡಿಸ್ಟಿಲರಿಗಳು ಬೇಡಿಕೆಯ ಪ್ರಮಾಣದಲ್ಲಿ ಉತ್ಪಾದನೆ ಮಾಡದಿರುವುದು ಕೂಡ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರಿದೆ. ಜತೆಗೆ ಇಲ್ಲಿನ ಹವಾಮಾನದಿಂದ ಮದ್ಯ ಮಾರಾಟ ಕುಸಿದಿದ್ದು, ಬಿಯರ್‌ ಮಾರಾಟ ಏರಿಕೆಯಾಗಿದೆ.

- ಟಿ.ಎಂ. ಶ್ರೀನಿವಾಸ್, ಅಬಕಾರಿ ಇಲಾಖೆ ಉಪ ಆಯುಕ್ತ, ದಕ್ಷಿಣ ಕನ್ನಡ

Latest Videos
Follow Us:
Download App:
  • android
  • ios