GST ಜಾರಿಯಿಂದ ರಾಜ್ಯಗಳಿಗೆ ಯಾವುದೇ ಲಾಭವಾಗಿಲ್ಲ: ವರದಿ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯು, ರಾಜ್ಯಗಳ ತೆರಿಗೆ ಸಂಗ್ರಹದಲ್ಲಿ ಹೆಚ್ಚಳಕ್ಕೆ ಕಾರಣವಾಗಿಲ್ಲ. ಅವುಗಳಿಗೆ ಯಾವುದೇ ಲಾಭವೂ ಸಿಕ್ಕಿಲ್ಲ ಎಂದು ರೇಟಿಂಗ್ ಸಂಸ್ಥೆಯಾದ ಇಂಡಿಯಾ ರೇಟಿಂಗ್ಸ್ ಹೇಳಿದೆ.
ಮುಂಬೈ (ಮೇ.31): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯು, ರಾಜ್ಯಗಳ ತೆರಿಗೆ ಸಂಗ್ರಹದಲ್ಲಿ ಹೆಚ್ಚಳಕ್ಕೆ ಕಾರಣವಾಗಿಲ್ಲ. ಅವುಗಳಿಗೆ ಯಾವುದೇ ಲಾಭವೂ ಸಿಕ್ಕಿಲ್ಲ ಎಂದು ರೇಟಿಂಗ್ ಸಂಸ್ಥೆಯಾದ ಇಂಡಿಯಾ ರೇಟಿಂಗ್ಸ್ ಹೇಳಿದೆ. ಜಿಎಸ್‌ಟಿ ಜಾರಿಯಾದ ಬಳಿಕದ ಕಳೆದ 5 ವರ್ಷಗಳಲ್ಲಿ, ಈ ವ್ಯವಸ್ಥೆ ಜಾರಿಯ ಕಾರಣಕ್ಕಾಗಿ ತೆರಿಗೆ ಸಂಗ್ರಹ ಹೆಚ್ಚಳವಾಗಿರುವ ಯಾವುದೇ ಸುಳಿವುಗಳೂ ಸಿಕ್ಕಿಲ್ಲ ಎಂದು ಸಂಸ್ಥೆಯ ವರದಿ ಹೇಳಿದೆ.
ಕೇಂದ್ರ ಸರ್ಕಾರವು 2017ರಲ್ಲಿ ಜಿಎಸ್‌ಟಿಯನ್ನು ಜಾರಿಗೆ ತಂದಾಗ, ರಾಜ್ಯಗಳ ತೆರಿಗೆ ಕೊರತೆಯನ್ನು ನೀಗಿಸಲು ಜಿಎಸ್‌ಟಿಯನ್ನು ಪರಿಹಾರವಾಗಿ ನೀಡುವುದಾಗಿ ರಾಜ್ಯ ಸರ್ಕಾರಗಳೊಂದಿಗೆ 5 ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ಈ ವರ್ಷ ಜೂನ್‌ನಿಂದ ಕೇಂದ್ರವು ರಾಜ್ಯ ಸರ್ಕಾರಗಳಿಗೆ ತೆರಿಗೆ ಸಂಗ್ರಹದ ಕೊರತೆ ನೀಗಿಸಿಕೊಳ್ಳಲು ನೀಡುವ ಪರಿಹಾರವನ್ನು ನಿಲ್ಲಿಸಲಿದೆ. ಈ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯ ವೇಳೆ ಹಲವಾರು ರಾಜ್ಯಗಳು ಈ ಪರಿಹಾರ ನೀಡುವುದನ್ನು ಜೂ. 2022ರ ನಂತರವೂ ಮುಂದುವರೆಸಬೇಕು ಎಂದು ಕೇಳಿಕೊಂಡಿದ್ದರು.
