LIC Profit:ನಾಲ್ಕನೇ ತ್ರೈಮಾಸಿಕದಲ್ಲಿಎಲ್ಐಸಿ ಲಾಭ ಗಳಿಕೆ 2,409 ಕೋಟಿ ರೂ. ; ಪ್ರತಿ ಷೇರಿಗೆ 1.50ರೂ. ಡಿವಿಡೆಂಡ್
*ಹಿಂದಿನ ಸಾಲಿನ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದ್ರೆ ಈ ವರ್ಷ ಲಾಭದಲ್ಲಿ ಶೇ.17ರಷ್ಟು ಇಳಿಕೆ
*ಕಳೆದ ಸಾಲಿಗೆ ಹೋಲಿಸಿದ್ರೆ ಈ ಸಾಲಿನ ಮಾರ್ಚ್ ತ್ರೈಮಾಸಿಕದ ಒಟ್ಟು ಆದಾಯದಲ್ಲಿ ಏರಿಕೆ
*2021-22ನೇ ಇಡೀ ಆರ್ಥಿಕ ಸಾಲಿನಲ್ಲಿ ಎಲ್ಐಸಿಗೆ 4,124.70 ಕೋಟಿ ರೂ. ಲಾಭ
ನವದೆಹಲಿ (ಮೇ 31): ಭಾರತೀಯ ಜೀವ ವಿಮಾ ನಿಗಮ (LIC) 2022ರ ಮಾರ್ಚ್ ಗೆ ಅಂತ್ಯಗೊಂಡ ನಾಲ್ಕನೇ ತ್ರೈಮಾಸಿಕದ ಫಲಿತಾಂಶ (quarterly result) ಪ್ರಕಟಿಸಿದ್ದು, 2,409 ಕೋಟಿ ರೂ. ನಿವ್ವಳ ಲಾಭ (Net Profit) ಘೋಷಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 2,917 ಕೋಟಿ ರೂ. ಲಾಭ ಗಳಿಸಿದ್ದು, ಈ ವರ್ಷ ಶೇ.17ರಷ್ಟು ಇಳಿಕೆಯಾಗಿದೆ.
ಷೇರು ಮಾರುಕಟ್ಟೆಯಲ್ಲಿ (Share Market) ಎಲ್ಐಸಿ ಷೇರುಗಳು ಲಿಸ್ಟಿಂಗ್ (Listing) ಆದ ಬಳಿಕ ಪ್ರಕಟಗೊಳ್ಳುತ್ತಿರುವ ಮೊದಲ ತ್ರೈಮಾಸಿಕ ವರದಿ ಇದಾಗಿದೆ. ಈ ಸಾಲಿನ ಮಾರ್ಚ್ ತ್ರೈಮಾಸಿಕದ ಒಟ್ಟು ಆದಾಯದಲ್ಲಿ (Income) ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದ್ರೆ ಹೆಚ್ಚಳವಾಗಿದೆ. 1,90,098 ಕೋಟಿ ರೂ.ನಿಂದ 2,12,230.41 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ನಿಯಂತ್ರಕ ಫೈಲಿಂಗ್ ನಲ್ಲಿ ಎಲ್ಐಸಿ ತಿಳಿಸಿದೆ. ಇನ್ನು ಕಳೆದ ಆರ್ಥಿಕ ಸಾಲಿನ ಇದೇ ಅವಧಿಗೆ ಹೋಲಿಸಿದ್ರೆ ಮೊದಲ ವರ್ಷದ ಪ್ರೀಮಿಯಂನಿಂದ (Premium) ಎಲ್ ಐಸಿ ಆದಾಯದಲ್ಲಿ ಹೆಚ್ಚಳವಾಗಿದ್ದು, 14,663.19 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ಸಾಲಿನಲ್ಲಿ 11,053.34 ಕೋಟಿ ರೂ. ಆಗಿತ್ತು.
2021-22ನೇ ಇಡೀ ಆರ್ಥಿಕ ಸಾಲಿನಲ್ಲಿ ಎಲ್ಐಸಿ 4,124.70 ಕೋಟಿ ರೂ. ಲಾಭ ಗಳಿಸಿದೆ. ಇದು ಹಿಂದಿನ ಆರ್ಥಿಕ ಸಾಲಿನಲ್ಲಿ 2,974.13 ಕೋಟಿ ರೂ.ಗೆ ಹೋಲಿಸಿದ್ರೆ ಶೇ.38ರಷ್ಟು ಏರಿಕೆಯಾಗಿದೆ.
GST ಜಾರಿಯಿಂದ ರಾಜ್ಯಗಳಿಗೆ ಯಾವುದೇ ಲಾಭವಾಗಿಲ್ಲ: ವರದಿ
ಡಿವಿಡೆಂಡ್ ಘೋಷಣೆ
ಕೆಲವು ದಿನಗಳ ಹಿಂದೆ ಬಿಎಸ್ ಇ ಫೈಲಿಂಗ್ ನಲ್ಲಿ ಹೂಡಿಕೆದಾರರಿಗೆ ಡಿವಿಡೆಂಡ್ (dividend) ಪಾವತಿಸುವ ಮಾಹಿತಿಯನ್ನು ಎಲ್ ಐಸಿ ನೀಡಿತ್ತು. ಅದರಂತೆ ಎಲ್ಐಸಿ ನಿರ್ದೇಶಕರ ಮಂಡಳಿ 2022ರ ಮಾರ್ಚ್ 31ಕ್ಕೆ ಕೊನೆಗೊಂಡ ಸಾಲಿಗೆ 10ರೂ. ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ 1.50 ರೂ. ಡಿವಿಡೆಂಡ್ ನೀಡಲು ಶಿಫಾರಸ್ಸು ಮಾಡಿದೆ.ಇದರ ಪರಿಣಾಮ ಸೋಮವಾರ (ಮೇ 30) ಎಲ್ಐಸಿ ಷೇರುಗಳು ಮುಂಬೈ ಷೇರು ಮಾರುಕಟ್ಟೆಯಲ್ಲಿ ಶೇ.1.89 ಏರಿಕೆ ದಾಖಲಿಸಿ 837.05ರೂ.ಗೆ ಕ್ಲೋಸ್ ಆಗಿವೆ.
