LIC IPO: ಪ್ರತಿ ಷೇರಿನ ವಿತರಣೆ ದರ 949ರೂ.; ಷೇರು ಹಂಚಿಕೆಗೆ ತಡೆ ನೀಡಲು ಸುಪ್ರೀಂ ನಕಾರ; ಷೇರು ಹಂಚಿಕೆ ಪರಿಶೀಲನೆ ಹೇಗೆ?
*ಎಲ್ಐಸಿ ಐಪಿಒ ಮೂಲಕ 20,500 ಕೋಟಿ ರೂ. ಸಂಗ್ರಹಿಸಿದ ಕೇಂದ್ರ ಸರ್ಕಾರ
*NSE ಹಾಗೂ BSE ವೆಬ್ ಸೈಟ್ ನಲ್ಲಿ ಷೇರು ಹಂಚಿಕೆ ಮಾಹಿತಿ ಪರಿಶೀಲಿಸಬಹುದು
*ಮೇ 17ಕ್ಕೆ ಷೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟಿಂಗ್ ಪ್ರಾರಂಭ
ನವದೆಹಲಿ (ಮೇ 13): ಭಾರತದ ಅತೀದೊಡ್ಡ ಸಾರ್ವಜನಿಕ ಪ್ರಾರಂಭಿಕ ಷೇರು ಕೊಡುಗೆ (IPO) ಎಂಬ ಹೆಗ್ಗಳಿಕೆ ಗಳಿಸಿದ ಭಾರತೀಯ ಜೀವ ವಿಮಾ ನಿಗಮದ (LIC) ಐಪಿಒ, ಮೇ 9ರಂದು ಮುಕ್ತಾಯಗೊಂಡಿದೆ. ಐಪಿಒ ವಿತರಣೆ ದರವನ್ನು ಅತ್ಯಧಿಕ ನಿಗದಿತ ಶ್ರೇಣಿ 949 ರೂ. ಗೆ ಎಲ್ಐಸಿ ನಿಗದಿಪಡಿಸಿದೆ ಎಂದು ಬ್ಲ್ಯೂಮ್ ಬರ್ಗ್ (Bloomberg) ವರದಿ ಮಾಡಿದೆ. ಗುರುವಾರ (ಮೇ 12) ಎಲ್ಐಸಿ ಷೇರು ಹಂಚಿಕೆ ಪ್ರಕ್ರಿಯೆ ಪ್ರಾರಂಭಿಸಿದೆ ಎಂದು ಹೇಳಲಾಗಿದ್ದು, ಇದಕ್ಕೆ ತಡೆಕೋರಿ ಕೆಲವು ಪಾಲಿಸಿದಾರರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ.
ಮೇ 4ರಿಂದ ಮೇ 9ರವರೆಗೆ ನಡೆದ ಎಲ್ಐಸಿ ಐಪಿಒನಲ್ಲಿ ಪ್ರತಿ ಷೇರಿಗೆ 902ರೂ.ನಿಂದ 949ರೂ. ಬೆಲೆ ಶ್ರೇಣಿ ನಿಗದಿಪಡಿಸಲಾಗಿತ್ತು. ಆರು ದಿನಗಳ ಬಿಡ್ಡಿಂಗ್ ನ ಕೊನೆಯಲ್ಲಿ ಎಲ್ಐಸಿ ಷೇರುಗಳು 2.95 ಬಾರಿ ಸಬ್ ಸ್ಕ್ರೈಬ್ ಆಗಿವೆ. ಷೇರುಗಳು ಅತ್ಯಧಿಕ ಬೆಲೆ ಶ್ರೇಣಿಯಲ್ಲಿ ಮಾರಾಟವಾಗುವ ಜೊತೆಗೆ ಸ್ಥಳೀಯ ಹೂಡಿಕೆದಾರರಿಂದ ಭಾರೀ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಐಪಿಒ ಮೂಲಕ ಕೇಂದ್ರ ಸರ್ಕಾರ 20,500 ಕೋಟಿ ರೂ. ಸಂಗ್ರಹಿಸಿದೆ. 16.2 ಕೋಟಿ ಈಕ್ವಿಟಿ ಷೇರುಗಳ ಗಾತ್ರದ ಐಪಿಒಗೆ 47.83 ಕೋಟಿ ಬಿಡ್ಡಿಂಗ್ ಗಳು ಸಲ್ಲಿಕೆ ಆಗಿವೆ. ಮಂಗಳವಾರದಿಂದ (ಮೇ 17) ಷೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟಿಂಗ್ ನಡೆಯಲಿದೆ.
ಷೇರು ಹಂಚಿಕೆಗೆ ತಡೆ ನೀಡಲು ಸುಪ್ರೀಂ ನಕಾರ
ಎಲ್ಐಸಿ ಐಪಿಒ ಷೇರು ಹಂಚಿಕೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಕೆಲವು ಪಾಲಿಸಿದಾರರು ಎಲ್ಐಸಿ ಐಪಿಒ ಷೇರು ಹಂಚಿಕೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ, ಸೂರ್ಯಕಾಂತ್ ಹಾಗೂ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಈ ತೀರ್ಪು ಪ್ರಕಟಿಸಿದೆ. ವಾಣಿಜ್ಯ ಹೂಡಿಕೆಗಳು ಹಾಗೂ ಐಪಿಒ ವಿಚಾರಗಳಿಗೆ ಸಂಬಂಧಿಸಿ ಕೋರ್ಟ್ ನಿಂದ ಮಧ್ಯಂತರ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಷೇರು ಹಂಚಿಕೆ ಚೆಕ್ ಮಾಡೋದು ಹೇಗೆ?