ರಾಜ್ಯಕ್ಕೂ ಜಿಎಸ್‌ಟಿ ನಿಯಮ ರಚನೆ ರೂಪಿಸಲು ಅಧಿಕಾರ: ಸುಪ್ರೀಂ
ಆದರೆ ಜಿಎಸ್‌ಟಿ ವಿಧಿಸುವುದರಿಂದ ರಾಜ್ಯಗಳಿಗೆ ಯಾವುದೇ ತೆರಿಗೆ ಆದಾಯವು ಲಭಿಸುತ್ತಿಲ್ಲ. ರಾಜ್ಯಗಳ ಸ್ವಂತ ತೆರಿಗೆ ಆದಾಯ (ಎಸ್‌ಟಿಆರ್) 2014-17ರ ಆರ್ಥಿಕ ವರ್ಷದಲ್ಲಿ ಶೇ.55.2ರಷ್ಟಿದ್ದು, ಜಿಎಸ್‌ಟಿ ಅಳವಡಿಕೆಯ ನಂತರ 2018-21ರಲ್ಲಿ ಶೇ.55.4ರಷ್ಟಿದೆ. ಅಂದರೆ ಜಿಎಸ್‌ಟಿ ಜಾರಿಗೂ ಮುನ್ನ ಮತ್ತು ಜಾರಿಯ ನಂತರದಲ್ಲಿ ರಾಜ್ಯಗಳ ಆದಾಯದಲ್ಲಿ ಗಮನಾರ್ಹ ಬದಲಾವಣೆಯಾಗಿರುವುದು ಕಂಡುಬಂದಿಲ್ಲ ಎಂದು ವರದಿ ಹೇಳಿದೆ.
ಜಿಎಸ್‌ಟಿ ಅಳವಡಿಕೆ ನಂತರ ರಾಜ್ಯ ಪಡೆಯುವ ತೆರಿಗೆ ಆದಾಯದ ಬೆಳವಣಿಗೆ ದರವು ಶೇ.6.7ಕ್ಕೆ ಕುಸಿದಿದೆ. 2014-17ರಲ್ಲಿ ಇದರ ಪ್ರಮಾಣ ಶೇ. 9.8ರಷ್ಟಿತ್ತು ಎಂದು ಇಂಡಿಯಾ ರೇಟಿಂಗ್ಸ್ ತಿಳಿಸಿದೆ.
ಏಪ್ರಿಲ್ ನಲ್ಲಿ ಸಾರ್ವಕಾಲಿಕ ದಾಖಲೆಯ 1.68 ಲಕ್ಷ ಕೋಟಿ GST ಸಂಗ್ರಹ!
ಜಿಎಸ್‌ಟಿ ಜಾರಿಗೂ ಮೊದಲು ಉತ್ಪಾದಕ ಅಥವಾ ರಫ್ತು ಮಾಡುವ ರಾಜ್ಯಗಳು ರಾಜ್ಯದೊಳಗೆ ಸರಕುಗಳ ಮಾರಾಟದ ಮೇಲೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವಿಧಿಸುತ್ತಿದ್ದವು. ಅಲ್ಲದೇ ಹೊರ ರಾಜ್ಯಗಳಿಗೆ ಮಾರಾಟ ಮಾಡುವಾಗಲೂ ವಿಧಿಸಲಾಗುವ ಕೇಂದ್ರೀಯ ಮಾರಾಟ ತೆರಿಗೆ (ಸಿಎಸ್‌ಟಿ)ಯಲ್ಲಿ ಶೇ.2 ರಷ್ಟುಲಾಭ ಪಡೆದುಕೊಳ್ಳುತ್ತಿದ್ದವು. ಆದರೆ ಜಿಎಸ್‌ಟಿ ಅಳವಡಿಕೆ ನಂತರ ರಾಜ್ಯಗಳ ಆದಾಯದಲ್ಲಿ ಸಿಎಸ್‌ಟಿಯ ಪಾಲು ಕೂಡಾ ಶೇ.4.16 ರಿಂದ ಶೇ.0.95ಕ್ಕೆ ಇಳಿಕೆಯಾಗಿದೆ ಎಂದು ಏಜೆನ್ಸಿ ತಿಳಿಸಿದೆ.