ಡಿವಿಡೆಂಡ್ ಅಂದ್ರೇನು?
ಆರ್ಹ ಷೇರುದಾರರಿಗೆ ಗಳಿಕೆ ಅಥವಾ ಲಾಭದ ಪಾಲಿನ ವಿತರಣೆಯೇ ಡಿವಿಡೆಂಡ್ (dividend) ಅಥವಾ ಲಾಭಾಂಶ (Profit).ಈ ಲಾಭಾಂಶವನ್ನು ನಗದು ಅಥವಾ ಹೆಚ್ಚುವರಿ ಷೇರಿನ ರೂಪದಲ್ಲಿ ಪಾವತಿಸುವುದು ಕಡ್ಡಾಯ.
ಭಾರತದ ಅತೀದೊಡ್ಡ ಐಪಿಒ (IPO) ಎಂಬ ಹೆಗ್ಗಳಿಕೆ ಗಳಿಸಿದ ಎಲ್ಐಸಿ ಐಪಿಒ ಮೇ 4 ರಿಂದ ಮೇ 9 ರ ತನಕ ಒಟ್ಟು 6 ದಿನಗಳ ಕಾಲ ನಡೆದಿತ್ತು. ಈ ಐಪಿಒ ಮೂಲಕ ಕೇಂದ್ರ ಸರ್ಕಾರ ಎಲ್ಐಸಿಯ ಶೇ. 3.5 ಷೇರುಗಳನ್ನು ಮಾರಾಟ ಮಾಡಿ 20,557 ಕೋಟಿ ರೂ. ಸಂಗ್ರಹಿಸಿತ್ತು. ಈ ಐಪಿಒಗೆ ಹೂಡಿಕೆದಾರರಿಂದ ಭರ್ಜರಿ ಸ್ಪಂದನೆ ಸಿಕ್ಕಿತು. ಆರು ದಿನಗಳ ಬಿಡ್ಡಿಂಗ್ ನ ಕೊನೆಯಲ್ಲಿ ಎಲ್ಐಸಿ ಷೇರುಗಳು 2.95 ಬಾರಿ ಸಬ್ ಸ್ಕ್ರೈಬ್ ಆಗಿವೆ. ಷೇರುಗಳು ಅತ್ಯಧಿಕ ಬೆಲೆ ಶ್ರೇಣಿಯಲ್ಲಿ ಮಾರಾಟವಾಗುವ ಜೊತೆಗೆ ಸ್ಥಳೀಯ ಹೂಡಿಕೆದಾರರಿಂದ ಭಾರೀ ಬೇಡಿಕೆ ವ್ಯಕ್ತವಾಗಿತ್ತು. 16.2 ಕೋಟಿ ಈಕ್ವಿಟಿ ಷೇರುಗಳ ಗಾತ್ರದ ಐಪಿಒಗೆ 47.83 ಕೋಟಿ ಬಿಡ್ಡಿಂಗ್ ಗಳು ಸಲ್ಲಿಕೆ ಆಗಿದ್ದವು.
Property Tips : ಮನೆ ಗಿಫ್ಟ್ ನೀಡೋ ಪ್ಲಾನ್ ಇದ್ದರೆ ಈ ಬಗ್ಗೆ ಗೊತ್ತು ಮಾಡಿಕೊಳ್ಳಿ
ಎಲ್ಐಸಿ ಐಪಿಒನಲ್ಲಿ ಪ್ರತಿ ಈಕ್ವಿಟಿ ಷೇರಿಗೆ (equity share) 902ರೂ. ನಿಂದ 949ರೂ. ಬೆಲೆ (Price band) ನಿಗದಿಪಡಿಸಲಾಗಿತ್ತು. ಹೂಡಿಕೆದಾರರಿಗೆ ಷೇರುಗಳ ಹಂಚಿಕೆ ಸಮಯದಲ್ಲಿ ಎಲ್ಐಸಿ ಪ್ರತಿ ಷೇರಿಗೆ ನಿಗದಿತ ಶ್ರೇಣಿಯ ಅತ್ಯಧಿಕ ಬೆಲೆ 949 ರೂ. ಗೆ ನಿಗದಿಪಡಿಸಿತ್ತು. ಆದರೆ, ಎಲ್ಐಸಿ ಷೇರುಗಳು ಮಾರುಕಟ್ಟೆಯಲ್ಲಿ ವಿತರಣೆ ಬೆಲೆಗಿಂತ (Issue price) ಶೇ.8.62ರಷ್ಟು ಕಡಿಮೆ ದರಕ್ಕೆ ಲಿಸ್ಟಿಂಗ್ (Listing) ಆಗಿವೆ.