ಎಲ್ಐಸಿ ಐಪಿಒನಲ್ಲಿ ಅರ್ಜಿ ಸಲ್ಲಿಕೆ ಮಾಡಿರುವವರು ತಮ್ಮ ಡಿಮ್ಯಾಟ್ ಖಾತೆಗೆ ಎಲ್ಐಸಿ ಷೇರು ಹಂಚಿಕೆ ಆಗಿದೆಯೋ ಇಲ್ಲವೋ ಎನ್ನೋದನ್ನು ಎನ್ ಎಸ್ ಇ ( NSE) ಅಧಿಕೃತ ವೆಬ್ ಸೈಟ್ ನಲ್ಲಿ ಚೆಕ್ ಮಾಡಬಹುದು.
*ಮೊದಲಿಗೆ NSE ಅಧಿಕೃತ ವೆಬ್ ಸೈಟ್ https://www.nseindia.com ಭೇಟಿ ನೀಡಿ.
*ಈಗ “equity” ಆಯ್ಕೆ ಮಾಡಿ. ಆ ಬಳಿಕ ಡ್ರಾಪ್ ಮೆನುವಿನಿಂದ “LIC IPO” ಆಯ್ಕೆ ಮಾಡಿ.
*ನಿಮ್ಮ ಅರ್ಜಿ ಹಾಗೂ ಪ್ಯಾನ್ ಸಂಖ್ಯೆ ನಮೂದಿಸಿ.
*ಪರಿಶೀಲನಾ (verification) ಪ್ರಕ್ರಿಯೆ ಪೂರ್ಣಗೊಳಿಸಿದ್ರೆ ನಿಮ್ಮ ಎಲ್ಐಸಿ ಐಪಿಒ ಷೇರು ಹಂಚಿಕೆ ವಿವರ ಲಭಿಸುತ್ತದೆ.
ಬಿಎಸ್ ಇಯಲ್ಲಿ (BSE) ಎಲ್ಐಸಿ ಐಪಿಒ ಷೇರು ಹಂಚಿಕೆ ಚೆಕ್ ಮಾಡಲು BSE ಅಧಿಕೃತ ವೆಬ್ ಸೈಟ್ https://www.bseindia.com ಭೇಟಿ ನೀಡಿ. ಮೇಲೆ ವಿವರಿಸಿದ ಹಂತಗಳನ್ನೇ ಇಲ್ಲೂ ಅನುಸರಿಸಿ.
IPO:ಎಲ್ಐಸಿ ಐಪಿಒ ಬಳಿಕ ಇನ್ನೊಂದು ಇನ್ಯೂರೆನ್ಸ್ ಕಂಪನಿ ಖಾಸಗೀಕರಣಕ್ಕೆ ಸರ್ಕಾರದ ಚಿಂತನೆ?
KFintechನಲ್ಲಿ ಚೆಕ್ ಮಾಡೋದು ಹೇಗೆ?
KFin Technologies Limited ಎಲ್ ಐಸಿ ಐಪಿಒ ರಿಜಿಸ್ಟ್ರಾರ್ (registrar) ಆಗಿದೆ. ಹೀಗಾಗಿ ris.kfintech.com/ipostatus/ipos.aspx ಲಾಗಿಅನ್ ಆಗುವ ಮೂಲಕ ಕೂಡ ನಿಮ್ಮ ಖಾತೆಗೆ ಷೇರು ಹಂಚಿಕೆ ಆಗಿದೆಯೋ ಇಲ್ಲವೋ ಪರಿಶೀಲಿಸಬಹುದು.
*ris.kfintech.com/ipostatus/ipos.aspx ಲಾಗಿ ಇನ್ ಆಗಿ.
*ಎಲ್ಐಸಿ ಐಪಿಒ ಅರ್ಜಿ ಸಂಖ್ಯೆ ನಮೂದಿಸಿ.
*ಕ್ಯಾಪ್ಚ (Captcha) ಭರ್ತಿ ಮಾಡಿ.
*‘submit’ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ಎಲ್ ಐಸಿ ಐಪಿಒ ಸ್ಥಿತಿಗತಿಗಳ ಚಿತ್ರಣ ಸಿಗುತ್ತದೆ.
ಇನ್ನು KFintech ಮೂಲಕ ಇತರ ಕೆಲವು ವಿಧಾನಗಳಲ್ಲೂ ಎಲ್ಐಸಿ ಐಪಿಒ ಷೇರು ಹಂಚಿಕೆ ಸ್ಥಿತಿಗತಿ ಬಗ್ಗೆ ತಿಳಿಯಬಹುದು.
ವಾಟ್ಸ್ ಆಪ್ ಚಾಟ್ 9100094099 ಸಂಖ್ಯೆ ಮೂಲಕ.
ಐಪಿಒ ನೆರವಿನ ಚಾಟ್ ಬೊಟ್ https://ris.kfintech.com
lic.ipo@kfintech.com ಮೇಲ್ ಮಾಡುವ ಮೂಲಕ
1-800-309-4001 ಸಂಖ್ಯೆಗೆ ಕರೆ ಮಾಡಿ.
ಸಮೀಪದ KFintech ಶಾಖೆಗಳಿಗೆ ಭೇಟಿ ನೀಡಿ ಕೂಡ ಎಲ್ಐಸಿ ಷೇರು ಹಂಚಿಕೆ ಮಾಹಿತಿ ಕಲೆ ಹಾಕಬಹುದು.